ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃಪೂರ್ಣ ಯೋಜನೆಗೆ ಸಿಗದ ಸ್ಪಂದನೆ

Last Updated 24 ಅಕ್ಟೋಬರ್ 2017, 4:57 IST
ಅಕ್ಷರ ಗಾತ್ರ

ಬಾಗಲಕೋಟೆ: ಪೂರ್ವಸಿದ್ಧತೆ ಇಲ್ಲದೇ ತರಾತುರಿಯಿಂದ ಅನುಷ್ಠಾನಗೊಳಿಸಿದ ಪರಿಣಾಮ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಾತೃ ಪೂರ್ಣ ಯೋಜನೆ ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿ ವಿಫಲವಾಗಿದೆ.

ಗರ್ಭಿಣಿ ಹಾಗೂ ಬಾಣಂತಿಯರಿಗೆ ಪೌಷ್ಟಿಕಾಂಶಯುಕ್ತ ಬಿಸಿಯೂಟ ಒದಗಿಸುವ ಈ ಯೋಜನೆಗೆ ಅಕ್ಟೋಬರ್ 2 ರಂದು ಚಾಲನೆ ನೀಡಲಾಗಿದೆ. ಆದರೆ ಫಲಾನುಭವಿಗಳು ಮಾತ್ರ ಮಧ್ಯಾಹ್ನ ಊಟ ಮಾಡಲು ಅಂಗನವಾಡಿಗಳತ್ತ ಮುಖ ಮಾಡುತ್ತಿಲ್ಲ.

ಯೋಜನೆ ಅನುಷ್ಠಾನಕ್ಕೆ ಅಗತ್ಯ ಸಿಬ್ಬಂದಿ, ಕೊಠಡಿ ಸೇರಿದಂತೆ ಇತರೆ ಮೂಲಸೌಕರ್ಯದ ಕೊರತೆ ಕಾಡುತ್ತಿದೆ. ಈ ಹಿಂದೆ ಪ್ರತಿ ತಿಂಗಳು ಗರ್ಭಿಣಿ, ಬಾಣಂತಿಯರಿಗೆ ಅಕ್ಕಿ, ಬೆಲ್ಲ, ಹೆಸರುಕಾಳು, ಬೇಳೆಕಾಳು ಕೊಡಲಾಗುತ್ತಿತ್ತು. ಅದನ್ನೇ ಮುಂದುವರಿಸುವಂತೆ ಬಹುತೇಕ ಫಲಾನುಭವಿಗಳು ಒತ್ತಾಯಿಸುತ್ತಾರೆ.

ಜಿಲ್ಲೆಯಲ್ಲಿ 2221 ಅಂಗನವಾಡಿ ಕೇಂದ್ರಗಳಿವೆ. 20,201 ಮಂದಿ ಗರ್ಭಿಣಿಯರು, 18,226 ಬಾಣಂತಿಯರು ಸೇರಿದಂತೆ ಒಟ್ಟು 38,427 ಮಂದಿ ಯೋಜನೆಯಡಿ ಸೌಲಭ್ಯ ಪಡೆಯಲಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ. ಆದರೆ ಪೂರ್ವ ತಯಾರಿ ಇಲ್ಲದೇ ಸರ್ಕಾರ ಏಕಾಏಕಿ ಯೋಜನೆ ಜಾರಿಗೊಳಿಸಿರುವುದು ಸರಿಯಲ್ಲ ಎಂಬುದು ಸಾರ್ವಜನಿಕರು ವಾದ.

ಜಿಲ್ಲೆಯ ಬಹುತೇಕ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡ, ಸಮುದಾಯ ಭವನ, ಶಾಲಾ ಕಟ್ಟಡ ಹಾಗೂ ದೇವಸ್ಥಾನಗಳಲ್ಲಿ ನಡೆಯುತ್ತಿವೆ. ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ, ಕುಳಿತುಕೊಳ್ಳಲು ಸ್ಥಳಾವಕಾಶ, ಶೌಚಾಲಯದ ಕೊರತೆ ಇದೆ. ಇದರಿಂದ ಮಕ್ಕಳಷ್ಟೇ ಅಲ್ಲದೇ ಗರ್ಭಿಣಿ ಹಾಗೂ ಬಾಣಂತಿಯರು ಸಹ ತೊಂದರೆ ಅನುಭವಿಸುವಂತಾಗಿದೆ.

ಈ ಹಿಂದೆ ಅಂಗನವಾಡಿ ಸಿಬ್ಬಂದಿ ಮಕ್ಕಳಿಗೆ ಆಹಾರ ತಯಾರಿಸಿ ನಂತರ ಮಕ್ಕಳ ಪ್ರಾಥಮಿಕ ಕಲಿಕೆಗೆ ಒಂದಿಷ್ಟು ಸಮಯ ವ್ಯಯಿಸುತ್ತಿದ್ದೇವು. ಈ ಯೋಜನೆ ಆರಂಭವಾದಗಿನಿಂದ ನಮ್ಮ ಮೇಲೆ ಒತ್ತಡ ಹೆಚ್ಚಾಗಿದೆ. ಇದರಿಂದ ಬಹಳಷ್ಟು ತೊಂದರೆಯಾಗಿದೆ. ಮಕ್ಕಳಿಗೆ ಪಾಠ ಹೇಳಿಕೊಡಲು ಆಗುತ್ತಿಲ್ಲ ಎಂದು ಹೆಸರು ಹೇಳಲಿಚ್ಚಿಸಿದ ಅಂಗನವಾಡಿ ಶಿಕ್ಷಕಿಯೊಬ್ಬರು ಅಳಲು ತೋಡಿಕೊಳ್ಳುತ್ತಾರೆ. ‘ಯೋಜನೆಯಡಿ ಕಾರ್ಯಕರ್ತೆಯರಿಗೆ ₹ 500 ಹಾಗೂ ಸಹಾಯಕಿಯರಿಗೆ ₹ 250 ಪ್ರೋತ್ಸಾಹ ಧನ ನೀಡಿ ಇಲಾಖೆ ಕೈತೊಳೆದುಕೊಂಡಿದೆ. ಆದರೆ ಅಗತ್ಯ ಸವಲತ್ತು ಮಾತ್ರ ಕಲ್ಪಿಸಿಲ್ಲ’ ಎಂದು ಆರೋಪಿಸಿದರು.

‘ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ ಹಾಗೂ ಬಾಣಂತಿಯರನ್ನು ಮನೆಯಿಂದ ಹೊರಗಡೆ ಕಳುಹಿಸುವುದಿಲ್ಲ. ಕೆಲವು ಕಡೆ ಮನೆಯಿಂದ ಅಂಗನವಾಡಿ ಕೇಂದ್ರಗಳು ತುಂಬಾ ದೂರ ಇರುತ್ತವೆ. ಹಾಗಾಗಿ ನಡೆದುಕೊಂಡು ಹೋಗುವುದು ಕಷ್ಟಸಾಧ್ಯ. ಸರ್ಕಾರ ಮೊದಲಿನಂತೆ ತಿಂಗಳ ಪ್ಯಾಕೇಜ್‌ ಅನ್ನು ನೀಡಿದರೆ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳುತ್ತೇವೆ’ ಎಂದು ಗರ್ಭಿಣಿಯರಾದ ನವನಗರದ ವಿಜಯಲಕ್ಷ್ಮಿ ಹಾಗೂ ಶಿಲ್ಪಾ ಒತ್ತಾಯಿಸಿದರು.

ಮಹಾಂತೇಶ ಮಸಾಲಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT