ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದ ಆಶಯ ಇಂದಿಗೂ ಈಡೇರಿಲ್ಲ

Last Updated 24 ಅಕ್ಟೋಬರ್ 2017, 6:07 IST
ಅಕ್ಷರ ಗಾತ್ರ

ಕಳಸ: 10 ವರ್ಷದ ಹಿಂದೆಯೇ ಜಾರಿಗೆ ಬಂದ ಅರಣ್ಯ ಹಕ್ಕು ಕಾಯ್ದೆಯು ಸಮರ್ಪಕವಾಗಿ ಜಾರಿ ಆಗದಿರಲು ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯ ಕಾರಣ. ಆದಿವಾಸಿಗಳ ಹಕ್ಕಿಗೆ ಚ್ಯುತಿ ಎಸಗುವ ಅಧಿಕಾರಿಗಳ ವಿರುದ್ಧ ಜಾತಿನಿಂದನೆಯ ಪ್ರಕರಣ ದಾಖಲಿಸಿ ಅವರನ್ನು ಶಿಕ್ಷೆಗೆ ಗುರಿಪಡಿಸುವ ಅವಕಾಶ ಇದೆ ಎಂದು ಕೊಡಗಿನ ಬುಡಕಟ್ಟು ಹಕ್ಕುಗಳ ಹೋರಾಟಗಾರ ವಿ. ಎಸ್‌. ರಾಯ್ಡ್‌ ಅಭಿಪ್ರಾಯಪಟ್ಟರು.

ಪಟ್ಟಣದ ರೋಟರಿ ಭವನದಲ್ಲಿ ಸೋಮವಾರ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಬುಡಕಟ್ಟು ಜನರ ಸಮಾವೇಶದಲ್ಲಿ ಅವರು ಮಾತನಾಡಿದರು

ಕೇಂದ್ರ ಸರ್ಕಾರ ಕಾಂಪಾ ಕಾಯ್ದೆ ಜಾರಿಗೆ ತರಲು ಉದ್ದೇಶಿಸಿದ್ದು, ಇದು ಜಾರಿಗೆ ಬಂದರೆ ಮತ್ತೆ ಅಧಿಕಾರಿಗಳು ಕೋಟಿಗಟ್ಟಲೆ ವಿದೇಶಿ ಹಣ ಕೊಳ್ಳೆ ಹೊಡೆಯಲು ಅವಕಾಶ ಆಗುತ್ತದೆ. ಆದಿವಾಸಿಗಳ ಪಾಲಿಗೆ ಇದು ಮರಣ ಶಾಸನ ಆಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ. ಬಿ. ನಿಂಗಯ್ಯ, ‘ದೇಶದಲ್ಲಿ ಶೇ 24 ದಲಿತರು ಮತ್ತು ಆದಿವಾಸಿಗಳು ಇದ್ದರೂ ಅಂಬೇಡ್ಕರರ ಸಂವಿಧಾನದ ಆಶಯ ಇಂದಿಗೂ ಈಡೇರಿಲ್ಲ. ನಾವು ಬಡವರು, ಆದರೆ ನಮಗೆ ಸ್ವಾಭಿಮಾನಕ್ಕೆ ಕೊರತೆ ಇಲ್ಲ, ನಮಗೆ ಭಿಕ್ಷೆ ಬೇಡ. ಆದರೆ, ಸಂವಿಧಾನದತ್ತವಾಗಿ ಸಿಗಬೇಕಾದ ಸವಲತ್ತುಗಳು ಸಿಗಲೇಬೇಕು’ ಎಂದು ಭಾವುಕರಾಗಿ ಹೇಳಿದರು.

ಪ್ರಾಸ್ತಾವಿಕ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಎನ್‌. ವಿಠಲ್‌, ‘22 ವರ್ಷಗಳಿಂದ ನಮ್ಮ ಸಂಘ ಕಾಡಿನ ಮಕ್ಕಳ ಸಮಸ್ಯೆ ಬಗ್ಗೆ ಹೋರಾಟ ಮಾಡುತ್ತಿದೆ. ಬುಡಕಟ್ಟು ಜನರು ಕಾಡು ನಾಶ ಮಾಡುವವರಲ್ಲ. ಬದಲಿಗೆ ಕಾಡನ್ನು ಪೂಜಿಸಿ ಉಳಿಸುವವರು. ಡೋಂಗಿ ಪರಿಸರವಾದಿಗಳಿಂದ ಆದಿವಾಸಿಗಳಿಗೆ ಕಂಟಕ ಇದೆ. ಬುಡಕಟ್ಟು ಪಂಗಡಗಳ ಯುವಶಕ್ತಿ ಸಂಘಟಿತರಾಗದಿದ್ದರೆ ಆದಿವಾಸಿ ಸಂಸ್ಕೃತಿ ನಾಶವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

ನಂತರ ಶಾಸಕ ನಿಂಗಯ್ಯ ಅವರಿಗೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಲಾಯಿತು. ಸಂಘದ ಹೋಬಳಿ ಘಟಕದ ಅಧ್ಯಕ್ಷ ಸಂಜೀವ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಆರ್‌. ಪ್ರಭಾಕರ್‌, ಬುಡಕಟ್ಟು ಮುಖಂಡರಾದ ಸುರೇಶ್‌, ಜ್ಯೋತಿ, ಕೃಷ್ಣರಾಜ್‌, ಸುಬ್ಬೇಗೌಡಲು, ಗ್ರಾಮ ಪಂಚಾಯಿತಿ ಸದಸ್ಯರಾದ ಸಂತೋಷ್‌, ಭಾಸ್ಕರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT