ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಗೀತೆ ಹಾಡದವರು ದೇಶಪ‍್ರೇಮಿಗಳಲ್ಲವೇ?

ಸಿನಿಮಾ ಮಂದಿರದಲ್ಲಿ ರಾಷ್ಟ್ರಗೀತೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂಬ ಆದೇಶವನ್ನು ಮಾರ್ಪಡಿಸುವ ಸುಳಿವನ್ನು ಸುಪ್ರೀಂ ಕೋರ್ಟ್‌ ನೀಡಿದೆ. ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವುದನ್ನು ಮುಂದುವರಿಸಬೇಕು ಎಂಬ ಇಚ್ಛೆ ಸರ್ಕಾರಕ್ಕೆ ಇದ್ದಿದ್ದರೆ ಈ ಬಗ್ಗೆ ಸುತ್ತೋಲೆಯನ್ನು ಯಾಕೆ ಹೊರಡಿಸಿಲ್ಲ ಎಂದು ಕೋರ್ಟ್‌ ಪ್ರಶ್ನಿಸಿದೆ.

‘ರಾಷ್ಟ್ರಗೀತೆ ಹಾಡದ ಜನರು ಕಡಿಮೆ ದೇಶಪ್ರೇಮಿಗಳು ಎಂದು ನಾವು ಯಾಕೆ ಭಾವಿಸಬೇಕು? ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಆದೇಶವನ್ನು ಪ್ರಶ್ನಿಸಿದರೆ ರಾಷ್ಟ್ರವಿರೋಧಿ ಎಂಬ ಹಣೆಪಟ್ಟೆ ಕಟ್ಟುತ್ತಾರೆ ಎಂಬ ಭೀತಿ ಜನರಲ್ಲಿ ಇದೆ. ದೇಶಪ್ರೇಮಿಗಳು ಎನಿಸಿಕೊಳ್ಳಲು ರಾಷ್ಟ್ರಗೀತೆ ಹಾಡುವ ಅಗತ್ಯ ಇಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಅಭಿ‍ಪ್ರಾಯಪಟ್ಟಿದೆ.

ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನು ಸೋಮವಾರದ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ, ‘ಜನರು ತಮ್ಮ ದೇಶಪ್ರೇಮವನ್ನು ಬಹಿರಂಗವಾಗಿ ಪ್ರದರ್ಶಿಸಿಕೊಂಡೇ ಇರಬೇಕಾದ ಅಗತ್ಯ ಇದೆಯೇ’ ಎಂದು ಪ್ರಶ್ನಿಸಿತು.

ಸುಪ್ರೀಂ ಕೋರ್ಟ್‌ ಆದೇಶದಲ್ಲಿರುವ ‘ಕಡ್ಡಾಯ’ ಪದವನ್ನು ಕೈಬಿಡುವ ಬಗ್ಗೆ ಯೋಚಿಸಬೇಕು ಎಂದು ಪೀಠ ಹೇಳಿತು. ಹಾಗಾದರೆ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆ ಹಾಡುವುದು ಐಚ್ಛಿಕವಾಗುತ್ತದೆ.

ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರದಲ್ಲಿ ಸರ್ಕಾರ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕು. ಇಂತಹ ವಿಚಾರಗಳ ಹೊರೆಯನ್ನು ಸುಪ್ರೀಂ ಕೋರ್ಟ್‌ ಮೇಲೆ ಹೊರಿಸಬಾರದು ಎಂದು ಪೀಠ ಹೇಳಿದೆ.

ಸಿನಿಮಾ ಮಂದಿರಗಳು ಸಂಪೂರ್ಣವಾಗಿ ಮನರಂಜನೆ ಕೇಂದ್ರಗಳು. ಜನರು ಮನರಂಜನೆಗಾಗಿಯೇ ಸಿನಿಮಾ ನೋಡಲು ಹೋಗುತ್ತಾರೆ. ಅಲ್ಲಿ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಬೇಕು ಎಂದು ಸರ್ಕಾರ ಬಯಸಿದರೆ ಅದನ್ನು ಸುಪ್ರೀಂ ಕೋರ್ಟ್‌ ಯಾಕೆ ಮಾಡಬೇಕು? ಸರ್ಕಾರವೇ ಈ ಬಗ್ಗೆ ನಿಯಮಗಳನ್ನು ರೂಪಿಸಬೇಕು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

**

ಸರ್ಕಾರದ ವಾದ ಏನು

ಭಾರತವು ಜಾತಿ, ಜನಾಂಗ, ಧರ್ಮ, ಭಾಷೆ, ಪ್ರಾಂತ್ಯಗಳಿಗೆ ಸಂಬಂಧಿಸಿ ವ್ಯಾಪಕ ವೈವಿಧ್ಯಗಳನ್ನು ಹೊಂದಿದೆ. ಈ ವೈವಿಧ್ಯದಲ್ಲಿ ಒಂದು ರೀತಿಯ ಒಗ್ಗಟ್ಟು ತರುವುದು ಅಗತ್ಯ. ಒಟ್ಟಾಗಿ ರಾಷ್ಟ್ರಗೀತೆ ಹಾಡುವುದರಿಂದ ಎಲ್ಲರೂ ಭಾರತೀಯರು ಎಂಬ ಭಾವನೆ ಬರುತ್ತದೆ. ರಾಷ್ಟ್ರಗೀತೆ ಮತ್ತು ಧ್ವಜಕ್ಕೆ ಗೌರವ ಕೊಡುವುದು ಪ್ರತಿ ಪೌರನ ಕರ್ತವ್ಯ.

**

ಸುಪ್ರೀಂ ಕೋರ್ಟ್‌ ಹೇಳಿದ್ದೇನು

ಸಿನಿಮಾ ಮಂದಿರಗಳಿಗೆ ಬರುವಾಗ ಶಾರ್ಟ್ಸ್‌ (ಚಡ್ಡಿ) ಧರಿಸುವುದಕ್ಕೆ ಯಾರಾದರೂ ಆಕ್ಷೇಪ ವ್ಯಕ್ತಪಡಿಸಿದರೆ ಏನು ಮಾಡುವುದು? ಇಂತಹ ನೈತಿಕ ಪೊಲೀಸ್‌ಗಿರಿಗೆ ಕೊನೆ ಎಲ್ಲಿ? ಮೂಲಭೂತ ಕರ್ತವ್ಯಗಳನ್ನು ಜನರು ಅನುಸರಿಸುವಂತೆ ಮಾಡುವ ದೊಡ್ಡ ಕೆಲಸವನ್ನು ನ್ಯಾಯಾಲಯದ ಮೇಲೆ ಹೇರುವುದಕ್ಕೆ ಸಾಧ್ಯವಿಲ್ಲ. ಜನರು ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡುವುದು ನ್ಯಾಯಾಲಯದ ಕೆಲಸ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT