ಮೆಕ್ಕೆಜೋಳ: ಉತ್ತಮ ಇಳುವರಿ ನಿರೀಕ್ಷೆ

ಶನಿವಾರ, ಮೇ 25, 2019
33 °C

ಮೆಕ್ಕೆಜೋಳ: ಉತ್ತಮ ಇಳುವರಿ ನಿರೀಕ್ಷೆ

Published:
Updated:
ಮೆಕ್ಕೆಜೋಳ: ಉತ್ತಮ ಇಳುವರಿ ನಿರೀಕ್ಷೆ

ಕುಕನೂರು: ‘ಏಕ ಬೆಳೆ ಪದ್ಧತಿಯ ಬೇಸಾಯ ಕೃಷಿಕರ ಪಾಲಿಗೆ ಮಾರಕ. ಮಿಶ್ರ ಬೆಳೆ ಪದ್ಧತಿ ರೈತರ ರಕ್ಷಕನಿದ್ದಂತೆ. ಅದರಲ್ಲೂ ರಾಸಾಯನಿಕ ಮುಕ್ತ ಕೃಷಿ ಅಳವಡಿಸಿಕೊಂಡರೆ ನಷ್ಟ ಎಂಬ ಮಾತೇ ಬೆಳೆಗಾರರ ಬಾಯಿಂದ ಹೊರ ಬರಲ್ಲ’ ಒಂದೂವರೆ ದಶಕದಿಂದ ಕೃಷಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಸಮೀಪದ ಮಸಬಹಂಚಿನಾಳ ಗ್ರಾಮದ ರೈತ ಅಂದಪ್ಪ ರಾಜೂರ ಅವರ ಅನುಭವದ ನುಡಿಗಳಿವು.

ಹಿಂಗಾರು ಹಂಗಾಮಿನಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಈ ಭಾಗದಲ್ಲಿ ಮೆಕ್ಕೆಜೋಳ ಉತ್ತಮವಾಗಿ ಬೆಳೆದಿದ್ದು, ರೈತರಲ್ಲಿ ಆಶಾಭಾವ ಮೂಡಿದೆ. ಮಕ್ಕಜೋಳದ ಜೊತೆಗೆ ತೊಗರಿಯನ್ನು ಐದಾರು ಅಡಿ ಅಂತರದ ಸಾಲುಗಳಲ್ಲಿ ಬಿತ್ತನೆ ಮಾಡಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರು ಸಜ್ಜೆಯೊಂದಿಗೆ ಅಂತರ ಬೆಳೆಯಾಗಿ ಬಿತ್ತನೆ ಮಾಡಿದ್ದಾರೆ.

ಮುಂಗಾರಿನ ಉತ್ತಮ ತೇವಾಂಶದಿಂದ ಮೆಕ್ಕೆಜೋಳ, ಸಜ್ಜೆ ಹಾಗೂ ತೊಗರಿ ಉತ್ತಮವಾಗಿ ಬೆಳೆಯಲು ಅನುಕೂಲವಾಗಿದೆ. ಹುಲುಸಾಗಿ ಅಷ್ಟೇ ದಟ್ಟವಾಗಿ ಬೆಳೆದು ನಿಂತಿರುವ ತೊಗರಿ ಬೆಳೆಯ ಅಕ್ಕಪಕ್ಕದ ಸಾಲುಗಳು ಒಂದಕ್ಕೊಂದು ಕಲೆತಿವೆ.

ಮಸಬಹಂಚಿನಾಳ ಗ್ರಾಮದ ರೈತ ಸಂಗಮೇಶ ಅಂಗಡಿ ಅವರ ಸುಮಾರು ಎಂಟು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮಕ್ಕೆಜೋಳ ಜಮೀನಿನ ನಾಲ್ಕೂ ಮೂಲೆಯಿಂದಲೂ ತೆನೆಗಳಲ್ಲಿ ಸಮಾನತೆ ಕಾಯ್ದುಕೊಂಡಿದೆ. ದೊಡ್ಡಗಾತ್ರದ ತೆನೆ, ಗುಣಮಟ್ಟದ ಕಾಳು, ಬಲಿಷ್ಠ ಕಾಂಡ ಬೆರಗು ಮೂಡಿಸುತ್ತದೆ. ಸಂಗಮೇಶ ಅವರ ಜಮೀನಿಗೆ ಸುತ್ತಮುತ್ತಲಿನ ರೈತರು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

‘ಮೆಕ್ಕೆಜೋಳ ಶಕ್ತಿ 3516 ಹಾಗೂ 3758 ಅನ್ನು ಅಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿದೆ. ನಂತರ ಕಳೆ ನಾಶಕವನ್ನು ಬಳಸಿದೆ. ಯೂರಿಯಾ, ಡಿ.ಎ.ಪಿ ಮತ್ತು ಕಾಂಪ್ಲೆಕ್ಸ್‌ ರಸಗೊಬ್ಬರವನ್ನು ಮೂರು ಸಲ ಪೂರೈಸಿದೆ. ಉತ್ತಮ ಇಳುವರಿ ದೊರಕುವ ನಿರೀಕ್ಷೆ ಇದೆ’ ಎಂದು ರೈತ ಸಂಗಮೇಶ ತಿಳಿಸಿದರು.

‘ಸದ್ಯ ಯಾವುದೇ ರೋಗ, ಕೀಟ ಹಾವಳಿ ಕಂಡುಬಂದಿಲ್ಲ. ಇದೇ ರೀತಿ ಮುಂದುವರಿದರೆ ಈ ಬಾರಿ ತೊಗರಿ ಉತ್ತಮ ಇಳುವರಿ ಬರುವ ಸಾಧ್ಯತೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘ಹೋಬಳಿಯ ಬಹುತೇಕ ಜಮೀನುಗಳಲ್ಲಿ ಮೆಕ್ಕೆಜೋಳ ಹಾಗೂ ತೊಗರಿ ಬೆಳೆ ಹಚ್ಚಹಸಿರಿನಿಂದ ಕಂಗೊಳಿಸುತ್ತಿದೆ. ಸದ್ಯ ತೊಗರಿ ಬೆಳೆ ಮೊಗ್ಗು ಹೂವು ಕಟ್ಟುವ ಹಂತದಲ್ಲಿದೆ. ಮಳೆ ಬಿಡುವು ಪಡೆದಿದ್ದು, ಹಗಲಿನಲ್ಲಿ ಪ್ರಖರ ಬಿಸಿಲು ರಾತ್ರಿ ವೇಳೆ ಚಳಿ ಆವರಿಸುತ್ತಿರುವುದು ಬೆಳೆಗೆ ಪೂರಕವಾಗಿದೆ’ ಎಂದು ಕೃಷಿ ಇಲಾಖೆ ಅಧಿಕಾರಿ ಶರಣಪ್ಪ ಗುಂಗಾಡಿ ಹೇಳಿದರು.

‘ತೊಗರಿ, ಹೆಸರು, ಉದ್ದು, ಅಲಸಂದೆ, ಶೇಂಗಾ, ಹುರುಳಿ ಬೆಳೆಗಳು ಮಣ್ಣಿನಲ್ಲಿ ಸಾರಜನಕ ಸ್ಥಿರೀಕರಣಗೊಳಿಸಲು ಯೋಗ್ಯವಾದ ಬೆಳೆಗಳಾಗಿವೆ. ಬೇರಿನಲ್ಲಿ ರೈಜೋಬಿಯಂ ಬ್ಯಾಕ್ಟೀರಿಯಾ ಇದ್ದು, ವಾತಾವರಣದಲ್ಲಿರುವ ಸಾರಜನಕ ಹೀರಿಕೊಂಡು ಬೇರಿನಲ್ಲಿ ಗಂಟುಗಳ ರೂಪದಲ್ಲಿ ಸಂಗ್ರಹಿಸುತ್ತವೆ’ ಎಂದು ಅವರು ಮಾಹಿತಿ ನೀಡಿದರು.

ಮಂಜುನಾಥ ಅಂಗಡಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry