ಕಂಡೀರಾ ಇಂಥ ಗೊನೆ?

ಮಂಗಳವಾರ, ಜೂನ್ 25, 2019
29 °C

ಕಂಡೀರಾ ಇಂಥ ಗೊನೆ?

Published:
Updated:
ಕಂಡೀರಾ ಇಂಥ ಗೊನೆ?

– ಬಿ.ಎಸ್. ಹರೀಶ್

‘ಯಾವ ಗೊನೆ ಬೇಕಾದ್ರೂ ನೋಡಿ ಸಾರ್. ಒಂದೇ ಸಮ, ಮೇಲಿಂದ ಕೆಳಗಿನವರೆಗೂ ಸಮನಾದ ಕಾಯಿಗಳು, ಎಲ್ಲ ಫಸ್ಟ್ ಗ್ರೇಡ್, ಟ್ರೇಡರ್‌ಗಳು ನೋಡೋ ಎಲ್ಲ ಗುಣ ಈ ಬಾಳೆ ತಳಿಗಿದೆ; ಅವರೇ ಹೇಳೋ ಪ್ರಕಾರ ಶೆಲ್ಫ್ ಲೈಫ್ ಕೂಡ ಚೆನ್ನಾಗಿದೆ’ ಹೀಗೆ ತಾವು ಮೊದಲ ಬಾರಿಗೆ ಬೆಳೆದಿರುವ ವಿಲಿಯಮ್ಸ್ ಬಾಳೆ ತಳಿಯ ಬಗೆಗೆ ವಿವರಣೆ ಶುರು ಮಾಡಿದ್ದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಾಸಲು ಹೋಬಳಿಯ ಹೊಸಹಳ್ಳಿ ಗ್ರಾಮದ ಅಪ್ಪಟ ಕೃಷಿಕ ಶಿವಪ್ಪನವರು.

ತಾತನ ಕಾಲದಿಂದಲೂ ಅಲ್ಪ ಸ್ವಲ್ಪ ಬಾಳೆ ಬೆಳೆಯುತ್ತಿತ್ತು ಅವರ ಕುಟುಂಬ. ವಾಣಿಜ್ಯ ಮಟ್ಟದಲ್ಲಿ ಬೆಳೆಯಲು ಶುರು ಮಾಡಿ ಯಶ ಕಂಡದ್ದು ಶಿವಪ್ಪನವರ ಸಾಧನೆ. ಕಂದು ಬಾಳೆ ಬಿಟ್ಟು ಅಂಗಾಂಶ ಬಾಳೆ ಶುರು ಮಾಡಿ ದಶಕಗಳೇ ಕಳೆದಿವೆ. ಏಲಕ್ಕಿ, ಪಚ್ಚಬಾಳೆ, ಗ್ರಾಂಡ್ ನೈನ್ (ಕ್ಯಾವೆಂಡಿಷ್) ತಳಿಗಳನ್ನು ಬೆಳೆದ ಅನುಭವ ಮೊದಲೇ ಇತ್ತು.

ಏಲಕ್ಕಿ ಅಂಗಾಂಶ ತಳಿ ಬಾಳೆಯನ್ನು ಆರೇಳು ವರ್ಷಗಳ ಹಿಂದೆಯೇ ಶುರು ಮಾಡಿದ್ದರು. ಏಲಕ್ಕಿ ಅಂಗಾಂಶ ಸಸಿ ಪೂರೈಸಿದ ಕಂಪನಿಯವರು ಕಳೆದ ಅಕ್ಟೋಬರ್‌ನಲ್ಲಿ ಕ್ಯಾವೆಂಡಿಷ್ ಗುಂಪಿನ ನಮ್ಮ ರಾಜ್ಯಕ್ಕೆ ಹೊಸದೆನ್ನಬಹುದಾದ ವಿಲಿಯಮ್ಸ್ ತಳಿಯ ಎರಡು ಸಾವಿರ ಅಂಗಾಂಶ ಸಸಿಗಳನ್ನು ಪೂರೈಸಿದರು.

‘ನೋಡಿ ಸಾರ್, ಧೈರ್ಯ ಮಾಡಿ ಬೆಳೆದೇ ಬಿಟ್ಟಿರುವೆ; ಇಲ್ಲಿಯವರೆಗೂ ರಾಜ್ಯದ ನಾನಾ ಕಡೆಗಳಿಂದ ಬಂದು ತೋಟ ನೋಡಿದವರ ಸಂಖ್ಯೆ ಐನೂರು ದಾಟಿದೆ; ನನ್ನ ನಿರೀಕ್ಷೆ ಕನಿಷ್ಠ 70 ಟನ್ ಇಳುವರಿ, ಈಗಿನ ದರವೇ ಸಿಕ್ರೆ ₹14 ಲಕ್ಷ ಆದಾಯ ಗ್ಯಾರಂಟಿ’ ಎಂಬ ಆತ್ಮವಿಶ್ವಾಸದ ನುಡಿ ಅವರದ್ದು.

ಸಿದ್ದಲಿಂಗಯ್ಯನವರ ಹತ್ತು ಜನ ಮಕ್ಕಳಲ್ಲಿ ಶಿವಪ್ಪನವರು ಎರಡನೆಯ ವರು; ಹಿರಿಯಣ್ಣ ಮನೋರೋಗಕ್ಕೆ ತುತ್ತಾಗಿ ಅಪ್ಪನ ಕೃಷಿಗೆ ಆಸರೆಯಾಗಲು ಆಗಲಿಲ್ಲ. ಕೊನೆಯ ತಮ್ಮ ಮತ್ತು ಇವರ ಹೊರತಾಗಿ ಉಳಿದವರೆಲ್ಲ ‌‌ಉದ್ಯೋಗ ಅರಸಿ ಹೋದರು. ಆದರೆ ಶಿವಪ್ಪ ಬಿ.ಎ. ಪದವೀಧರರಾದರೂ ನೆಲದ ಮೇಲಿನ ಅಕ್ಕರೆಯಿಂದ ಕೃಷಿ ಮುಂದುವರೆಸಿಕೊಂಡು ಹೋಗುವ ದೃಢ ನಿರ್ಧಾರ ಮಾಡಿದರು.

ಪಿತ್ರಾರ್ಜಿತ ಆಸ್ತಿಯನ್ನು ಎರಡು ದಶಕ ನಿರ್ವಹಿಸಿ ಅದರಿಂದಲೇ ಸಂಪಾದಿಸಿದ ಹಣದಿಂದ ಇದುವರೆಗೂ ಇವರು ಖರೀದಿಸಿದ್ದು ಬರೋಬ್ಬರಿ 23 ಎಕರೆ ಜಮೀನು. ‘ಚೇಷೇವೋಡು ಬಿದೋ ಶೇನು ಬಿದೋ’ (ಭೂಮಿ ಯಾವತ್ತೂ ಬರಡಲ್ಲ; ಮಾಡುವವನು ಬರಡಾಗಿರಬಹುದಷ್ಟೆ) ಎಂದು ಮಾರ್ಮಿಕವಾಗಿ ಹೇಳುತ್ತಾರಿವರು.

ಬೆಳೆ ಪ್ರಾರಂಭಿಸುವ ಮೊದಲು: ಭೂಮಿ ಫಲವತ್ತಾಗಿದ್ದರೆ ಮಾತ್ರ ಫಲವತ್ತಾದ ಬೆಳೆ ಬರುವುದೆಂಬುದನ್ನು ಕಂಡುಕೊಂಡಿರುವ ಶಿವಪ್ಪನವರು ಯಾವುದೇ ಬೆಳೆ ಪ್ರಾರಂಭಿಸುವ ಮೊದಲು ತಪ್ಪದೇ ಸೆಣಬು ಬೆಳೆದು ಅದು ಹೂವಾಡುವ ಹಂತದಲ್ಲಿ ಜಮೀನಿಗೆ ಸೇರಿಸಿ ಅದು ಚೆನ್ನಾಗಿ ಕೊಳೆತು ಮಣ್ಣಿನ ಸಾವಯವ ಇಂಗಾಲ ಹೆಚ್ಚುವಂತೆ ಮಾಡುತ್ತಾರೆ. ತುಸು ಆಳವಾಗಿಯೇ ಉಳುಮೆ ಮಾಡಿಸುತ್ತಾರೆ. ಭೂಮಿ ಸಡಿಲಾಗಿದ್ದರೆ ಬೇರುಗಳು ಹೆಚ್ಚು ಆಳಕ್ಕೂ ಅಗಲಕ್ಕೂ ಇಳಿದು ಆರೋಗ್ಯಯುತವಾಗಿ ಬೆಳೆಯುತ್ತವೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ ಅವರು.

ಜೊತೆಗೆ ತಪ್ಪದೆ ಕೊಟ್ಟಿಗೆ ಗೊಬ್ಬರ, ಬೇವಿನ ಹಿಂಡಿ, ಜೀವಾಣು ಗೊಬ್ಬರಗಳ ಬಳಕೆಯಿದೆ.

ಕಳೆದೊಂದು ದಶಕದಿಂದ ಸಮಸ್ಯೆ ಹೆಚ್ಚಾಗಿದೆ. ಬಹಳಷ್ಟು ಕೃಷಿಕರಂತೆ ಇವರೂ ಒಂದಾದ ಮೇಲೊಂದರಂತೆ ಇದುವರೆಗೂ ಮೂವತ್ತೊಂದು ಕೊಳವೆ ಬಾವಿ ತೆಗೆಸಿದ್ದಾರೆ. ಆದರೆ, ಬೇಕಾದ ನೀರು ಪಡೆಯಲು ಅದು ಸುಸ್ಥಿರವಲ್ಲವೆಂಬ ಅರಿವು ಅದ್ಯಾವಾಗಲೋ ಆಗಿದೆ. ಎರಡು ದಶಕಗಳ ಹಿಂದೆಯೇ ಬೆಳೆಯುವ ಎಲ್ಲ ಬೆಳೆಗಳಿಗೂ ಹನಿ ನೀರಾವರಿ ಅಳವಡಿಸಿ ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ.

ಹನಿಕೆಗಳು ಕಟ್ಟಿಕೊಂಡಾಗ ಒಂದೆರಡು ಸಲ ಫಾಸ್ಪಾರಿಕ್ ಆಸಿಡ್ ವೆಂಚುರಿ ಮೂಲಕ ಕೊಟ್ಟರೆ ಸಾಕು, ಆ ಸಮಸ್ಯೆ ಪರಿಹಾರವಾಗುತ್ತೆ ಅಂತಾರೆ. ಜೊತೆಗೆ ಇಪ್ಪತ್ತೆರಡು ಲಕ್ಷ ಲೀಟರ್ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿದ್ದಾರೆ.

‘ಇನ್ಮೇಲೆ ಕೊಳವೆ ಬಾವಿಗಳು ತಂತಾನೆ ಮರುಪೂರಣ ಆಗ್ತವೆ; ಇಲ್ನೋಡಿ ಹೊಂಡಕ್ಕೆ ಸಿಲ್ಟ್ ಟ್ರ್ಯಾಪ್ ಕೂಡ ಮಾಡಿದ್ದೀನಿ; ಹೊಂಡದ ಹೂಳೆತ್ತುವ ಪ್ರಮೇಯವೇ ಇಲ್ಲ; ಟ್ರ್ಯಾಪ್‌ನಲ್ಲಿರೋ ಹೂಳು ತುಂಬಿದಾಗಲೆಲ್ಲ ತೆಗೆದು ಬೆಳೆಗೆ ಹಾಕಿದ್ರೆ ಅದರಲ್ಲಿ ಬಹಳ ಪೋಷಕಾಂಶ ಇರೋದ್ರಿಂದ ಬೆಳೆನೂ ಚೆನ್ನಾಗಿ ಬರುತ್ವೆ’ ಎಂದು ತೋರಿಸುತ್ತಾರೆ.

ಮೊದಲೆಲ್ಲಾ ಕಂದು ನಾಟಿ ಮಾಡುತ್ತಿದ್ದಾಗ ಬೆಳೆದ ಬಾಳೆ ಗಿಡಗಳ ಬೆಳವಣಿಗೆ, ಗೊನೆಯ ತೂಕ, ಕಾಯಿಗಳ ಆಕಾರ, ಗಾತ್ರ ಹೆಚ್ಚೂ ಕಡಿಮೆ ಇರುತ್ತಿತ್ತು. ಒಂದು ಗೊನೆಯಲ್ಲಿ ಒಂದೆರಡು ಚಿಪ್ಪು ಸಣ್ಣದಿದ್ದರೂ ಎರಡನೇ ಗ್ರೇಡಿಗೆ ಖರೀದಿದಾರರು ಹಾಕುತ್ತಿದ್ದರು. ಈಗ ಪರಿಸ್ಥಿತಿ ಮೊದಲಿನಂತಿಲ್ಲ. ಅಂಗಾಂಶ ಬಾಳೆ ಸಸಿ ನಾಟಿ ಮಾಡಿರೋದು, ಜಮೀನಿನ ಫಲವತ್ತತೆ, ಹನಿ ನೀರಾವರಿ ವೆಂಚುರಿ ವ್ಯವಸ್ಥೆ ಇರುವುದರಿಂದ ಎಲ್ಲ ಗಿಡಗಳಿಗೂ ಒಂದೇ ಪ್ರಮಾಣದ ನೀರು ಪೋಷಕಾಂಶ ಪೂರೈಕೆ –ಎಲ್ಲ ಒಟ್ಟಿಗೆ ಸೇರಿ ಇವರ ಬಾಳೆ ತೋಟದ ಯಾವ ಬಾಳೆ ಗಿಡ ನೋಡಿದರೂ ಗೊನೆಯ ಯಾವ ಚಿಪ್ಪಿನ ಯಾವ ಕಾಯಿ ನೋಡಿದರೂ ಸಮಾನತೆ.

ಬಾಳೆ ಗೊನೆ ಬರಲು ಶುರುವಾದ ಮೇಲೆ ಕನಿಷ್ಠ ಎರಡು ತಿಂಗಳು ವಾರಕ್ಕೊಮ್ಮೆ ಆದಾಯ ಬರುವುದು. ಆರೆಕರೆ ಅಡಿಕೆ ಕೊಯ್ಲು ನವೆಂಬರ್‌ಗೆ ಮುಗಿದು ಅದನ್ನು ಸಂಸ್ಕರಿಸಿ ಮಾರಿ ಹಣ ಕೈಗೆ ಬರುವುದು ಫೆಬ್ರುವರಿ-ಮಾರ್ಚಿಯಲ್ಲಿ, ತುಸು ದೊಡ್ಡ ಗಂಟು. ವರ್ಷದ ಉಳಿದ ಕೃಷಿ ಖರ್ಚಿಗೆ ಅದರದ್ದೇ ಹಣ. ಬಾಳೆಯಿಂದ ಈಗಷ್ಟೇ ಹಣ ಬರಲು ಶುರುವಾಗಿದೆ.

ಇನ್ನೊಂದೆರಡು ತಿಂಗಳು ನಿರಾಳ. ಇವುಗಳ ಹೊರತಾಗಿಯೂ ಕಾರ್ಮಿಕರ ವೆಚ್ಚ, ಇತರೇ ಒಳಸುರಿಗಳ ಖರೀದಿಗೆ ಪ್ರತೀ ತಿಂಗಳು ಕೃಷಿಕರಿಗೆ ಹಣ ಬೇಕಾಗುವುದು. ಇದಕ್ಕಾಗಿಯೇ ಶಿವಪ್ಪನವರು ಒಂದು ಎಕರೆಯಲ್ಲಿ ಮಿರಾಬುಲ್ ಹಾಗೂ ಡಚ್ ರೋಸ್ ತಳಿಗಳ ಕೃಷಿ ಮಾಡುತ್ತಿದ್ದಾರೆ.

ಪ್ರತಿ ಮೂರು ದಿನಗಳಿಗೊಮ್ಮೆ ತಪ್ಪದೆ ಹೂ ಕಟಾವು ಮತ್ತು ಮಾರಾಟ. ಅಂತೆಯೇ ಅದರಿಂದ ಮೂರು ದಿನಕ್ಕೊಮ್ಮೆ ಹಣ ಬರುತ್ತದೆ. ಇರುವ ಎರಡೂವರೆ ಸಾವಿರ ಗುಲಾಬಿ ಗಿಡಗಳಿಂದ ಬರುವ ತಿಂಗಳ ಸರಾಸರಿ ಆದಾಯ ನಲವತ್ತು ಸಾವಿರ ರೂಪಾಯಿ. ವೆಚ್ಚ ತೆಗೆದರೆ ಉಳಿಯುವ ಕನಿಷ್ಠ ನಿವ್ವಳ ಲಾಭ ಇಪ್ಪತ್ತೈದು ಸಾವಿರ ರೂಪಾಯಿ.

ಮನೆ, ಕಾರ್ಮಿಕರು, ಇತರೆ ಖರ್ಚುಗಳಿಗೆ ಗುಲಾಬಿಯಿಂದ ಬರುತ್ತಿರುವ ಹಣವೇ ಇವರಿಗೆ ಸಾಕಾಗಿದೆ. ಇತ್ತೀಚೆಗೆ ಸುಗಂಧರಾಜ ಬೆಳೆಯುತ್ತಿದ್ದಾರೆ. ತರಕಾರಿ ಕೃಷಿಕರ ತೊಳಲಾಟ, ಕಷ್ಟ, ಅನಿಶ್ಚಿತತೆ ಗೊತ್ತಿದ್ದ ಇವರು ಎರಡು ದಶಕದ ಹಿಂದೆಯೇ ತಮ್ಮ ಆರೆಕರೆ ಜಮೀನಿನಲ್ಲಿ ಅಡಿಕೆ ಕೃಷಿ ಶುರು ಮಾಡಿದ್ದರು. ಅದೇ ತೋಟದಿಂದ ಕಳೆದ ಸಾಲಿನಲ್ಲಿ ಹತ್ತು ಲಕ್ಷ ನಿವ್ವಳ ಲಾಭ ಕಂಡಿದ್ದ ಶಿವಪ್ಪನವರು ಈ ಬಾರಿ ಹದಿನೈದು ಲಕ್ಷದ ನಿರೀಕ್ಷೆಯಲ್ಲಿದ್ದಾರೆ.

ಅಡಿಕೆ ಕೊಯಿಲು ಈಗಷ್ಟೇ ಶುರುವಾಗಿದೆ. ಹಸಿ ಅಡಿಕೆ ಮಾರದೆ ಯಂತ್ರದ ಸಹಾಯದಿಂದ ಸಿಪ್ಪೆ ಸುಲಿದು ಬೇಯಿಸಿ ಒಣಗಿಸಿ ಮಾರುತ್ತಾರೆ. ಕಾರ್ಮಿಕರ ಅಲಭ್ಯತೆ ಕಂಡು ಗಂಟೆಗೆ ಅರ್ಧ ಟನ್ ಹಸಿ ಅಡಿಕೆ ಸುಲಿಯುವ ಸಾಮರ್ಥ್ಯದ ವಿದ್ಯುತ್ ಚಾಲಿತ ಸಿಪ್ಪೆ ಸುಲಿಯುವ ಯಂತ್ರ ಬಳಸುತ್ತಿದ್ದಾರೆ.

ಅಡಿಕೆ ತೋಟದ ಆದಾಯ ಹೆಚ್ಚಿಸಲು ಉಪಬೆಳೆಯಾಗಿ ಅದರಲ್ಲಿ ಏಲಕ್ಕಿ ಬಾಳೆ ಬೆಳೆಯುತ್ತಿದ್ದಾರೆ. ಆರು ವರ್ಷದ ಹಿಂದೆ ಬಾಳೆ ಹಾಕಿದ್ದು; ಈಗಿನದು ಐದನೇ ಕೂಳೆ. ಬಾಳೆಯ ಆರೋಗ್ಯದ ಹಿಂದೆ ಇವರ ಶ್ರಮ ಬುದ್ಧಿವಂತಿಕೆ ಎರಡೂ ಇದೆ. ನಾಲ್ಕೈದು ವರ್ಷಗಳ ಹಿಂದೆ ಎಕರೆಗೆ ಹದಿನೇಳು ಟನ್ ಏಲಕ್ಕಿ ಬಾಳೆ ಬೆಳೆದ ಸಾಧನೆ ಇವರ ಕೃಷಿ ಜ್ಞಾನ ಮತ್ತು ಬುದ್ಧಿವಂತಿಕೆಗೆ ಸಾಕ್ಷಿ.

ಬರೀ ಸರ್ಕಾರಿ ಗೊಬ್ಬರದಿಂದ ಬೆಳೆಗಳ ಪೋಷಕಾಂಶಗಳ ಅವಶ್ಯಕತೆ ಪೂರೈಸುವುದು ಮತ್ತು ಮಣ್ಣಿನ ಫಲವತ್ತತೆ ಕಾಪಾಡುವುದು ಖಂಡಿತ ಸಾಧ್ಯವಿಲ್ಲವೆಂಬುದರ ಸ್ಪಷ್ಟ ಅನುಭವ ಇವರಿಗಿದೆ. ಹಾಗಾಗಿ ಬೆಳೆ ಉಳಿಕೆಗಳನ್ನು (ಬಾಳೆ ಎಲೆ, ದಿಂಡು, ಅಡಿಕೆ ಎಲೆ, ಸಿಪ್ಪೆ, ಗುಲಾಬಿ ಚಾಟಣಿಯ ತ್ಯಾಜ್ಯ ಇತ್ಯಾದಿ) ಎಲ್ಲವನ್ನೂ ಮುಚ್ಚಿಗೆಯಾಗಿ ಬಳಸುತ್ತಾರೆ.

ಇಷ್ಟ ಪಟ್ಟು ಕೃಷಿಯ ಕಷ್ಟಗಳನ್ನು ನಿಭಾಯಿಸಿಕೊಂಡು ಹೋಗುತ್ತಿರುವ ಶಿವಪ್ಪನವರಿಗೆ ಕೃಷಿ ನೆಮ್ಮದಿ, ಸಂತೋಷ, ಹಣ, ಸ್ವಾವಲಂಬಿ ಬದುಕು ಎಲ್ಲವನ್ನೂ ಕೊಟ್ಟಿದೆ. ಮಿಗಿಲಾಗಿ ಅರವತ್ತು ದಾಟಿದರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಸಹಕಾರಿಯಾಗಿದೆ. ಕೃಷಿಯ ಹಾಗೂ ಮನೆಯ ಎಲ್ಲ ಕೆಲಸಗಳಲ್ಲೂ ಹೆಗಲುಕೊಟ್ಟು ಜೊತೆಯಾಗಿರುವ ಪತ್ನಿ ಉಷಾರ ಪಾತ್ರವನ್ನು ಮುಕ್ತವಾಗಿ ಪ್ರಶಂಸಿಸುತ್ತಾರೆ ಇವರು. ಸಂಪರ್ಕ 9880127746.

ಮನೆ ಬಾಗಿಲಿಗೆ ಬರುವ ಖರೀದಿದಾರರು

ಎರಡು ವರ್ಷದ ಹಿಂದೆಯೇ ಗುಲ್ಬರ್ಗ ಜಿಲ್ಲೆಯ ಕಮಲಾಪುರದ ಕೃಷಿಕ ಸೂರಜ್ ಪಾಟೀಲರು ವಿಲಿಯಮ್ಸ್ ತಳಿಯ ಬಾಳೆ ಬೆಳೆದಿದ್ದಾರೆ. ‘ಈ ತಳಿ ರಫ್ತಿಗೆ ಬಹಳ ಚಲೋ ಸಾರ್; ಆಕರ್ಷಕ ಗೊನೆ, ತಿಳಿ ಹಸಿರು ಬಣ್ಣದ ಒಂದೇ ತೆರನಾದ ಚಿಪ್ಪುಗಳು ಮತ್ತು ಅದರಲ್ಲಿನ ಕಾಯಿಗಳು, ಈ ತಳಿ ಬೆಳೆದವರನ್ನು ಹುಡುಕಿಕೊಂಡು ಬರುವ ಖರೀದಿದಾರರು, ಒಟ್ಟಾರೆ ಒಳ್ಳೆಯ ಅನುಭವ’ ಎನ್ನುತ್ತಾರೆ ಅವರು.

ಅಲ್ಲಿನ ಖರೀದಿದಾರರಾದ ಬಸಪ್ಪ ಹೀಗೆನ್ನುತ್ತಾರೆ ‘ಗ್ರಾಹಕರು ಇಷ್ಟಪಟ್ಟು ಈ ತಳಿಯ ಹಣ್ಣುಗಳನ್ನೇ ಹೆಚ್ಚು ಕೇಳುತ್ತಾರೆ; ಬೇರೆ ತಳಿಗಳಿ ಗಿಂತ ಇದರ ಬಾಳಿಕೆ ಮೂರ್ನಾಲ್ಕು ದಿನ ಹೆಚ್ಚಿರೋದು ಬಹಳ ಒಳಿತು’.

ನೆಲಮಂಗಲದ ಕೃಷ್ಣಕುಮಾರ್ ಕಳೆದ ವರ್ಷ ಐದೆಕರೆಯಲ್ಲಿ ಬೆಳೆದಿದ್ದಾರೆ. ‘ಗ್ರಾಂಡ್ ನೈನ್ ತಳಿಗೂ ಇದಕ್ಕೂ ಅಂತಹ ವ್ಯತ್ಯಾಸವೇನೂ ಇಲ್ಲ, ಆದರೆ ಇದರ ಕಾಂಡದ ಸುತ್ತಳತೆ ಹೆಚ್ಚಿದ್ದು ಸದೃಢವಾಗಿದೆ, ಅದಕ್ಕೆ ಈ ಸಲವೂ ಇದರ ಕೃಷಿ ಮುಂದುವರೆಸಿದ್ದೇನೆ’ ಎನ್ನುತ್ತಾರೆ.

ಇದರ ಸಸಿ ಪೂರೈಸುತ್ತಿರುವುದು ಬೆಂಗಳೂರು ಮೂಲದ ಗ್ರೀನ್ ಲೀಫ್ ಪ್ಲಾಂಟ್ ಟೆಕ್ನಾಲಜೀಸ್ ಎಂಬ ಕಂಪನಿ. ಕಳೆದ ಸಲ ಆಂಧ್ರ ಪ್ರದೇಶಕ್ಕೆ ಮೂರು ಲಕ್ಷ ಸಸಿ ಪೂರೈಸಿದ್ದಾರೆ. ಸದ್ಯ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಸಸಿ ಪೂರೈಕೆ ಕಂಪನಿಗೆ ಕಷ್ಟವಾಗಿದೆ.

ಸಸಿಗಳು ಡಿಸೆಂಬರ್‌ನಿಂದ ಲಭ್ಯ ಎನ್ನುತ್ತಾರೆ ಸಸಿ ಮಾರಾಟದಲ್ಲಿ ನಿರತರಾದ ದಯಾನಂದ್ 9448707192.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry