ಶನಿವಾರ, ಸೆಪ್ಟೆಂಬರ್ 21, 2019
24 °C
ಅಧಿಕಾರಿಗಳ ಸಭೆ ಬಳಿಕ ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿಕೆ

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲೂ ಇಂದಿರಾ ಕ್ಯಾಂಟೀನ್‌ಗೆ ಜಾಗ

Published:
Updated:
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲೂ ಇಂದಿರಾ ಕ್ಯಾಂಟೀನ್‌ಗೆ ಜಾಗ

ಬೆಂಗಳೂರು: ‘ರಾಜ್ಯದ ವಿವಿಧ ನಗರ ಮತ್ತು ಪಟ್ಟಣಗಳ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣಗಳಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜಾಗ ಒದಗಿಸಲಾಗುವುದು’ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.

ನಿಗಮದ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಕೆಲವು ಬಸ್ ನಿಲ್ದಾಣಗಳಲ್ಲಿ ಈಗಾಗಲೇ ಕ್ಯಾಂಟೀನ್‌ಗಳಿವೆ. ಅವುಗಳ ವಹಿವಾಟಿಗೆ ತೊಂದರೆ ಆಗದಂತೆ ಎಲ್ಲೆಲ್ಲಿ ಕ್ಯಾಂಟೀನ್ ಆರಂಭಿಸಬಹುದು ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

ಸುಲಭ್ ಶೌಚಾಲಯ:ಬಸ್ ನಿಲ್ದಾಣಗಳ ಶೌಚಾಲಯಗಳಲ್ಲಿ ಅಸಮರ್ಪಕ ನಿರ್ವಹಣೆ ಮತ್ತು ‌ಪ್ರಯಾಣಿಕರಿಂದ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳಿವೆ. ಹೀಗಾಗಿ ಶೌಚಾಲಯ ನಿರ್ವಹಣೆಯನ್ನು ಸುಲಭ್ ಇಂಟರ್ ನ್ಯಾಷನಲ್ ಸಂಸ್ಥೆಗೆ ವಹಿಸಲು ನಿರ್ಧರಿಸಲಾಗಿದೆ ಎಂದು ರೇವಣ್ಣ ತಿಳಿಸಿದರು.

ಮೊದಲ ಹಂತದಲ್ಲಿ ಬೆಂಗಳೂರು ಕೇಂದ್ರ ವಿಭಾಗ, ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳ ಬಸ್ ನಿಲ್ದಾಣಗಳನ್ನು ಸುಲಭ್ ಸಂಸ್ಥೆಗೆ ವಹಿಸಲಾಗುವುದು. ಬಳಿಕ ಹಂತ–ಹಂತವಾಗಿ 151 ಬಸ್ ನಿಲ್ದಾಣಗಳನ್ನೂ ಆ ಸಂಸ್ಥೆಗೇ ವಹಿಸಲಾಗುವುದು ಎಂದು ವಿವರಿಸಿದರು.

ಬಸ್ ಗಳಲ್ಲಿ ಪ್ರಯಾಣಿಸಲು ಮುಂಗಡ ಆಸನ ಕಾಯ್ದಿರಿಸುವವರಿಗೆ ಇರುವ ಇ–ಬುಕ್ಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಲಭಗೊಳಿಸಲಾಗುವುದು. ಕಾಗದ ರಹಿತ ಟಿಕೆಟ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದ್ದು, ಮೊಬೈಲ್‌ ಗೆ ಬರುವ ಸಂದೇಶವನ್ನೇ ಅಧಿಕೃತ ಟಿಕೆಟ್ ಎಂದು ಪರಿಗಣಿಸುವ ವ್ಯವಸ್ಥೆ ಸದ್ಯದಲ್ಲೆ ಜಾರಿಗೆ ಬರಲಿದೆ ಎಂದರು.

ಪೀಣ್ಯ ನಿಲ್ದಾಣದಿಂದ ಬಿಎಂಟಿಸಿ ಬಸ್:

ಪೀಣ್ಯದಲ್ಲಿನ ಬಸವೇಶ್ವರ ಬಸ್ ನಿಲ್ದಾಣ ಪುನರ್ ಪ್ರಾರಂಭಿಸುವ ಪ್ರಯತ್ನ ಈ ಬಾರಿ ವಿಫಲವಾಗುವುದಿಲ್ಲ. ಮೊದಲ ಹಂತದಲ್ಲಿ ಈ ನಿಲ್ದಾಣದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳು ಸಂಚಾರ ಆರಂಭಗೊಳ್ಳಲಿದೆ ಎಂದು ಸಚಿವರು ಹೇಳಿದರು.

ನಷ್ಟದ ಪ್ರಮಾಣ ಇಳಿಕೆ

ಕೆಎಸ್‌ಆರ್‌ಟಿಸಿ ಪ್ರಸಕ್ತ ಸಾಲಿನಲ್ಲಿ ₹ 72.57 ಕೋಟಿ ನಷ್ಟದಲ್ಲಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ₹ 4.63 ಕೋಟಿ ನಷ್ಟ ಕಡಿಮೆಯಾಗಿದೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ನಿಗಮ ಈ ವರ್ಷ ₹ 1,637.20 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷ ₹ 1,511.68 ಕೋಟಿ ಆದಾಯ ಗಳಿಸಿತ್ತು. ₹ 77.20 ಕೋಟಿ ನಷ್ಟ ಅನುಭವಿಸಿತ್ತು ಎಂದು ಮಾಹಿತಿ ನೀಡಿದರು.

Post Comments (+)