ಶನಿವಾರ, ಡಿಸೆಂಬರ್ 7, 2019
18 °C
ಇನ್ನೂ ಪೂರ್ಣಗೊಳ್ಳದ ವಿಧಾನಸೌಧದ ನವೀಕರಣ ಕಾರ್ಯ: ₹20 ಕೋಟಿ ಬಿಡುಗಡೆ

ವಿಧಾನಸೌಧಕ್ಕೆ ವಧುವಿನ ಸಿಂಗಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನಸೌಧಕ್ಕೆ ವಧುವಿನ ಸಿಂಗಾರ!

ಬೆಂಗಳೂರು: ವಜ್ರ ಮಹೋತ್ಸವಕ್ಕೆ ವಿಧಾನಸೌಧ ಸಿಂಗಾರಗೊಳ್ಳುತ್ತಿದ್ದು, ಸುಣ್ಣ– ಬಣ್ಣ, ವಿದ್ಯುತ್ ದೀಪ– ಹೂಗಳಿಂದ ಸಿಂಗರಿಸುವ ಕೆಲಸ ಭರದಿಂದ ನಡೆಯುತ್ತಿದೆ.

ಆದರೆ, ವಿಧಾನಸೌಧದ ಮೆಟ್ಟಿಲುಗಳು ಮತ್ತು ಶೌಚಾಲಯಗಳ ದುರಸ್ತಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರ ಈ ಕೆಲಸಗಳಿಗೆ ಲೋಕೋಪಯೋಗಿ ಇಲಾಖೆಗೆ ₹20 ಕೋಟಿ ಬಿಡುಗಡೆ ಮಾಡಿದೆ.

ವಿಧಾನಸೌಧ ಕಟ್ಟಡದ ಹೊರಭಾಗ ಹಾಗೂ ಒಳಭಾಗದಲ್ಲಿ ಝಗಮಗಿಸುವ ದೀಪಾಲಂಕಾರ ಮಾಡಲಾಗಿದೆ. ಬಾಗಿಲುಗಳಿಗೆ ಮೆರುಗು ನೀಡಲಾಗಿದೆ. ಬುಧವಾರ (ಅ.25) ನಡೆಯಲಿರುವ ವಜ್ರಮಹೋತ್ಸವ ಸಮಾರಂಭದಂದು ವಿದ್ಯುತ್‌ ದೀಪಗಳ ಬೆಳಕಿನಲ್ಲಿ ವಿಧಾನಸೌಧದ ಸೊಬಗು ಕಣ್ತುಂಬಿಕೊಳ್ಳುವ ಅವಕಾಶ ಸಿಗಲಿದೆ.

ಸಮಾರಂಭದಂದು ಬೆಳಿಗ್ಗೆ 11 ಗಂಟೆಗೆ ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡುವ ಮೂಲಕ ಸಮಾರಂಭಕ್ಕೆ ಉದ್ಘಾಟಿಸುವರು. ಬಳಿಕ ರಾಷ್ಟ್ರಪತಿ ವಿಧಾನ ಪರಿಷತ್‌ ಸಭಾಂಗಣ ವೀಕ್ಷಿಸಲಿದ್ದಾರೆ. ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ ಶಾಸಕರು, ರಾಷ್ಟ್ರಪತಿ ಜೊತೆ ಗ್ರೂಪ್‌ ಫೋಟೊ ತೆಗೆಸಿಕೊಳ್ಳಲಿದ್ದಾರೆ.

ಆನಂತರ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭೋಜನ ಕೂಟ ಏರ್ಪಡಿಸಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಿಧಾನಸೌಧ ಕುರಿತಂತೆ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸೀತಾರಾಂ ನಿರ್ದೇಶಿಸಿರುವ ಸಾಕ್ಷ್ಯ ಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ ‘3 ಡಿ ವರ್ಚುಯಲ್ ರಿಯಾಲಿಟಿ’ ವಿಡಿಯೊ ಪ್ರದರ್ಶನ ನಡೆಯಲಿದೆ.

ವಿಧಾನಸೌಧದ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಂಜೆ 5 ರಿಂದ 6 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 6ರಿಂದ 6.30 ರವರೆಗೆ ವಿಧಾನಸೌಧ ನಿರ್ಮಾಣಕ್ಕೆ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರಿಂದ ಅಡಿಗಲ್ಲು ಹಾಕಿಸಿದ ರಾಜ್ಯದ ಮೊದಲ ಮುಖ್ಯಮಂತ್ರಿ ಕೆ.ಸಿ ರೆಡ್ಡಿ, ವಿಧಾನಸೌಧ ಕಟ್ಟಡ ನಿರ್ಮಾಣ ಮಾಡಿದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಕಡಿದಾಳ್ ಮಂಜಪ್ಪ ಅವರಿಗೆ ಗೌರವಾರ್ಪಣೆ ನಡೆಯಲಿದ್ದು, ಈ ನಾಯಕರ ಕುಟುಂಬದವರು ಗೌರವ ಸ್ವೀಕರಿಸಲಿದ್ದಾರೆ.

ಬಳಿಕ ಪೂರ್ವದ್ವಾರದ ಮೆಟ್ಟಿಲುಗಳ ಮೇಲೆ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಜತೆಗೆ ಸಮಾನಂತರವಾಗಿ ವಿಧಾನಸೌಧ ಕಟ್ಟಡದ ಮೇಲೆ ತ್ರಿಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಜನಪರ ಯೋಜನೆಗಳ ಚಿತ್ರ ಪ್ರದರ್ಶನ ನಡೆಯಲಿದೆ.

‘ಕನಿಷ್ಠ ಒಂದು ವಾರ ಹಾಳಾಗದಂಥ ಹೂಗಳನ್ನು ವಿದೇಶದಿಂದ ತರಿಸಿಕೊಂಡು ವಿಧಾನಸೌಧವನ್ನು ಅಲಂಕರಿಸಲು ಉದ್ದೇಶಿಸಲಾಗಿತ್ತು. ಆದರೆ, ವೆಚ್ಚ ಕಡಿತಗೊಳಿಸಿದ ಕಾರಣಕ್ಕೆ ಸ್ಥಳೀಯವಾಗಿ ಹೂ ಖರೀದಿಸಲಾಗುತ್ತಿದೆ’ ಎಂದು ವಿಧಾನಸಭೆ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.

ಪ್ರತಿಕ್ರಿಯಿಸಿ (+)