ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮೇಲೆ ಕಲ್ಲು ತೂರಾಟ; ಲಾಠಿ ಚಾರ್ಜ್

Last Updated 23 ಅಕ್ಟೋಬರ್ 2017, 9:44 IST
ಅಕ್ಷರ ಗಾತ್ರ

ಆನವಟ್ಟಿ: ತಾಲ್ಲೂಕಿನ ಜಡೆ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬ ಆಚರಿಸಲು ಅನುಮತಿ ಕೊಡದ ಹಿನ್ನೆಲೆಯಲ್ಲಿ ಪೋಲಿಸರು ಹಾಗೂ ಸಾರ್ವಜನಿಕರ ನಡುವೆ ಸಂಘರ್ಷ ಉಂಟಾಗಿ, ಲಾಠಿ ಪ್ರಹಾರ ನಡೆದಿದೆ.

ಭಾನುವಾರ ಜಡೆ ಗ್ರಾಮದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಜಿಲ್ಲಾ ವರಿಷ್ಠಾಧಿಕಾರಿ ಅಭಿನವ ಖರೆ ಹೋರಿ ಹಬ್ಬ ಆಚರಿಸದಂತೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಹೋರಿ ಹಬ್ಬವನ್ನು ತಡೆಯಲು ಪ್ರಯತ್ನಿಸಿದರು.

ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಮರೂರು ರುದ್ರಗೌಡ, ತಲಗುಂದ ಶಿವಪುತ್ರಪ್ಪ ಅವರನ್ನೂ ಒಳಗೊಂಡಂತೆ 6 ಜನರನ್ನು ಬಂಧಿಸಲಾಗಿದೆ. 30ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ವಿವರ: ಹೋರಿ ಹಬ್ಬ ಆಚರಣೆ ನಿಷೇಧಕ್ಕೆ ಸಾರ್ವಜನಿಕರಿಂದ ತೀವ್ರವಾದ ಪ್ರತಿರೋಧ ವ್ಯಕ್ತವಾಯಿತು. ಕೆಲವು ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಿದರು. ಆಗ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಆದರೆ ದುಷ್ಕರ್ಮಿಗಳು ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದರು.

ಮಹಿಳಾ ಸಬ್‌ ಇನ್‌ಸ್ಪೆಕ್ಟರ್ ಸುಜಾತಾ ಅವರನ್ನು ಸುರಕ್ಷಿತವಾಗಿ ವಾಹನದಲ್ಲಿ ಕಳಿಸಲು ಮುಂದಾದಾಗ, ಪೊಲೀಸರಿಗೆ ಕಲ್ಲಿನ ಏಟು ಬಿದ್ದು ಗಾಯಗೊಂಡರು. ಕಾನ್‌ಸ್ಟೆಬಲ್‌ಗಳಾದ ಚಂದ್ರನಾಯ್ಕ್, ಪ್ರಭಾಕರ ಹಾಗೂ ಜಡೆ ಬತಗಟ್ಟೆ ಗ್ರಾಮದ ರಮೇಶ್ ಎನ್ನುವವರು ಗಾಯಗೊಂಡಿದ್ದಾರೆ.

ಕಳೆದ ವರ್ಷ ಸೊರಬ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ ಹೋರಿ ಹಬ್ಬ ಆಚರಿಸುತ್ತಿರುವಾಗ ಹೋರಿ ತಿವಿದಿದ್ದರಿಂದ ಇಬ್ಬರು ಯುವಕರು ಮೃತಪಟ್ಟು, ನಾಲ್ಕಾರು ಜನರು ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ 9 ಜನರ ಮೇಲೆ ಪ್ರಕರಣ ದಾಖಲಾಗಿತ್ತು.

ಇದರಿಂದ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಹಬ್ಬಕ್ಕೆ ಜಿಲ್ಲಾಡಳಿತ ಅನುಮತಿ ನೀಡದಂತೆ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಕೂಡ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಹೋರಿ ಹಬ್ಬದ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸೊರಬ ವೃತ್ತ ನಿರೀಕ್ಷಕ ಉಮಾಪತಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT