ರಾಜಕೀಯ ಲಾಭದ ಕಸರತ್ತು

ಬುಧವಾರ, ಜೂನ್ 19, 2019
29 °C

ರಾಜಕೀಯ ಲಾಭದ ಕಸರತ್ತು

Published:
Updated:
ರಾಜಕೀಯ ಲಾಭದ ಕಸರತ್ತು

ಟಿಪ್ಪು ಜಯಂತಿಯ ವಿವಾದ ಈ ಸಲವೂ ಭುಗಿಲೆದ್ದಿದೆ. ಸರ್ಕಾರ ಈ ಬಾರಿ ಟಿಪ್ಪುವನ್ನು ‘ನಾಡಿನ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ’ನೆಂದು ಬಿಂಬಿಸುವ ಪ್ರಯತ್ನ ನಡೆಸಿದೆ. ಗತಕಾಲದ ದೊರೆಗಳಾದ ಜನಕ, ಅಶೋಕ, ನೃಪತುಂಗ, ನಾಲ್ವಡಿ ಕೃಷ್ಣರಾಜ ಒಡೆಯರ್ ಮುಂತಾದವರನ್ನು ಅವರ ಜನಪರ ಹಾಗೂ ಮಾನವೀಯ ಕಾಳಜಿಗಳಿಗಾಗಿ ನಾವು ಸ್ಮರಿಸುತ್ತೇವೆ. ಅವರ ಯುದ್ಧ, ಹತ್ಯಾಕಾಂಡ, ಸಾಮ್ರಾಜ್ಯ ವಿಸ್ತರಣೆ, ಶತ್ರುರಾಜರ ನಿಗ್ರಹ ಮುಂತಾದ ಸಾಮ್ರಾಜ್ಯಶಾಹಿ ಯುಗದ ಮೌಲ್ಯಗಳು ಪ್ರಜಾಪ್ರಭುತ್ವದ ಕಾಲದಲ್ಲಿ ಅಪ್ರಸ್ತುತವಾಗುತ್ತವೆ.

ಅಸಲಿಗೆ, ಬ್ರಿಟಿಷರನ್ನು ಗಾಂಧೀಜಿ ತನ್ನ ಶತ್ರುವೆಂದು ಭಾವಿಸಿರಲೇ ಇಲ್ಲ ಮತ್ತು ಸತ್ಯಾಗ್ರಹ ಸಹ ಅವರ ಸತ್ಯಶೋಧನೆಯ ಒಂದು ಸಾಧನೆಯಾಗಿತ್ತೇ ವಿನಾ ಅದೊಂದು ರಾಜಕೀಯ ತಂತ್ರ ಅಥವಾ ಸಮರನೀತಿ ಎಂದು ಅವರು ತಿಳಿದಿರಲಿಲ್ಲ. ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಗಳಿಸಿದ ಒಂದು ನಾಡಿಗೆ ಯುದ್ಧ ಹಾಗೂ ಹಿಂಸಾಮಾರ್ಗ ಹಿಡಿದ ಸಾಮ್ರಾಟನೊಬ್ಬ ಹೇಗೆ ಆದರ್ಶಪ್ರಾಯವಾದಾನು ಎಂಬ ಪ್ರಶ್ನೆಗೆ ಸರ್ಕಾರವೇ ಸ್ಪಷ್ಟೀಕರಣ ನೀಡಬೇಕಾಗುತ್ತದೆ. ಕಳೆದ ವರ್ಷ ಹೈಕೋರ್ಟ್‌ ಸಹ ಸರ್ಕಾರಕ್ಕೆ ಇದೇ ಪ್ರಶ್ನೆ ಕೇಳಿತ್ತು (ಟಿಪ್ಪು ತನ್ನ ಸ್ವಹಿತಾಸಕ್ತಿಗಳ ರಕ್ಷಣೆಗಾಗಿ ಯುದ್ಧರಂಗಕ್ಕೆ ಇಳಿದಿದ್ದ, ಇದನ್ನು ಸ್ವಾತಂತ್ರ್ಯ ಹೋರಾಟವೆಂದು ಹೇಗೆ ತೀರ್ಮಾನಿಸುವುದು ಎಂದು ಪ್ರಶ್ನಿಸಿತ್ತು).

ಟಿಪ್ಪುವಿಗೆ ಹೊರಗಿನ ದೊರೆಗಳಾದ ಮರಾಠರು, ನಿಜಾಮರು, ಬ್ರಿಟಿಷರು; ಹಾಗೆಯೇ ಒಳಗಿನವರಾದ ಚಿತ್ರದುರ್ಗದ ನಾಯಕರು, ಕೊಡವರು, ಮಂಗಳೂರಿನ ಕ್ರಿಶ್ಚಿಯನ್ನರು ಮುಂತಾದವರು ಸಮಾನ ಶತ್ರುಗಳಾಗಿದ್ದರು. ಅಂದಮೇಲೆ ಅವನ ಹಿತಾಸಕ್ತಿ ಏನಾಗಿತ್ತು, ಅವನ ನಿಜವಾದ ಶತ್ರುಗಳು ಯಾರಾಗಿದ್ದರು, ಅವನ ಉದ್ದೇಶ ನಿಜಕ್ಕೂ ಸ್ವರಾಜ್ಯ ಸ್ಥಾಪನೆ ಆಗಿತ್ತೇ ಎಂಬಿತ್ಯಾದಿ ಪ್ರಶ್ನೆಗಳನ್ನು ಈ ಕಾಲದಲ್ಲಿ ನಿಂತು ನಾವು ಪೂರ್ವಗ್ರಹಗಳನ್ನು ಬಿಟ್ಟು ಶೋಧಿಸಬೇಕಾಗುತ್ತದೆ. ಗತಕಾಲದ ಯಾವುದೇ ದೊರೆಯ ಕುರಿತಾದ ನಮ್ಮ ಚಿಂತನೆಗಳು, ಪ್ರಶ್ನೆಗಳು ಸುಲಭವಾಗಿ ರಾಜಕೀಯಗೊಳ್ಳುವ, ಧ್ರುವೀಕರಣಗೊಳ್ಳುವ ವಿಷಮ ಸನ್ನಿವೇಶ ಇಂದು ನಿರ್ಮಾಣವಾಗಿದೆ.

ಹಿಂದಿನ ಮುಖ್ಯಮಂತ್ರಿಯೊಬ್ಬರು ಅಧಿಕಾರ ವಹಿಸಿಕೊಂಡ ಕೂಡಲೇ ರಾಜ್ಯದ ಎಲ್ಲ ಮಠಮಾನ್ಯಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿದಾಗ ‘ಇವೆಲ್ಲ ರಾಜಕೀಯ ದುರ್ಲಾಭಕ್ಕಾಗಿ ನಡೆಸುತ್ತಿರುವ ದುಂದುಗಾರಿಕೆ’ ಎಂದು ಟೀಕಿಸಿದ್ದ ನಮ್ಮ ಬುದ್ಧಿಜೀವಿ ಚಿಂತಕರು, ಹಿಂದೂ ದೇವಸ್ಥಾನಗಳಿಗೆ ಇಂಥದೇ ಕೊಡುಗೆಗಳನ್ನು ನೀಡಿದ್ದ ದೊರೆಯನ್ನು, ಹಾಗೆ ನೀಡಿದ ಕಾರಣಕ್ಕೆ ಹಾಡಿ ಹೊಗಳುತ್ತಿರುವುದು ವಿಪರ್ಯಾಸ. ಧಾರ್ಮಿಕ ಕೇಂದ್ರಗಳಿಗೆ ಅನುದಾನ ನೀಡಿ ಜನರನ್ನು ಓಲೈಸುವ ಪ್ರಯತ್ನ ಇತಿಹಾಸದ ಯಾವುದೇ ಕಾಲಘಟ್ಟಕ್ಕೆ ಯಾವುದೇ ವ್ಯಕ್ತಿಯ ಮಟ್ಟಿಗೆ ಯೋಗ್ಯವಾದ ಕೆಲಸ ಎನ್ನಿಸಿಕೊಳ್ಳದು.

ಯಾವುದೇ ಪ್ರಶ್ನೆಯನ್ನು ಎಲ್ಲ ರಾಜಕೀಯ ಪ್ರೇರೇಪಣೆಗಳ ಆಚೆಗೆ ನಿಂತು ವಿವೇಚಿಸುವ ದಾರಿಗಳನ್ನು ನಾವಿಂದು ಕಂಡುಕೊಳ್ಳಬೇಕಾಗಿದೆ. ನಮ್ಮ ನಾಡಿನ ಹಲವು ಜನಾಂಗಗಳು, ಮುಖ್ಯವಾಗಿ ಕೊಡವರು, ಮೇಲುಕೋಟೆ ಅಯ್ಯಂಗಾರರು, ಮಂಗಳೂರಿನ ಕ್ರಿಶ್ಚಿಯನ್ನರು, ಮಲಬಾರಿನ ನಾಯರ್‌ಗಳು ಮುಂತಾದವರು ‘ಟಿಪ್ಪು ತಮ್ಮ ಪೂರ್ವಿಕರ ಮೇಲೆ ದಾಳಿ ನಡೆಸಿದ ಕ್ರೂರಿ’ ಎಂದೇ ಭಾವಿಸಿದ್ದಾರೆ. ಕೊಡಗಿನಲ್ಲಿ ಟಿಪ್ಪು ನಿಶ್ಶಸ್ತ್ರರಾದ ಕೊಡವರನ್ನು ನಿರ್ದಯವಾಗಿ ಕೊಂದನೆಂಬ, ನರಕ ಚತುರ್ದಶಿಯ ದಿನದಂದು ಮೇಲುಕೋಟೆಯ ಮೇಲೆ ದಾಳಿ ಮಾಡಿ ನೂರಾರು ಬ್ರಾಹ್ಮಣರನ್ನು ಹತ್ಯೆ ಮಾಡಿದನೆಂಬ ಐತಿಹ್ಯಗಳು ಆ ಪ್ರಾಂತ್ಯಗಳಲ್ಲಿ ವ್ಯಾಪಕವಾಗಿ ಜನಜನಿತವಾಗಿವೆ. ಈ ಹತ್ಯಾಕಾಂಡದ ಸ್ಮೃತಿಯಿಂದ ಇನ್ನೂ ಹೊರಬರದ ಮೇಲುಕೋಟೆಯ ಕೆಲವು ಸಮುದಾಯಗಳು ಈಗಲೂ ದೀಪಾವಳಿ ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತವೆ.

ತಮ್ಮ ತಾತ ಮುತ್ತಾತಂದಿರನ್ನು ಕೊಂದ ವ್ಯಕ್ತಿಯ ಆರಾಧನೆಯನ್ನು ಯಾವ ಜನಾಂಗವೂ ಒಪ್ಪುವುದಿಲ್ಲ. ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಮಾಡಬೇಕೆಂದು ಆಗ್ರಹಿಸುವುದು ಸರ್ಕಾರಕ್ಕೂ ಸಹ ಶೋಭೆ ತರುವ ಕೆಲಸವಲ್ಲ. ಇಂತಹ ಐತಿಹ್ಯಗಳ ನೆರವಿನಿಂದ ಬಲಪಂಥೀಯರು ಟಿಪ್ಪು ಒಬ್ಬ ಖಳನಾಯಕನೆಂದು ಬಿಂಬಿಸುವ ಸುಲಭ ಮಾರ್ಗ ಕಂಡುಕೊಂಡಿದ್ದಾರೆ. ಆದರೆ ಟಿಪ್ಪು ನಿಜಕ್ಕೂ ಹಾಗೆ ಹತ್ಯಾಕಾಂಡಗಳನ್ನು ನಡೆಸಿದವನಲ್ಲ ಎಂದು ಸರ್ಕಾರ ಭಾವಿಸಿದ್ದರೆ ಅದನ್ನು ಆ ಸಮುದಾಯಗಳಿಗೆ ಮನವರಿಕೆ ಮಾಡಿಸಬೇಕಾದುದು ಸರ್ಕಾರದ ಹೊಣೆಗಾರಿಕೆಯಾಗಿದೆ. ಈ ನಿಟ್ಟಿನಲ್ಲಿ ನಾವು ಮಾಡಬೇಕಾದ ಪ್ರಯತ್ನವೇ ಟಿಪ್ಪು ಜಯಂತಿಯ ಆಚರಣೆಗಿಂತಲೂ ಹೆಚ್ಚಿನ ಆದ್ಯತೆಯದ್ದಾಗಿದೆ.

ಐತಿಹ್ಯ, ದಂತಕತೆ, ಪಾರಂಪರಿಕ ನಂಬಿಕೆಗಳಿಗೆ ಸಮರ್ಥವಾದ ಐತಿಹಾಸಿಕ ದಾಖಲೆ, ಪುರಾವೆಗಳು ಸಿಗದಿರಬಹುದು, ಟಿಪ್ಪು ಕುರಿತ ಈ ತರಹದ ಅಪನಂಬಿಕೆಗಳು ನಿರಾಧಾರವೂ ಆಗಿರಬಹುದು. ಆದರೆ ಈ ತರಹದ ನಂಬಿಕೆಗಳು ಆ ಕೆಲವು ಸಮುದಾಯಗಳಲ್ಲಿ ಬಲವಾಗಿ ಬೇರೂರಿವೆ ಎಂಬುದಂತೂ ನಿಜ. ಜನಮಾನಸದ ಇಂತಹ ನಂಬಿಕೆಗಳಿಗೂ ರಾಜಕೀಯ ಬಣ್ಣ ಬಳಿಯುವುದು ಸಾಧುವಲ್ಲ. ಅನ್ಯರ ಭಾವನೆಗಳನ್ನು ಗೌರವಿಸದೆ, ಅವರ ಭಾವನೆಗಳಿಗೆ ಧಕ್ಕೆಯಾಗುತ್ತಿದ್ದರೂ ಅದನ್ನು ಲೆಕ್ಕಿಸದೆ ಟಿಪ್ಪು ಜಯಂತಿ ಮಾಡಿಯೇ ತೀರುತ್ತೇವೆ ಎಂದು ವೀರಾವೇಶದಿಂದ ಹೇಳಿಕೆ ನೀಡುವುದು ಹುಂಬತನವಾಗುತ್ತದೆ, ಇದೆಲ್ಲೋ ರಾಜಕೀಯ ಲಾಭಕ್ಕಾಗಿ ಮಾಡುತ್ತಿರುವ ಕಸರತ್ತು ಎಂಬ ಅನುಮಾನ ಮೂಡಿಸುತ್ತದೆ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಬಲಪಂಥೀಯರ ದ್ವೇಷ ರಾಜಕಾರಣಕ್ಕೆ ಸರ್ಕಾರವೇ ಚಿತಾವಣೆ ಮಾಡಿಕೊಟ್ಟಂತಾಗುತ್ತದೆ.

ಪೂರ್ಣಚಂದ್ರ ತೇಜಸ್ವಿ ತಮ್ಮ ‘ಕೃಷ್ಣೇಗೌಡರ ಆನೆ’ ಎಂಬ ಕಥೆಯಲ್ಲಿ ಒಂದು ಊರಿನ ಜನ ತಮ್ಮ ಭ್ರಷ್ಟಾಚಾರ, ಕಳ್ಳಸಾಗಾಣಿಕೆ, ದುರಂತ, ಹೊಣೆಗೇಡಿತನ ಇತ್ಯಾದಿ ಎಲ್ಲದಕ್ಕೂ ಕೃಷ್ಣೇಗೌಡ ಎಂಬ ವ್ಯಕ್ತಿ ಸಾಕಿದ್ದ ಆನೆಯನ್ನೇ ದೂಷಿಸುತ್ತ ಸೋಗಲಾಡಿತನ ಮೆರೆಯುವುದನ್ನು ತುಂಬ ಮಾರ್ಮಿಕವಾಗಿ, ಹಾಸ್ಯಪೂರ್ಣವಾಗಿ ನಿರೂಪಿಸುತ್ತಾರೆ. ಆ ಕತೆಯ ಪಾತ್ರಗಳು ಅತ್ತ ಕಾಡಿಗೂ ಸಲ್ಲದ, ಇತ್ತ ಊರಿಗೂ ಒಗ್ಗದ ಆನೆಯ ಪರವಾಗಿ, ವಿರೋಧವಾಗಿ ಕಿತ್ತಾಡುತ್ತ ನಾಶವಾಗುತ್ತವೆ. ಈಚೆಗೆ ಟಿಪ್ಪು ಜಯಂತಿ ವಿವಾದವೂ ಕೃಷ್ಣೇಗೌಡರ ಆನೆಯ ವಸ್ತು ಪ್ರತಿರೂಪವನ್ನೇ ಪಡೆದುಕೊಳ್ಳುತ್ತಿದೆ. ಈ ವಿವಾದ ಪ್ರತಿವರ್ಷ ಹೀಗೇ ಮುಂದುವರಿದಲ್ಲಿ, ಅತ್ತ ಗತಕಾಲದಲ್ಲೂ ಮರೆಯಾಗದ; ಇತ್ತ ವರ್ತಮಾನಕ್ಕೂ ಒಗ್ಗಲಾರದ ಐತಿಹಾಸಿಕ ವ್ಯಕ್ತಿಗಳಿಗಾಗಿ ನಮ್ಮ ಹೋರಾಟ ಮುಡಿಪಾದಲ್ಲಿ, ನಮ್ಮ ದುರಂತಗಳಿಗೆ ಅನ್ಯರನ್ನು ದೂಷಿಸುವ ಹೊಣೆಗೇಡಿತನ ನಮ್ಮಲ್ಲೂ ಮೊಳೆಯುವ ಅಪಾಯವಿದೆ. ಮುಂಬರುವ ತಲೆಮಾರುಗಳಿಗೆ ಟಿಪ್ಪು ಜಯಂತಿ ಕೂಡ ಕೃಷ್ಣೇಗೌಡರ ಆನೆ ಕತೆಯಂತೆಯೇ ಒಂದು ಹಾಸ್ಯ ಪ್ರಹಸನವಾಗಿ ಕಾಣಿಸಲಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry