ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲೆಗೊಂದು ಬೈಕ್‌ ಖರೀದಿ ಸಾಧ್ಯವೇ?

ಹಿಂಬದಿ ಸೀಟು ಹೊಂದಿರುವ 100 ಸಿ.ಸಿ. ಬೈಕ್‌ ನೋಂದಣಿ ನಿಷೇಧ * ಬಡ, ಮಧ್ಯಮ ವರ್ಗದವರಿಗೆಹೊರೆಯಾದ ಸುತ್ತೋಲೆ
Last Updated 23 ಅಕ್ಟೋಬರ್ 2017, 19:49 IST
ಅಕ್ಷರ ಗಾತ್ರ

ಬೆಂಗಳೂರು: ಹಿಂಬದಿ ಸೀಟು ಹೊಂದಿರುವ 100 ಸಿ.ಸಿ. ಮತ್ತು ಅದಕ್ಕಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ನೋಂದಣಿಯನ್ನು ನಿಷೇಧಿಸಿರುವ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಇಂತಹ ದ್ವಿಚಕ್ರ ವಾಹನದಲ್ಲಿ ಒಬ್ಬರೇ ಸಂಚರಿಸಬೇಕು. ಹಿಂಬದಿಯಲ್ಲಿ ಮತ್ತೊಬ್ಬರು ಕುಳಿತರೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ. ಇದನ್ನು ಪಾಲಿಸಬೇಕಾದರೆ ರಾಜ್ಯದ ಜನ, ತಲೆಗೊಂದು ಬೈಕ್‌ ಖರೀದಿಸಬೇಕಾಗುತ್ತದೆ. ಇದು ಸಾಧ್ಯವೇ’ ಎಂದು ಜನರು ಪ್ರಶ್ನಿಸಿದ್ದಾರೆ.

ಹೆಚ್ಚಲಿದೆ ಮಾಲಿನ್ಯ:

‘ಬಡ ಕುಟುಂಬದಿಂದ ಬಂದ ನಾನು, 100 ಸಿ.ಸಿ ಎಂಜಿನ್‌ನ ಬೈಕ್‌ ಹೊಂದಿದ್ದೇನೆ. ನಿತ್ಯವೂ ನಾನು ಹಾಗೂ ಸಹೋದ್ಯೋಗಿ ಇದರಲ್ಲೇ ಕಚೇರಿಗೆ ಹೋಗುತ್ತೇವೆ. ಇದು ಹಳತಾದ ಬಳಿಕ ನಾನು ಎರಡು ಬೈಕ್‌ ಖರೀದಿಸಬೇಕಾಗುತ್ತದೆ. ಇದರಿಂದ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಲಿದೆ. ಇದು ಪರಿಸರ ಮಾಲಿನ್ಯಕ್ಕೂ ಕಾರಣವಾಗಲಿದೆ’ ಎಂದು ’ರೈಡರ್ಸ್‌ ಆಫ್‌ ಬೆಂಗಳೂರು’ ತಂಡದ ಆರ್‌. ಬೀರೇಂದ್ರ ಟೀಕಿಸಿದರು.

‘ಮಾಲಿನ್ಯ ತಡೆಗಾಗಿ ಕಾರು ಹಾಗೂ ಬೈಕ್‌ ಪೂಲಿಂಗ್‌ ವ್ಯವಸ್ಥೆಯನ್ನು ಸರ್ಕಾರವೇ ಪ್ರಚಾರ ಮಾಡುತ್ತಿದೆ. ಅದಕ್ಕೆ ವಿರುದ್ಧವಾಗಿ ಈಗ ಹೊರಡಿಸಿರುವುದು ಖಂಡನೀಯ’ ಎಂದರು.

ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌, ‘ಇಂತಹ ದ್ವಿಚಕ್ರ ವಾಹನಗಳನ್ನು ಹೆಚ್ಚಾಗಿ ಬಳಸುವುದು ಬಡ ಹಾಗೂ ಮಧ್ಯಮ ವರ್ಗದ ಜನರು. ಇಂತಹ ಹೊಸ ಬೈಕ್‌ಗಳಲ್ಲಿ ಇಬ್ಬರು ಸವಾರಿ ಮಾಡುವುದನ್ನು ನಿಷೇಧ ಮಾಡಲು ಹೊರಟಿರುವ ಸರ್ಕಾರದ ಕ್ರಮ ದಡ್ಡತನದ್ದು’ ಎಂದು ಕಿಡಿಕಾರಿದರು.

‘ಶ್ರೀಮಂತರು ಒಂದೇ ಮನೆಗೆ ಮೂರು– ನಾಲ್ಕು ಕಾರು ಇಟ್ಟುಕೊಂಡಿದ್ದಾರೆ. ಅದಕ್ಕೆ ಕಡಿವಾಣ ಹಾಕಲು ಮನೆಗೊಂದು ಕಾರು ಎಂಬ ನಿಯಮ ಜಾರಿಗೆ ತರಲಿ. ಅದನ್ನು ಮಾಡದ ಸರ್ಕಾರ, ಬಡವರ ಮೇಲೆ ಕಾಕದೃಷ್ಟಿ ಬೀರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂಬದಿ ಸೀಟುಗಳಿದ್ದರೆ ಅಪಘಾತಗಳು ಹೆಚ್ಚಾಗುತ್ತವೆ ಎಂದು ಸಾರಿಗೆ ಅಧಿಕಾರಿಗಳು ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ. ಇದು ಹೇಗೆ ಎಂಬುದನ್ನು ನಿಖರವಾಗಿ ಹೇಳುತ್ತಿಲ್ಲ’ ಎಂದು ’ರೈಡರ್ಸ್‌ ಆಫ್‌ ಬೆಂಗಳೂರು’ ತಂಡದ ಸದಸ್ಯ ಎಸ್‌.ಪ್ರಜ್ವಲ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಇಂತಹ ವಾಹನಗಳ ದರ ಕಡಿಮೆ ಇರುತ್ತದೆ ಹಾಗೂ ಇವುಗಳಲ್ಲಿ ಇಬ್ಬರು ಕುಳಿತು ಸವಾರಿ ಮಾಡಬಹುದು ಎಂಬ ಕಾರಣದಿಂದಾಗಿಯೇ ಬಡವರು ಇವುಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ. ಸಾರಿಗೆ ಇಲಾಖೆ ನಿರ್ಧಾರದಿಂದ ಬಡವರಿಗೆ ತೊಂದರೆ ಆಗಲಿದೆ’ ಎಂದು ಗಾರ್ಮೆಂಟ್ಸ್‌ ಉದ್ಯೋಗಿ ಸತೀಶ್‌ ದೂರಿದರು.

ಹೊಸ ವಾಹನಗಳ ನೋಂದಣಿಗೆ ಮಾತ್ರ ಅನ್ವಯ:

‘ನ್ಯೂ ಇಂಡಿಯಾ ಇನ್ಶೂರೆನ್ಸ್‌ ಕಂಪೆನಿ ವಿರುದ್ಧ ಹೇಮಂತ್‌ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌,  ಹಿಂಬದಿ ಸೀಟು ಹೊಂದಿರುವ ದ್ವಿಚಕ್ರ ವಾಹನದ ಸಾಮರ್ಥ್ಯ 100 ಸಿ.ಸಿ. ಅಥವಾ ಅದಕ್ಕಿಂತ ಕಡಿಮೆ ಇದ್ದರೆ, ನೋಂದಣಿ ನಿಷೇಧಿಸುವಂತೆ ನಿರ್ದೇಶನ ನೀಡಿತ್ತು. ಅದರನ್ವಯ ಆದೇಶ ಹೊರಡಿಸಲಾಗಿದೆ’ ಎಂದು ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೊಸದಾಗಿ ನೋಂದಣಿ ಮಾಡಿಸಿಕೊಳ್ಳುವ ವಾಹನಗಳಿಗೆ ಮಾತ್ರ ಈ ಸುತ್ತೋಲೆ ಅನ್ವಯವಾಗಲಿದೆ. ಈಗಾಗಲೇ ನೋಂದಣಿ ಮಾಡಿಸಿಕೊಂಡಿರುವ ಇಂತಹ ವಾಹನಗಳಲ್ಲಿ ಇಬ್ಬರು ಸಂಚರಿಸಲು ನಿರ್ಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದರು.

100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ಎಂಜಿನ್‌ ಹೊಂದಿರುವ ದ್ವಿಚಕ್ರ ವಾಹನಗಳು: 

ಹೀರೊ ಎಚ್‌.ಎಫ್‌.ಡಿಲಕ್ಸ್‌

ಹೀರೊ ಪ್ಯಾಷನ್‌ ಪ್ರೊ

ಹೀರೊ ಸ್ಪ್ಲೆಂಡರ್‌ ಪ್ರೊ

ಹೀರೊ ಸ್ಪ್ಲೆಂಡರ್‌ ಪ್ಲಸ್‌

ಹೀರೊ ಎಚ್‌.ಎಫ್‌ ಡಾನ್

ಟಿ.ವಿ.ಎಸ್ ಸ್ಟಾರ್ ಸಿಟಿ

ಮಹೀಂದ್ರಾ ಸ್ಯಾಂಟ್ರೊ

ಟಿ.ವಿ.ಎಸ್‌ ಸ್ಪೋರ್ಟ್‌

ಟಿ.ವಿ.ಎಸ್ ಎಕ್ಸೆಲ್‌ 100

ಬಜಾಜ್‌ ಡಿಸ್ಕವರ್ 100

ಬಜಾಜ್‌ ಪ್ಲಾಟಿನ್ 100

ಬಜಾಜ್‌ ಸಿ.ಟಿ.100

ಕಂಪೆನಿಗಳಿಗೆ ಕಡಿವಾಣ ಸಾಧ್ಯವಿಲ್ಲ

‘ದೇಶದಲ್ಲಿ ಕರ್ನಾಟಕವೇ ಮೊದಲ ಬಾರಿಗೆ ಇಂಥ ಆದೇಶ ಹೊರಡಿಸಿದೆ. ದ್ವಿಚಕ್ರ ವಾಹನ ತಯಾರಿಸುವ ಕಂಪೆನಿಗಳು ಹೊರರಾಜ್ಯಗಳಲ್ಲೇ ಹೆಚ್ಚು. ಒಂದೇ ಸೀಟಿನ ವಾಹನ ತಯಾರಿಸುವಂತೆ ಅವುಗಳಿಗೆ ಹೇಳಲು ಸಾಧ್ಯವಿಲ್ಲ. ಹೀಗಾಗಿ ನೋಂದಣಿ ನಿಷೇಧಿಸಿದ್ದೇವೆ’ ಎಂದು ದಯಾನಂದ್‌ ಹೇಳಿದರು.

ಕೋಟ್ಯಂತರ ರೂಪಾಯಿ ನಷ್ಟ

‘ದೀಪಾವಳಿ ಹಬ್ಬದಂದು ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಈ ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಇವುಗಳಲ್ಲಿ ಕೆಲವು ವಾಹನಗಳ ನೋಂದಣಿ ಪ್ರಕ್ರಿಯೆ ಬಾಕಿ ಇದೆ. ಈಗ ಏಕಾಏಕಿ ನೋಂದಣಿ ನಿಷೇಧಿಸಿರುವುದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಲಿದೆ’ ಎಂದು ಪೀಣ್ಯದ ದ್ವಿಚಕ್ರ ವಾಹನ ಮಾರಾಟ ಮಳಿಗೆಯ ಮಾಲೀಕರೊಬ್ಬರು ತಿಳಿಸಿದರು.

ಅಂಕಿ ಅಂಶ

1.34 ಕೋಟಿ

2017ರ ಆಗಸ್ಟ್‌ವರೆಗೆ ರಾಜ್ಯದಲ್ಲಿ ನೋಂದಣಿ ಆಗಿದ್ದ ದ್ವಿಚಕ್ರ ವಾಹನಗಳು

49 ಲಕ್ಷ

ಬೆಂಗಳೂರಿನಲ್ಲಿ ನೋಂದಣಿ ಆದ ದ್ವಿಚಕ್ರ ವಾಹನಗಳು

45 ಲಕ್ಷ

ರಾಜ್ಯದಲ್ಲಿ 100 ಸಿ.ಸಿ ಎಂಜಿನ್‌ ಹೊಂದಿರುವ ದ್ವಿಚಕ್ರ ವಾಹನಗಳು

20 ಲಕ್ಷ

ಬೆಂಗಳೂರಿನಲ್ಲಿ 100 ಸಿ.ಸಿ ಎಂಜಿನ್‌ ಹೊಂದಿರುವ ದ್ವಿಚಕ್ರ ವಾಹನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT