ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಗಾವಿಯ ಪ್ರಾದೇಶಿಕ ಪಕ್ಷದಿಂದಲೂ ಆಹ್ವಾನ’

ಕೂಡ್ಲಿಗಿಯಲ್ಲಿ ಅನುಪಮಾ ಶೆಣೈ ಹೊಸ ಪಕ್ಷ ಉದ್ಘಾಟನೆ
Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಡಿವೈಎಸ್ಪಿಯಾಗಿ ಕಾರ್ಯನಿರ್ವಹಿಸಿ ರಾಜೀನಾಮೆ ನೀಡಿದ ಕೂಡ್ಲಿಗಿಯಲ್ಲೇ ತಮ್ಮ ಹೊಸ ಪಕ್ಷವನ್ನು ಉದ್ಘಾಟಿಸಲು ಅನುಪಮಾ ಶೆಣೈ ಸಿದ್ಧತೆ ನಡೆಸಿದ್ದಾರೆ. ರಾಜ್ಯೋತ್ಸವ ದಿನದಂದು (ನ.1) ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಪಕ್ಷದ ಉದ್ಘಾಟನೆ ನಡೆಯಲಿದೆ. ಅಂದೇ ಅವರ ಪಕ್ಷದ ಹೆಸರನ್ನು ಘೋಷಿಸಲಿದ್ದಾರೆ.

ಈ ನಡುವೆ, ಅವರಿಗೆ ಬೆಳಗಾವಿಯ ಪ್ರಾದೇಶಿಕ ಪಕ್ಷವೊಂದು ಆಹ್ವಾನ ನೀಡಿದೆ. ಪಕ್ಷಕ್ಕೆ ಸೇರಿ ಮುನ್ನಡೆಸಿಕೊಂಡು ಹೋಗುವ ಜವಾಬ್ದಾರಿ ನೀಡುವ ಅವಕಾಶವನ್ನೂ ಕಲ್ಪಿಸಿದೆ. ಆದರೆ ಅದನ್ನು ಅನುಪಮಾ ಅವರು ಎರಡನೇ ಆಯ್ಕೆಯನ್ನಾಗಿರಿಸಿಕೊಂಡಿದ್ದಾರೆ.

‘ವಿಧಾನಸಭೆ ಚುನಾವಣೆಗೆ ಮುಂಚೆಯೇ ಚುನಾವಣಾ ಆಯೋಗದಲ್ಲಿ ಹೊಸ ಪಕ್ಷದ ನೋಂದಣಿ ಕಾರ್ಯ ಪೂರ್ಣ ಆಗಬೇಕು. ಅದಾಗದಿದ್ದರೆ ಮಾತ್ರ ಬೆಳಗಾವಿಯ ಪ್ರಾದೇಶಿಕ ಪಕ್ಷದಲ್ಲಿ ಗುರುತಿಸಿಕೊಳ್ಳುವೆ’ ಎಂದು ಅನುಪಮಾ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು. ಆ ಪಕ್ಷ ಯಾವುದು ಎಂದು ಹೇಳಲಿಲ್ಲ.

‘ಕೆಲಸ ಮಾಡಿದ ಸ್ಥಳದಲ್ಲಿ ಅಥವಾ ಮತದಾರರಾಗಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಅವಕಾಶವಿದೆ. ಕೂಡ್ಲಿಗಿ ಮತ್ತು ಹಡಗಲಿ ಪರಿಶಿಷ್ಟ ಸಮುದಾಯಕ್ಕೆ ಮೀಸಲಿರಿಸಿದ ಕ್ಷೇತ್ರ. ಅಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ. ಬೇರೆ ಕ್ಷೇತ್ರದ ಕುರಿತು ನಿರ್ಧರಿಸಿಲ್ಲ’ ಎಂದರು.

ಪಕ್ಷದ ಉದ್ಘಾಟನೆ ಕುರಿತು ಕೂಡ್ಲಿಗಿ ತಹಶೀಲ್ದಾರರಿಗೆ ಮತ್ತು ಡಿವೈಎಸ್ಪಿಗೆ ಸಂಜೆ ಮಾಹಿತಿ ಪತ್ರ ಸಲ್ಲಿಸಿದ ಬಳಿಕ ಅವರು ಉಜ್ಜಯಿನಿಯ ಸದ್ಧರ್ಮ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದರು. ‘ಪಕ್ಷದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಸ್ವಾಮೀಜಿ ಬರಲು ನಿರಾಕರಿಸಿದರು. ಧರ್ಮ ಮತ್ತು ರಾಜಕೀಯವನ್ನು ಬೆರೆಸುವುದು ಬೇಡ ಎಂದರು’ ಎಂದು ಅನುಪಮಾ ತಿಳಿಸಿದರು.

‘ನವೆಂಬರ್‌ 1ರಂದು ಪಟ್ಟಣದಲ್ಲಿರುವ ಗಾಂಧೀಜಿ ಚಿತಾಭಸ್ಮ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ಪಂಚಾಚಾರ್ಯ ಕಲ್ಯಾಣ ಮಂಟಪಕ್ಕೆ ಪಾದಯಾತ್ರೆ ನಡೆಯಲಿದೆ. ವೇದಿಕೆ ಕಾರ್ಯಕ್ರಮದಲ್ಲಿ ಸುಮಾರು 700 ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ಅವರು ಪೊಲೀಸರಿಗೆ ಕೊಟ್ಟಿರುವ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT