ಬುಧವಾರ, ಸೆಪ್ಟೆಂಬರ್ 18, 2019
21 °C

ಕನ್ನಡ ಶಾಲೆಗಳಲ್ಲಿ ಸೌಲಭ್ಯಗಳ ಕೊರತೆ: ಪೂಜಾರಿ

Published:
Updated:

ಸಾಲಿಗ್ರಾಮ(ಬ್ರಹ್ಮಾವರ): ಮೂಲ ಸೌಕರ್ಯಗಳ ಕೊರತೆಯಿಂದ ರಾಜ್ಯದ ಅನೇಕ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಾಲಿಗ್ರಾಮ ಗುಂಡ್ಮಿಯ ಕಲಾಕೇಂದ್ರದ ಸದಾನಂದ ರಂಗ ಮಂಟಪದಲ್ಲಿ ಶನಿವಾರ ಹಂಗಾರಕಟ್ಟೆ- ಐರೋಡಿ ಯಕ್ಷಗಾನ ಕಲಾಕೇಂದ್ರದ ಸಂಸ್ಥಾಪಕ, ಶಿಕ್ಷಕ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯೋಪಾಧ್ಯಾಯ, ಯಕ್ಷಗಾನ ಚಿಂತಕ, ಸಹಕಾರಿ ತತ್ವದ ಪ್ರತಿಪಾದಕ ದಿ.ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣಾ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿರುವ 48 ಸಾವಿರ ಶಿಕ್ಷಣ ಸಂಸ್ಥೆಗಳಿಗೆ ಸರಿಸುಮಾರು ಶೇ 13ರಷ್ಟು ಹಣ ವಿನಿಯೋಗಿಸಲಾಗುತ್ತಿದೆ. ಈ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದ್ದರೂ ಕೂಡ ಹೆಚ್ಚಿನ ಶಿಕ್ಷಣ ಸಂಸ್ಥೆಗಳಿಗೆ ಇನ್ನೂ ಮೂಲ ಸೌಕರ್ಯ ಒದಗಿಸಿಲ್ಲ. ಆದ್ದರಿಂದ ಹೆಚ್ಚಿನ ಮಕ್ಕಳು ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಇಂದು ಪ್ರಶಸ್ತಿಗಳನ್ನು ಪಡೆಯಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಇದೆ. ಶಿಫಾರಸುಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಆದರೆ, ಸರ್ವ ಶ್ರೇಷ್ಠ ಚಿಂತಕ ದಿ.ಸದಾನಂದ ಹೆಬ್ಬಾರ್‌ ಅವರಂತಹ ಮಹಾನ್‌ ವ್ಯಕ್ತಿಯ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ಇಂತಹ ಛಾಯೆ ಇನ್ನೂ ಬಂದಿಲ್ಲ. ನಿಜವಾದ ಸಾಧಕನಿಗೆ ಪ್ರತಿ ವರ್ಷ ಪ್ರಶಸ್ತಿ ದೊರಕುತ್ತಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭ ನಿವೃತ್ತ ಬ್ಯಾಂಕ್ ಅಧಿಕಾರಿ ಹಾಗೂ ಶಿಕ್ಷಣ ತಜ್ಞ ಕಂಬದಕೋಣೆ ಪ್ರಕಾಶ ರಾವ್ ಅವರಿಗೆ ಸದಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಿವೃತ್ತ ಮುಖ್ಯ ಶಿಕ್ಷಕ ಜನಾರ್ದನ ಮರವಂತೆ ಅಭಿನಂದನಾ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ವಿದ್ವಾಂಸ ಡಾ.ಪಿ.ಆನಂದರಾಮ ಉಪಾಧ್ಯ, ಯಕ್ಷಗಾನ ಕಲಾರಂಗದ ಮುರಳಿ ಕಡೆಕಾರ್, ವೈಕುಂಠ ಹೆಬ್ಬಾರ್‌ ಉಪಸ್ಥಿತರಿದ್ದರು.

ಕಲಾಕೇಂದ್ರದ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ರಾಮಚಂದ್ರ ಐತಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮೇಘ ಶ್ಯಾಮ ಹೆಬ್ಬಾರ್ ಸನ್ಮಾನಪತ್ರ ವಾಚಿಸಿದರು. ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ ವಂದಿಸಿದರು. ಸುಧಾಕರ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು. ನಂತರ ಲಾವಣ್ಯ ಬೈಂದೂರ ಇವರಿಂದ ‘ಮುದ್ದಣನ ಪ್ರಮೋಶನ್ ಪ್ರಸಂಗ’ ಎಂಬ ಹಾಸ್ಯ ನಾಟಕ ಪ್ರದರ್ಶನಗೊಂಡಿತು.

Post Comments (+)