ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಒತ್ತಡ ಆರೋಪ: ತಳ್ಳಿ ಹಾಕಿದ ಆಯೋಗ

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ವಿಧಾನಸಭೆಗಳಿಗೆ ಒಟ್ಟಿಗೆ ಚುನಾವಣೆ ನಡೆಸದಿರಲು ಹಲವು ಕಾರಣಗಳಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಕೆ. ಜೋತಿ ಹೇಳಿದ್ದಾರೆ. ಗುಜರಾತ್‌ ಚುನಾವಣೆ ವಿಳಂಬ ಮಾಡುವಂತೆ ಆಯೋಗದ ಮೇಲೆ ಕೇಂದ್ರ ಸರ್ಕಾರ ಒತ್ತಡ ಹೇರಿದೆ ಎಂಬ ಕಾಂಗ್ರೆಸ್‌ ಆರೋಪವನ್ನು ಈ ಮೂಲಕ ಅವರು ತಳ್ಳಿ ಹಾಕಿದ್ದಾರೆ.

ಹಿಮಾಚಲ ಪ್ರದೇಶದ ಚುನಾವಣೆಯ ಫಲಿತಾಂಶ ಗುಜರಾತ್‌ ಮತದಾರರ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲಾಗುವುದು. ಅದಕ್ಕಾಗಿ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಪ್ರಕಟವಾಗುವುದಕ್ಕೆ ಮೊದಲೇ ಗುಜರಾತ್‌ನಲ್ಲಿ ಚುನಾವಣೆ ನಡೆಸಲಾಗುವುದು ಎಂದು ಜೋತಿ ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ನವೆಂಬರ್‌ 9ರಂದು ಮತದಾನ ನಡೆದರೂ ಮತ ಎಣಿಕೆ ಡಿಸೆಂಬರ್‌ 18ರಂದು ನಡೆಯಲಿದೆ. ಆಯೋಗದ ಮೇಲೆ ಕೇಂದ್ರದಿಂದ ಯಾವುದೇ ಒತ್ತಡ ಇಲ್ಲ. ಗುಜರಾತ್‌ನಲ್ಲಿ ಎಲ್ಲ ಪಕ್ಷಗಳಿಗೂ ಆಯೋಗವು ಸಮಾನ ಅವಕಾಶ ನೀಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗುಜರಾತ್‌ನಲ್ಲಿ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಇದು ಚುನಾವಣಾ ಪ್ರಚಾರದ ರೀತಿಯಲ್ಲಿಯೇ ನಡೆಯುತ್ತಿದೆ. ಆದರೆ ಇದರಲ್ಲಿ ಆಯೋಗ ತಲೆಹಾಕಿಲ್ಲ ಎಂಬುದರತ್ತಲೂ ಅವರು ಗಮನ ಸೆಳೆದರು.

ಪ್ರಧಾನಿ ಭಾನುವಾರ ಗುಜರಾತ್‌ಗೆ ಹೋಗಿದ್ದರು. ರಾಹುಲ್‌ ಗಾಂಧಿ ಸೋಮವಾರ ಹೋಗಿದ್ದಾರೆ. ನಾವು ಯಾರಿಗೂ ವಿಶೇಷ ಆದ್ಯತೆ ನೀಡಿಲ್ಲ ಎಂದು ಜೋತಿ ಹೇಳಿದ್ದಾರೆ.

ಹಿಮಾಚಲ ಪ್ರದೇಶ ವಿಧಾನಸಭೆಯ ಚುನಾವಣೆ ದಿನಾಂಕವನ್ನು 13ರಂದು ಘೋಷಿಸಲಾಗಿದೆ. ಹಿಮಾಚಲ ಪ್ರದೇಶ ಮತ್ತು ಗುಜರಾತ್‌ ವಿಧಾನಸಭೆಗಳ ಅವಧಿ ಜನವರಿಗೆ ಕೊನೆಯಾಗುತ್ತದೆ. ಹಾಗಿದ್ದರೂ ಗುಜರಾತ್‌ ವಿಧಾನಸಭೆಗೆ ಚುನಾವಣೆ ಘೋಷಿಸದಿರುವುದು ವಿವಾದಕ್ಕೆ ಕಾರಣವಾಗಿದೆ. ಗುಜರಾತ್‌ ವಿಧಾನಸಭೆ ಚುನಾವಣೆ ಘೋಷಣೆ ಆಗದಿರುವ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರನ್ನು ಓಲೈಸಲು ವಿವಿಧ ಯೋಜನೆಗಳನ್ನು ಪ್ರಕಟಿಸಲು ಅವಕಾಶ ಕೊಟ್ಟಂತಾಗಿದೆ. ಬಿಜೆಪಿಯ ಒತ್ತಡಕ್ಕೆ ಆಯೋಗ ಮಣಿದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಚಳಿಗಾಲ ಆರಂಭವಾದ ಬಳಿಕ ಹಿಮಾಚಲ ಪ್ರದೇಶದ ಕಿನ್ನೌರ್‌, ಲಾಹೌಲ್‌ ಮತ್ತು ಚಂಬಾ ಜಿಲ್ಲೆಗಳಲ್ಲಿ ಹಿಮಪಾತ ಆರಂಭವಾಗುವ ಸಾಧ್ಯತೆ ಇದೆ. ಹಾಗಾಗಿ ನವೆಂಬರ್‌ ಮೊದಲ ವಾರದಲ್ಲಿಯೇ ಚುನಾವಣೆ ನಡೆಸುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಅಲ್ಲಿನ ಚುನಾವಣಾ ಆಯೋಗ ಮತ್ತು ರಾಜಕೀಯ ಪಕ್ಷಗಳು ಸಲಹೆ ನೀಡಿದ್ದವು ಎಂದು ಜೋತಿ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಚುನಾವಣೆ ನಡೆಸಲು ಭಾರಿ ಸಂಖ್ಯೆಯಲ್ಲಿ ಸರ್ಕಾರಿ ಸಿಬ್ಬಂದಿಯ ನೆರವು ಬೇಕು. ಹಿಮಾಚಲ ಪ್ರದೇಶ ಮತ್ತು ಗುಜರಾತ್‌ಗೆ ಜೊತೆಯಾಗಿಯೇ ಚುನಾವಣೆ ನಡೆಸಿದರೆ ಈಗ ಗುಜರಾತ್‌ನಲ್ಲಿ ಪ್ರವಾಹ ಪರಿಹಾರ ಕೆಲಸಗಳಲ್ಲಿ ತೊಡಗಿರುವ ಸಿಬ್ಬಂದಿಯನ್ನು ಚುನಾವಣಾ ಕೆಲಸಕ್ಕೆ ಬಳಸಿಕೊಳ್ಳಬೇಕಾಗುತ್ತದೆ. ಹಾಗಾದರೆ, ಅವರು ಪರಿಹಾರ ಕೆಲಸಗಳನ್ನು ಬಿಟ್ಟು ಚುನಾವಣೆ ಕೆಲಸಕ್ಕೆ ಗಮನ ಹರಿಸಬೇಕಾಗುತ್ತದೆ. ಈ ಕಾರಣಕ್ಕಾಗಿ ಒಟ್ಟಾಗಿ ಚುನಾವಣೆ ನಡೆಸದಿರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜೋತಿ ವಿವರಿಸಿದ್ದಾರೆ.

ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಗುಜರಾತ್‌ನಲ್ಲಿ ಜುಲೈನಲ್ಲಿ 200 ಜನರು ಮೃತಪಟ್ಟಿದ್ದಾರೆ.

**

ವಿರೋಧ ಪಕ್ಷದ ಪ್ರಚಾರಕ್ಕೆ ನಾವು ತಡೆ ಒಡ್ಡಿದರೆ ಮಾತ್ರ ಅವರು ನಮ್ಮನ್ನುಪ್ರಶ್ನಿಸಬಹುದು. ಗುಜರಾತ್‌ನಲ್ಲಿ ಎಲ್ಲ ಪಕ್ಷಗಳಿಗೂ ನಾವು ಸಮಾನ ಅವಕಾಶ ಕೊಟ್ಟಿದ್ದೇವೆ.

ಎ.ಕೆ. ಜೋತಿ
ಮುಖ್ಯ ಚುನಾವಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT