ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವರ್ಗ 2–ಎಗೆ ಪಂಚಮಸಾಲಿ ಸಮುದಾಯ ಸೇರಿಸಲು ಕ್ರಮ: ಸಿದ್ದರಾಮಯ್ಯ

ಕಿತ್ತೂರು ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ
Last Updated 23 ಅಕ್ಟೋಬರ್ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ –2 ಎ ಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಧಾನಸೌಧದ ಮುಂಭಾಗ ಸೋಮವಾರ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 80 ಲಕ್ಷ ಜನಸಂಖ್ಯೆ ಹೊಂದಿರುವ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ –2 ಎ ಗೆ ಸೇರಿಸಬೇಕು’ ಎಂದು ಬಿಜೆಪಿ ಮುಖಂಡ ಮುರುಗೇಶ ನಿರಾಣಿ ಮತ್ತು ಶಾಸಕ ವಿಜಯಾನಂದ ಕಾಶಪ್ಪನವರ್ ಮನವಿಗೆ ಮುಖ್ಯಮಂತ್ರಿ ಸ್ಪಂದಿಸಿದರು.

‘ಯಾವುದೇ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕಾದರೆ ಅದಕ್ಕೆ ನಿರ್ದಿಷ್ಟ ಮಾನದಂಡಗಳಿವೆ. ನಿಮ್ಮ ಮನವಿಯನ್ನು  ಸೂಕ್ತ ಶಿಫಾರಸುಗಳೊಂದಿಗೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕಳುಹಿಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದರು.

18ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿಯನ್ನು ಈ ಹಿಂದೆಯೇ ಸರ್ಕಾರದಿಂದ ಆಚರಿಸಬೇಕಿತ್ತು. ಆದರೆ, ಯಾವ ಸರ್ಕಾರಗಳೂ ಆ ಕೆಲಸ ಮಾಡಲಿಲ್ಲ. ಆ ಭಾಗದ ಜನರ ಒತ್ತಾಯದ ಮೇರೆಗೆ ನಮ್ಮ ಸರ್ಕಾರ ತೀರ್ಮಾನ ಕೈಗೊಂಡಿದೆ. ಬೆಂಗಳೂರು ಸೇರಿ ಎಲ್ಲ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಇದೇ ಮೊದಲ ಬಾರಿಗೆ ರಾಣಿ ಚೆನ್ನಮ್ಮ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಇತಿಹಾಸ ಬದಲಿಸಬೇಕು
‘ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿದ್ದು 1857 ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಚೆನ್ನಮ್ಮ ಅವರು ಥ್ಯಾಕರೆಯನ್ನು ಕೊಂದಿದ್ದು 1824 ರಲ್ಲಿ. ಆಗಿನಿಂದಲೇ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗಿತ್ತು. ಇಂಗ್ಲಿಷರು ಬರೆದ ಇತಿಹಾಸದಲ್ಲಿ ಈ ವಿಷಯ ಇಲ್ಲ. ಇದನ್ನು ಬದಲಿಸಲು ನಮ್ಮ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ' ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಬೆಳಗಾವಿಯ ಕಿತ್ತೂರು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ₹5 ಕೋಟಿ,ಸಂಶೋಧನೆ ಮತ್ತು ಅಧ್ಯಯನ ಚಟುವಟಿಕೆಗಳಿಗೆ ಪ್ರತಿ ವರ್ಷ ₹ 2 ಕೋಟಿ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಪಂಚಮಸಾಲಿ ಗುರುಪೀಠದ ಜಯ ಮೃತ್ಯುಂಜಯ ಸ್ವಾಮೀಜಿ ಮಂಡಿಸಿದ ಬೇಡಿಕೆಗಳು:
* ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಸಮಾಧಿಗಳನ್ನು ರಾಷ್ಟ್ರೀಯ ಸ್ಮಾರಕವಾಗಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು
* ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚೆನ್ನಮ್ಮ ಹೆಸರು ನಾಮಕರಣ ಮಾಡಬೇಕು
* ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಖಡ್ಗಗಳು ಇಂಗ್ಲೆಂಡ್‌ನಲ್ಲಿ ಇದ್ದು ಅವುಗಳನ್ನು ರಾಜ್ಯಕ್ಕೆ ವಾಪಸ್ ತರಬೇಕು
* ಧಾರವಾಡದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಸರ್. ಸಿದ್ದಪ್ಪ ಕಾಂಬಳೆ ಹೆಸರು ನಾಮಕರಣ ಮಾಡಬೇಕು

ಚೆನ್ನಮ್ಮ ಖಡ್ಗ ವಾಪಸ್ ತರಲು ಕ್ರಮ

ಇಂಗ್ಲೆಂಡ್‌ನಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಖಡ್ಗವನ್ನು ರಾಜ್ಯಕ್ಕೆ ವಾಪಸ್ ತರಲು ಕ್ರಮಕೈಗೊಳ್ಳಬೇಕು ಎಂದು ವಿದೇಶಾಂಗ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.

ಈ ಸಂಬಂಧ ಕೇಂದ್ರ ಸರ್ಕಾರವೂ ಸೂಕ್ತವಾಗಿ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಮುಖಂಡರು ಕೇಂದ್ರದ ಮೇಲೆ ಒತ್ತಡ ತರಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT