ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಪ್ಪು, ತರಕಾರಿ ಧಾರಣೆ ಗಗನಮುಖಿ

Last Updated 23 ಅಕ್ಟೋಬರ್ 2017, 10:22 IST
ಅಕ್ಷರ ಗಾತ್ರ

ವಿಜಯಪುರ: ಹಿಂಗಾರು ಆರಂಭದ ಬೆನ್ನಿಗೆ ಕಾಯಿಪಲ್ಲೆ–ಸೊಪ್ಪಿನ ಧಾರಣೆ ಗಗನಮುಖಿಯಾಗಿದೆ. ಚೌಕಾಸಿ ವ್ಯಾಪಾರಕ್ಕೆ ಆಸ್ಪದವಿಲ್ಲದಾಗಿದೆ. ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕ ಖರೀದಿಗೆ ಹಿಂದೇಟು ಹಾಕುತ್ತಿರುವ ದೃಶ್ಯಾವಳಿ ನಗರದ ವಿವಿಧೆಡೆ ನಡೆಯುವ ವಾರದ ಸಂತೆಗಳಲ್ಲಿ ಗೋಚರಿಸುತ್ತಿದೆ. ಧಾರಣೆ ದುಪ್ಪಟ್ಟಾಗಿದೆ. ಕೆಲ ಕಾಯಿಪಲ್ಲೆ ಕೈಗೆಟುಕುವ ದರದಲ್ಲಿದ್ದರೂ, ಸೊಪ್ಪು ಮಾತ್ರ ದುಬಾರಿಯಾಗಿದೆ.

ಈ ಹಿಂದೆ ₹ 10ಕ್ಕೆ ಮೂರ್ನಾಲ್ಕು ಕಟ್ಟು ದೊರಕುತ್ತಿದ್ದ ಎಲ್ಲ ಬಗೆಯ ಪಲ್ಲೆ ಇದೀಗ ಒಂದು ಸಿಕ್ಕರೆ ಸಾಕು ಎನ್ನುವಂತಹ ವಾತಾವರಣ ಮಾರುಕಟ್ಟೆಯಲ್ಲಿದೆ. ರಸ್ತೆಯ ಆ ತುದಿಯಿಂದ ಈ ತುದಿಯವರೆಗೂ ತಿರುಗಾಡಿದರೂ ಎಲ್ಲೂ ಧಾರಣೆ ಕೊಂಚವೂ ಕಡಿಮೆ ಯಿಲ್ಲ. ಎಲ್ಲೆಡೆ ನಿಗದಿತ ದರ. ಪ್ರತಿ ವಾರ ಕಾಯಿಪಲ್ಲೆ ಬಜಾರ್‌ಗೆ ಬರುತ್ತಿದ್ದಂತೆ, ಕಡಿಮೆ ಧಾರಣೆಯ ಕೂಗು ಕೇಳುತ್ತಿತ್ತು. ಇದೀಗ ವ್ಯಾಪಾರಿಗಳು ಧಾರಣೆ ಕೂಗುತ್ತಿಲ್ಲ. ನಾವೇ ಕೇಳಿ ಖರೀದಿಸಬೇಕಿದೆ ಎಂದು ಭಾನುವಾರದ ಬಜಾರ್‌ಗೆ ಖರೀದಿಗಾಗಿ ಬಂದಿದ್ದ ಗಂಗಾಧರ ಹೂಗಾರ್ ತಿಳಿಸಿದರು.

ಮಳೆಗಾಲದಲ್ಲಿ ಸಹಜವಾಗಿ ತರಕಾರಿ ದರ ಕಡಿಮೆಯಿರಬೇಕಿತ್ತು. ಸೊಪ್ಪು ಅಗ್ಗವಾಗಿ ದೊರಕಬೇಕಿತ್ತು. ಆದರೆ ಇದಕ್ಕೆ ವ್ಯತಿರಿಕ್ತ ವಾತಾವರಣ ನಗರದ ವಿವಿಧ ಕಾಯಿಪಲ್ಲೆ ಮಾರು ಕಟ್ಟೆಗಳಲ್ಲಿ ಕಂಡು ಬಂತು.

ಒಂದೊಂದು ಕೆ.ಜಿ. ತರಕಾರಿ ಖರೀದಿಸುತ್ತಿದ್ದವರು, ದರ ಕೇಳುತ್ತಿದ್ದಂತೆ ಹೌಹಾರಿ ಪಾವ್‌ ಕಿಲೋ ಖರೀದಿಗೆ ಸೀಮಿತವಾದರು. ಎಲ್ಲರದ್ದೂ ಒಂದೇ ಪ್ರಶ್ನೆ. ಕಾಯಿಪಲ್ಲೆ ದರ ಇಳಿಕೆಯಾಗೋದು ಯಾವಾಗ ಎಂಬುದಾಗಿತ್ತು.

‘ಕಾಯಿಪಲ್ಲೆ ಸಿಕ್ಕಾಪಟ್ಟೆ ತುಟ್ಟಿ ಯಾಗಿದೆ. ಒಂದೊಂದು ಕೆ.ಜಿ.ಗೆ ₹ 20–40 ಹೆಚ್ಚಿದೆ. ಕೆಲ ಕಾಯಿಪಲ್ಲೆ ಬೆಲೆ ದುಪ್ಪಟ್ಟಾಗಿದೆ. ಖರೀದಿ ಚಿಂತೆ ಹೆಚ್ಚಿದೆ. ಈ ಸಮಯಕ್ಕೆ ಸಾಕಷ್ಟು ದೊರೆಯಬೇಕಿದ್ದ ಸೊಪ್ಪು ಮಾರುಕಟ್ಟೆಯಲ್ಲಿ ಹೆಚ್ಚು ಸಿಗ್ತಿಲ್ಲ.

ದುಡ್ದ ರೊಕ್ಕವೆಲ್ಲಾ ವಾರದ ಸಂತೆಗೆ ಖಾಲಿಯಾಗುತ್ತಿದೆ. ಬಡವರು, ಮಧ್ಯಮ ವರ್ಗದವರು, ಕೂಲಿ ಕಾರ್ಮಿಕರಿಗೆ ವಾರದ ಸಂತೆ ಮಾಡುವುದು ಎಂದರೇ ಕುತ್ತಿಗೆಗೆ ಬಂದಂತಾಗುತ್ತಿದೆ’ ಎಂದು ಪ್ರತಿಭಾ ಅಂಬಿಗೇರ ತಿಳಿಸಿದರು.

‘ವಾರದಿಂದ ವಾರಕ್ಕೆ ಬೆಲೆ ಗಗನ ಮುಖಿಯಾಗುತ್ತಿದೆ. ವ್ಯಾಪಾರಿಗಳನ್ನು ಕೇಳಿದರೆ ಮಳೆಗೆ ಬೆಳೆ ನಾಶವಾಗಿದೆ. ನಮಗೂ ಹೆಚ್ಚಿನ ಉತ್ಪನ್ನ ಸಿಕ್ತಿಲ್ಲ. ನಾವೇ ದುಬಾರಿ ಬೆಲೆಗೆ ಖರೀದಿ ಸಬೇಕಿದೆ. ಅನಿವಾರ್ಯವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡ್ತಿದ್ದೀವಿ. ಏನ್‌ ಮಾಡೋದು ಎನ್ನುತ್ತಾರೆ.

ಅಡುಗೆ ಮನೆ ನಿರ್ವಹಿಸಲು ನಮಗೆ ಕಾಯಿಪಲ್ಲೆ ಬೇಕಿದೆ. ವಿಧಿಯಿಲ್ಲದೆ ನಮ್ಮ ಬಜೆಟ್‌ನಲ್ಲೇ ಕೊಂಚ ಕೊಂಚ ಖರೀದಿ ನಡೆಸ್ತಿದ್ದೀವಿ’ ಎಂದು ನಿರ್ಮಲಾ ಪೂಜಾರಿ ಹೇಳಿದರು.

‘ಹೊಲದಲ್ಲಿ ಕೊತ್ತಂಬ್ರೀ ಹಾಕಿದ್ದೆ. ಚಲೋ ಬೆಳೆ ಬಂದಿತ್ತು. 15 ದಿನ ಸುರಿದ ಮಳೆಗೆ ನೀರು ನಿಂತು ಕೊಳೆತೋಯ್ತು. ದಿನ್ನೆ ಮೇಲಿದ್ದ ಸೊಪ್ಪನ್ನೇ ಕಿತ್ತು ತಂದಿರುವೆ. ಬೆಳೆದಿದ್ದ ಬೆಳೆ ಮಳೆಗೆ ನಾಶವಾಗಿದ್ದರಿಂದ ಸಹಜವಾಗಿಯೇ ದರ ಹೆಚ್ಚಿದೆ’ ಎಂದು ವಿಜಯಪುರ ತಾಲ್ಲೂಕಿನ ಬಾಬಾ ನಗರದ ರೈತ, ವ್ಯಾಪಾರಿ ಲೋಕೇಶ ಭಜಂತ್ರಿ ದರ ಹೆಚ್ಚಳದ ಕಾರಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT