ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಸಂಕಷ್ಟದಲ್ಲಿ ವಾಯವ್ಯ ಸಾರಿಗೆ

ವೈದ್ಯಕೀಯ ಬಿಲ್, ಸಂಬಳ ಹೆಚ್ಚಳ ಮೊತ್ತ ಪಾವತಿಸಲೂ ಹಣವಿಲ್ಲ
Last Updated 23 ಅಕ್ಟೋಬರ್ 2017, 19:45 IST
ಅಕ್ಷರ ಗಾತ್ರ

ಹುಬ್ಬಳ್ಳಿ: ರಾಜ್ಯ ಸರ್ಕಾರವು, ವಿದ್ಯಾರ್ಥಿಗಳ ಬಸ್‌ ಪಾಸ್‌ ಶುಲ್ಕದ ಬಾಕಿ ನೀಡದ ಕಾರಣ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲುಕೆಎಸ್‌ಆರ್‌ಟಿಸಿ) ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಇದರಿಂದಾಗಿ ನೌಕರರ ರಜೆ ನಗದೀಕರಣ, ಸಂಬಳ ಹೆಚ್ಚಳದ ಬಾಕಿ ಪಾವತಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಬಸ್‌ ಪಾಸ್‌ ವಿತರಿಸಿದ್ದಕ್ಕೆ ಸಂಸ್ಥೆಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿದ್ದ ಮೊತ್ತ ₹ 1,230 ಕೋಟಿ. ಇಲ್ಲಿಯವರೆಗೆ ₹ 621 ಕೋಟಿ ಮಾತ್ರ ಬಿಡುಗಡೆಯಾಗಿದೆ. ಇನ್ನೂ ₹ 609 ಕೋಟಿ ಬಾಕಿ ಉಳಿಸಿಕೊಂಡಿದ್ದರಿಂದ ದೈನಂದಿನ ಕಾರ್ಯಚಟುವಟಿಕೆಗಳಿಗೂ ತೊಂದರೆ ಆಗಿದೆ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಬಯಸದ ಸಂಸ್ಥೆಯ ಅಧಿಕಾರಿಯೊಬ್ಬರು.

ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ, ಬಾಗಲಕೋಟೆ ಹಾಗೂ ಹಾವೇರಿ ಜಿಲ್ಲೆಗಳು ಸಂಸ್ಥೆಯ ವ್ಯಾಪ್ತಿಯಲ್ಲಿ ಬರುತ್ತವೆ. 24 ಸಾವಿರ ಮಂದಿ ನೌಕರರಿದ್ದಾರೆ. ರಜೆ ನಗದೀಕರಣದ ಮೊತ್ತ, ವೈದ್ಯಕೀಯ ಶುಲ್ಕ ಮರುಪಾವತಿ ಸೇರಿದಂತೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳಲು ಅವರು ಆಗಾಗ ಸಂಸ್ಥೆಯ ಕಚೇರಿಗೆ ಅಲೆದಾಡುವಂತಾಗಿದೆ.

‘ವಿದ್ಯಾರ್ಥಿಗಳಿಗೆ ರಿಯಾಯ್ತಿ ದರದಲ್ಲಿ ಬಸ್‌ ಪಾಸ್‌ ವಿತರಿಸಲಾಗುತ್ತದೆ. ಪಾಸ್‌ ದರದ ಶೇ 25ರಷ್ಟನ್ನು ವಿದ್ಯಾರ್ಥಿ ಪಾವತಿಸಿದರೆ ಅಷ್ಟೇ ಮೊತ್ತವನ್ನು ಸಂಸ್ಥೆ ಪಾವತಿಸಬೇಕು. ಇನ್ನುಳಿದ ಶೇ 50ರಷ್ಟು ಮೊತ್ತವನ್ನು ರಾಜ್ಯ ಸರ್ಕಾರ ಭರಿಸಬೇಕು. ಇದು ನಿಯಮ. ಆದರೆ, ನಿಗದಿಯಂತೆ ಸರ್ಕಾರದ ಕಡೆಯಿಂದ ಹಣ ಬಿಡುಗಡೆಯಾಗುತ್ತಿಲ್ಲ’ ಎನ್ನುತ್ತಾರೆ ಅಧಿಕಾರಿಗಳು.

‘ವರ್ಷದಿಂದ ವರ್ಷಕ್ಕೆ ಪಾಸ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಏಳನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಬಸ್‌ ಪಾಸ್‌ ನೀಡಲಾಗುತ್ತಿದೆ. ಈ ವರ್ಷದಿಂದ ಪರಿಶಿಷ್ಟ ಜಾತಿ, ಪಂಗಡದ ಎಲ್ಲ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ಒದಗಿಸಲಾಗಿದೆ. ಇದು ಸಾರಿಗೆ ಸಂಸ್ಥೆಯ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ’ ಎನ್ನುತ್ತಾರೆ ಅವರು.

‘ಜೀವ ವಿಮಾ ನಿಗಮ, ವಾಹನಗಳ ಅಪಘಾತ ಪ್ರಕರಣಗಳಲ್ಲಿ ಪಾವತಿಸಬೇಕಾದ ಪರಿಹಾರ ಮೊತ್ತ, ನೌಕರರ ರಜೆ ನಗದೀಕರಣ, ಸಂಬಳ ಹೆಚ್ಚಳದ ವ್ಯತ್ಯಾಸದ ಹಣ ಸೇರಿದಂತೆ ಸಂಸ್ಥೆಯು ಒಟ್ಟು ₹188.52 ಕೋಟಿ ಪಾವತಿಸಬೇಕಿದೆ’ ಎನ್ನುತ್ತಾರೆ ಅವರು.

ಸಾಲದ ಸುಳಿ: ವಿವಿಧ ಕಾಮಗಾರಿಗಳಿಗಾಗಿ ಸಂಸ್ಥೆಯು ವಿವಿಧ ಹಣಕಾಸು ಸಂಸ್ಥೆಗಳಿಂದ ₹ 121.29 ಕೋಟಿ ಸಾಲ ಪಡೆದಿದೆ.

‘ಹಗಲೂ ರಾತ್ರಿ ಕೆಲಸ ಮಾಡುತ್ತೇವೆ. ಸೌಲಭ್ಯಗಳು ಮಾತ್ರ ಸರಿಯಾಗಿ ದೊರೆಯುತ್ತಿಲ್ಲ. ವೈದ್ಯಕೀಯ ಬಿಲ್‌ಗಳನ್ನು ವರ್ಷಾನುಗಟ್ಟಲೇ ಮರುಪಾವತಿ ಮಾಡಿಲ್ಲ. ಹೀಗಾಗಿ ಸಾಲ ಮಾಡಿಯೇ ಕುಟುಂಬ ನಿರ್ವಹಿಸಬೇಕಾದ ಸ್ಥಿತಿ ಎದುರಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿರ್ವಾಹಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.

**

ಯಾವುದಕ್ಕೆ? ಎಷ್ಟು ಬಾಕಿ? (ಕೋಟಿಗಳಲ್ಲಿ)

ಜೀವ ವಿಮಾ ನಿಗಮ- ₹ 6.65
ನಿವೃತ್ತ ನೌಕರರಿಗೆ ಗ್ರ್ಯಾಚ್ಯುಟಿ- ₹ 28.85
ನೌಕರರ ರಜೆ ನಗದೀಕರಣ- ₹ 23.50
ಸಂಬಳ ಹೆಚ್ಚಳದ ಮೊತ್ತ- ₹ 41.90
ಭವಿಷ್ಯ ನಿಧಿ ಟ್ರಸ್ಟ್‌ಗೆ- ₹ 28.45
ವಾಹನ ಅಪಘಾತ ಪ್ರಕರಣ- ₹ 24.20
ಗುತ್ತಿಗೆದಾರರಿಗೆ- ₹13.14

**

ಬಾಕಿ ಹಣ ಪಾವತಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರವೇ ಬಿಡುಗಡೆಯಾಗುವ ವಿಶ್ವಾಸವಿದೆ.

-ಸದಾನಂದ ಡಂಗನವರ, ಅಧ್ಯಕ್ಷ, ಎನ್‌ಡಬ್ಲುಕೆಎಸ್‌ಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT