ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಮೊಟ್ಟೆಯ ದೋಸೆ...

Last Updated 23 ಅಕ್ಟೋಬರ್ 2017, 8:40 IST
ಅಕ್ಷರ ಗಾತ್ರ

ಕೊಪ್ಪಳ: ಖಾದ್ಯ ಪ್ರಿಯರಿಗೊಂದು ಗರಿಗರಿ ಸುದ್ದಿ. ನಗರಕ್ಕೆ ಬಂದಿದೆ ಮೊಟ್ಟೆ ದೋಸೆ. ಆಂಧ್ರಪ್ರದೇಶದಲ್ಲಿ ಖ್ಯಾತಿ ಪಡೆದ ತಿನಿಸು ನಗರದಲ್ಲಿ ಕಾದ ಕಾವಲಿ ಮೇಲೆ ಚುಂಯ್‌ ಸದ್ದು ಮಾಡಿದೆ. ಅದರ ಘಮಲಿಗೆ ದೋಸೆಪ್ರಿಯರು ಹೋಟೆಲ್‌ನತ್ತ ಧಾವಿಸುತ್ತಿದ್ದಾರೆ. ನಗರದ ಹೊಸಪೇಟೆ ರಸ್ತೆಯಲ್ಲಿರುವ ಸೂರ್ಯಲಕ್ಷ್ಮೀ ರೆಸ್ಟೋರೆಂಟ್‌ ಈ ಹೊಸ ರುಚಿ ಪರಿಚಯಿಸಿದೆ. ಹೋಟೆಲ್‌ ಮಾಲೀಕ ಕೆ.ಎಸ್‌.ರೆಡ್ಡಿ ಅವರು ಈ ದೋಸೆಯನ್ನು ಪರಿಚಯಿಸಿದ್ದಾರೆ.

ತಯಾರಿ ಹೇಗೆ?
ಹಿಂದಿನ ರಾತ್ರಿ ಉದ್ದು, ಅಕ್ಕಿ ಮತ್ತು ಕಡಲೆ ಹಿಟ್ಟನ್ನು ಸಮಪ್ರಮಾಣದಲ್ಲಿ ಬೆರೆಸಿ ರುಬ್ಬಿ ದೋಸೆ ಹಿಟ್ಟನ್ನು ಸಿದ್ಧಪಡಿಸಲಾಗುತ್ತದೆ. ಮರುದಿನ ಹಿಟ್ಟು ಹುದುಗಿ ದೋಸೆಯಾಗಲು ಸಿದ್ಧ. ಈಗ ನೋಡಿ ಆರ್ಡರು ಬಂದಾಗ ಮೊಟ್ಟೆ ದೋಸೆ ಸಿದ್ಧವಾಗುವ ಬಗೆ ಹೀಗಿದೆ. ದೋಸೆ ಹಿಟ್ಟನ್ನು ಕಾದ ಹೆಂಚಿನ ಮೇಲೆ ಸುರಿದು, ಮಸಾಲೆ ದೋಸೆಯ ಗಾತ್ರಕ್ಕೆ ಅದನ್ನು ವಿಸ್ತರಿಸುತ್ತಾರೆ. ಅದರ ಮೇಲೆ ಒಂದು ಚಿಟಿಕೆ ಜೀರಿಗೆ, ಈರುಳ್ಳಿ, ಖಾರದಪುಡಿ, ಕೊತ್ತಂಬರಿ ಸೊಪ್ಪು ಹರಡುತ್ತಾರೆ.

ಈ ದೋಸೆಯೊಂದಿಗೆ ಈ ಮಿಶ್ರಣವೂ ಹದವಾಗಿ ಕಾಯುತ್ತಿದ್ದಂತೆಯೇ ಒಂದು ಅಥವಾ ಎರಡು (ಗ್ರಾಹಕರ ಬೇಡಿಕೆಗೆ ತಕ್ಕಂತೆ) ಮೊಟ್ಟೆಯನ್ನು ಒಡೆದು ಅದರ ಲೋಳೆಯನ್ನು ದೋಸೆಯ ಮೇಲೆ ಸುರಿದು ಸಟ್ಟುಗದ ಮೂಲಕ ಹರಡುತ್ತಾರೆ. ಹದವಾದ ಉರಿಯಲ್ಲಿ ದೋಸೆ ಬೇಯುತ್ತದೆ. ಒಂದು ಪಾರ್ಶ್ವ ಬೆಂದ ನಂತರ ಮಗುಚಿ ಹಾಕುತ್ತಾರೆ. ಸ್ವಲ್ಪ ಕಾದ ನಂತರ ಗರಿಗರಿ ಮೊಟ್ಟೆ ದೋಸೆ ಸಿದ್ಧ.

ಕೆಂಪು ಚಟ್ನಿ ಮತ್ತು ಕಾಯಿ ಚಟ್ನಿಯೊಂದಿಗೆ ಅಥವಾ ಆಲೂಗಡ್ಡೆ ಪಲ್ಯದೊಂದಿಗೆ ತಿನ್ನಲು ಈ ದೋಸೆ ರುಚಿಕರ. ಸದ್ಯ ಹೊಸಪೇಟೆಯಲ್ಲಿ ಭಟ್‌ ಆ್ಯಂಡ್‌ ಖಾನ್‌ ಮೊಬೈಲ್‌ ಕ್ಯಾಂಟೀನಿನಲ್ಲಿ ಲಭ್ಯವಿರುವ ದೋಸೆ ನಗರದಲ್ಲಿ ಪರಿಚಯಗೊಂಡು ಗ್ರಾಹಕರ ನಾಲಗೆ ತಣಿಸಿದೆ. ಒಂದು ಮೊಟ್ಟೆಯ ದೋಸೆಗೆ ₹30, ಎರಡು ಮೊಟ್ಟೆಗಳ ದೋಸೆಗೆ ₹ 40 ದರ ಇದೆ.

ಇದೇ ಹೋಟೆಲ್‌ನಲ್ಲಿ ಹೆಸರು ದೋಸೆಯೂ ಕೂಡಾ ಖ್ಯಾತವಾಗಿದೆ. ಹೆಸರುಕಾಳು ಹಿಟ್ಟಿನ ದೋಸೆ ಅದರ ಜತೆಗೆ ಉಪ್ಪಿಟ್ಟು ಜೋಡಿ ತಿನ್ನಲು ರುಚಿಕರ. ಉಳಿದಂತೆ ಆಂಧ್ರಶೈಲಿಯ ಸಸ್ಯಾಹಾರಿ, ಮಾಂಸಾಹಾರಿ ಭೋಜನ ಕೂಡಾ ಇಲ್ಲಿದೆ. ಒಟ್ಟಿನಲ್ಲಿ ಹೋಟೆಲ್‌ ದೋಸೆಯ ಕಾರಣಕ್ಕೆ ಗ್ರಾಹಕರನ್ನು ಸೆಳೆಯುತ್ತಿದೆ.

ಆಂಧ್ರಪ್ರದೇಶದ ರೆಡ್ಡಿ ಅವರು ಮೂಲತಃ ರೈತರಾಗಿದ್ದವರು. ಕೃಷಿಯಲ್ಲಿ ಸಮಸ್ಯೆ ಉಂಟಾಗಿ ಮೂರು ವರ್ಷಗಳ ಕೆಳಗೆ ಹೋಟೆಲ್‌ ಕ್ಷೇತ್ರ ಪ್ರವೇಶಿಸಿದರು. ಒಂದೂವರೆ ವರ್ಷದ ಹಿಂದೆ ಕುಣಿಕೇರಿ ಸಮೀಪದ ರಸಗೊಬ್ಬರ ಕಾರ್ಖಾನೆಯಲ್ಲಿ ಮೆಸ್‌ ಗುತ್ತಿಗೆದಾರರಾಗಿದ್ದರು. ಗುತ್ತಿಗೆ ಅವಧಿ ಮುಗಿದ ನಂತರ ಇಲ್ಲಿ ಪುಟ್ಟ ಹೋಟೆಲ್‌ ತೆರೆದರು. ಈಗವರ ಹೋಟೆಲ್‌ನಲ್ಲಿ 9 ಮಂದಿ ದುಡಿಯುತ್ತಿದ್ದಾರೆ. ಮಾಹಿತಿಗೆ ಮೊಬೈಲ್‌: 70901 16254.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT