ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ರೋಗಗಳಿಗೇ ಪ್ರತಿ ದಿನ 15 ಸಾವಿರ ಮಕ್ಕಳು ಬಲಿ

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡಿದ್ದರೂ, ತಡೆಯಬಹುದಾದ/ಗುಣಪಡಿಸಬಹುದಾದ ಕಾಯಿಲೆಗಳಿಂದಾಗಿ ಜಗತ್ತಿನಾದ್ಯಂತ ಐದು ವರ್ಷ ವಯಸ್ಸಿನ ಒಳಗಿನ 15 ಸಾವಿರ ಮಕ್ಕಳು ಪ್ರತಿ ದಿನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

ಆಫ್ರಿಕಾದ ಮತ್ತು ದಕ್ಷಿಣ ಏಷ್ಯಾದ ಕೆಲವು ರಾಷ್ಟ್ರಗಳು ಮಕ್ಕಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಹಿಂದೆ ಬಿದ್ದಿರುವುದರಿಂದ, 2017– 2030ರ ನಡುವೆ ಇಂತಹ ಕಾಯಿಲೆಗಳಿಂದ 6 ಕೋಟಿಗೂ ಹೆಚ್ಚು ಮಕ್ಕಳು ಜೀವ ಕಳೆದುಕೊಳ್ಳಲಿದ್ದಾರೆ ಎಂದು ಯುನಿಸೆಫ್‌, ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್‌ಗಳು ಜಂಟಿಯಾಗಿ ಸಿದ್ಧಪಡಿಸಿರುವ ವರದಿ ಎಚ್ಚರಿಸಿದೆ.

**

56 ಲಕ್ಷ: 2016ರಲ್ಲಿ ಮೃತಪಟ್ಟ ಐದು ವರ್ಷ ಪ್ರಾಯದ ಒಳಗಿನ ಮಕ್ಕಳು

**

1.26 ಕೋಟಿ: 1990ರಲ್ಲಿ ಮೃತಪಟ್ಟಿದ್ದ ಮಕ್ಕಳ ಸಂಖ್ಯೆ

**

ಯಾವ ಕಾಯಿಲೆಯಿಂದ ಸಾವು?

ಅಸುನೀಗಿದ ಒಟ್ಟು ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ನ್ಯುಮೋನಿಯಾ, ಅತಿಸಾರ ಮತ್ತು ಮಲೇರಿಯಾಗಳಿಂದಾಗಿ ಪ್ರಾಣಕಳೆದುಕೊಂಡಿದ್ದಾರೆ.

**

ಅಪೌಷ್ಟಿಕತೆಯೂ ಕಾರಣ!

ಉಳಿದ ಅರ್ಧದಷ್ಟು ಮಕ್ಕಳ ಸಾವಿನಲ್ಲಿ ಅಪೌಷ್ಟಿಕತೆ ಪ್ರಮುಖ ಪಾತ್ರ ವಹಿಸಿದೆ. ಅಪೌಷ್ಟಿಕತೆಯಿಂದಾಗಿ ಮಕ್ಕಳು ವಿವಿಧ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

**

ಭಾರತಕ್ಕೆ ಮೊದಲ ಸ್ಥಾನ

2016ರಲ್ಲಿ ಗುಣಪಡಿಸಬಹುದಾದ ಕಾಯಿಲೆಗಳಿಂದಾಗಿ ಅತಿ ಹೆಚ್ಚು ಮಕ್ಕಳು ಸಾವಿಗೀಡಾದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ. 8.5 ಲಕ್ಷ ಮಕ್ಕಳು ಇಲ್ಲಿ ಸೂಕ್ತ ಚಿಕಿತ್ಸೆ ಇಲ್ಲದೆ ಪ್ರಾಣಕಳೆದುಕೊಂಡಿದ್ದಾರೆ.

4.5 ಲಕ್ಷ ಮಕ್ಕಳು ಮೃತಪಟ್ಟಿರುವ ನೈಜೀರಿಯಾ ಎರಡನೇ ಸ್ಥಾನದಲ್ಲಿದೆ.

**

ಅರ್ಧದಷ್ಟು ಸಾವುಗಳು ಇಲ್ಲಿ...

ಭಾರತ, ನೈಜೀರಿಯಾ, ಪಾಕಿಸ್ತಾನ, ಕಾಂಗೊ, ಇಥಿಯೋಪಿಯಾ, ಚೀನಾ ಮತ್ತು ನೈಗರ್‌ಗಳಲ್ಲಿ ಅರ್ಧದಷ್ಟು ಮಕ್ಕಳು ಮೃತಪಟ್ಟಿದ್ದಾರೆ.

**

ಆಫ್ರಿಕಾ ಉಪಖಂಡದಲ್ಲಿ..

2016ರಲ್ಲಿ ಆಫ್ರಿಕಾ ಉಪಖಂಡದಲ್ಲಿ ನವಜಾತ ಶಿಶುಗಳ ಮರಣ ಪ್ರಮಾಣ ಹೆಚ್ಚು ದಾಖಲಾಗಿತ್ತು. ಹುಟ್ಟಿದ 1,000 ಮಕ್ಕಳಲ್ಲಿ ಸರಾಸರಿ 79 ಶಿಶುಗಳು ಮೃತಪಟ್ಟಿದ್ದವು.

**

1000ಕ್ಕೆ 41

ಸದ್ಯ, ಪ್ರತಿ 1,000 ನವಜಾತ ಶಿಶುಗಳಲ್ಲಿ ಸರಾಸರಿ 41 ಶಿಶುಗಳು ವಿವಿಧ ಆರೋಗ್ಯ ಸಮಸ್ಯೆಗಳಿಂದ ಮೃತಪಡುತ್ತಿವೆ. 1990ರಲ್ಲಿ ಈ ಸಂಖ್ಯೆ 93 ಆಗಿತ್ತು.

2015ರಲ್ಲಿ ನಡೆದ ಜಾಗತಿಕ ಶೃಂಗಸಭೆಯಲ್ಲಿ, 2030ರ ವೇಳೆಗೆ ನವಜಾತ ಶಿಶುಗಳ ಮರಣ ಸಂಖ್ಯೆಯನ್ನು 25ಕ್ಕಿಂತಲೂ ಕೆಳಗೆ ಬರುವಂತೆ ನೋಡಿಕೊಳ್ಳುವ ಗುರಿ ನಿಗದಿಪಡಿಸಲಾಗಿತ್ತು.

**

ವರದಿಯ ಇತರ ಅಂಶಗಳು

* 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ, ಅದರಲ್ಲೂ ಆಫ್ರಿಕಾ ಖಂಡದ ದೇಶಗಳಲ್ಲಿ ಮಕ್ಕಳಿಗೆ ನೀಡಲಾಗುತ್ತಿರುವ ವೈದ್ಯಕೀಯ ಚಿಕಿತ್ಸೆಯಲ್ಲಿ ಸುಧಾರಣೆ ಆಗಿಲ್ಲ. ಹಾಗಾಗಿ, ನವಜಾತ ಶಿಶು ಮರಣ ಪ್ರಮಾಣವನ್ನು ಕುಗ್ಗಿಸುವ ಗುರಿ ತಲುಪುವುದು ಸಂಶಯ

* ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸವಿದೆ

* 1990–2016ರ ನಡುವಣ ಅವಧಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಾವಿನ ಅಂತರ 19ರಿಂದ 11ಕ್ಕೆ ಇಳಿದಿದೆ.

* ದಕ್ಷಿಣ ಮತ್ತು ಪಶ್ಚಿಮ ಏಷ್ಯಾ ದೇಶಗಳಲ್ಲಿ ಐದು ವರ್ಷ ವಯಸ್ಸಿಗಿಂತ ಕೆಳಗಿನ ಹೆಣ್ಣು ಮಕ್ಕಳು ಹೆಚ್ಚು ಸಾಯುತ್ತಿದ್ದಾರೆ.

* ಕೆಲವು ಏಷ್ಯಾ ರಾಷ್ಟ್ರಗಳಲ್ಲಿ ಗಂಡು ಮಕ್ಕಳಿಗೆ ಹೆಚ್ಚು ಪ್ರಾಮುಖ್ಯ ನೀಡುವ ಸಂಪ್ರದಾಯವಿದೆ. ಇಲ್ಲಿ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿದೆ. ವೈದ್ಯಕೀಯ ಚಿಕಿತ್ಸೆ ಮತ್ತು ಆಹಾರದ ವಿಷಯದಲ್ಲೂ ಗಂಡು ಮಕ್ಕಳಿಗೆ ಹೆಚ್ಚು ಒತ್ತು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT