ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಬಜೆಟ್‌: ಮೊದಲಾರ್ಧದಲ್ಲಿ ಗಳಿಸಿದ್ದು ಹೆಚ್ಚು ಬಳಸಿದ್ದು ಕಡಿಮೆ

ಬಿಬಿಎಂಪಿ ಬಜೆಟ್‌ l ಮೂಲಸೌಕರ್ಯಕ್ಕೆ ವಿನಿಯೋಗಿಸಿದ್ದು ಶೇ 26ರಷ್ಟು ಅನುದಾನ ಮಾತ್ರ l ತೆರಿಗೆ ಸಂಗ್ರಹದಲ್ಲಿ ಶೇ 66ರಷ್ಟು ಗುರಿ ಸಾಧನೆ
Last Updated 23 ಅಕ್ಟೋಬರ್ 2017, 20:03 IST
ಅಕ್ಷರ ಗಾತ್ರ

ಬೆಂಗಳೂರು: 2017–18ನೇ ಸಾಲಿನ ಮೊದಲಾರ್ಧದಲ್ಲಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ಮಾಡಿರುವ ಬಿಬಿಎಂಪಿ, ಮೂಲಸೌಕರ್ಯ ಅಭಿವೃದ್ಧಿಯ ವಿಚಾರದಲ್ಲಿ ಹಿಂದುಳಿದಿದೆ.

ಪಾಲಿಕೆ ಈ ಸಾಲಿನಲ್ಲಿ ₹ 9,243 ಕೋಟಿಯ ಬಜೆಟ್‌ ಮಂಡಿಸಿತ್ತು. ಜನಾಗ್ರಹ ಸಂಸ್ಥೆಯು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ನೋಂದಣಿ ಪುಸ್ತಕ, ಟೆಂಡರ್‌ ಮಾಹಿತಿಗಳು ಹಾಗೂ ಕಾಮಗಾರಿ ಸಂಖ್ಯೆಗಳ ( ಜಾಬ್‌ ಕೋಡ್‌) ವಿವರಗಳನ್ನು ಆಧರಿಸಿ 2017–18ನೇ ಸಾಲಿನ ಬಜೆಟ್‌ ಅನುದಾನದ ಬಳಕೆ ಕುರಿತು ವಿಶ್ಲೇಷಣೆ ನಡೆಸಿದೆ. ಅದರ ಪ್ರಕಾರ, ಬಿಬಿಎಂಪಿ ತೆರಿಗೆ ಸಂಗ್ರಹದಲ್ಲಿ ಆರು ತಿಂಗಳಲ್ಲೇ ಶೇ 66ರಷ್ಟು ಗುರಿ ಸಾಧನೆ ಮಾಡಿದೆ. ಆದರೆ, ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಂಚಿಕೆಯಾದ ಅನುದಾನದಲ್ಲಿ ಕೇವಲ ಶೇ 26ರಷ್ಟು ಮೊತ್ತವನ್ನು ವಿನಿಯೋಗಿಸಿದೆ. 

ಪಾಲಿಕೆಯು ವಿವಿಧ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ₹ 6,088 ಕೋಟಿ, ನಿರ್ವಹಣೆ ಹಾಗೂ ಕಂದಾಯ ಕಾರ್ಯಗಳಿಗಾಗಿ ₹ 1,700 ಕೋಟಿ ಹಂಚಿಕೆ ಮಾಡಿತ್ತು. ಇದರಲ್ಲಿ ಈ ವರ್ಷದ ಸೆಪ್ಟೆಂಬರ್‌ ಅಂತ್ಯದವರೆಗೆ ₹ 2,030 ಕೋಟಿ ವೆಚ್ಚ ಮಾಡಲಾಗಿದೆ. ಇದರಲ್ಲಿ ₹ 1,853 ಕೋಟಿ ಬಾಕಿ ಬಿಲ್‌ ಪಾವತಿಗೆ ಬಳಸಲಾಗಿದೆ. ಈ ವರ್ಷದ ಬಜೆಟ್‌ನ ಕಾರ್ಯಕ್ರಮಗಳಿಗೆ ₹ 177 ಕೋಟಿ ಮಾತ್ರ ವಿನಿಯೋಗಿಸಲಾಗಿದೆ.

‘ಈ ವರ್ಷದ ಗುರಿ ಸಾಧಿಸಲು ಇನ್ನುಳಿದ 6 ತಿಂಗಳುಗಳಲ್ಲಿ ₹ 5,758 ಕೋಟಿ ಹಣವನ್ನು ಖರ್ಚು ಮಾಡಬೇಕಿದೆ. ಈ ವರ್ಷದ ಕಾಮಗಾರಿಗಳ ಅನುಷ್ಠಾನಕ್ಕೆ ಬಿಬಿಎಂಪಿ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು. ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಆಗ ಮಾತ್ರ ಬಜೆಟ್‌ ಆಶಯ ಈಡೇರಲು ಸಾಧ್ಯ’ ಎನ್ನುತ್ತಾರೆ ಜನಾಗ್ರಹ ಸಂಸ್ಥೆಯ ಸಾರ್ವಜನಿಕ ಸಹಭಾಗಿತ್ವ ವಿಭಾಗದ ಮುಖ್ಯಸ್ಥೆ ಸಪ್ನಾ ಕರೀಂ.

ಬಾಕಿ ಬಿಲ್‌ ಪಾವತಿಯಲ್ಲಿ ದಾಖಲೆ: ಬಜೆಟ್‌ನ ಒಟ್ಟು ವೆಚ್ಚದಲ್ಲಿ ಶೇ 91ರಷ್ಟು ಬಾಕಿ ಬಿಲ್‌ ಪಾವತಿ ಹಾಗೂ ಮುಂದುವರಿದ ಕಾಮಗಾರಿಗಳಿಗೆ ವಿನಿಯೋಗವಾಗಿದೆ. ಕಳೆದ ಐದು ವರ್ಷಗಳಲ್ಲಿ ಬಿಬಿಎಂಪಿ ಯಾವತ್ತೂ ಇಷ್ಟೊಂದು ಪ್ರಮಾಣದಲ್ಲಿ ಬಾಕಿ ಬಿಲ್‌ ಪಾವತಿಸಿರಲಿಲ್ಲ.

ಕಾಮಗಾರಿ ಸಂಖ್ಯೆ ಇಳಿಕೆ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಡಿಮೆ ಕಾಮಗಾರಿ ಸಂಖ್ಯೆ ಸೃಷ್ಟಿಸಲಾಗಿದೆ. ಸೆಪ್ಟೆಂಬರ್‌ 30ರವರೆಗೆ ₹ 1,206 ಕೋಟಿ ವೆಚ್ಚದ ಕಾಮಗಾರಿಗಳಿಗಾಗಿ ಒಟ್ಟು 2,515 ಕಾಮಗಾರಿ ಸಂಖ್ಯೆಗಳನ್ನು ಸೃಷ್ಟಿಸಲಾಗಿದೆ. ಇವುಗಳಲ್ಲಿ ಹೆಚ್ಚಿನವು ಈಗಿರುವ ರಸ್ತೆಗಳ ಡಾಂಬರೀಕರಣಕ್ಕೆ ಸಂಬಂಧಿಸಿದವು. ಕಳೆದ ವರ್ಷ ಇದೇ ಅವಧಿಯಲ್ಲಿ ₹ 2,409 ಕೋಟಿ ವೆಚ್ಚದ ಕಾಮಗಾರಿಗಳಿಗಾಗಿ ಒಟ್ಟು 3,269 ಕಾಮಗಾರಿ ಸಂಖ್ಯೆಗಳನ್ನು ಸೃಷ್ಟಿಸಲಾಗಿತ್ತು.

ದಾಖಲೆ ಆದಾಯ: ಅಕ್ಟೋಬರ್‌ 11ರವರೆಗೆ ₹ 1,723 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಕಳೆದ ಐದು ವರ್ಷಗಳಲ್ಲೇ ಇದು ದಾಖಲೆ. ಮೊದಲ ತ್ರೈಮಾಸಿಕದಲ್ಲಿ ಆಸ್ತಿ ತೆರಿಗೆ ಸಂಗ್ರಹ ಪ್ರಮಾಣ ಹೆಚ್ಚು ಇತ್ತು. ಈ ಅವಧಿಯಲ್ಲಿ ₹ 1,425 ಕೋಟಿ ತೆರಿಗೆ ಸಂಗ್ರಹವಾಗಿತ್ತು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪಾಲಿಕೆಗೆ ಅನುದಾನದ ರೂಪದಲ್ಲಿ ಒಟ್ಟು ₹4,250 ಕೋಟಿ ಬರಬೇಕಾಗಿದ್ದು, ಇದರಲ್ಲಿ ₹729 ಕೋಟಿ (ಶೇ 17ರಷ್ಟು) ಬಿಡುಗಡೆ ಆಗಿದೆ. 

‘ಪಾಲಿಕೆಯು ಕಳೆದ ವರ್ಷಕ್ಕಿಂತ ₹ 1,000 ಕೋಟಿ ಹೆಚ್ಚು ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಈ ಬಾರಿ ನಿಗದಿಪಡಿಸಿತ್ತು. ಆದರೂ ಶೇ 66ರಷ್ಟು ತೆರಿಗೆಯನ್ನು ಮೊದಲಾರ್ಧದಲ್ಲೇ ಸಂಗ್ರಹಿಸಿದ್ದು ಆಶಾದಾಯಕ ಬೆಳವಣಿಗೆ. ಆಸ್ತಿಗಳನ್ನು ಜಿಐಎಸ್‌ ವ್ಯವಸ್ಥೆಗೆ ಜೊಡಿಸುವ ಬಗ್ಗೆ ಇಸ್ರೊ ಜೊತೆ ಒಪ್ಪಂದ ಮಾಡಿಕೊಂಡಿದ್ದ ಪಾಲಿಕೆ ಈ ವಿಚಾರದಲ್ಲಿ ಎಷ್ಟು ಪ್ರಗತಿ ಸಾಧಿಸಿದೆ ಎಂಬ ನಿಖರ ವಿವರ ಲಭ್ಯ ಇಲ್ಲ. ಇದು ಅನುಷ್ಠಾನಗೊಂಡಿದ್ದೇ ಆದರೆ ಈ ವರ್ಷ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿದ ಸಾಧನೆ ಮಾಡುವುದು ಕಷ್ಟವೇನಲ್ಲ’ ಎಂದು ಸಪ್ನಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT