ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕೂಟ ವ್ಯವಸ್ಥೆ ಮರೆತ ಪ್ರಧಾನಿ: ಸಿದ್ದರಾಮಯ್ಯ

ಕೇಂದ್ರದ ಅನುದಾನ ಪಡೆಯುವುದು ರಾಜ್ಯಗಳ ಹಕ್ಕು, ಅದು ಭಿಕ್ಷೆಯಲ್ಲ
Last Updated 23 ಅಕ್ಟೋಬರ್ 2017, 19:53 IST
ಅಕ್ಷರ ಗಾತ್ರ

ಧಾರವಾಡ: ‘ಕೇಂದ್ರ ಸರ್ಕಾರವನ್ನು ವಿರೋಧಿಸುವ ರಾಜ್ಯಗಳಿಗೆ ಬಿಡಿಗಾಸೂ ಕೊಡುವುದಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ, ನಾವು ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದೇವೆ ಎಂಬುದನ್ನು ಮರೆತಂತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ಕುಟುಕಿದರು.

ಬೆಳಗಾವಿ ವಿಭಾಗ ಮಟ್ಟದ ಸೌಲಭ್ಯ ವಿತರಣಾ ಸಮಾವೇಶ ಹಾಗೂ ಮಾಹಿತಿ ಉತ್ಸವದಲ್ಲಿ ಮಾತನಾಡಿದ ಅವರು, ಕೇಂದ್ರದ ಅನುದಾನ ಪಡೆಯುವುದು ರಾಜ್ಯಗಳ ಹಕ್ಕೇ ಹೊರತು, ಅದು ಕೇಂದ್ರ ನೀಡುವ ಭಿಕ್ಷೆಯಲ್ಲ ಎಂದು ತಿರುಗೇಟು ನೀಡಿದರು.

‘ಇಂಥ ಬಾಲಿಶ ಹೇಳಿಕೆ ನೀಡಿದ ಪ್ರಧಾನಿ, ಒಮ್ಮೆ ಸಂವಿಧಾನವನ್ನು ಓದಬೇಕು. ರಾಜ್ಯದ ಜನರು ಕಟ್ಟುವ ತೆರಿಗೆ ಹಣವನ್ನೇ ಕೇಂದ್ರ ಸರ್ಕಾರವು ಅನುದಾನ ರೂಪದಲ್ಲಿ ನೀಡುತ್ತದೆಯೇ ಹೊರತು, ತನ್ನ ಖಜಾನೆಯಿಂದಲ್ಲ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಅಗತ್ಯವಾದುದನ್ನು ಪಡೆಯುವುದು ನಮ್ಮ ಹಕ್ಕು’ ಎಂದು ಹೇಳಿದರು.

‘ಮುಸ್ಲಿಮರು, ಕ್ರೈಸ್ತರು ಹಾಗೂ ಇತರ ಅಲ್ಪಸಂಖ್ಯಾತರನ್ನು ಹೊರಗಿಟ್ಟು ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಮಾಡಲು ಹೊರಟಿರುವ ಮೋದಿ ನಡೆ ಹಾಸ್ಯಾಸ್ಪದ. ಚುನಾವಣೆಗೆ ಮೊದಲು ‘ಅಚ್ಛೇ ದಿನ್‌’ ಬರುತ್ತದೆ ಎಂದಿದ್ದರು. ಆದರೆ, ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿದ್ದರು. ಆದರೆ, ಈವರೆಗೆ ಯಾರೊಬ್ಬರ ಖಾತೆಗೂ 15 ರೂಪಾಯಿಯೂ ಜಮೆ ಆಗಿಲ್ಲ. ಅಚ್ಛೇ ದಿನ್‌ ಬಂದಿರುವುದು ಅಂಬಾನಿ, ಅದಾನಿ, ರಾಮದೇವ್‌ ಹಾಗೂ ಜಯ್‌ ಷಾ ಅವರಿಗೇ ಹೊರತು, ಈ ದೇಶದ ಬಡವರಿಗೆ, ಮಹಿಳೆಯರಿಗೆ, ರೈತರಿಗೆ ಹಾಗೂ ನಿರುದ್ಯೋಗಿ ಯುವಕರಿಗಲ್ಲ’ ಎಂದು ಜರಿದರು.

ನಿಜವಾದ ಮನಮೋಹನ್‌ ಮಾತು

‘ನೋಟು ರದ್ದತಿಯಿಂದ ಜಿಡಿಪಿ ಕುಸಿಯುತ್ತದೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದು ನಿಜ ಆಗಿದೆ. ಅಭಿವೃದ್ಧಿಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ, ದೇಶದಲ್ಲೇ ಮುಂಚೂಣಿಯಲ್ಲಿದೆ. ನಮ್ಮ ರಾಜ್ಯ ಕೈಗೊಂಡ ಹಲವು ಅಭಿವೃದ್ಧಿಪರ ಯೋಜನೆಗಳನ್ನು ಅವರು ನಕಲು ಮಾಡಿದ್ದಾರೆ’ ಎಂದು ಆರೋಪಿಸಿದರು.

ಷಾ ಆಟ ನಡೆಯದು:

‘ಮೋದಿ, ಅಮಿತ್‌ ಷಾ ರಾಜ್ಯಕ್ಕೆ ನೂರು ಬಾರಿ ಬರಲಿ. ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂಥವರು ಹುಟ್ಟಿದ ಈ ನಾಡಿನಲ್ಲಿ ಅವರ ಮ್ಯಾಜಿಕ್ ನಡೆಯುವುದಿಲ್ಲ. ಕಳೆದ ಚುನಾವಣೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಈಡೇರಿಸಿದ್ದೇವೆ. ಹೇಳಿದ್ದನ್ನು ಸಾಧಿಸಿದ ನಮಗೆ ಜನರ ಆಶೀರ್ವಾದ ಇದೆ’ ಎಂದರು.

ಅಳುಕು

ಕಾಂಗ್ರೆಸ್‌ ಪಕ್ಷ ನೀಡಿದ್ದ 165 ಭರವಸೆಗಳ ಪೈಕಿ 155 ಭರವಸೆಗಳನ್ನು ಸರ್ಕಾರ ಈಡೇರಿಸಿದೆ. ಅದಲ್ಲದೇ ಭರವಸೆ ನೀಡದ ಹಲವು ಯೋಜನೆಗಳನ್ನೂ ಜಾರಿಗೆ ತಂದಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಕೊಟ್ಟಿದ್ದ ಶೇ 20ರಷ್ಟು ಭರವಸೆಗಳನ್ನೂ ಈಡೇರಿಸಿಲ್ಲ. ಸರ್ಕಾರದ ವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷಗಳ ನಾಯಕರಿಗೂ ಆಹ್ವಾನವಿತ್ತು. ಆದರೆ, ಯಾವುದೇ ಸಾಧನೆ ಮಾಡದ ಅವರು ಅಳುಕಿನಿಂದಲೇ ಗೈರಾಗಿದ್ದಾರೆ’ ಎಂದು ಸಿದ್ದರಾಮಯ್ಯ ಟೀಕಿಸಿದರು.

ಉ.ಕ.ದಲ್ಲಿ ಸ್ಪರ್ಧೆ ಇಲ್ಲ: ಸಿ.ಎಂ

ಹುಬ್ಬಳ್ಳಿ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕದ ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಸ್ಪಷ್ಟಪಡಿಸಿದರು.

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದಿಂದ ಸ್ಪರ್ಧಿಸುತ್ತೇನೆ ಎಂಬುದು ಮಾಧ್ಯಮಗಳ ಸೃಷ್ಟಿ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT