6

ಕೃಷಿ ಹೊಂಡ ತುಂಬಿಸಿದ ಪಾಲಿಹೌಸ್‌!

Published:
Updated:
ಕೃಷಿ ಹೊಂಡ ತುಂಬಿಸಿದ ಪಾಲಿಹೌಸ್‌!

ಕಳೆದ ಬಾರಿ ಎದುರಾದ ಕಡು ಬೇಸಿಗೆಯಿಂದ ನೀರಿಗಾಗಿ ತೀವ್ರ ಬವಣೆ ಅನುಭವಿಸಿದ ರೈತರೊಬ್ಬರು ಪಾಲಿಹೌಸ್‌ನ ಮೇಲೆ ಬೀಳುವ ಮಳೆ ನೀರನ್ನು ಹಿಡಿದಿಟ್ಟು ತಮ್ಮ ಬೆಳೆ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಗೌಡಹಳ್ಳಿ ಗ್ರಾಮದ ಜಿ.ಎಲ್‌. ಲಕ್ಷ್ಮೇಗೌಡ ಎಂಬವರು ಒಂದು ಎಕರೆ ವಿಸ್ತೀರ್ಣದಲ್ಲಿ ಹಳದಿ ಮತ್ತು ಕೆಂಪು ಕ್ಯಾಪ್ಸಿಕಂ ಬೆಳೆಯುತ್ತಿದ್ದು, ತಮ್ಮ ತೋಟದ ಚಾವಣಿಯ ಮೇಲೆ ಬೀಳುವ ಹನಿ ನೀರೂ ವ್ಯರ್ಥವಾಗದಂತೆ ಅದನ್ನು ಜತನದಿಂದ ಸಂಗ್ರಹಿಸುತ್ತಿದ್ದಾರೆ.

ಪಾಲಿಹೌಸ್‌ನ ಚಾವಣಿ ಮೇಲೆ ಬೀಳುವ ನೀರು ಆಚೀಚೆ ಹೋಗದಂತೆ ಪಾಲಿಹೌಸ್‌ನ ಇಳಿಜಾರು ಇರುವ ಒಂದು ಬದಿಯಲ್ಲಿ ಕೊಳವೆಗಳನ್ನು ಅಳವಡಿಸಲಾಗಿದೆ. 100/40 ಮೀಟರ್‌ (400 ಚ.ಮೀ.) ವಿಸ್ತೀರ್ಣದ ಚಾವಣಿ ಮೇಲೆ ಬೀಳುವ ಮಳೆ ನೀರು ಪಡೆಯಲು ಅರ್ಧ ಅಡಿ ವ್ಯಾಸದ ಆರು ಕೊಳವೆಗಳನ್ನು ಇಲ್ಲಿ ಜೋಡಿಸಲಾಗಿದೆ.

ನೆಲಮಟ್ಟದವರೆಗೆ ಇರುವ ಈ ಕೊಳವೆಗಳಿಂದ ಪಕ್ಕದ ಕೃಷಿ ಹೊಂಡಕ್ಕೆ ನೀರು ಹರಿದು ಹೋಗಲು ಒಂದು ಅಡಿ ವ್ಯಾಸದ ಮತ್ತೊಂದು ಕೊಳವೆ ಜೋಡಿಸಲಾಗಿದೆ. ಈ ಕೊಳವೆಯ ತುಂಬ ಎರಡು ತಾಸು ನೀರು ಹರಿದು ಬಂದರೂ ನಾಲ್ಕು ತಿಂಗಳಿಗೆ ಆಗುವಷ್ಟು ನೀರು ಸಂಗ್ರಹವಾಗುತ್ತದೆ. ಮಳೆ ನೀರು ಸಂಗ್ರಹಿಸುವುದಕ್ಕಾಗಿ 12 ಅಡಿ ಆಳ ಇರುವ 70 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಕೃಷಿ ಹೊಂಡವನ್ನು ಲಕ್ಷ್ಮೇಗೌಡ ನಿರ್ಮಿಸಿಕೊಂಡಿದ್ದಾರೆ.

ಹೀಗೆ ಸಂಗ್ರಹವಾದ ನೀರು ಭೂಮಿಯಲ್ಲಿ ಇಂಗಿ ಹೋಗದಂತೆ ಹೊಂಡದ ತಳದಿಂದ ಮೇಲ್ಭಾಗದ ವರೆಗೆ ಜಲ ನಿರೋಧಕ ಟಾರ್ಪಾಲ್‌ ಹೊದಿಕೆಯನ್ನು ಹಾಸಲಾಗಿದೆ. ಹೆಚ್ಚು ಮಳೆ ಸುರಿದು ಹೊಂಡ ತುಂಬಿದ ಪಕ್ಷದಲ್ಲಿ ಹೊಂಡಕ್ಕೆ ಹಾನಿಯಾಗುವುದನ್ನು ತಡೆಯಲು ಹೆಚ್ಚುವರಿ ನೀರು ಹೊರಗೆ ಹರಿದು ಹೋಗುವಂತೆ ಪ್ರತ್ಯೇಕ ಕೊಳವೆಯೊಂದನ್ನು ಅಳವಡಿಸಲಾಗಿದೆ.

ಮಳೆ ನೀರಿನ ಈ ಹೊಂಡದಲ್ಲಿ ಸಂಗ್ರಹವಾಗುವ ನೀರನ್ನು ವಿದ್ಯುತ್‌ ಪಂಪ್‌ ಬಳಿಸಿ ಕ್ಯಾಪ್ಸಿಕಂ ತರಕಾರಿ ಬೆಳೆಗೆ ಲಕ್ಷ್ಮೇಗೌಡ ಹಾಯಿಸುತ್ತಿದ್ದಾರೆ. ಹನಿ ನೀರಾವರಿ ಪದ್ಧತಿ ಮೂಲಕ ಸಂಗ್ರಹ ಮಾಡಿದ ಮಳೆ ನೀರನ್ನು ಬೆಳೆಗೆ ಉಣಿಸುತ್ತಿರುವುದರಿಂದ ಹೆಚ್ಚು ನೀರಿನ ಅಗತ್ಯ ಕಂಡು ಬಂದಿಲ್ಲ. ಒಮ್ಮೆ ಭರ್ತಿಯಾದ ಕೃಷಿ ಹೊಂಡದ ನೀರಿನಿಂದ ಒಂದು ಎಕರೆ ವಿಸ್ತೀರ್ಣದಲ್ಲಿ ತರಕಾರಿ ಬೆಳೆಯಬಹುದು. ಯಾವುದೇ ತರಕಾರಿ ಬೆಳೆಗೂ ನಾಲ್ಕು ತಿಂಗಳವರೆಗೆ ಇಷ್ಟು ನೀರು ಸಾಕು ಎಂಬ ಭರವಸೆ ಈ ರೈತನದ್ದು.

ಸರ್ಕಾರದ ನೆರವು: ಮಳೆ ನೀರು ಕೊಯ್ಲು ಮಾಡಿ ಕೃಷಿ ಹೊಂಡದಲ್ಲಿ ನೀರು ಸಂಗ್ರಹಿಸಿಕೊಳ್ಳಲು ಸರ್ಕಾರ ಆರ್ಥಿಕ ನೆರವನ್ನೂ ನೀಡುತ್ತದೆ. ಕೃಷಿ ಹೊಂಡ ನಿರ್ಮಾಣಕ್ಕೆ ₹75 ಸಾವಿರ ಹಾಗೂ ಅದರಿಂದ ನೀರನ್ನು ಮೇಲೆತ್ತಿ ಬೆಳೆಗೆ ಹಾಯಿಸಲು ಬೇಕಾದ ಪಂಪ್‌ ಖರೀದಿಸಲು ₹20 ಸಾವಿರ ಸೇರಿ ಸುಮಾರು ಒಂದು ಲಕ್ಷ ರೂಪಾಯಿವರೆಗೆ ನೆರವು ಸಿಗುತ್ತದೆ.

‘ತರಕಾರಿ ಬೆಳೆಯುವ ಸಾಮಾನ್ಯ ರೈತರು ಪಾಲಿಹೌಸ್‌ ಘಟಕ ನಿರ್ಮಾಣ ಮಾಡಿಕೊಳ್ಳಲು ತೋಟಗಾರಿಕಾ ಮಿಷನ್‌ ಯೋಜನೆಯಡಿ ಸುಮಾರು 20 ಲಕ್ಷ ರೂಪಾಯಿ ಮತ್ತು ಪ್ಯಾಕಿಂಗ್‌ ಹೌಸ್‌ ನಿರ್ಮಾಣಕ್ಕೆ ಪ್ರತ್ಯೇಕವಾಗಿ 2 ಲಕ್ಷ ರೂಪಾಯಿ ನೆರವು ನೆರವು ಪಡೆಯಬಹುದು’ ಎಂಬುದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಸೌಮ್ಯ ಅವರ ಸಲಹೆ.

‘ಎರಡು ಕೊಳವೆ ಬಾವಿಗಳಿದ್ದೂ ಕಳೆದ ವರ್ಷ ನೀರಿನ ಕೊರತೆಯಿಂದ ನನಗೆ ಬೆಳೆ ನಷ್ಟವಾಗಿತ್ತು. ಹಾಗಾಗಿ ತರಕಾರಿ ಬೆಳೆಗಾಗಿ ನಿರ್ಮಿಸಿರುವ ಪಾಲಿಹೌಸ್‌ನ ಮೇಲೆ ಬೀಳುವ ಮಳೆ ನೀರು ವ್ಯರ್ಥವಾಗದಂತೆ ಸಂಗ್ರಹಿಸಿ ಅದರಲ್ಲೇ ತರಕಾರಿ ಬೆಳೆಯುತ್ತಿದ್ದೇನೆ. ಕೃಷಿ ಹೊಂಡದಲ್ಲಿ ಮೂರು ಸಾವಿರ ಮೀನು ಮರಿಗಳನ್ನು ಬಿಟ್ಟು ಸಾಕಣೆ ಮಾಡುತ್ತಿದ್ದೇನೆ’ ಎಂದು ಲಕ್ಷ್ಮೇಗೌಡ ಹೇಳುತ್ತಾರೆ.

ಮಳೆ ನೀರು ಕೊಯ್ಲು ಮಾಡಿ ತರಕಾರಿ ಬೆಳೆಯುತ್ತಿರುವ ರೈತ ಲಕ್ಷ್ಮೇಗೌಡ ಸದ್ಯ ಹೊರ ರಾಜ್ಯಗಳಿಗೆ ರಫ್ತು ಮಾಡಬಹುದಾದ ಕೆಂಪು ಮತ್ತು ಹಳದಿ ಬಣ್ಣದ ಗುಣಮಟ್ಟದ ಕ್ಯಾಪ್ಸಿಕಂ ಬೆಳೆ ಬೆಳೆಯುತ್ತಿದ್ದು ಪ್ರತಿ ಕಟಾವಿಗೆ 1200 ಕೆ.ಜಿ. ಇಳುವರಿ ಪಡೆಯುತ್ತಿದ್ದಾರೆ. ಇದುವರೆಗೆ 35 ಟನ್‌ ಕ್ಯಾಪ್ಸಿಕಂ ಕೊಯ್ಲು ಮಾಡಿದ್ದಾರೆ. ಇನ್ನೂ 5 ತಿಂಗಳವರೆಗೆ ಫಸಲು ಸಿಗಲಿದ್ದು, ₹16 ಲಕ್ಷದಿಂದ ₹18 ಲಕ್ಷದವರೆಗೆ ಆದಾಯ ಗಳಿಸಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಸಂಪರ್ಕಕ್ಕೆ: 94480 44380.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry