ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಕತಿ ಸಮಗ್ರ ಅಭಿವೃದ್ಧಿಗೆ ಕ್ರಮ’

Last Updated 24 ಅಕ್ಟೋಬರ್ 2017, 5:31 IST
ಅಕ್ಷರ ಗಾತ್ರ

ಬೆಳಗಾವಿ: ವೀರ ರಾಣಿ ಕಿತ್ತೂರು ಚನ್ನಮ್ಮನ ತವರು ಕಾಕತಿ ಗ್ರಾಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು. ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ತಾಲ್ಲೂಕಿನ ಕಾಕತಿಯಲ್ಲಿ ಸೋಮವಾರ ಆಯೋಜಿಸಿದ್ದ ಚನ್ನಮ್ಮನ ಕಿತ್ತೂರು ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಚನ್ನಮ್ಮ ಕರ್ನಾಟಕಕ್ಕೆ ಮಾತ್ರ ಸೀಮಿತವಾದ ಧೀರೆಯಲ್ಲ. ಇಡೀ ಜಗತ್ತಿಗೆ ಮಾದರಿಯಾದ ಹೆಣ್ಣು ಮಗಳು. ಆಕೆಯ ತವರಾದ ಕಾಕತಿಯಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಮೂರು ವರ್ಷದಿಂದ ಬರಗಾಲ ಪರಿಸ್ಥಿತಿ ಇದ್ದುದ್ದರಿಂದ ಇದಕ್ಕೆ ಗಮನ ಕೊಡಲಾಗಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗಿದ್ದು, ಒಳ್ಳೆಯ ವಾತಾವರಣವಿದೆ. ಇಲ್ಲಿಗೆ ಏನೇನು ಬೇಕೋ ಅದನ್ನೆಲ್ಲಾ ಪ್ರಸ್ತಾವ ಸಿದ್ಧಪಡಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಗುವುದು. ಇಂತಹ ಕಾರ್ಯಕ್ಕೆ ಅವರ ಬೆಂಬಲ ಸದಾ ಇರುತ್ತದೆ’ ಎಂದು ಹೇಳಿದರು.

‘ಮುಂದಿನ ವರ್ಷಗಳಲ್ಲಿ ಈ ಉತ್ಸವವನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸಲಾಗುವುದು. ಇದಕ್ಕೆ ಸಾರ್ವಜನಿಕರ ಬೆಂಬಲವೂ ಅಗತ್ಯವಿದೆ. ಸ್ಥಳೀಯ ಶಾಸಕರ (ಸತೀಶ ಜಾರಕಿಹೊಳಿ) ಸಹಕಾರದೊಂದಿಗೆ ಇಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಕಾಕತಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳನ್ನು ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಸೇರಿಸಿದ್ದು ಸರಿಯಲ್ಲ. ಇದರಿಂದ ಇಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ತಪ್ಪನ್ನು ಸರಿಪಡಿಸಬೇಕಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೇ ಈ ಹಳ್ಳಿಗಳನ್ನು ತರಬೇಕಿದೆ. ಆಗ ಇಲ್ಲಿ ಪ್ರಗತಿ ಸಾಧ್ಯವಾಗುತ್ತದೆ’ ಎಂದು ಮಾರ್ಮಿಕವಾಗಿ ಹೇಳಿದರು.

ಖಡ್ಗವನ್ನು ಕಾಕತಿಗೆ ತನ್ನಿ: ಜಿಲ್ಲಾ ಪಂಚಾಯ್ತಿ ಸದಸ್ಯ ಸಿದಗೌಡ ಸುಣಗಾರ ಮಾತನಾಡಿ, ‘ಚನ್ನಮ್ಮನ ಖಡ್ಗ ಲಂಡನ್‌ನಲ್ಲಿದೆ ಎನ್ನುವ ಮಾಹಿತಿ ಇದೆ. ಅದನ್ನು ಕಾಕತಿಗೆ ತಂದುಕೊಡಲು ಸರ್ಕಾರ ಕ್ರಮ ವಹಿಸಬೇಕು. ಕಾಕತಿಯಲ್ಲಿರುವ ಕೋಟೆ ಹಾಗೂ ಚನ್ನಮ್ಮ ಹುಟ್ಟಿ ಬೆಳೆದ ಮನೆಯನ್ನು ಅಭಿವೃದ್ಧಿಪಡಿಸಬೇಕು.

ವಸ್ತುಸಂಗ್ರಾಲಯ ಸ್ಥಾಪಿಸಬೇಕು. ಪ್ರವಾಸಿ ತಾಣವಾಗಿ ಬೆಳೆಸಬೇಕು. ಚನ್ನಮ್ಮನ ತವರಿಗೆ ಸ್ವಾಗತ ಎನ್ನುವ ಸ್ವಾಗತ ಕಮಾನನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಳವಡಿಸಬೇಕು. ಕಿತ್ತೂರಿಗೆ ನೀಡುವಂತೆ ಇಲ್ಲಿನ ಉತ್ಸವಕ್ಕೂ ಹೆಚ್ಚಿನ ಅನುದಾನ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಸಾನ್ನಿಧ್ಯ ವಹಿಸಿದ್ದ ‌ಗ್ರಾಮದ ಶಿವಪೂಜಿಮಠದ ರಾಚಯ್ಯ ಸ್ವಾಮೀಜಿ, ‘ಇಲ್ಲಿದ್ದ ಚನ್ನಮ್ಮನ ಮನೆ ನೆಲಸಮವಾಗಿದೆ. ಆ ಜಾಗವನ್ನು ಅವರ ವಂಶಸ್ಥರಿಂದ ಸರ್ಕಾರ ಮರಳಿ ಪಡೆದು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಬೇಕು. ಅರಮನೆಯಂತೆ ಅದನ್ನು ನಿರ್ಮಿಸಬೇಕು.

ವೀರರಾಣಿಯ ಇತಿಹಾಸವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಇದಕ್ಕಾಗಿ ಸಹೋದರರಾದ ರಮೇಶ ಜಾರಕಿಹೊಳಿ ಹಾಗೂ ಸತೀಶ ಜಾರಕಿಹೊಳಿ ಗಮನಹರಿಸಬೇಕು’ ಎಂದು ಆಗ್ರಹಿಸಿದರು. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಖಂಡರು ಸಚಿವ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಹಿರೇಮಠದ ಉದಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಅರುಣ ಕಟಾಂಬಳೆ, ತಾಲ್ಲೂಕು ಪಂಚಾಯ್ತಿ ಸದಸ್ಯ ಯಲ್ಲಪ್ಪ ಕೋಳಕಾರ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮನಾ ಶಹಾಪುರಕರ, ಉಪಾಧ್ಯಕ್ಷ ಅನಿಲ್‌ ನಾರ್ವೇಕರ, ಜಿಲ್ಲಾಧಿಕಾರಿ ಎಸ್‌. ಜಿಯಾವುಲ್ಲಾ, ಜಿಲ್ಲಾ ಪಂಚಾಯ್ತಿ ಸಿಇಒ ಆರ್‌. ರಾಮಚಂದ್ರನ್‌ ಭಾಗವಹಿಸಿದ್ದರು. ರೂಪಾ ಕಂಬಳಿಮಠ ತಂಡದವರು ನಾಡಗೀತೆ ಹಾಡಿದರು. ಉಪವಿಭಾಗಾಧಿಕಾರಿ ಕವಿತಾ ಯೋಗಪ್ಪನವರ ಸ್ವಾಗತಿಸಿದರು. ತಹಶೀಲ್ದಾರ್‌ ಮಂಜುಳಾ ನಾಯಕ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT