ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಣಸಿನಕಾಯಿ ಬದಲು ಸಿರಿಧಾನ್ಯ ಬೆಳೆದರು!

Last Updated 24 ಅಕ್ಟೋಬರ್ 2017, 5:41 IST
ಅಕ್ಷರ ಗಾತ್ರ

ಬಳ್ಳಾರಿ: ಮಳೆ ಕೊರತೆಯಿಂದಾಗಿ ಕಾಲುವೆಯಲ್ಲಿ ಈ ವರ್ಷ ಮುಂಗಾರು ಅವಧಿಯಲ್ಲಿ ನೀರು ಹರಿಯದ ಕಾರಣ ಜಿಲ್ಲೆಯ ಮೆಣಸಿನಕಾಯಿ ಬೆಳೆಗಾರರು ಎದೆಗುಂದದೆ ಪರ್ಯಾಯ ಬೆಳೆಗಳನ್ನು ಬೆಳೆದಿದ್ದಾರೆ. ಹತ್ತಿ ಮತ್ತು ಮೆಕ್ಕೆಜೋಳದೊಂದಿಗೆ ಹೆಚ್ಚಿನ ವಿಸ್ತೀರ್ಣದಲ್ಲಿ ಹಬ್ಬಿದ ಸಿರಿಧಾನ್ಯಗಳು ಅವರ ಕೈ ಹಿಡಿದಿವೆ.

ಮೆಣಸಿನಕಾಯಿ ಹೆಚ್ಚು ನೀರು ಬಯಸುವ ಬೆಳೆ. ಕೊಳವೆಬಾವಿಗಳುಳ್ಳವರೂ ಕೂಡ ಕಾಲುವೆ ನೀರನ್ನು ನೆಚ್ಚಿಕೊಳ್ಳುವ ಸನ್ನಿವೇಶಗಳುಂಟು. ಮಳೆ ಬಾರದೆ ಸತತ ಮೂರನೇ ವರ್ಷ ಬರಗಾಲ ಆವರಿಸಿದ ಸನ್ನಿವೇಶದಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ರೈತರನ್ನು ಉತ್ತೇಜಿಸಿದ್ದರು. ಅದು ಈಗ ಫಲ ನೀಡಿದೆ.

32 ಸಾವಿರ ಹೆಕ್ಟೇರ್‌ಗೂ ಹೆಚ್ಚು: ಜಿಲ್ಲೆಯಲ್ಲಿ ಹಿಂದಿನ ವರ್ಷ 32 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದರು. ಅದು, 2015ರಲ್ಲಿ ಬೆಳೆದಿದ್ದಕ್ಕಿಂತಲೂ ದುಪ್ಪಟ್ಟು ಎಂಬುದು ವಿಶೇಷ. ಆಗ ಸುಮಾರು 16 ಸಾವಿರ ಹೆಕ್ಟೇರ್‌ನಲ್ಲಿ ರೈತರು ಮೆಣಸಿನಕಾಯಿ ಬೆಳೆದಿದ್ದರು. ಮಾರಾಟ ದರ ಹೆಚ್ಚಿದ ಪರಿಣಾಮವಾಗಿ ನಂತರದ ವರ್ಷ ಇನ್ನಷ್ಟು ರೈತರು ತಮ್ಮ ಜಮೀನಿನಲ್ಲೂ ಅದನ್ನೇ ಬೆಳೆದಿದ್ದರು. ಆದರೆ ಮಳೆಯ ಅಭಾವದಿಂದ ಹಲವರು ಬೆಳೆ ನಷ್ಟವನ್ನೂ ಹೊಂದಿದ್ದರು. ಕೊರ್ಲಗುಂದಿಯ ರೈತರೊಬ್ಬರು ವಿಷ ಸೇವಿಸಲು ಯತ್ನಿಸಿದ ಘಟನೆಯೂ ನಡೆದಿತ್ತು.

ಈಗ ಪರಿಸ್ಥಿತಿ ಭಿನ್ನವಾಗಿದೆ. ಒಂದೇ ಬೆಳೆಯನ್ನು ಆಶ್ರಯಿಸುವ ಸಾಂಪ್ರದಾಯಿಕ ತೋಟಗಾರಿಕೆ ಪದ್ಧತಿಯನ್ನು ರೈತರು ಕೈಬಿಟ್ಟು ಹೊಸ ಬೆಳೆ ಬೆಳೆಯುವ ಸಾಹಸಕ್ಕೆ ಕೈಹಾಕಿದ್ದಾರೆ.

17 ಸಾವಿರ ಹೆಕ್ಟೇರ್‌: ಈ ವರ್ಷ ಕೇವಲ 17 ಸಾವಿರ ಹೆಕ್ಟೇರ್‌ನಲ್ಲಿ ಮಾತ್ರ ಮೆಣಸಿನಕಾಯಿ ಬೆಳೆದಿದ್ದಾರೆ. ಅವರಲ್ಲಿ ಹಲವರಿಗೆ ಕೊಳವೆಬಾವಿ ಸೌಲಭ್ಯಗಳಿವೆ. ಉಳಿದವರು ಮಳೆ ನೀರನ್ನೇ ನೆಚ್ಚಿಕೊಂಡಿದ್ದಾರೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಪಿ.ಜಿ.ಚಿದಾನಂದ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಕಡಿಮೆ ನೀರು ಬಯಸುವ ಬೆಳೆಗಳನ್ನು ಬೆಳೆದರೆ ಮಾತ್ರ ರೈತರು ಬರಗಾಲವನ್ನು ಸಮರ್ಥವಾಗಿ ಎದುರಿಸಬಹುದು ಎಂಬುದಕ್ಕೆ ಈ ಬಾರಿ ಸಿರಿಧಾನ್ಯಗಳನ್ನು ಬೆಳೆದಿರುವ ರೈತರು ನಿದರ್ಶನವಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT