ಸಂವಿಧಾನ ಸುಧಾರಣೆಗೆ ಶಿಂಜೊ ಒತ್ತು

ಭಾನುವಾರ, ಜೂನ್ 16, 2019
22 °C

ಸಂವಿಧಾನ ಸುಧಾರಣೆಗೆ ಶಿಂಜೊ ಒತ್ತು

Published:
Updated:
ಸಂವಿಧಾನ ಸುಧಾರಣೆಗೆ ಶಿಂಜೊ ಒತ್ತು

ಟೋಕಿಯೊ : ವಿರೋಧದ ನಡುವೆಯೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲುವು ಸಾಧಿಸಿದ್ದಾರೆ.

ಆದರೆ, ಸಂವಿಧಾನದಲ್ಲಿ ಸುಧಾರಣೆ ತರಬೇಕು ಎನ್ನುವ ತಮ್ಮ ದೀರ್ಘಕಾಲದ ನಿಲುವಿಗೆ ಸಾರ್ವಜನಿಕರಲ್ಲಿ ಭಿನ್ನಾಭಿಪ್ರಾಯ ಇರುವುದರಿಂದ ಒಮ್ಮತ ಮೂಡಿಸುವುದು ಅವರ ಮುಂದಿರುವ ಸವಾಲಾಗಿದೆ ಎಂದು ವಿಶ್ಲೇಷಿಸಲಾಗಿದೆ.

ಮೈತ್ರಿಪಕ್ಷ ಕೊನೆಟೊ ಜತೆ ಸೇರಿ ಅಬೆ ಅವರ ಕಂಟ್ರಿ ಲಿಬರಲ್ ಪಕ್ಷ 465 ಸ್ಥಾನಗಳ ಪೈಕಿ 312 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸುಧಾರಣೆ ಪರವಾಗಿರುವ ಅಬೆ ಅವರನ್ನು ವಿರೋಧಿಸುತ್ತಿರುವ ಕಾನ್‌ಸ್ಟಿಟ್ಯೂಷನಲ್ ಡೆಮಾಕ್ರಟಿಕ್ ಪಕ್ಷ (ಸಿಡಿಪಿಜೆ) 54 ಸ್ಥಾನಗಳನ್ನು ಗೆದ್ದಿದೆ.

ಟೋಕಿಯೊ ಗವರ್ನರ್ ಯುರಿಕೊ ಕೊಯ್ಕೆ ಅವರ ನೂತನ ಪಕ್ಷ ಪಾರ್ಟಿ ಆಫ್ ಹೋಪ್‌ ಸೇರಿದಂತೆ ವಿವಿಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಯಸುವುದಾಗಿ ಅಬೆ ಹೇಳಿದ್ದಾರೆ.

‘ಆಡಳಿತಾರೂಢ ಪಕ್ಷವಾಗಿ ನಾವು ಎರಡನೇ ಮೂರರಷ್ಟು ಬಹುಮತ ಗಳಿಸಿದ್ದೇವೆ. ಆದರೆ ಸಂವಿಧಾನದಲ್ಲಿ ಸುಧಾರಣೆ ತರಲು ಆಡಳಿತಾರೂಢ ಪಕ್ಷ ಹಾಗೂ ವಿರೋಧ ಪಕ್ಷಗಳಲ್ಲಿ ಒಮ್ಮತ ಮೂಡಿಸುವ ಅವಶ್ಯಕತೆ ಇದೆ’ ಎಂದು ಅಬೆ ಸೋಮವಾರ ಹೇಳಿದ್ದಾರೆ.

‘ಅಬೆ ಅವರು ಪರಂಪರೆ ಸೃಷ್ಟಿಸಲು ಮುಂದಾಗಿದ್ದಾರೆ. ಆರ್ಥಿಕತೆಯನ್ನು ಹಣದುಬ್ಬರ ಇಳಿಕೆ ಸಮಸ್ಯೆಯಿಂದ ಹೊರತರುವುದು ಅವರ ಮೊದಲ ಉದ್ದೇಶ. ಎರಡನೆಯದಾಗಿ ಸಂವಿಧಾನ ಬದಲಿಸುವುದು’ ಎಂದು ಈಕ್ವಿಟಿ ಹೂಡಿಕೆ ಸಂಸ್ಥೆ ವಿಸ್ಡಮ್ ಟ್ರೀ ಜಪಾನ್‌ನ ಮುಖ್ಯಸ್ಥ ಜೆಸ್ಪರ್ ಕೋಲ್ ಹೇಳಿದ್ದಾರೆ.

ಉತ್ತರ ಕೊರಿಯಾ ಒಂದೇ ತಿಂಗಳ ಅವಧಿಯಲ್ಲಿ ಎರಡು ಬಾರಿ ಜಪಾನ್ ಮೇಲೆ ಕ್ಷಿಪಣಿ ಪರೀಕ್ಷೆ ನಡೆಸಿದ್ದು ಅಬೆ ಅವರಿಗೆ ಲಾಭದಾಯಕವಾಯಿತು. ದೇಶದ ಭದ್ರತೆ ಕುರಿತ ಅವರ ನಿಲುವನ್ನು ಹಲವರು ಬೆಂಬಲಿಸಿದರು.

ಸಾರ್ವಜನಿಕ ಅಭಿಪ್ರಾಯದಲ್ಲಿ ಒಡಕು: ಜಪಾನ್‌ನ ಸ್ವಯಂರಕ್ಷಣಾ ಪಡೆಯನ್ನು ಕಾನೂನುಬದ್ಧಗೊಳಿಸಲು ಸಂವಿಧಾನದ 9ನೇ ಕಲಂಗೆ ನಿಯಮವೊಂದನ್ನು ಸೇರ್ಪಡೆಗೊಳಿಸಲು ಅಬೆ ಅವರು ಕಳೆದ ಮೇ ತಿಂಗಳಲ್ಲಿ ಪ್ರಸ್ತಾಪ ಇರಿಸಿದ್ದರು. ಕಲಂ 9ರ ಪ್ರಕಾರ ಜಪಾನ್‌ನಲ್ಲಿ ಯುದ್ಧಕ್ಕಾಗಿ ಸೇನಾಪಡೆ ಕಾರ್ಯನಿರ್ವಹಿಸುವುದು ನಿಷಿದ್ಧವಾಗಿದೆ. ಆದರೆ ಸ್ವಯಂರಕ್ಷಣೆಗಾಗಿ ಸೇನಾಪಡೆ ಬಳಸಬಹುದು.

ಅಬೆ ಅವರ ಪ್ರಸ್ತಾಪ ಕುರಿತು ಸಾರ್ವಜನಿಕರಲ್ಲಿ ಭಿನ್ನ ಅಭಿಪ್ರಾಯ ಇದೆ. ಶೇ 32 ಜನ ಪ್ರಸ್ತಾಪದಪರವಾಗಿ, ಶೇ 21 ಜನ ವಿರುದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶೇ 39 ಜನರು ಯಾವುದೇ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ.

‘ಮತಗಳನ್ನು ಗೆದ್ದಿದ್ದಾರೆ; ಹೃದಯ ಅಲ್ಲ’

ಅಬೆ ಅವರು ಚುನಾವಣೆಯಲ್ಲಿ ‘ಭಾರಿ ಬಹುಮತದಿಂದ’ ಗೆಲುವು ಸಾಧಿಸಿದ್ದಾರೆ. ಆದರೆ ಅವರಿಗಿರುವ ದೇಶಭಕ್ತಿ ಹಾಗೂ ದೇಶದ ಸಂವಿಧಾನ ಸುಧಾರಣೆ ಕೈಗೊಳ್ಳುವ ಕುರಿತ ಅವರ ಧೋರಣೆ ಬಗ್ಗೆ ಸಂಶಯ ಹೊಂದಿರುವ ಮತದಾರರ ಹೃದಯ ಗೆಲ್ಲಲು ವಿಫಲರಾಗಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

‘ಅವರು ಮಾಡಿರುವ ಕೆಲವು ಕೆಲಸಗಳ ನಿರ್ದಿಷ್ಟ ಆಯಾಮಗಳ ಕುರಿತು ಪ್ರಶಂಸೆ ಇದೆ. ಆದರೆ ಜನರು ಅವರನ್ನು ಪ್ರೀತಿಸುವುದಿಲ್ಲ’ ಎಂದು ವಾಷಿಂಗ್ಟನ್ ಮೂಲದ ಟೆನಿಯೊ ಗುಪ್ತಚರ ಸಂಸ್ಥೆಯ ರಾಜಕೀಯ ತಜ್ಞ ಟೊಬಾಯಸ್ ಹ್ಯಾರಿಸ್ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry