ಜಿಎಸ್‌ಟಿ ಎಂದರೆ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’: ರಾಹುಲ್‌ ಗಾಂಧಿ ವ್ಯಂಗ್ಯ

ಭಾನುವಾರ, ಜೂನ್ 16, 2019
30 °C

ಜಿಎಸ್‌ಟಿ ಎಂದರೆ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’: ರಾಹುಲ್‌ ಗಾಂಧಿ ವ್ಯಂಗ್ಯ

Published:
Updated:
ಜಿಎಸ್‌ಟಿ ಎಂದರೆ ‘ಗಬ್ಬರ್‌ ಸಿಂಗ್‌ ಟ್ಯಾಕ್ಸ್‌’: ರಾಹುಲ್‌ ಗಾಂಧಿ ವ್ಯಂಗ್ಯ

ಅಹಮದಾಬಾದ್‌: ಜಿಎಸ್‌ಟಿಗೆ ಹೊಸ ವ್ಯಾಖ್ಯೆ ಕೊಟ್ಟಿರುವ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ಅದು ಗಬ್ಬರ್‌ ಸಿಂಗ್‌ ಟ್ಯಾಕ್ಸ್‌ ಅಲ್ಲದೆ ಬೇರೇನೂ ಅಲ್ಲ ಎಂದು ಕುಹಕವಾಡಿದ್ದಾರೆ. 1980ರ ದಶಕದಲ್ಲಿ ಬಿಡುಗಡೆಯಾದ ಜನಪ್ರಿಯ ಹಿಂದಿ ಸಿನಿಮಾ ಶೋಲೆಯ ಖಳನಾಯಕನ ಹೆಸರು ಗಬ್ಬರ್‌ ಸಿಂಗ್‌.

‘ಜಿಎಸ್‌ಟಿ ಎಂದರೆ ಗಬ್ಬರ್‌ ಸಿಂಗ್‌ ಟ್ಯಾಕ್ಸ್‌. ಇದು ಸಾವಿರಾರು ಸಣ್ಣ ವ್ಯಾಪಾರಿಗಳನ್ನು ನಿರ್ನಾಮ ಮಾಡಿದೆ. ಈ ವ್ಯವಸ್ಥೆಯನ್ನು ಬದಲಾಯಿಸಲೇಬೇಕಿದೆ. ಅದನ್ನು ಸರಳಗೊಳಿಸಬೇಕಿದೆ. ಇಲ್ಲದಿದ್ದರೆ ಇಡೀ ದೇಶ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಗಾಂಧಿನಗರದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ರಾಹುಲ್‌ ಹೇಳಿದರು. ಇದೇ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಮುಖಂಡ ಅಲ್ಪೆಶ್‌ ಠಾಕೋರ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.

ಅಲ್ಪೆಶ್‌ ಬೆಂಬಲಿಗರು ಸಮಾವೇಶದಲ್ಲಿ ಗಣನೀಯ ಸಂಖ್ಯೆಯಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಲು ಈ ಸಂದರ್ಭವನ್ನು ರಾಹುಲ್‌ ಬಳಸಿಕೊಂಡರು. ‘ಗುಜರಾತ್‌ನ ಬೀದಿಗಳಲ್ಲಿ ಇಂದು ಯಾವುದೋ ಒಂದು ಸಮುದಾಯ ಅಥವಾ ಒಬ್ಬ ವ್ಯಕ್ತಿ ಪ್ರತಿಭಟನೆ ಮಾಡುತ್ತಿಲ್ಲ. ಯಾವುದೋ ಕಾರಣಗಳಿಗಾಗಿ ಇಡೀ ರಾಜ್ಯವೇ ಪ್ರತಿಭಟನೆಯಲ್ಲಿ ತೊಡಗಿದೆ. ಇದೊಂದು ವಿಚಿತ್ರ ಸನ್ನಿವೇಶ’ ಎಂದು ರಾಹುಲ್‌ ಹೇಳಿದರು.

‘ಮೋದಿ ಅವರು ಜನರಿಗೆ ಯಾವ ಮಟ್ಟದಲ್ಲಿ ಕಿರುಕುಳ ನೀಡಿದ್ದಾರೆಂದರೆ ಜನರು ಸುಮ್ಮನೆ ಇರುವುದಕ್ಕೆ ಸಾಧ್ಯವೇ ಇಲ್ಲ. ನಿಮ್ಮ (ಅಲ್ಪೆಶ್‌) ಹಾಗೆಯೇ ಇನ್ನೂ ಇಬ್ಬರು ಯುವಕರು (ಹಾರ್ದಿಕ್‌ ಪಟೇಲ್‌ ಮತ್ತು ಜಿಗ್ನೇಶ್‌ ಮೇವಾನಿ) ಇದ್ದಾರೆ. ಪ್ರತಿ ಗುಜರಾತಿಯ ಹೃದಯದಲ್ಲಿಯೂ ಒಂದು ಧ್ವನಿ ಇದೆ. ಅದನ್ನು ದಮನ ಮಾಡುವುದು ಅಥವಾ ಖರೀದಿಸುವುದು ಸಾಧ್ಯವಿಲ್ಲ’ ಎಂದು ರಾಹುಲ್‌ ಅಭಿಪ್ರಾಯಪಟ್ಟರು.

ತಕ್ಷಣ ಚುನಾವಣೆ ಘೋಷಿಸಿ: ಕಾಂಗ್ರೆಸ್‌ ಒತ್ತಾಯ

ನವದೆಹಲಿ: ವಿಧಾನಸಭೆ ಚುನಾವಣೆಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ಬಯಸುತ್ತಿದೆ. ಹಾಗಾಗಿ ಗುಜರಾತ್‌ನಲ್ಲಿ ತಕ್ಷಣವೇ ಚುನಾವಣೆ ದಿನಾಂಕ ಘೋಷಿಸಬೇಕು ಮತ್ತು ಮಾದರಿ ನೀತಿ ಸಂಹಿತೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ. ಚುನಾವಣೆಯಿಂದ  ತಪ್ಪಿಸಿಕೊಳ್ಳುವ ಬಿಜೆಪಿಯ ಪ್ರಯತ್ನದಲ್ಲಿ ಆಯೋಗ ಯಾಕೆ ಭಾಗಿಯಾಗಬೇಕು ಎಂದು ಪ್ರಶ್ನಿಸಿದೆ.

ಗುಜರಾತ್‌ನಲ್ಲಿ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಅರಿವಾಗಿದೆ. ಹಾಗಾಗಿ ಬಿಜೆಪಿ ಹತಾಶವಾಗಿದೆ. ಹಣ ಮತ್ತು ತೋಳ್ಬಲ ಬಳಸಿ ಚುನಾವಣೆ ಗೆಲ್ಲಲು ಬಯಸುತ್ತಿದೆ. ಹೇಗಾದರೂ ಮಾಡಿ ಗುಜರಾತನ್ನು ಉಳಿಸಿಕೊಳ್ಳಬೇಕು ಎಂಬ ಹಂಬಲದಲ್ಲಿ ಪ್ರಧಾನಿ ನರೇಂದ್ರ  ಮೋದಿ ಅವರು ರಾಜಧಾನಿಯನ್ನು ದೆಹಲಿಯಿಂದ ಗಾಂಧಿನಗರಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಮನೀಶ್‌ ತಿವಾರಿ ವ್ಯಂಗ್ಯವಾಡಿದ್ದಾರೆ.

‘ನಾವು ಅತ್ಯಂತ ಗೌರವಪೂರ್ವಕವಾಗಿಯೇ ಆಯೋಗವನ್ನು ಕೇಳಿಕೊಳ್ಳುತ್ತಿದ್ದೇವೆ. ಚುನಾವಣೆ ಘೋಷಿಸಿ, ಅದನ್ನು ನಡೆಸುವುದು ಆಯೋಗದ ಸಾಂವಿಧಾನಿಕ ಕರ್ತವ್ಯ. ಹಾಗಾಗಿ ತಕ್ಷಣವೇ ಚುನಾವಣೆ ದಿನಾಂಕ ಘೋಷಿಸಬೇಕು’ ಎಂದು ತಿವಾರಿ ಆಗ್ರಹಿಸಿದ್ದಾರೆ.

ಆಯೋಗದ ವಿರುದ್ಧ ಟೀಕೆ ಮಾಡಿರುವುದನ್ನು ಕಾಂಗ್ರೆಸ್‌ ಹಿರಿಯ ಮುಖಂಡ ಪಿ. ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ. ಆಯೋಗವನ್ನು ಜನರು ಪ್ರಶ್ನೆ ಮಾಡುವ ಪ್ರಾರ್ಥನೆ ಮಾಡಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry