ಭಾನುವಾರ, ಸೆಪ್ಟೆಂಬರ್ 22, 2019
22 °C

ಏರಿದ ತರಕಾರಿ ಬೆಲೆ: ಗ್ರಾಹಕ ಕಂಗಾಲು

Published:
Updated:
ಏರಿದ ತರಕಾರಿ ಬೆಲೆ: ಗ್ರಾಹಕ ಕಂಗಾಲು

ಚಾಮರಾಜನಗರ: ಕಳೆದ ವರ್ಷ ಬರಗಾಲ ರೈತರು ಮತ್ತು ಗ್ರಾಹಕರಿಗೆ ಆರ್ಥಿಕ ಹೊಡೆತ ನೀಡಿದ್ದರೆ, ಈ ಬಾರಿ ನಿರೀಕ್ಷೆಗೂ ಮೀರಿ ಬಂದ ಮುಂಗಾರು ಮಳೆ ಮತ್ತೆ ಸಂಕಷ್ಟ ತಂದಿಟ್ಟಿದೆ. ಪೂರೈಕೆ ಇಳಿಕೆ ಮತ್ತು ಬೇಡಿಕೆ ಹೆಚ್ಚಳದ ಕಾರಣದಿಂದ ಮಾರುಕಟ್ಟೆಯಲ್ಲಿ ತರಕಾರಿ ಧಾರಣೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೆಲವು ತಿಂಗಳಿನಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ತರಕಾರಿ ಬೆಳೆಗಳಿಗೆ ಹಾನಿಯಾಗಿದೆ. ಸಾಲು ಸಾಲು ಹಬ್ಬಗಳ ನಂತರ ಈಗ ಶುಭ ಸಮಾರಂಭಗಳು ಪ್ರಾರಂಭವಾಗುತ್ತಿದ್ದು, ತರಕಾರಿಗೆ ಬಹು ಬೇಡಿಕೆ ಉಂಟಾಗಿದೆ. ಆದರೆ, ಅಗತ್ಯಕ್ಕೆ ತಕ್ಕಷ್ಟು ಪೂರೈಕೆಯಾಗುತ್ತಿಲ್ಲ. ಇದರಿಂದ ಬೆಲೆ ದಿಢೀರನೆ ಗಗನಮುಖಿಯಾಗಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ದೀಪವಾಳಿಗೂ ಮುಂಚೆ ಕೆ.ಜಿಗೆ ₹ 20 ರಿಂದ 50 ಆಸುಪಾಸಿನಲ್ಲಿದ್ದ ದಪ್ಪ ಮೆಣಸಿನಕಾಯಿ, ಸಣ್ಣ ಈರುಳ್ಳಿ, ಗೆಡ್ಡೆಕೋಸು, ಹೂ ಕೋಸು, ನುಗ್ಗೆಕಾಯಿ ಬೆಲೆಗಳು ₹60 ರಿಂದ 100ರ ಗಡಿ ತಲುಪಿದೆ. ಜಿಲ್ಲೆಗೆ ಮೈಸೂರು ಮತ್ತು ಹಾಸನದಿಂದ ತರಕಾರಿ ಸರಬರಾಜು ಆಗುತ್ತದೆ. ಈ ವಾರ ಪೂರೈಕೆ ಕಡಿಮೆಯಾಗಿದೆ. ಜಿಲ್ಲೆಯಿಂದ ಟೊಮೆಟೊ ಮುಂತಾದ ತರಕಾರಿಗಳು ತಮಿಳುನಾಡಿನ ಮಾರುಕಟ್ಟೆಗೆ ಪೂರೈಕೆಯಾಗಿದ್ದು, ಬೆಲೆ ಏರಿಕೆಗೆ ಇದು ಕೂಡ ಕಾರಣವಾಗಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

‘ತರಕಾರಿ ಧಾರಣೆ ಏರಿಕೆಯಿಂದ ಗ್ರಾಹಕರು ತರಕಾರಿ ಖರೀದಿಸಲು ಹಿಂಜರಿಯುತ್ತಿದ್ದಾರೆ. ಇದರಿಂದ ಸಾಕಷ್ಟು ತರಕಾರಿಗಳು ಉಳಿದುಕೊಂಡು ನಷ್ಟವಾಗುವ ಭೀತಿ ಎದುರಾಗಿದೆ’ ಎಂದು ವ್ಯಾಪಾರಿಯೊಬ್ಬರು ತಿಳಿಸಿದರು.

ಬಾಳೆಹಣ್ಣಿಗೆ ಹೆಚ್ಚಿದ ಬೇಡಿಕೆ: ಏಲಕ್ಕಿ ಬಾಳೆ ಹಣ್ಣಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಧಾರಣೆಯಲ್ಲಿ ಇಳಿಕೆಯಾಗಿಲ್ಲ. ಒಂದು ಕೆ.ಜಿ ಏಲಕ್ಕಿ ಬಾಳೆಗೆ ₹ 80ರಿಂದ 100ವರೆಗೆ ಇದೆ. ಪಚ್ಚಬಾಳೆ ಹಣ್ಣಿಗೆ ₹ 30ರಿಂದ 40 ಬೆಲೆ ಇದೆ.

ದೀಪವಾಳಿ ಅಂಗವಾಗಿ ಮಹದೇಶ್ವರ ಬೆಟ್ಟ ಮುಂತಾದೆಡೆ ಭಾಗಗಳಲ್ಲಿ ಜಾತ್ರೆ ಹಾಗೂ ಹಬ್ಬಗಳು ನಡೆಯುತ್ತಿರುವುದರಿಂದ ಬಾಳೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ಹೊರ ಜಿಲ್ಲೆಗಳಿಂದಲೂ ಪೂರೈಕೆಯಾಗುತ್ತಿದೆ ಎಂದು ಬಾಳೆಹಣ್ಣಿನ ವ್ಯಾಪಾರಿ ರಾಜೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

Post Comments (+)