7

‘ಮಾಂಗ್ ಗಾರುಡಿ’ಗರ ಬಿಡಾರದಲ್ಲಿ...

Published:
Updated:
‘ಮಾಂಗ್ ಗಾರುಡಿ’ಗರ ಬಿಡಾರದಲ್ಲಿ...

-ಹರ್ಷಕುಮಾರ್ ಕುಗ್ವೆ

‘ಮಾಂಗ್ ಗಾರುಡಿ’ –ಹೀಗೊಂದು ಸಮುದಾಯದ ಹೆಸರಿದೆ ಎಂದು ಮೊದಲು ಕೇಳಿದಾಗ ಆಶ್ಚರ್ಯವಾಗಿತ್ತು. ಇದೆಂತಹ ಹೆಸರು, ಇವರೆಲ್ಲಿರಬಹುದು, ಏನು ಮಾಡುತ್ತಿರಬಹುದು, ಎಲ್ಲಿಂದ ಬಂದಿರಬಹುದು, ಇವರ ಚಹರೆಗಳು ಏನಿರಬಹುದು? –ಹೀಗೆ ನಾನಾ ಬಗೆಯ ಪ್ರಶ್ನೆಗಳು ಕ್ಷಣಾರ್ಧದಲ್ಲಿ ತಲೆಯಲ್ಲಿ ಸುಳಿದಿದ್ದವು. ಅನಂತರ ಈ ಸಮುದಾಯದವರನ್ನು ಹುಡುಕಿಕೊಂಡು ಹೊರಟ ಪಯಣದಲ್ಲಿ ದೊಡ್ಡ ಜಗತ್ತನ್ನೇ ನೋಡಿದ ಅನುಭವ ನನಗಾಯಿತು.

ಅಲೆಮಾರಿ ಸಮುದಾಯವೊಂದು ಕಾಲದ ಒತ್ತಡಗಳಲ್ಲಿ ಕ್ರಮೇಣವಾಗಿ ಬದಲಾವಣೆಯಾಗತ್ತಾ ನಡೆದು 21ನೆಯ ಶತಮಾನದ ಹೊಸ್ತಿಲಿಗೆ ಬಂದ ಕತೆ ಕುತೂಹಲಕರವಾದದ್ದೂ ಅಷ್ಟೇ ಸಂಕಟಕರವಾದದ್ದೂ ಹೌದು.

ಯಾರಿವರು ಮಾಂಗ್ ಗಾರುಡಿ ಜನ?: ರಾಜ್ಯದಲ್ಲಿ ಈ ಜನರನ್ನು ಮಾಂಗರವಾಡಿ, ಮಾಂಗಾರುಡಿ, ಮಾಂಗವಾಡಿ ಇತ್ಯಾದಿ ಹೆಸರುಗಳಿಂದ ಗುರುತಿಸಲಾಗುತ್ತದೆ. ಅವರಾಡುವ ವಿಶಿಷ್ಟವಾದ ರಹಸ್ಯ ಮರಗು ಭಾಷೆಯಾದ ‘ಶಿಬಾರಿ ನುಡಿ’ಯ ದೆಸೆಯಿಂದಾಗಿ ಅವರಂತೆಯೇ ಇರುವ ಇತರೆ ಅಲೆಮಾರಿ ಜನರು ಇವರನ್ನು ಶಿಬಾರಿ ಜನ ಎಂತಲೂ ಗುರುತಿಸುತ್ತಾರೆ. ಈ ಮಾಂಗ್ ಗಾರುಡಿ ಜನರನ್ನು ಗುರುತಿಸುವುದು ಸುಲಭ.

ಕಲಬುರ್ಗಿ, ಶಹಬಾದ್, ಬಸವಕಲ್ಯಾಣ, ಬೀದರ್‌ ಪೇಟೆಗಳಲ್ಲಿ ಚಿಂದಿ ಆರಿಸುತ್ತಾ ಬರುವ ಹೆಣ್ಣುಮಕ್ಕಳನ್ನು ಮಾತಾಡಿಸಿದರೆ ಅವರಲ್ಲಿ ಬಹುತೇಕರು ಮಾಂಗ್ ಗಾರುಡಿ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಬೀದರಿನ ಹಲವು ಊರುಗಳಲ್ಲಿ ಹಳ್ಳಿಗಳಲ್ಲಿ ಮನೆಮನೆ ತಿರುಗಿ ಎಮ್ಮೆಗಳ ಮೈಮೇಲಿನ ಕೂದಲನ್ನು ಕತ್ತರಿಸುವ ಕೆಲಸವನ್ನೂ ಮಾಡುತ್ತಾರೆ.

ಇನ್ನು ಬೆಳಗಾವಿ, ಬೀದರ್, ವಿಜಯಪುರಗಳಲ್ಲಿ ಪೌರಕಾರ್ಮಿಕರಾಗಿ, ಸಫಾಯಿ ಕರ್ಮಚಾರಿಗಳಾಗಿ ಅನೇಕರು ಕಸುಬಿನಲ್ಲಿ ತೊಡಗಿದ್ದಾರೆ. ಈ ಎಲ್ಲಾ ಊರುಗಳಲ್ಲಿ ಒಂದು ಮಟ್ಟಕ್ಕೆ ನೆಲೆ ನಿಂತಿರುವ ಈ ಸಮುದಾಯದ ಜನ ಕೇವಲ ನೂರು ವರ್ಷಗಳ ಕೆಳಗೆ ‘ಕ್ರಿಮಿನಲ್ ಬುಡಕಟ್ಟು’ಗಳು ಎಂಬ ಹಣೆಪಟ್ಟಿ ಹಚ್ಚಿಕೊಂಡು ದೇಶದಾದ್ಯಂತ ಅಲೆಮಾರಿಗಳಾಗಿ ಪಡಬಾರದ ಪಾಡು ಪಡುತ್ತಾ ಬದುಕಿದ್ದವರು.

ಬ್ರಿಟಿಷರು ನೂರಾರು ಮಾಂಗ್ ಗಾರುಡಿ ಜನರನ್ನು ಎಲ್ಲೆಲ್ಲಿಂದಲೋ ಎತ್ತಿಕೊಂಡು ಬಂದು ಬೆಳಗಾವಿ, ಗೋಕಾಕ್, ವಿಜಯಪುರ, ಸೊಲ್ಲಾಪುರಗಳಲ್ಲಿದ್ದ ‘ಸೆಟಲ್‌ಮೆಂಟ್’ಗಳಲ್ಲಿ ಕೂಡಿ ಹಾಕಿದ್ದರು. ಈ ಸೆಟಲ್‌ಮೆಂಟ್‌ಗಳಲ್ಲಿ ಕ್ರಿಮಿನಲ್ ಟ್ರೈಬ್ ಎಂದು ಬ್ರಿಟಿಷರು ಗುರುತಿಸಿದ್ದ ಹತ್ತಾರು ಬುಡಕಟ್ಟು ಸಮುದಾಯಗಳ ಜನರನ್ನು ‘ಸುಧಾರಣೆ’ಗಾಗಿ ತಂದು ಹಾಕಲಾಗುತ್ತಿತ್ತು. ಅಲ್ಲಿ ಶಿಕ್ಷಣ, ಉದ್ಯೋಗ, ಆರೋಗ್ಯಗಳ ಮೇಲ್ವಿಚಾರಣೆಯನ್ನು ಹಲವು ಮಿಷನರಿ ಸಂಸ್ಥೆಗಳು ನಡೆಸುತ್ತಿದ್ದವು.

ರಾಜ್ಯಕ್ಕೆ ಬಂದ ಮಾಂಗ್‌ ಗಾರುಡಿ: ಇಂದು ರಾಜ್ಯದ ಜನಮಾನಸದೊಂದಿಗೆ ಬೆರೆಯುತ್ತಾ, ಇಲ್ಲಿಯೇ ಬದುಕು ಕಟ್ಟಿಕೊಂಡಿರುವ ಮಾಂಗ್ ಗಾರುಡಿ ಸಮುದಾಯದ ಸುಮಾರು ಒಂದೂವರೆ ಸಾವಿರ ಕುಟುಂಬಗಳಿವೆ. ರಾಜ್ಯದ ಏಳು ಕೋಟಿ ಜನಸಂಖ್ಯೆಯಲ್ಲಿ ಮಾಂಗ್ ಗಾರುಡಿ ಜನರ ಸಂಖ್ಯೆ ಆರು ಸಾವಿರವಷ್ಟೇ. ಹಾಗೆ ನೋಡಿದರೆ ಇಡೀ ದೇಶದಲ್ಲಿ ಮಾಂಗ್ ಗಾರುಡಿ ಸಮುದಾಯವರ ಒಟ್ಟು ಸಂಖ್ಯೆ ಒಂದು ಲಕ್ಷವನ್ನು ಮೀರುವುದಿಲ್ಲ.

ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಗುಜರಾತ್‌ಗಳಲ್ಲಿ ಹೆಚ್ಚಿನ ಮಾಂಗ್‌ ಗಾರುಡಿ ಜನರಿದ್ದಾರೆ. ಮಹಾರಾಷ್ಟ್ರ ಮತ್ತು ಆಂಧ್ರಗಳಿಂದ ಈ ಜನ ಅಲೆದಾಟದಲ್ಲಿ ಹೈದರಾಬಾದ್ ಕರ್ನಾಟಕಕ್ಕೆ ಬಂದಿದ್ದರೆ, ಬ್ರಿಟಿಷರು ಸ್ಥಾಪಿಸಿದ್ದ ಸೆಟಲ್‌ಮೆಂಟ್ ಜೀವನದ ಭಾಗವಾಗಿ ಮುಂಬೈ ಕರ್ನಾಟಕದಲ್ಲೂ ನೆಲೆಸಿದ್ದಾರೆ.

ಬೆಳಗಾವಿಯ ಮಾಂಗ್ ಗಾರುಡಿ ಜನ ಕಲಬುರ್ಗಿ ಅಥವಾ ಬೀದರ್‌ನ ತಮ್ಮವರೊಂದಿಗೆ ಸಂಬಂಧ ಹೊಂದಿರುವುದು ವಿರಳ. ಹಾಗೆಯೇ ವಿಜಯಪುರದವರು ಕಲಬುರ್ಗಿ ಜನರೊಂದಿಗೆ ಸಂಬಂಧ ಬೆಳೆಸುವುದಿಲ್ಲ. ಸಮುದಾಯದ ಒಳಗೇ ಇರುವ ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಭಿನ್ನತೆಗಳು ಇದಕ್ಕೆ ಕಾರಣ. ಕಲಬುರ್ಗಿ ಮತ್ತು ಬೀದರ್‌ಗಳಲ್ಲಿ ಮಾತ್ರ ಹೆಚ್ಚು ಅನ್ಯೋನ್ಯತೆ ಈ ಸಮುದಾಯದಲ್ಲಿ ಕಂಡುಬರುತ್ತದೆ.

ಮೂರು ಡ್ಯಾಂ ಕಟ್ಟಿದವರು: ಹೈದರಾಬಾದಿನ ನಿಜಾಮರ ಕಾಲದಲ್ಲಿ ನಿಜಾಮರು ಕಟ್ಟಿಸಿದ ಮೂರು ದೊಡ್ಡ ಜಲಾಶಯಗಳಿಗೆ ಅಣೆಕಟ್ಟು ಕಟ್ಟಲು ಬಂಡೆ ಒಡೆದು, ಕಲ್ಲು ಹೊತ್ತವರು ಕಲಬುರ್ಗಿ ಮತ್ತು ಬೀದರ್‌ಗಳಲ್ಲಿ ನೆಲೆಸಿರುವ ಮಾಂಗ್ ಗಾರುಡಿ ಕುಟುಂಬಗಳ ಹಿಂದಿನ ತಲೆಮಾರಿನ ಜನ. ಬೃಹದಾಕಾರದ ಕಲ್ಲುಗಳನ್ನು ಹೊತ್ತು ನಿಲ್ಲಿಸುತ್ತಿದ್ದ ತಮ್ಮ ಹಿರೀಕರ ಸಾಮರ್ಥ್ಯದ ಬಗ್ಗೆ ಇಂದಿಗೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಈ ಸಮುದಾಯದವರು.

ಗಂಡೀಪೇಟ್ ಅಥವಾ ಉಸ್ಮಾನ್ ಸಾಗರ ಜಲಾಶಯ, ಅದಕ್ಕೆ ಹೊಂದಿಕೊಂಡಿರುವ ಹಿಮಾಯತ್‌ ಸಾಗರ ಜಲಾಶಯ ಹಾಗೂ ನಿಜಾಂ ಸಾಗರ ಜಲಾಶಯ ಇವೇ ಆ ಮೂರು ಜಲಾಶಯಗಳು. ಈ ಜಲಾಶಯಗಳ ಕೆಲಸ ಮುಗಿದ ನಂತರ ನಿಜಾಮನಿಂದ ತಾಮ್ರದ ಪಟ್ಟಿಯ ಮೇಲೆ ತಮ್ಮ ಸೇವೆಯನ್ನು ಬರೆಸಿಕೊಂಡು ಬಂದು ಎಲ್ಲೆಲ್ಲಿ ನೆಲೆ ಸಿಗುತ್ತದೆಯೋ ಅಲ್ಲೆಲ್ಲಾ ಹೋಗಿ ನೆಲೆಯೂರಿದ ಜನ ಮತ್ತೆ ಅಲೆಮಾರಿಗಳಾಗಿಯೇ ಬದುಕತೊಡಗಿದ್ದರು.

ಆ ನಂತರದಲ್ಲಿ ಅವರೆಲ್ಲಾ ಅವಲಂಬಿಸಿದ್ದು ಎಮ್ಮೆಗಳ ಕೂದಲು ಬೋಳಿಸುವ ಕೆಲಸವನ್ನು. ಮಳೆಗಾಲದಲ್ಲಿ ಎಮ್ಮೆಯ ಮೈಯಲ್ಲಿ ಕೂದಲು ಹೆಚ್ಚಿ ಹೇನು, ಕೂರೆಗಳು ಜಾಸ್ತಿಯಾಗುವುದರಿಂದ ಇದನ್ನು ತಪ್ಪಿಸಲು ಎಮ್ಮೆ ಕೂದಲನ್ನು ಶೇವ್ ಮಾಡುವ ಈ ದಂಧೆಗೆ ರೈತರು ಪ್ರೋತ್ಸಾಹ ನೀಡಿದರು. ಹೀಗಾಗಿ ಬೀದರಿನ ಕಮಠಾಣಾ, ಬಸವ ಕಲ್ಯಾಣ, ಭಾಲ್ಕಿಗಳಂತ ಕಡೆಗಳಲ್ಲಿ ಇದೇ ಉಪಕಸುಬನ್ನಾಧರಿಸಿ ಬದುಕು ನಡೆಸತೊಡಗಿದರು. ಇತ್ತೀಚಿನ ದಿನಗಳಲ್ಲಿ ಎಮ್ಮೆಗಳ ಸಂಖ್ಯೆಯೂ ಕಡಿಮೆಯಾಗಿ ಈ ಎಮ್ಮೆ ಬೋಳಿಸುವ ವೃತ್ತಿಗೆ ಕಿಮ್ಮತ್ತು ಕಡಿಮೆಯಾಗಿರುವುದರಿಂದ ಮಾಂಗ್ ಗಾರುಡಿ ಯುವಕರು ನಗರ ಕೇಂದ್ರಿತವಾದ ಇತರೆ ವೃತ್ತಿಗಳಲ್ಲಿ ತೊಡಗಿದ್ದಾರೆ.

ಮದುವೆ ಸಮಾರಂಭಗಳಲ್ಲಿ ಬ್ಯಾಂಡ್ ಬಾರಿಸುವ, ಹೊಟೆಲ್‌ಗಳಲ್ಲಿ ಕೆಲಸ ಮಾಡುವ ಕಸುಬುಗಳಲ್ಲಿ ತೊಡಗಿದ್ದಾರೆ. ಆದರೂ ಎಮ್ಮೆ ಮೈ ಕೂದಲು ಬೋಳಿಸುವ ಕೆಲಸದಲ್ಲಿ ತೊಡಗಿರುವ ಅನೇಕ ಕುಟುಂಬಗಳು ಈಗಲೂ ಇವೆ. ಇವರಲ್ಲಿ ಅನೇಕ ಕುಟುಂಬಗಳು ಇನ್ನೂ ಒಂದು ಕಡೆಯಲ್ಲಿ ನೆಲೆ ನಿಲ್ಲಲಾರದೇ ಅಲೆಮಾರಿ ಸ್ಥಿತಿಯಲ್ಲೇ ಇದ್ದು ಅಲ್ಲಲ್ಲಿ ಪ್ಲಾಸ್ಟಿಕ್ ಜೋಪಡಿಗಳಲ್ಲಿ ಬದುಕುತ್ತಿವೆ. ಇವರ ಬದುಕಿನ ಸ್ಥಿತಿಗತಿಗಳು ದಾರುಣವಾಗಿವೆ. ಮಾಂಗ್ ಗಾರುಡಿ ಮಹಿಳೆಯರು ಮೊದಲೆಲ್ಲಾ ತಮ್ಮ ಗಂಡಂದಿರ ಜೊತೆಯಲ್ಲಿ ಎಮ್ಮೆ ಬೋಳಿಸುವ ಕೆಲಸಕ್ಕೆ ಹೋಗುತ್ತಿದ್ದರು. ಎರಡು ಮೂರು ದಶಕಗಳಿಂದೀಚೆಗೆ ಹೆಚ್ಚಿನ ಮಹಿಳೆಯರು ನಗರಗಳಲ್ಲಿ ಪ್ಲಾಸ್ಟಿಕ್, ಮೂಳೆ, ಕಬ್ಬಿಣದ ಚಿಂದಿ ವಸ್ತುಗಳನ್ನು ಆರಿಸಿ, ಅದನ್ನು ಮಾರಿದ ಹಣದಲ್ಲಿ ಕುಟುಂಬದ ಖರ್ಚು ಸರಿದೂಗಿಸುತ್ತಿದ್ದಾರೆ.

ಮಾಂಗ್ ಗಾರುಡಿ ಜನರ ಹಿಂದಿನ ತಲೆಮಾರುಗಳ ಜನರು ಎಮ್ಮೆಗಳ ವ್ಯಾಪಾರ ಮಾಡುತ್ತಿದ್ದರು, ಡೊಂಬರಾಟ ಮಾಡುತ್ತಿದ್ದರು, ಭಿಕ್ಷಾಟನೆ ನಡೆಸುತ್ತಿದ್ದರು, ಕೆಲವರು ತುಡುಗುತನವನ್ನೂ ಮಾಡುತ್ತಾ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಊರೂರು ಸುತ್ತುತ್ತಾ ಅಲ್ಲಲ್ಲಿ ಜೋಪಡಿ ಹಾಕಿ ಸಣ್ಣ ಪುಟ್ಟ ಬೇಟೆಯಾಡುತ್ತಾ ಹಸಿವು ನೀಗಿಸಿಕೊಳ್ಳುತ್ತಿದ್ದರು. ಕೆಲವರಂತೂ ಬೇಟೆಯಲ್ಲಿ ನಿಷ್ಣಾತರಾಗಿದ್ದರು. ಆದರೆ ಇಂದು ಈ ಎಲ್ಲಾ ಉಪಜೀವನದ ಮಾರ್ಗಗಳೂ ಕಾಣೆಯಾಗಿವೆ. ನೆಲೆ ನಿಂತು ಒಂದೆಡೆ ತಳವೂರಿ ಬದುಕಬೇಕಾದ ಅಗತ್ಯತೆ, ಅನಿವಾರ್ಯತೆಯನ್ನು ಸಮುದಾಯ ಮನಗಂಡಿದೆ.

ಈ ದಿಸೆಯಲ್ಲಿ ಸಮುದಾಯ ತೀವ್ರ ಸಂಘರ್ಷಮಯ ಬದುಕಿಗೆ ಒಡ್ಡಿಕೊಂಡಿದೆ ಎನ್ನ ಬಹುದು. ಯಾಕೆಂದರೆ ಈಗಲೂ ಈ ಸಮುದಾಯದ ಜನರನ್ನು ‘ನಮ್ಮವರು’ ಎಂಬುವರಿಲ್ಲ. ‘ನಮಗ ತಲವಾರ್ ಅಂತಾರ, ತಲವಾರ್‌ನಂತೆ ಬಳಸಿಕೊಂಡು ಬಿಸಾಕ್ಯಾರ್‍ರೀ ಪಟ್ಟಣದ ದೊಡ್ಡ ಮಂದಿ’ ಎಂದು ಈ ಸಮುದಾಯದ ಹಿರಿಯರೊಬ್ಬರು ಹೇಳುವ ಮಾತು ಅವರ ಅಸಹಾಯಕತೆ ಹಾಗೂ ದುಸ್ಥಿತಿಯನ್ನು ಸೂಚಿಸುತ್ತದೆ.

ಮಾಂಗ್ ಗಾರುಡಿ ಸಂಸ್ಕೃತಿ: ಅತ್ಯಂತ ಸೂಕ್ಷ್ಮವಾದ ಹಾಗೂ ಬುಡಕಟ್ಟು ಅಲೆಮಾರಿತನದ ಲಕ್ಷಣಗಳನ್ನು ಈಗಲೂ ಹೊಂದಿರುವ ಮಾಂಗ್ ಗಾರುಡಿ ಸಮುದಾಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತಿಕೆ ಹೊಂದಿರುವಂಥದ್ದು. ಈ ಸಮುದಾಯದ ಸಾಂಸ್ಕೃತಿಕ ಬದುಕಿನಲ್ಲಿ ಒಮ್ಮೆ ನೀವು ಹೊಕ್ಕರೆ ಆಶ್ಚರ್ಯವಾಗುವಷ್ಟು ಸಾಂಸ್ಕೃತಿಕ ವೈವಿಧ್ಯ ತುಂಬಿದೆ. ಧಾರ್ಮಿಕವಾಗಿ ಹಿಂದೂ, ಮುಸ್ಲಿಂ, ಲಿಂಗಾಯತ, ಇತ್ಯಾದಿ ಯಾವುದೇ ವಿಭಜನೆಗಳು ಅಲ್ಲಿಲ್ಲ. ಅಲ್ಲಿ ಎಲ್ಲವೂ ಸಂಕರಗೊಂಡಿರುವ ಸಮನ್ವಯ ಧಾರ್ಮಿಕ ಸಂಸ್ಕೃತಿ, ಸಮನ್ವಯ ಧಾರ್ಮಿಕ ಆಚರಣೆಗಳು ಸಮುದಾಯದ ಬದುಕಿನಲ್ಲಿ ಹಾಸುಹೊಕ್ಕಾಗಿವೆ.

ಇಲ್ಲಿ ಮರಗುಬಾಯಿ ಜಾತ್ರೆ ನಡೆಯುತ್ತದೆ. ಅಲ್ಲಿ ಕುರಿಕೋಣ ಬಲಿಹರಕೆ ನೀಡುವಂತೆಯೇ ಮಾವಿನ ಹಣ್ಣಿನ ವಿಶೇಷ ನೈವೇದ್ಯ ನಡೆಯುತ್ತದೆ. ಜೂನ್ ತಿಂಗಳಲ್ಲಿ ನಡೆಯುವ ಈ ಜಾತ್ರೆಯ ದಿನ ಮರಗುಬಾಯಿಗೆ ಮಾವಿನ ಹಣ್ಣಿನ ಪೂಜೆ ಮಾಡುವವರೆಗೂ ಸಮುದಾಯದ ಒಬ್ಬ ವ್ಯಕ್ತಿಯೂ ಒಂದೇ ಒಂದು ಮಾವಿನಹಣ್ಣನ್ನು ತಿನ್ನುವಂತಿಲ್ಲ. ತಿಂದರೆ ಕಾಯಿಲೆಯುಂಟಾಗುತ್ತದೆ, ಕೇಡುಂಟಾಗುತ್ತದೆ ಎಂಬ ನಂಬಿಕೆಯಿದೆ.

ಅಂದು ಸಂಜೆ ದೇವಿಯ ಗುಡಿಯಂಗಳದಲ್ಲಿ ಸಮುದಾಯದ ಹೆಣ್ಣುಮಕ್ಕಳು ಮಾತ್ರ ಸೇರಿ ಮಾವಿನಹಣ್ಣು ಮತ್ತು ಚಪಾತಿ ಸೇರಿಸಿದ ‘ಕಾಲಾ’ ಮಾಡಿ ದೇವಿಗೊಪ್ಪಿಸಿ ಒಂದೇ ತಟ್ಟೆಯಲ್ಲಿ ಸಾಮೂಹಿಕವಾಗಿ ತಿಂದಾಗಲೇ ದೇವಿಗೆ ಸಂತೃಪ್ತಿಯಾಗುತ್ತದೆಂಬ ನಂಬಿಕೆ. ಇದೇ ಬಗೆಯಲ್ಲಿ ಪ್ರತಿವರ್ಷ ಸಮುದಾಯದ ಶಕ್ತಿ ದೇವತೆಗಳಾದ ಮೈಸಾಯಿ, ವಾರುವಷಿ ಮಾತಾ, ತಾಯಿಜಾತಿ ಮಾತಾ, ಸಟವಾಯಿ ಸಮಸ್ತಿ ದೇವಿ, ದುರುಗಮ್ಮ, ಎಲ್ಲಮ್ಮ, ಭಾಗ್ಯವಂತಿ ದೇವಿ, ಚಿಂಚಲಿ ಮಾಯಕ್ಕ ಇವರೆಲ್ಲರ ಉತ್ಸವ, ಪೂಜೆಗಳೂ ನಡೆಯುತ್ತವೆ.

ಈ ಸಮುದಾಯ ನಂಬುವ ಪುರುಷ ದೈವಗಳಲ್ಲಿ ಮಸೋಬಾ, ಖಂಡೋಬಾ ಪ್ರಮುಖ ವಾದವು. ಇವರಲ್ಲದೇ ಹನುಮಂತ, ರೇವಣ ಸಿದ್ದೇಶ್ವರ, ಭುಜಂಗ್ರ ಭುವಾ ಇತ್ಯಾದಿಗಳಿದ್ದಾರೆ. ವಿಶೇಷವೆಂದರೆ ಪ್ರತಿಯೊಂದು ಮಾಂಗ್ ಗಾರುಡಿ ವಸತಿ ಪ್ರದೇಶದಲ್ಲಿಯೂ ಮರಗುಬಾಯಿಯ ಪಕ್ಕದಲ್ಲೇ ಆಕೆಯ ತಮ್ಮನಾಗಿ ಇರುವ ಮಸೋಬಾ ಬೇರೆ ಯಾರೂ ಆಗಿರದೇ ಸಾಕ್ಷಾತ್ ಮಹಿಷಾಸುರನೇ ಅಗಿದ್ದಾನೆ. ಇದನ್ನು ಡಿ.ಡಿ. ಕೋಸಾಂಬಿಯವರಂತಹ ವಿದ್ವಾಂಸರೂ ದೃಢೀಕರಿಸಿದ್ದಾರೆ.

ಮಾಂಗ್ ಗಾರುಡಿ ಜನರಿಗೆ ಹಿಂದೆ ಮಹಿಷ ಭಾದ್ರೆ ಎನ್ನುವ ಮತ್ತೊಂದು ಹೆಸರೂ ಇತ್ತೆಂಬುದನ್ನು ಗಮನಿಸಬಹುದಾಗಿದೆ. ಕನ್ನಡ-ಮರಾಠಿ ನೆಲದಲ್ಲಿ ಸಮುದಾಯಗಳ ನಡುವಿನ ಸಾಂಸ್ಕೃತಿಕ ಕೊಂಡಿಯೇ ಆಗಿರುವ ಖಂಡೋಬಾನಿಗೆ ನಡೆದುಕೊಳ್ಳುವ ಈ ಸಮುದಾಯದಲ್ಲಿ ವಾಘ್ಯಾ-ಮುರಳಿ ಸಂಪ್ರದಾಯ ಚಾಲ್ತಿಯಲ್ಲಿದೆ. ವಾಘ್ಯಾ-ಮುರಳಿರೆಂದರೆ ಖಂಡೋಬನ ದಾಸ ದಾಸಿಯರು. ಹಾಗೆಯೇ ಸವದತ್ತಿ ಯಲ್ಲಮ್ಮನಿಗೆ ಮುತ್ತು ಕಟ್ಟಿಸಿಕೊಂಡು ವರ್ಷಕ್ಕೊಮ್ಮೆ ಹರಕೆ ಸಲ್ಲಿಸುವ ದೇವದಾಸಿಯರೂ ಸಮುದಾಯದಲ್ಲಿ ಇದ್ದಾರೆ.

ಮಾಂಗ್ ಗಾರುಡಿ ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆ ಎದ್ದು ಕಾಣುವುದು ಈ ಜನರು ತಮ್ಮ ದೈವಿಕ ನಂಬಿಕೆಗೆ ಎಲ್ಲೂ ಬೇಲಿ ಹಾಕಿಕೊಳ್ಳದೇ ಇರುವುದರಲ್ಲಿ. ಬಹುತೇಕ ಮನೆಗಳಲ್ಲಿ ‘ಹಿಂದೂ’ ದೇವರುಗಳ ಫೋಟೊ, ಮೂರ್ತಿಗಳ ಜೊತೆಯಲ್ಲಿಯೇ ಈ ಸಮುದಾಯದ ಜನರು ಅಪಾರ ನಂಬಿಕೆಯಿಡುವ ಸೈಲಾನಿ ಬಾಬಾ, ಹಾಜಿಮಲ್ಲಂಗ್ ಬಾಬಾ, ಸಖಲಾದೀ ಸಾಹೇಬ, ಮಹಬೂಬ ಸುಬಾನಿ, ಶಿರಡಿ ಸಾಯಿಬಾಬಾ ಇತ್ಯಾದಿ ಸೂಫೀ ದೈವಗಳ ಫೋಟೋಗಳಿರುತ್ತವೆ.

ಬಹುತೇಕ ಮಾಂಗ್ ಗಾರುಡಿ ವಸತಿ ಪ್ರದೇಶಗಳಲ್ಲಿ ಒಂದಿಲ್ಲೊಂದು ದರ್ಗಾಗಳಿರುತ್ತವೆ. ಮಾಂಗ್ ಗಾರುಡಿ ಜನರು ಈ ಎಲ್ಲಾ ಸೂಫಿ ಸಂತರ ಸ್ಥಳಗಳಿಗೆ ಯಾತ್ರೆ ಹೋಗಿ ಬರುತ್ತಾರೆ. ಪ್ರತಿವರ್ಷ ಮೊಹರಂ ಉತ್ಸವ ನಡೆಸುತ್ತಾರೆ. ಕಲಬುರ್ಗಿಯಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಂಯಿಂದ ಆಚರಿಸುವ ಮೊದಲು ಈ ಸಮುದಾಯದವರು ತಾವೇ ಕಟ್ಟಿಸಿರುವ ಸಖಲಾದೀ ಸಾಹೇಬ ಎಂಬ ಸೂಫಿ ಸಂತನ ದರ್ಗಾಕ್ಕೆ ಪೂಜೆ ಸಲ್ಲಿಸುತ್ತಾರೆ. ನಂತರ ಹೋಳಿ ಹಬ್ಬದ ಬಣ್ಣ ಹಚ್ಚುತ್ತಾರೆ.

ಹಿಂದೆ ಮರಾಠಾ ಸೈನ್ಯದಲ್ಲಿ ಶತ್ರುಪಡೆಗಳಲ್ಲಿ ಭಯ ಹುಟ್ಟಿಸುತ್ತಿದ್ದ ‘ಪಿಂಡಾರಿ’ ಪಡೆಗಳನ್ನು ಬಳಸುತ್ತಿದ್ದರು. ಈ ಪಿಂಡಾರಿ ಪಡೆಗಳು ಬ್ರಿಟಿಷರಿಗೂ ಸಿಂಹಸ್ವಪ್ನವಾಗಿದ್ದವು. ಈ ಪಿಂಡಾರಿ ಪಡೆಗಳ ನಾಯಕರು ಮುಸ್ಲಿಮರಾಗಿದ್ದರೆ ಅವುಗಳ ಸೈನಿಕರು ಬುಡಕಟ್ಟು ಜನರಾಗಿದ್ದರು. ಮಾಂಗ್ ಗಾರುಡಿ ಜನರ ಪೂರ್ವಜರು ಇಂತಹ ಪಿಂಡಾರಿ ಪಡೆಗಳಲ್ಲಿದ್ದ ಸೈನಿಕ ಬುಡಕಟ್ಟು ಜನರಾಗಿದ್ದರು ಎನ್ನಲು ಚಾರಿತ್ರಿಕ ಆಧಾರಗಳಿವೆ. ಇಂದಿಗೂ ಆಯುಧ ಪೂಜೆಯ ದಿನ ಮಾಂಗ್ ಗಾರುಡಿ ಜನರು ಮರಾಠಾ ಯುದ್ಧಗಳಲ್ಲಿ ಬಳಸಿದ ‘ಕಿರಾಚಿ’ ಎಂಬ ತಲವಾರುಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಪೂಜಿಸುತ್ತಾರೆ.

ಪರಿವರ್ತನೆಯ ಕಾಲದಲ್ಲಿ...

ಸುತ್ತಮುತ್ತಲ ನಾಗರಿಕ ಜಗತ್ತು ತೀವ್ರ ಬದಲಾವಣೆಯ ನಾಗಾಲೋಟದಲ್ಲಿರು ವಾಗ ನಗರ ಸಮಾಜದ ನಡುವೆಯೇ ಇರುವ ಮಾಂಗ್ ಗಾರುಡಿ ಸಮುದಾಯವೂ ಬದಲಾವಣೆಗೊಳ್ಳಲು ತಹತಹಿಸುತ್ತಿದೆ. 1911ರಂದು ಈ ಬುಡಕಟ್ಟು ಸಮುದಾಯವನ್ನು ಬ್ರಿಟಿಷರು ಕ್ರಿಮಿನಲ್ ಎಂದು ಘೋಷಿಸಿ ಬೇಟೆಯಾಡಲು ತೊಡಗಿದ ದಿನದಿಂದ ಈ ದಿನದವರೆಗೂ ನಾಗರಿಕ ಸಮಾಜ ಈ ಜನರನ್ನು ‘ಕಳ್ಳರು’ ಎಂದೇ ನೋಡುತ್ತಿರುವುದು ವ್ಯಥೆಯ ಸಂಗತಿ.

ಭಾರತ ಸ್ವತಂತ್ರಗೊಂಡ ಮೇಲೆ ಕಾಯ್ದೆ ಕಾಗದಗಳಲ್ಲಿ ‘ಕ್ರಿಮಿನಲ್’ ಹಣೆಪಟ್ಟಿ ತೆಗೆಯಲಾಯಿತು, ನಿಜ. ಆದರೆ ಇಂದಿಗೂ ನಾಗರಿಕ ಆಡಳಿತಾಂಗಗಳಲ್ಲಿ ಈ ಸಮುದಾಯವನ್ನು ಅದೇ ರೀತಿಯಲ್ಲಿ ನೋಡಲಾಗುತ್ತಿದೆ. ಇವರನ್ನು ನಾಗರಿಕ ಹಕ್ಕುಗಳಿಂದ ವಂಚಿಸಲಾಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಿಗಾಗಿ ಹಪಹಪಿಸುತ್ತಿರುವ ಮಾಂಗ್ ಗಾರುಡಿ ಸಮುದಾಯಕ್ಕೆ ತುರ್ತಾಗಿ ಸಹಾಯ ಹಸ್ತ ಚಾಚಬೇಕಾಗಿದೆ.

ಪಾತಾಳದಲ್ಲಿದ್ದಾಳೆ ಮೈಸಾಯಿ!

ಬೀದರ್ ಸಮೀಪದ ಕಮಠಾಣಾದಲ್ಲಿರುವ ಮಾಂಗ್ ಗಾರುಡಿ ವಸತಿಯಲ್ಲಿ ಒಂದು ಗುಡಿಯಿದೆ. ಅದರೊಳಗೆ ಯಾವುದೇ ದೇವರ ಮೂರ್ತಿ ಇಲ್ಲ. ಒಂದು ಖಾಲಿ ಬುಟ್ಟಿ ಇದೆ. ಇದೇಕೆ ಹೀಗೆ ಎಂದು ಕೇಳಿದರೆ ಅಲ್ಲಿನ ಹಿರಿಯಜ್ಜಿ ಹೀಗೆ ಹೇಳುತ್ತಾರೆ; ‘ಅದು ಮೈಸಾಯಿದೇವಿ ಗುಡಿ. ಅಕಿ ನೆಲದ ಮೇಲಿಲ್ಲ. ತಳದಲ್ಲಿದ್ದಾಳ. ಆಕಿ ಮೇಲೆ ಬರುವುದಿಲ್ಲ. ಎಲ್ಲರ ಕ್ಷೇಮ ನೋಡಿಕೊಂಡು ಅಲ್ಲೇ ಇರ್ತಾಳ. ಆಕಿ ಮ್ಯಾಲೆ ಬಂದರ ನಾವ್ಯಾರೂ ಉಳಿಯಂಗಿಲ್ಲ’. ಹೀಗೆ ಪಾತಾಳದಲ್ಲಿದ್ದು ತಮ್ಮನ್ನು ನೋಡುತ್ತಾ ಕಾಪಾಡುತ್ತಿರುವ ದೇವಿಯೊಬ್ಬಳಿದ್ದಾಳೆ ಎಂಬ ಪ್ರತೀತಿ ಈ ಜನರಿಗಿದೆ ಎಂದರೆ ಅವರ ನಂಬುಗೆಯ ವಿಶಾಲತೆಯನ್ನು ನಾವು ಊಹಿಸಬಹುದು. ಈ ದೇವಿಗೆ ಪ್ರತಿವರ್ಷ ಜಾತ್ರೆ- ಬಲಿಹರಕೆಯ ಪೂಜೆಯೂ ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry