ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಡತಿಗೆ ಯಾರ ಭಯವೂ ಇರಲ್ರೀ...

ಸಯನೈಡ್‌ ಮೋಹನ್‌ ಪ್ರಕರಣ–ನ್ಯಾಯಮೂರ್ತಿ ಮಳಿಮಠ
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಂಡತಿಗೆ ಯಾರ ಭಯವೂ ಇರಲ್ರೀ..!’

ಇದು ನ್ಯಾಯಮೂರ್ತಿ ರವಿ ಮಳಿಮಠ ಅವರು ಸಯನೈಡ್‌ ಮೋಹನ ಕುಮಾರ್ ಪ್ರಕರಣದ ವಿಚಾರಣೆ ವೇಳೆ ಸೋಮವಾರ ವ್ಯಕ್ತಪಡಿಸಿದ ಮೌಖಿಕ ಅಭಿಪ್ರಾಯ.

ಮೋಹನಕುಮಾರ್ ಬೆಳ್ತಂಗಡಿ ತಾಲ್ಲೂಕಿನ ವೇಣೂರು ಗ್ರಾಮದ ಸ್ವಸಹಾಯ ಗುಂಪಿನ ಸದಸ್ಯೆ ಹಾಗೂ ಬಹುಜನ ಸಮಾಜ ಪಾರ್ಟಿಯ ಪದಾಧಿಕಾರಿ ಆಗಿದ್ದ ಲೀಲಾ ಅಲಿಯಾಸ್‌ ಲೀಲಾವತಿ (30) ಅವರ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ.

ಈ ಶಿಕ್ಷೆಯನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್ ರಿಜಿಸ್ಟ್ರಾರ್‌ ಜನರಲ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್‌ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಅಪರಾಧಿ ಮೋಹನ ಕುಮಾರ್ ಖುದ್ದು ವಾದ ಮಂಡಿಸಿ, ‘ಈ ಪ್ರಕರಣದಲ್ಲಿ ಕೊಲೆಯಾದ ಮಹಿಳೆಯ ಚಿನ್ನಾಭರಣ ದೋಚಿದ್ದೇನೆ ಎಂಬ ಆರೋಪ ಸುಳ್ಳು. ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದು ನನ್ನ ಹೆಂಡತಿಗೆ ಸೇರಿದ ಚಿನ್ನಾಭರಣಗಳು’ ಎಂದು ಪ್ರತಿಪಾದಿಸಿದ.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಕುನ್ಹ ಅವರು, ’ನಿನಗೆ ಎಷ್ಟು ಮಂದಿ ಹೆಂಡತಿಯರು’ ಎಂದು ಪ್ರಶ್ನಿಸಿದರು. ಇದಕ್ಕೆ ತಡಬಡಿಸುತ್ತಾ ಮೋಹನ್ ಕುಮಾರ ಸಣ್ಣ ದನಿಯಲ್ಲಿ, ’ಇಬ್ಬರು’ ಎಂದ. ಆಗ ಮಧ್ಯ ಪ್ರವೇಶಿಸಿದ ಪ್ರಾಸಿಕ್ಯೂಷನ್‌ ವಕೀಲ ವಿಜಯಕುಮಾರ್ ಮಜಗೆ, ‘ಇಲ್ಲಾ ಸ್ವಾಮಿ ಈತನಿಗೆ ಮೂವರು ಹೆಂಡತಿಯರು. ಅವರಲ್ಲಿ ಮೊದಲನೆಯ ಹೆಂಡತಿ ವಿಚ್ಛೇದನ ಪಡೆದಿದ್ದಾರೆ’ ಎಂದರು.

ಆಗ ಮಳಿಮಠ ಅವರು, ‘ಅಲ್ಲಯ್ಯಾ ನಿನ್ನ ಹೆಂಡತಿಯ ಚಿನ್ನಾಭರಣ ಎನ್ನುತ್ತೀಯಾ. ಅವಳು ಏಕೆ ಚಿನ್ನಾಭರಣ ಕೇಳಲು ಬಂದಿಲ್ಲ’ ಎಂದು ಪ್ರಶ್ನಿಸಿದರು.

ಇದಕ್ಕೆ ಮೋಹನಕುಮಾರ್, ‘ಸ್ವಾಮಿ ಅವಳಿಗೆ ಭಯ’ ಎಂದ. ಆಗ ಮಳಿಮಠ ಅವರು ‘ಹೆಂಡತಿಗೆ ಯಾರ ಭಯವೂ ಇರಲ್ರೀ..!’ ಎಂದರು.

ನಾಳೆಗೆ ವಿಚಾರಣೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT