ಅಭಿವೃದ್ಧಿ ನಿರ್ಲಕ್ಷ್ಯ: ಅಧಿಕಾರಿಗಳೇ ಹೊಣೆ

ಗುರುವಾರ , ಜೂನ್ 20, 2019
27 °C

ಅಭಿವೃದ್ಧಿ ನಿರ್ಲಕ್ಷ್ಯ: ಅಧಿಕಾರಿಗಳೇ ಹೊಣೆ

Published:
Updated:
ಅಭಿವೃದ್ಧಿ ನಿರ್ಲಕ್ಷ್ಯ: ಅಧಿಕಾರಿಗಳೇ ಹೊಣೆ

ಯಾದಗಿರಿ: ‘ಸರ್ಕಾರಿ ಕಚೇರಿಗಳಲ್ಲಿ ಶ್ರೀಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಕರ್ತವ್ಯ ಪ್ರಜ್ಞೆ ಮರೆತ ಹೊಣೆಗೇಡಿ ಅಧಿಕಾರಿಗಳೇ ಇಂದಿನ ಅನಭಿವೃದ್ಧಿಗೆ ಕಾರಣರಾಗಿದ್ದಾರೆ. ಅಧಿಕಾರಿಗಳು ಕರ್ತವ್ಯವವನ್ನು ಸಮರ್ಥವಾಗಿ ನಿಭಾಯಿಸಿದರೆ ಅಭಿವೃದ್ಧಿ ಆಗುತ್ತದೆ’ ಎಂದು ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಭಾನುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಕಟ್ಟಡ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನಪ್ರತಿನಿಧಿಗಳಾದವರು ಎಲ್ಲಾ ಇಲಾಖೆಗಳ ಜವಾಬ್ದಾರಿಯನ್ನು ನೋಡಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ಜನಸಾಮಾನ್ಯ ಆಹವಾಲುಗಳನ್ನು ಸ್ಥಳೀಯ ಶಾಸಕರು ಸರ್ಕಾರದ ಮುಂದೆ ಒಪ್ಪಿಸುವುದು ಮತ್ತು ಯೋಜನೆಗಳ ಅನುಷ್ಠಾನ, ಅನುದಾನ ತರುವ ಕೆಲಸ ಮಾಡುತ್ತಾರೆ. ಉಳಿದ ಕೆಲಸವನ್ನು ಅಧಿಕಾರ ಹಿಡಿದವರು ಅಧಿಕಾರಿಗಳನ್ನು ಎಚ್ಚರಿಸುವ ಮೂಲಕ ಅಭಿವೃದ್ಧಿಯ ಪ್ರಗತಿ ನಿಭಾಯಿಸಬೇಕು.

ಅಧಿಕಾರ ಹೊಂದಿದವರು ಜನರ ಸಂಕಷ್ಟಗಳಿಗೆ ಕಿವಿಗೊಟ್ಟು ಸರ್ಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕುರಿತು ಯೋಚಿಸಬೇಕು. ಅಧಿಕಾರ ಇಲ್ಲದ ಶಾಸಕರನ್ನು ಪ್ರತಿಯೊಂದಕ್ಕೂ ಹೊಣೆಗಾರರನ್ನಾಗಿಸುವುದು ಎಷ್ಟು ಸರಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಿಬ್ಬಂದಿ ಇಲ್ಲದೇ ಯಾವುದೇ ಇಲಾಖೆ ಪ್ರಗತಿ ಸಾಧಿಸಬೇಕು ಎಂದರೆ ಹೇಗೆ ಸಾಧ್ಯ? ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸರ್ಕಾರದ ಅನುಮತಿ ಪಡೆಯುವ ಕೆಲಸ ಅಧಿಕಾರಿಗಳದ್ದಾಗಿದೆ. ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಮರೆತಾಗ ಸಹಜವಾಗಿ ಜನರು ಜನಪ್ರತಿನಿಧಿಗಳನ್ನು ದೂಷಿಸುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಅಧಿಕಾರಿ ವರ್ಗದ ಮೇಲಿದೆ’ ಎಂದು ವೇದಿಕೆ ಮೇಲಿದ್ದ ಹಿರಿಯ ಅಧಿಕಾರಿಗಳತ್ತ ಚಾಟಿ ಬೀಸಿದರು.

ಗೃಹಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಶೇ35ರಷ್ಟು ಹುದ್ದೆ ಖಾಲಿ ಇತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 25 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿದ್ದು, ಇನ್ನು ಶೇ18ರಷ್ಟು ಸಿಬ್ಬಂದಿ ಹುದ್ದೆ ಖಾಲಿ ಇದೆ. ಮುಂದಿನ ದಿನಗಳನ್ನು ಖಾಲಿ ಹುದ್ದೆಗಳನ್ನು ಸಂಪೂರ್ಣ ಭರ್ತಿ ಮಾಡಲಾಗುವುದು’ ಎಂದು ಹೇಳಿದರು.

ಸಂಸದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಜನಪ್ರತಿನಿಧಿಗಳಿಗೆ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಇರಬಾರದು. ಮತ ಹಾಕದ ಗ್ರಾಮಕ್ಕೂ ಮೂಲ ಸೌಕರ್ಯ ಕಲ್ಪಿಸಬೇಕು. ಕೊಂಕಲ್‌ ಗ್ರಾಮಕ್ಕೆ ಠಾಣೆ ಬೇಕು ಎಂಬ ಬೇಡಿಕೆ ಬಂದಿದೆ. ಪೊಲೀಸ್ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಂಡರೆ ಸಂಸದರ ನಿಧಿಯಿಂದ ₹25ಲಕ್ಷ ನೀಡುವುದಾಗಿ ಅವರು ಪ್ರಕಟಿಸಿದರು.

ಪೊಲೀಸ್ ಮಹಾನಿರ್ದೇಶಕ ರೂಪಕ್‌ ಕುಮಾರ್ ದತ್ತಾ ಮಾತನಾಡಿ, ‘ರಾಜ್ಯದಲ್ಲಿ ₹2,200 ಕೋಟಿ ವೆಚ್ಚದಲ್ಲಿ 11 ಸಾವಿರ ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಾಣ ಮಾಡಿದೆ. ಇಲಾಖೆ ಜನಸ್ನೇಹಿಯಾಗಿಸಲು ಯೋಜನೆ ರೂಪಿಸಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಆಸಕ್ತಿ ವಹಿಸಿದೆ’ ಎಂದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರು ಮಾತನಾಡಿ, ‘ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಪೊಲೀಸರ ಶ್ರಮ ಅಪಾರ. ನಗರದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಜಿಲ್ಲಾ ಪೊಲೀಸ್ ಕಚೇರಿ ನಿರ್ಮಾಣವಾಗುವ ಮೂಲಕ ಜಿಲ್ಲೆಗೆ ಮೆರುಗು ನೀಡಿದೆ’ ಎಂದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry