ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮಣಿದ ಲಂಕಾ

ಹಾಂಕಾಂಗ್ ತಂಡದ ವಿರುದ್ಧ ಜಪಾನ್‌ ಜಯಭೇರಿ
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ದಿನವೂ ಪಾರಮ್ಯ ಮುಂದುವರಿಸಿದ ಭಾರತ ತಂಡ ಫಿಬಾ 16 ವರ್ಷದೊಳಗಿನ ಬಾಲ ಕಿಯರ ಏಷ್ಯಾ ಕಪ್‌ ಬ್ಯಾಸ್ಕೆಟ್‌ ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಶ್ರೀಲಂಕಾ ತಂಡವನ್ನು 86–58 ಪಾಯಿಂಟ್‌ಗಳಿಂದ ಸೋಲಿಸಿ ‘ಬಿ’ ವಿಭಾಗದ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಮೋನಿಕಾ ಜಯಕುಮಾರ್‌ (19 ಪಾಯಿಂಟ್‌), ಪುಷ್ಪಾ ಸೆಂಥಿಲ್‌ ಕುಮಾರ್‌ (18ಪಾಯಿಂಟ್‌), ನೇಹಾ (16 ಪಾಯಿಂಟ್‌) ಹಾಗೂ ವೈಷ್ಣವಿ ಯಾದವ್‌ (15 ಪಾಯಿಂಟ್‌) ಭಾರತದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲ ಕ್ವಾರ್ಟರ್‌ನಲ್ಲಿ 30–7 ಪಾಯಿಂಟ್‌ಗಳ ಮುನ್ನಡೆ ಪಡೆದ ಭಾರತ ಎರಡನೇ ಕ್ವಾರ್ಟರ್‌ ನಲ್ಲಿಯೂ ಉತ್ತಮ ಆಟವಾಡಿತು. ಹೀಗಾಗಿ ಮೊದಲರ್ಧ ಮುಗಿದಾಗ ತಂಡದ ಮುನ್ನಡೆ 50–19ಕ್ಕೆ ಏರಿತು. ಮೂರನೇ ಕ್ವಾರ್ಟರ್‌ನಲ್ಲಿ ಶ್ರೀಲಂಕಾ ಸ್ವಲ್ಪ ಪ್ರತಿರೋಧ ಒಡ್ಡಿತು. ಆದರೂ ಭಾರತ 75–31ರ ಮುನ್ನಡೆ ಪಡೆಯಿತು. ಕೊನೆಯ ಕ್ವಾರ್ಟರ್‌ನಲ್ಲೂ ಶ್ರೀಲಂಕಾ ಪಟ್ಟುಬಿಡಲಿಲ್ಲ. ಆದರೆ ಜಯವನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ.

ಚೀನಾಗೆ ಮತ್ತೆ ಭರ್ಜರಿ ಜಯ ಮೊದಲ ದಿನ ಹಾಂಕಾಂಗ್ ತಂಡದ ವಿರುದ್ಧ ಭಾರಿ ಜಯ ಗಳಿಸಿದ ಹಾಲಿ ಚಾಂಪಿಯನ್‌ ಚೀನಾ ಎರಡನೇ ದಿನವೂ ಜಯದ ಓಟ ಮುಂದುವರಿಸಿತು. ‘ಬಿ’ ಗುಂಪಿನ ಥಾಯ್ಲೆಂಡ್ ಎದುರಿನ ಪಂದ್ಯದಲ್ಲಿ ಈ ತಂಡ 89–28ರಿಂದ ಗೆಲುವು ದಾಖಲಿಸಿತು. ಮೊದಲ ಮೂರು ಕ್ವಾರ್ಟರ್‌ಗಳಲ್ಲಿ ಅಮೋಘ ಆಟ ಆಡಿದ ತಂಡ ಮೂರನೇ ಕ್ವಾರ್ಟರ್‌ನಲ್ಲಿ ಸ್ವಲ್ಪ ಕಳೆಗುಂದಿದರೂ ಭಾರಿ ಅಂತರದ ಜಯ ಗಳಿಸುವಲ್ಲಿ ಸಫಲವಾಯಿತು.

ಚೀನಾದ  ಜಿಯುವಾನ್‌ ವಾನ್‌ 12 ಮತ್ತು ಎಂ.ಜೆಂಗ್‌ ಎಂಟು ಪಾಯಿಂಟ್ ಕಲೆ ಹಾಕಿದರು. ಥಾಯ್ಲೆಂಡ್‌ಗೆ ಫೆಕೆಸಾ ಅವರು ಆರು, ಎಂ. ಜಿಂಜಿಡಾ ಮತ್ತು ಲಾವೊಸಾ ತಲಾ ಐದು ಪಾಯಿಂಟ್ ಗಳಿಸಿಕೊಟ್ಟರು.

ಜಪಾನ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾ ಜಯಭೇರಿ: ಬೆಳಿಗ್ಗೆ ಮತ್ತು ಮಧ್ಯಾಹ್ನ ನಡೆದ ಪಂದ್ಯಗಳಲ್ಲಿ ಜಪಾನ್‌, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಗೆಲುವು ಸಾಧಿಸಿದವು. ‘ಬಿ’ ಗುಂಪಿನ ಪಂದ್ಯದಲ್ಲಿ ಜಪಾನ್‌ ತಂಡದವರು ಹಾಂಕಾಂಗ್‌ ಎದುರು 113–36ರಿಂದ ಜಯ ಸಾಧಿಸಿದರು. ಅಯಿಕಾ ಹಿರಶಿತಾ ಅವರ ಏಕಾಂಗಿ ಅಮೋಘ ಆಟಕ್ಕೆ ಹಾಂಕಾಂಗ್‌ ಆಟಗಾರರು ತತ್ತರಿಸಿದರು. ಅಯಿಕಾ ಒಬ್ಬರೇ 22 ಪಾಯಿಂಟ್ ಕಲೆ ಹಾಕಿ ದರು. ಎಂಟು ಮತ್ತು ಆರು ಪಾಯಿಂಟ್ ಕಲೆ ಹಾಕಿದ ಶುಕೋ ಹಾಗೂ ನಕಜವಾ ಕೂಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಾಂಕಾಂಗ್ ಪರ ಉತ್ತಮ ಸಾಧನೆ ಮಾಡಿದ ಸಿನ್ ಟಿಂಗ್ ಲ್ಯೂ ನಾಲ್ಕು ಪಾಯಿಂಟ್ ಸಂಗ್ರಹಿ ಸಿದರು.

ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ತಲಾ 37 ಮತ್ತು 32 ಪಾಯಿಂಟ್ ಗಳಿಸಿದ ಜಪಾನ್‌ ತಂಡವನ್ನು ಮಧ್ಯಂತರ ಅವಧಿಯ ನಂತರ ಹಾಂಕಾಂಗ್‌ ನಿಯಂತ್ರಿಸಿತು. ಹೀಗಾಗಿ ಈ ಅವಧಿಯ ಎರಡು ಕ್ವಾರ್ಟರ್‌ಗಳಲ್ಲಿ ತಲಾ 22 ಪಾಯಿಂಟ್ ಗಳಿಸಲು ಮಾತ್ರ ಜಪಾನ್‌ಗೆ ಸಾಧ್ಯವಾಯಿತು.

‘ಎ’ ಗುಂಪಿನ ಪಂದ್ಯದಲ್ಲಿ ಕೊರಿಯಾ ವಿರುದ್ಧ ನ್ಯೂಜಿಲೆಂಡ್‌ 30 (74–44) ಪಾಯಿಂಟ್‌ಗಳಿಂದ ಗೆದ್ದಿತು. ನ್ಯೂಜಿಲೆಂಡ್‌ಗೆ ಚಾರ್ಲಿಸ್‌ ಟ್ರಿನಿಟಿ ಲೆಜರ್ ವಾಕರ್‌ 17 ಪಾಯಿಂಟ್ ತಂದುಕೊಟ್ಟರೆ ಕೊರಿಯಾಗೆ ಹೆರನ್‌ ಲೀ ಅವರು ನಾಲ್ಕು ಪಾಯಿಂಟ್‌ ಗಳಿಸಿಕೊಟ್ಟರು.

‘ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಚೀನಾ ಥೈಪೆಯನ್ನು ಆಸ್ಟ್ರೇಲಿಯಾ 88–60ರಿಂದ ಗೆಲುವು ಸಾಧಿಸಿತು. ಆಸ್ಟ್ರೇಲಿಯಾ ತಂಡದ ಜಿ.ಮೂರ್‌ 18 ಪಾಯಿಂಟ್ ಗಳಿಸಿದರು. ಚೀನಾ ಥೈಪೆಯ ಚಿಯಾ ಜಂಗ್ ಲಿನ್‌ 19 ಪಾಯಿಂಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT