ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗಿಮಟ್ಟಿಯ ಜಲಪಾತಗಳು!

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಸುತ್ತಲೂ ದಟ್ಟವಾದ ಕುಬ್ಜ ಗಿಡಗಳ ರಾಶಿ. ನಡುನಡುವೆ ಒಂದಕ್ಕೊಂದು ತಬ್ಬಿಕೊಂಡಂತೆ ಒತ್ತೊತ್ತಾಗಿ ನಿಂತಿರುವ ಬಂಡೆಗಳು. ಆ ಬಂಡೆಗಳನ್ನೇ ಕೊರೆದು ಬೇರು ಬಿಟ್ಟು ಸಂಸಾರ ವಿಸ್ತರಿಸಿ­ಕೊಂಡಿ­­ರುವ ಸಸ್ಯ ಸಂಪತ್ತು. ದೂರದಿಂದ ಜೊಳ್ಳೆಂದು ಹರಿಯುವ ನೀರಿನ ಶಬ್ದ. ‘ಶಬ್ಧವೇದಿ’ಯಂತೆ ನೀರಿನ ಸದ್ದು ಬಂದಕಡೆ ಹೆಜ್ಜೆ ಹಾಕುತ್ತಾ ಸಾಗಿದರೆ, ಧುತ್ತನೆ ಎದುರಾಗುವ ನೀರಿನ ಝರಿ. ತುಸು ಬಾಗಿ ನೋಡಿದರೆ, ಝರಿಯೇ ಜಲಪಾತವಾಗುವ ದೃಶ್ಯ…!

ಈ ಸಾಲುಗಳನ್ನು ಓದುತ್ತಿರುವಾಗ ಮನಸೆಲ್ಲ ಮಲೆನಾಡಿನ ಕಾನನದ ಅಂಗಳಕ್ಕೆ ಓಡಿ ಹೋಗುತ್ತದೆ, ಅಲ್ವಾ? ಹಾಗನ್ನಿಸುವುದು ನಿಜ, ಆದರೆ, ಈ ದೃಶ್ಯ ಕಾವ್ಯದ ಸೊಬಗು ಸೃಷ್ಟಿಯಾಗಿರು­ವುದು ಬರದ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿರುವ ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯದಲ್ಲಿ. ‘ಉತ್ತರೆ ಮಳೆಯ’ ಆರಂಭದ ಜೋಶ್‌, ತಿಂಗಳಿಂದ ಮುಂದುವರಿದ ‘ಹಸ್ತೆ-ಚಿತ್ತೆ’ಯರ ಜುಗಲ್ ಬಂಧಿಯಿಂದಾಗಿ, ಅರಣ್ಯದಲ್ಲಿನ ಕೆರೆ-ಕಟ್ಟೆಗಳು ಭರ್ತಿಯಾಗಿ, ಕೋಡಿಬಿದ್ದು, ಇಂಥ ಜಲಪಾತಗಳ ಸೃಷ್ಟಿಗೆ ಕಾರಣವಾಗಿದೆ.

ಜಲಪಾತ್ರೆಗಳಿಂದ ಝರಿ-ಜಲಪಾತ: ಅಂದಹಾಗೆ 10,049 ಹೆಕ್ಟೇರ್‌ ವಿಸ್ತೀರ್ಣವಿರುವ ಜೋಗಿಮಟ್ಟಿ ಅರಣ್ಯ ಪ್ರದೇಶ, ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹಿರಿಯೂರು ತಾಲ್ಲೂಕುಗಳಲ್ಲೂ ಹಬ್ಬಿಕೊಂಡಿದೆ. ಈ ಕಾನನದ ಅಂಗಳ, ಸುತ್ತಲಿನ ಹತ್ತಾರು ಹಳ್ಳಿಗಳ ಕೆರೆ, ಕಟ್ಟೆ, ಬ್ಯಾರೇಜ್‌ಗಳಂಥ ‘ಜಲ ಪಾತ್ರೆ’ಗಳಿಗೆ ಮಳೆ ನೀರು ಹಿಡಿದುಕೊಡುವ ಜಲಾನಯ­ನ ಪ್ರದೇಶವಾಗಿದೆ.

ಶತಮಾನಗಳ ಹಿಂದೆಯೇ ಈ ಅರಣ್ಯ ಪ್ರದೇಶದಲ್ಲಿ ಕೆರೆ -ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅದು ಪ್ರಾಣಿ- ಪಕ್ಷಿಗಳ ನೀರಾಸರೆಗೋ ಅಥವಾ ದಾಖಲೆಗಳಲ್ಲಿರುವಂತೆ ಜೋಗಿಗಳು ವಾಸವಿದ್ದರು ಎಂಬ ಕಾರಣಕ್ಕೋ ಏನೋ, ಅಲ್ಲಲ್ಲೇ ಕುಮಾರನಕಟ್ಟೆ, ಗೋಪನಕಟ್ಟೆ, ಬೀರಮಲ್ಲಪ್ಪನ ಕೆರೆ, ಒಕ್ಕಲಿಕ್ಕನ ಕಟ್ಟೆ, ಕಡ್ಲೆಕಟ್ಟೆ ಕಣಿವೆ, ಬಾಲಂಬಾವಿ ಎನ್ನುವ ಕೆರೆ-ಕಟ್ಟೆಗಳಿವೆ. ಬಂಡೆಗಳ ಆಸರೆಯಲ್ಲಿ ಸ್ವಾಭಾವಿಕವಾಗಿ ಸೃಷ್ಟಿ­ಯಾ­ಗಿ­ರುವ ದೊಣೆಗಳಿವೆ. ಬ್ರಿಟಿಷರ ಕಾಲದ್ದೆನ್ನುವ ಕಲ್ಲು ಕಟ್ಟಡದ ಕಂದಕಗಳೂ ಇವೆ. ಇತ್ತೀಚೆಗೆ ಸುರಿದ ಮಳೆಗೆ ಇವೆಲ್ಲವೂ ಭರ್ತಿಯಾಗಿ ಕೋಡಿ ಹರಿಯುತ್ತಿವೆ. ಕೋಡಿಯ ನೀರು ಝರಿಗಳಾಗಿ, ಬಂಡೆ ಸಂದುಗಳಲ್ಲಿ ಹರಿಯುತ್ತಾ, ಧುಮ್ಮಿಕ್ಕುತ್ತಾ ಪುಟ್ಟ ಜಲಪಾತಗಳಂತೆ ಕಾಣಿಸಿಕೊಂ­ಡಿವೆ. ಕಾಡಿನ ಕೆರೆಗಳಲ್ಲಿ ನೀರು ಇರುವವರೆಗೂ, ಈ ಜಲಪಾತಗಳು ಹರಿಯುತ್ತಿರುತ್ತವೆ. ಇವು ಹೆಸರಿಲ್ಲದ ‘ಅನಾಮಿಕ’ ಜಲಧಾರೆಗಳು.

ಹಿಮವತ್ಕೇದಾರದ ಸಹೋದರಿಯರು: ಜೋಗಿಮಟ್ಟಿಗೆ ಅರಣ್ಯದ ಆರಂಭದಲ್ಲೇ ಬಂಡೆಗಳ ಸಂದುಗಳಿಂದ ಹರಿದು ‘ಬಸವನ ಬಾಯಿ’ಯಿಂದ ಧುಮ್ಮಿಕ್ಕುವ ‘ಹಿಮವತ್ಕೇದಾರ’ ಜಲಪಾತ ಕೆಲವರಿಗೆ ಪರಿಚಿತ. ಅಲ್ಲಿಂದ ಮೇಲ್ಭಾಗಕ್ಕೆ ಅರಣ್ಯದೊಳಗೆ ಈಗ ಹೆಜ್ಜೆ ಹಾಕಿದರೆ, ‘ಹಿಮವತ್ಕೇದಾರ'ದ ಸಹೋದರಿಯಂತಿರುವ ಆರೇಳು ಜಲಪಾತ­ಗಳು, ಝರಿಗಳು ಕಾಣುತ್ತವೆ’ ಎನ್ನುತ್ತಾರೆ ನಾಗು ಆರ್ಟ್ಸ್‌ನ ನಾಗರಾಜ್. ಮಳೆ ಬಂದ ಮಾರನೆಯ ದಿನ, ಈ ಪ್ರದೇಶದಲ್ಲಿ ಚಾರಣ ಮಾಡುತ್ತಾ, ಜಲಪಾತಗಳ ಚಿತ್ರಗಳನ್ನು ದಾಖಲಿಸಿರುವ ಅವರು, ‘ಇಷ್ಟು ಜಲಧಾರೆಗಳನ್ನು ಬಹಳ ದಿನಗಳ ಮೇಲೆ ನೋಡುತ್ತಿದ್ದೇವೆ’ ಎನ್ನುತ್ತಾರೆ. ಗೋಪನಕಟ್ಟೆ ತುಂಬಿದ ಮೇಲೆ ಹರಿಯುವ ನೀರು ಮೂರ್ನಾಲ್ಕು ಕಡೆ ಜಲಪಾತಗಳನ್ನು ಸೃಷ್ಟಿಸುತ್ತಿದೆ. ಈಗ ಹಿಮವತ್ಕೇದಾರದಲ್ಲಿ ಇಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿರುವುದಕ್ಕೆ ಆ ಕಟ್ಟೆ ತುಂಬಿರುವುದು ಕಾರಣ’ ಎಂಬುದು ನಾಗರಾಜ್ ಅಭಿಪ್ರಾಯ.

ಸುರಿವ ಮಳೆನೀರಿಗೆ ಮೈಯೊಡ್ಡಿ ನೀರು ಸಂಗ್ರಹಿಸಲು ಬೃಹದಾಕಾರವಾದ ಬಂಡೆಗಳಿವೆ. ಮಳೆ ನೀರಿಗೆ ಮಾರ್ಗ ತೋರಲು ಕೆಳಭಾಗದಲ್ಲಿ ಕುರುಚಲು ಕಾಡಿದೆ. ಪರ್ವತ ಶ್ರೇಣಿ ಕಲ್ಲುಗುಡ್ಡಗಳ ನಡುವೆ ಬೆಳೆದ ಹಚ್ಚಹಸಿರಿನ ಮರ–ಗಿಡ ಬಳ್ಳಿಗಳು, ಮಣ್ಣಿನ ಕೊಚ್ಚೆಯನ್ನು ತಡೆಯುತ್ತದೆ.

ಈರಣ್ಣಕಲ್ಲು (ಬೃಹತ್ ಬಂಡೆ) ಸುರಿವ ಮಳೆ ನೀರು ಕಡ್ಲೆಕಟ್ಟೆ ಕಣಿವೆ, ಗೋಡೆಗವಿ, ಗಾಳಿಗುಡ್ಡ, ಚಿರತೆಕಲ್ಲು, ಅಂಕೋಲೆಗುತ್ತಿ, ಸೀಳಗಲ್ಲು, ಗವಿಬಾಗಿಲು ದೇರವರಹಳ್ಳ ಸೇರುತ್ತದೆ ಎಂಬುದು ಅರಣ್ಯ ಸುತ್ತುವವರ ಮಾತು. ಇಲ್ಲೆಲ್ಲ ಸುರಿಯುವ ಮಳೆ ನೀರು, ಅರಣ್ಯ ಪ್ರದೇಶದ ಕೆರೆಗಳನ್ನು ದಾಟಿ, ಆಡುಮಲ್ಲೇಶ್ವರ ಕಿರು ಮೃಗಾಲಯದ ಬಳಿ ಇರುವ ದೊಡ್ಡಣ್ಣನಾಯಕನ ಕೆರೆ ಸೇರುತ್ತದೆ. ಈ ಬಾರಿ ಆ ಕೆರೆಯೂ ತುಂಬಿದೆ.

ನಗರದ ಭಾಗವಾಗಿರುವ ಐತಿಹಾಸಿಕ ಚಂದ್ರವಳ್ಳಿ ಮೇಲ್ಭಾಗದ ಅರಣ್ಯ ಪ್ರದೇಶಗಳಲ್ಲೂ ಜೋಪಿನ ನೀರು ಹರಿಯುತ್ತಿದೆ. ಧವಳಪ್ಪನ ಗುಡ್ಡದ ಮೇಲಿನ ದೊಣೆ ಭರ್ತಿಯಾಗಿ, ಹೆಚ್ಚಾದ ನೀರು ಬಂಡೆಗಳ ಮೂಲಕ ಕೆಳಗಿಳಿಯುತ್ತಿದೆ. ‘ಇತ್ತೀಚೆಗೆ ಸುರಿದ ಬಿರುಸಿನ ಮಳೆಗೆ ಗುಡ್ಡಗಳ ನಡುವಿನ ಕಾಲುವೆಯಲ್ಲಿ ಜೋರಾಗಿ ನೀರು ಹರಿದಿದೆ. ಚೆಕ್ ಡ್ಯಾಂ ಭರ್ತಿಯಾಗಿದೆ. ಜೋಪಿನ ನೀರು ಇನ್ನೂ ಹರಿಯುತ್ತದೆ. ಬಂಡೆಗಳ ಮೇಲೂ ಜಲಧಾರೆ ಸೃಷ್ಟಿಯಾಗಿದೆ’ ಎನ್ನುತ್ತಾರೆ ಮಿಠಾಯಿ ಮುರುಗೇಶ್.

ದಶಕಗಳಲ್ಲಿ ದಟ್ಟವಾದ ಅರಣ್ಯ: ಎರಡು ವರ್ಷಗಳ ಸತತ ಬರದಿಂದ ಜೋಗಿಮಟ್ಟಿ ಅರಣ್ಯದಲ್ಲಿ ನೀರಿಲ್ಲದಂತಾಗಿತ್ತು. ಇಷ್ಟಾದರೂ ಅರಣ್ಯ ಪ್ರದೇಶದಲ್ಲಿ ಹಸಿರು ಕಡಿಮೆಯಾಗಿರಲಿಲ್ಲ. ಆದರೂ ನೀರಿನ ಸಮಸ್ಯೆ ಎದುರಾದಾಗ, ಅರಣ್ಯ ಇಲಾಖೆ ವಾಟರ್ ಹೋಲ್ಸ್ (ಕೃತಕ ಜಲತಾಣ) ಸೃಷ್ಟಿಸಿ, ಪ್ರಾಣಿಗಳಿಗೆ ನೀರು ಪೂರೈಕೆ ಮಾಡಿತ್ತು.

'ಈಗ ಅರಣ್ಯದೊಳಗೆ ಸ್ವಾಭಾವಿಕ ಜಲಸಂಗ್ರಹಗಾರಗಳ ಜತೆ ಅಲ್ಲಲ್ಲೇ ಚೆಕ್ ಡ್ಯಾಂಗಳನ್ನು ಮಾಡಿದ್ದೇವೆ. ಈ ಬಾರಿ ಅವೆಲ್ಲ ಭರ್ತಿಯಾಗಿವೆ. ಈ ಜಲಧಾರೆ ಸೃಷ್ಟಿಗೆ ಅವುಗಳ ಕೊಡುಗೆಯೂ ಇದೆ. ನಗರಕ್ಕೆ ಹೊಂದಿಕೊಂಡಿರುವ ಈ ಅರಣ್ಯ, wಮಧ್ಯ ಕರ್ನಾಟಕಕ್ಕೆ ವರದಾನ’ ಎನ್ನುತ್ತಾರೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಬಿ.ಮಂಜುನಾಥ್.

ಈ ಜಲಧಾರೆಗಳು, ಮಲೆನಾಡಿನಷ್ಟು ದೊಡ್ಡದಾಗಿ, ದೀರ್ಘ ಕಾಲದವರೆಗೆ ಹರಿಯದಿರಬಹುದು. ಆದರೆ, ಇವುಗಳನ್ನು ಕಂಡವರ ಮನದಲ್ಲಿ ಶಾಶ್ವತ ನೆನಪಾಗಿ ಉಳಿಯುವ ದೃಶ್ಯ ಕಾವ್ಯವಾಗಬಹುದು !

ಜೋಗಿಮಟ್ಟಿಯ ಕುರಿತು...
ಜೋಗಿಮಟ್ಟಿ ಸಮೃದ್ಧ ವನ್ಯಸಂಪತ್ತಿನ ಸಾಗರ. ಸ್ಥಳೀಯ ಪರಿಸರಪ್ರಿಯರು ನಡೆಸಿರುವ ಕಣ್ಣ ಗುರುತಿನ ಗಣತಿಯಂತೆ, 202 ವಿವಿಧ ಜಾತಿಯ ಪಕ್ಷಿಗಳಿವೆ.

ಕೊಂಡುಕುರಿ, ಬ್ಲಾಕ್ ಬಕ್‌ (ಕೃಷ್ಣಮೃಗ), ನವಿಲು, ಚಿರತೆ, ಕರಡಿ, ಹೆಬ್ಬಾವು, ಕಾಡುಹಂದಿ, ಕಾಡುಬೆಕ್ಕು, ಮುಳ್ಳು ಹಂದಿ, ಮೊಲ, ನರಿಯಲ್ಲದೆ ಸರೀಸೃಪಗಳು ಸಹ ಇಲ್ಲಿವೆ ಎನ್ನುತ್ತಾರೆ ಭೂಮಿಗೀತ ಸಂಸ್ಥೆಯ ಮಿಠಾಯಿ ಮುರುಗೇಶ್. ಅಪರೂಪದ ಗಿಡಮೂಲಿಕೆಗಳು, ಅಳಿವಿನಂಚಿನ ಸಸ್ಯ ಸಂಪತ್ತು ಇಲ್ಲಿದೆ. ಏಷ್ಯಾದಲ್ಲೇ ಅತಿಹೆಚ್ಚು ಗಾಳಿ ಬೀಸುವ ಎರಡನೇ ತಾಣ ಇದು. ಸಿದ್ದರು, ಜೋಗಿಗಳ ಆವಾಸಸ್ಥಾನವಾಗಿತ್ತು ಜೋಗಿಮಟ್ಟಿ. ಅದಕ್ಕೆ ಇದನ್ನು ಜೋಗಿಗಳ ಮರಡಿ ಎಂದು ಕರೆಯುತ್ತಿದ್ದರು. ಪ್ರಕೃತಿಯ ರಮ್ಯ ನೋಟ, ಹಚ್ಚನೆಯ ಹುಲ್ಲುಗಾವಲು, ಪ್ರಶಾಂತ ವಾತಾವರಣ ಈ ಗಿರಿಧಾಮದ ವೈಶಿಷ್ಟ್ಯಗಳು.

ಚಿತ್ರದುರ್ಗದಿಂದ 14 ಕಿ.ಮೀ ದೂರವಿರುವ ಈ ಅರಣ್ಯ ಪ್ರದೇಶವನ್ನು ಡಿಸೆಂಬರ್ 2015ರಲ್ಲಿ ಸರ್ಕಾರ ವನ್ಯಜೀವಿ ಧಾಮವನ್ನಾಗಿ ಘೋಷಿಸಿತು. ಹಾಗಾಗಿ, ಅರಣ್ಯ ಇಲಾಖೆಯ ಅನುಮತಿ ಇಲ್ಲದೇ, ಈ ಕಾಡಿನೊಳಗೆ ಪ್ರವೇಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT