ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಸಂಭ್ರಮದ ಕೃಷ್ಣನ ಮೂರ್ತಿ ವಿಸರ್ಜನೆ

Published:
Updated:
ಸಂಭ್ರಮದ ಕೃಷ್ಣನ ಮೂರ್ತಿ ವಿಸರ್ಜನೆ

ಅಂಕೋಲಾ: ತಾಲೂಕಿನ ಬಿಳಿಹೊಂಯ್ಗಿ ಗ್ರಾಮದಲ್ಲಿ ಶ್ರೀಕೃಷ್ಣ ಮಂಡಳಿಯಿಂದ ಪ್ರತಿಷ್ಠಾಪಿಸಿರುವ ಕೃಷ್ಣನ ಮೂರ್ತಿಯ ವಿಸರ್ಜನೆ ಭಾನುವಾರ ಅದ್ಧೂರಿಯಾಗಿ ನಡೆಯಿತು. ಸಂಜೆ 4ಕ್ಕೆ ಮೂರ್ತಿಯ ಮೆರವಣಿಗೆ ಆರಂಭವಾಯಿತು. ಗ್ರಾಮದ ಪ್ರಮುಖ ರಸ್ತೆಯಲ್ಲಿ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಿತು.

ವಿಶೇಷ ಅಲಂಕಾರದ ವಾಹನದಲ್ಲಿ ಶ್ರೀಕೃಷ್ಣ ಮೂರ್ತಿಯನ್ನಿರಿಸಿ ಯುವಕರು ಜಯಘೋಷ ಕೂಗುತ್ತ ಸಾಗಿದರು. ಗ್ರಾಮದ ಮಹಿಳೆಯರು ಕುಂಬ ಕಳಸ ಹೊತ್ತು ಮೆರವಣಿಗೆಗೆ ಕಳೆ ತಂದರು. ವಿವಿಧ ವೇಷಧಾರಿಗಳು ಮೆರವಣಿಗೆಯಲ್ಲೂ ಖುಷಿಯ ಅಲೆ ಎಬ್ಬಿಸಿದರು.ಬಿಳಿಹೊಂಯ್ಗಿ, ಹಡವ, ಶಿಂಗನಮಕ್ಕಿ, ಹೊನ್ನೆಬೈಲ್, ಮಂಜಗುಣಿ, ಕಣಗಿಲ್ಲ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನರು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ಮೆರವಣಿಯುದ್ದಕ್ಕೂ ಭಕ್ತರು ದೇವರಿಗೆ ಆರತಿ ಬೆಳಗಿದರು. ರಂಗೋಲಿ ಹಾಕಿ ಭಕ್ತಿಯ ವಿದಾಯ ಹೇಳಿದರು. ಗ್ರಾಮದ ದೇವಸ್ಥಾನದ ಎದುರು ಕಟ್ಟಿದ್ದ ಮೊಸರು ಗಡಿಗೆ ಒಡೆಯುವ ಗಳಿಗೆ ರೋಮಾಂಚನ ಸನ್ನಿವೇಶಗಳಿಗೆ ಸಾಕ್ಷಿಯಾಯಿತು. ಯುವಕರು ಒಬ್ಬರ ಮೇಲೆ ಒಬ್ಬರು ಹತ್ತಿ ಎತ್ತರದ ಗಡಿಗೆ ಒಡೆದು ಸಾಹಸ ಪ್ರದರ್ಶಿಸಿದರು. ಗ್ರಾಮಕ್ಕೆ ಹೊಂದಿಕೊಂಡು ಹರಿಯುವ ಗಂಗಾವಳಿ ನದಿಯಲ್ಲಿ ರಾತ್ರಿ ಮೂರ್ತಿಯನ್ನು ವಿಸರ್ಜಿಸಲಾಯಿತು.

ಅನ್ನ ಸಂತರ್ಪಣೆ: ಕೃಷ್ಣ ಮೂರ್ತಿಯ 15ನೇ ವರ್ಷದ ಆರಾಧನೋತ್ಸವದ ಅಂಗವಾಗಿ ಶನಿವಾರ ಮಧ್ಯಾಹ್ನ ಗ್ರಾಮದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅದಕ್ಕೂ ಮೊದಲು ಸನ್ನಿಧಿಯಲ್ಲಿ ಸತ್ಯನಾರಾಯಣ ಪೂಜೆ ನಡೆಯಿತು. ಗ್ರಾಮದ ಮಹಿಳೆಯರು ಅನ್ನದಾನ ಕಾರ್ಯಕ್ಕೆ ಸಾಥ್ ನೀಡುವ ಮೂಲಕ ಯಶಸ್ವಿ ಕಾರ್ಯಕ್ರಮಕ್ಕೆ ಕಾರಣರಾದರು. ನೂರಾರು ಭಕ್ತರು ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ರಾತ್ರಿ ಶ್ರೀಕೃಷ್ಣ ದೇವರ ಮಹಾಪೂಜೆ ನಡೆಯಿತು. ಮೂರ್ತಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ನಂತರ ಫಲಾವಳಿಗಳ ಲಿಲಾವು ನಡೆಯಿತು. ಕೊನೆಗೆ ಮಹಿಳೆಯರು, ಮಕ್ಕಳು, ಯುವಕರಿಗೆ ಪ್ರತ್ಯೇಕವಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಿ ಸ್ಥಳದಲ್ಲೇ ಬಹುಮಾನ ವಿತರಿಸಲಾಯಿತು.

ಮಂಡಳಿ ಅಧ್ಯಕ್ಷ ಸಂತೋಷ ಹರಿಕಂತ್ರ, ಉಪಾಧ್ಯಕ್ಷ ವೆಂಕಟರಮಣ ಹರಿಕಂತ್ರ, ಕಾರ್ಯದರ್ಶಿ ನವೀನ ಹರಿಕಂತ್ರ, ಗುರು ಹರಿಕಂತ್ರ, ಚಂದ್ರಕಾಂತ ಹರಿಕಂತ್ರ, ಮಂಜುನಾಥ ಹರಿಕಂತ್ರ ಇದ್ದರು.

Post Comments (+)