ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಹಣದಲ್ಲಿ ಕೋಟಿ ಕೋಟಿ ಆಸ್ತಿ ಖರೀದಿಸಿ ಜೈಲುಪಾಲು

Last Updated 23 ಅಕ್ಟೋಬರ್ 2017, 19:34 IST
ಅಕ್ಷರ ಗಾತ್ರ

ಬೆಂಗಳೂರು: ಮಾರತ್ತಹಳ್ಳಿಯ ಜೆ.ಪಿ.ಮೋರ್ಗನ್‌ ಹಣಕಾಸು ಸೇವಾ ಸಂಸ್ಥೆಯ ಗ್ರಾಹಕರ ಖಾತೆಯಲ್ಲಿದ್ದ ₹12.15 ಕೋಟಿ ಹಣವನ್ನು ತಮ್ಮ ಖಾತೆಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದ ಆರೋಪದಡಿ, ಅದೇ ಸಂಸ್ಥೆಯ ಇಬ್ಬರು ಡೇಟಾ ಎಂಟ್ರಿ ಆಪರೇಟರ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

ದೊಡ್ಡಗುಬ್ಬಿಯ ಮಾರುತಿ ಅಲಿಯಾಸ್ ರಾಮು (25) ಹಾಗೂ ಮುಳಬಾಗಿಲಿನ ಸುರೇಶ್ ಬಾಬು (28) ಬಂಧಿತರು. ಅವರಿಂದ ₹8.14 ಕೋಟಿ ನಗದು, 470 ಗ್ರಾಂ ಚಿನ್ನ ಹಾಗೂ 4 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಜತೆಗೆ ಆರೋಪಿಗಳು ಖರೀದಿಸಿದ್ದ ದೊಡ್ಡಬಳ್ಳಾಪುರದಲ್ಲಿರುವ ಮೂರು ಎಕರೆ ಜಮೀನು ಹಾಗೂ ಕೊತ್ತನೂರಿನಲ್ಲಿರುವ ನಾಲ್ಕು ಅಂತಸ್ತಿನ ಮನೆಯನ್ನು ಜಪ್ತಿ ಮಾಡಿರುವುದಾಗಿ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ತಿಳಿಸಿದರು.

‘ವಿದೇಶಿ ಉದ್ಯಮಿದಾರರು ಹಾಗೂ ಅನಿವಾಸಿ ಭಾರತೀಯರೇ ಹೆಚ್ಚಾಗಿ ಜೆ.ಪಿ.ಮೋರ್ಗನ್ ಸಂಸ್ಥೆಯಲ್ಲಿ ಖಾತೆ ಹೊಂದಿದ್ದಾರೆ. ಖಾತೆಗೆ ನಿರಂತರವಾಗಿ ಹಣ ಜಮೆ ಮಾಡುವ ಅವರು, ವ್ಯಾಪಾರದ ಉದ್ದೇಶದಿಂದ ಆ ಹಣವನ್ನು ವರ್ಗಾವಣೆಯನ್ನೂ ಮಾಡುತ್ತಾರೆ. ಹೀಗಾಗಿ ನಿತ್ಯವೂ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ. ಈ ಸಂಸ್ಥೆಯಲ್ಲಿ ಸಾರ್ವಜನಿಕರಿಗೆ ಖಾತೆ ತೆರೆಯಲು ಅವಕಾಶವಿರುವುದಿಲ್ಲ.’

‘ಇಂಥ ಸಂಸ್ಥೆಗೆ 2013ರಲ್ಲಿ ಡೇಟಾ ಎಂಟ್ರಿ ಆಪರೇಟರ್‌ ಆಗಿ ಸೇರಿದ್ದ ಮಾರುತಿ ಹಾಗೂ ಸುರೇಶ್‌ ಬಾಬು, ನಿತ್ಯವೂ ಕೋಟ್ಯಂತರ ರೂಪಾಯಿ ವರ್ಗಾವಣೆ ಮಾಡುತ್ತಿದ್ದರು. ಅವರ ಬಳಿ ಖಾತೆದಾರರ ವಿವರಗಳೆಲ್ಲ ಇರುತ್ತಿದ್ದವು. ಅದರಿಂದಾಗಿಯೇ ಅವರು ಗ್ರಾಹಕರ ಖಾತೆಗೆ ಕನ್ನ ಹಾಕಲು ಸಂಚು ರೂಪಿಸಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.

‘ಸುರೇಶ್‌ ಬಾಬು ಅವರ ಹೆಸರಿನಲ್ಲಿ ಆಕ್ಸಿಸ್‌ ಬ್ಯಾಂಕ್‌ನಲ್ಲಿ ಖಾತೆ ತೆರೆದಿದ್ದ ಮಾರುತಿ, ಮೋರ್ಗನ್‌ ಸಂಸ್ಥೆಯ ಗ್ರಾಹಕರ ಹಣವನ್ನು ಆ ಖಾತೆಗೆ ಕ್ರಮೇಣವಾಗಿ ವರ್ಗಾವಣೆ ಮಾಡಿದ್ದರು. ಅದಾದ ನಂತರ ಸುರೇಶ್‌ ಅವರಿಂದ ಚೆಕ್‌ ಪಡೆದುಕೊಂಡು, ಹಣವನ್ನೆಲ್ಲ ತಂದೆ ನಾರಾಯಣಸ್ವಾಮಿ ಖಾತೆಗೆ ವರ್ಗಾಯಿಸಿಕೊಂಡಿದ್ದರು.’

’ಅದಾದ ಬಳಿಕವೂ ಆಕ್ಸಿಸ್‌ ಬ್ಯಾಂಕ್‌ನ ಹೆಣ್ಣೂರು ಕ್ರಾಸ್‌ ಹಾಗೂ ಕಾವೇರಿ ಭವನದ ಶಾಖೆಯಲ್ಲಿ ಹೊಸದಾಗಿ ಎರಡು ಖಾತೆ ತೆರೆದಿದ್ದರು. ಎಲ್ಲ ಹಣವನ್ನು ಆ ಖಾತೆಗಳಿಗೆ ಜಮೆ ಮಾಡಿದ್ದರು. ಆ ಖಾತೆಗಳ ಮೂಲಕವೇ ಹಣವನ್ನು ಡ್ರಾ ಮಾಡಿಕೊಂಡ ಮಾರುತಿ, ಆಸ್ತಿ, ಚಿನ್ನಾಭರಣ ಖರೀದಿಸಿದ್ದರು’ ಎಂದು ತನಿಖಾಧಿಕಾರಿ ವಿವರಿಸಿದರು. 

ಕೃತ್ಯದ ಬಳಿಕ ಕೆಲಸಕ್ಕೆ ಗೈರು: ‘ಕೃತ್ಯದ ಬಳಿಕ ಆರೋಪಿಗಳು ಕೆಲಸಕ್ಕೆ ಹೋಗಿರಲಿಲ್ಲ. ಸಂಸ್ಥೆಯ ಹಿರಿಯ ಅಧಿಕಾರಿಗಳು ಎಷ್ಟೇ ಹುಡುಕಿದರೂ ಅವರು ಪತ್ತೆಯಾಗಿರಲಿಲ್ಲ. ಇದರ ನಡುವೆಯೇ ಸಂಸ್ಥೆಯ ವ್ಯವಸ್ಥಾಪಕರು, ಹಣ ವರ್ಗಾವಣೆಯ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅವಾಗಲೇ ಆರೋಪಿಗಳ ಕೃತ್ಯ ಬಯಲಾಗಿತ್ತು. ಬಳಿಕ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಹಣ ಕೈ ಸೇರಿದ ಬಳಿಕ ಆರೋಪಿಗಳು, ಯಾವುದೇ ಮೊಬೈಲ್‌ ಬಳಕೆ ಮಾಡುತ್ತಿರಲಿಲ್ಲ. ಅವರ ಹಳೇ ಕರೆಗಳ ಮಾಹಿತಿ ಸಂಗ್ರಹಿಸಿ ಸಂಬಂಧಿಕರೊಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದೆವು. ಅವರೇ ಆರೋಪಿಗಳ ಸುಳಿವು ನೀಡಿದರು. ಬಳಿಕ ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಿದೆವು. ಅದನ್ನು ತಿಳಿದ ಮಾರುತಿ ಚೆನ್ನೈಗೆ ಹೋಗಿ ತಲೆಮರೆಸಿಕೊಂಡಿದ್ದರು. ಅಲ್ಲಿಗೆ ಹೋದ ವಿಶೇಷ ತಂಡ ಅವರನ್ನು ಬಂಧಿಸಿ ಕರೆತಂದಿದೆ’ ಎಂದು ತನಿಖಾಧಿಕಾರಿ ವಿವರಿಸಿದರು.

ತನಿಖಾ ತಂಡಕ್ಕೆ  ಬಹುಮಾನ

ಆರೋಪಿಗಳನ್ನು ಬಂಧಿಸಿದ ಮಾರತ್ತಹಳ್ಳಿ ಠಾಣೆಯ ಪಿಎಸ್‌ಐ ಎಂ.ನಾಗರಾಜು ನೇತೃತ್ವದ ತಂಡಕ್ಕೆ ₹50 ಸಾವಿರ ಬಹುಮಾನ ಘೋಷಿಸಲಾಗಿದೆ. ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಮಿಷನರ್‌ ಟಿ.ಸುನೀಲ್‌ಕುಮಾರ್‌ ಬಹುಮಾನದ ಚೆಕ್‌ ವಿತರಿಸಿದರು.

ಯಾರದ್ದೋ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ

ತನ್ನ ಅಸಲಿ ಹೆಸರನ್ನು ಮುಚ್ಚಿಟ್ಟಿದ್ದ ಮಾರುತಿ, ವಿಜಯಪುರ ಜಿಲ್ಲೆಯ ರಾಮು ಚಂದಪ್ಪ ಎಂಬುವರ ಹೆಸರಿನಲ್ಲಿ ಕೆಲಸಕ್ಕೆ ಸೇರಿದ್ದರು. ಜತೆಗೆ ರಾಮು ಅವರ ವಿದ್ಯಾರ್ಹತೆ ದಾಖಲೆಗಳನ್ನೇ ಸಂಸ್ಥೆಗೆ ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

‘ವಂಚನೆ ಬಗ್ಗೆ ದೂರು ಕೊಟ್ಟಿದ್ದ ಸಂಸ್ಥೆಯ ಅಧಿಕಾರಿಗಳು, ಆರೋಪಿ ಹೆಸರು ರಾಮು ಎಂದಿದ್ದರು. ರಾಮು ಅವರನ್ನು ಹುಡುಕಿಕೊಂಡು ವಿಜಯಪುರಕ್ಕೆ ಹೋದಾಗ ಯಾವುದೇ ಸುಳಿವು ಸಿಗಲಿಲ್ಲ. ಇನ್ನೊಬ್ಬ ಆರೋಪಿ ಸುರೇಶ್‌ ಬಾಬುರನ್ನು ಬಂಧಿಸಿದಾಗ, ಅವರು ಮಾರುತಿಯ ಅಸಲಿ ಹೆಸರು ತಿಳಿಸಿದರು’ ಎಂದು ತನಿಖಾಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT