ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಕೊಳೆತ ಟೊಮೆಟೊ ಗಿಡಗಳು

Last Updated 24 ಅಕ್ಟೋಬರ್ 2017, 6:50 IST
ಅಕ್ಷರ ಗಾತ್ರ

ಅರಸೀಕೆರೆ: ತಾಲ್ಲೂಕಿನಲ್ಲಿ ಇತ್ತೀಚೆಗೆ ಸುರಿದ ಜೋರು ಮಳೆಗೆ ಟೊಮೆಟೊ ಗಿಡಗಳು ಕೊಳೆಯುತ್ತಿದ್ದು, ಇದರಿಂದ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಸತತ ಬರದಿಂದ ತತ್ತರಿಸಿದ್ದ ರೈತರಿಗೆ ಕೆಲ ದಿನಗಳ ಹಿಂದೆ ಸುರಿದ ಮಳೆ ವರವಾಗುವ ಬದಲು ಶಾಪವಾಗಿದೆ. ಅರಸೀಕೆರೆ ತಾಲ್ಲೂಕಿನಲ್ಲಿ ದಾಳಿಂಬೆ ಬೆಳೆ ನಷ್ಟದಿಂದ ಅನ್ಯ ಬೆಳೆಗಳತ್ತ ರೈತರು ಮುಖ ಮಾಡಿದ್ದಾರೆ. ಮಳೆ ಕೊರತೆ ನಡುವೆಯೂ ಕೊಳವೆ ಬಾವಿ ನೀರಿನ ನೆರವಿನಿಂದ ಟೊಮೆಟೊ ಬೆಳೆದು ಆರ್ಥಿಕ ಮಟ್ಟ ಸುಧಾರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದರು.

ಆದರೆ ಕಳೆದ 20 ದಿನಗಳ ಹಿಂದೆ ಬಿದ್ದ ಮಳೆಯಿಂದ ಟೊಮೆಟೊ ಗಿಡಗಳು ನೆಲಕ್ಕೆಪ್ಪಳಿಸಿವೆ. ಗಿಡದಲ್ಲಿದ್ದ ಕಾಯಿ ಹಣ್ಣುಗಳು ಕೊಳೆಯುತ್ತಿವೆ. ಒಂದು ಸಾರಿ ಹಣ್ಣು ಬಿಡಿಸಿದರೆ 150 ರಿಂದ 200 ಕ್ರೇಟ್‌ ಆಗುವ ಕಡೆ ಕೇವಲ 40–50 ಕ್ರೇಟ್‌ ಆಗುತ್ತಿವೆ. ಅಲ್ಲದೆ ಕೀಟಗಳ ಬಾಧೆಯಿಂದ ಹಣ್ಣುಗಳು ಹಾಳಾಗಿವೆ.

‘ಚಿಲ್ಲರೆ ಮಾರುಕಟ್ಟೆಯಲ್ಲಿ ₹12ರಿಂದ ₹ 20 ದರಕ್ಕೆ ಮಾರಾಟವಾದರೆ, ಸಗಟು ಮಾರುಕಟ್ಟೆಯಲ್ಲಿ 10 ಕೆ.ಜಿ. ಕ್ರೇಟ್‌ಗೆ ₹ 250 ರಿಂದ ₹ 300 ಕ್ಕೆ ಮಾರಾಟವಾಗುತ್ತಿದೆ. ಬೆಳೆಗೆ ಖರ್ಚು ಕಡಿಮೆ ಎಂಬುದೆಲ್ಲ ಸುಳ್ಳು. ಸಾಕಷ್ಟು ಹಣ ಖರ್ಚು ಮಾಡಿದರೂ ಇತ್ತ ಬೆಳೆಯೂ ಇಲ್ಲ, ಬೆಲೆಯೂ ಇಲ್ಲದಂತಾಗಿದೆ’ ಎಂದು ಬೆಳೆಗಾರರಾದ ಕೊಡ್ಲಿ ಬಸವರಾಜ್‌, ಜಯಪ್ಪ ಹಾಗೂ ಮಲ್ಲಿಕಾರ್ಜು ನ್‌ ‘ಪ್ರಜಾವಾಣಿ’ಗೆ ಅಳಲು ತೋಡಿಕೊಂಡರು.

‘ 20 ಗುಂಟೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದು, ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಸೇರಿ ₹ 40,000 ಖರ್ಚಾಗಿದೆ. ಎರಡು ಬಾರಿ ಮಾತ್ರ ಹಣ್ಣು ಮಾರಾಟ ಮಾಡಿದ್ದೇನೆ. ವಾಹನ ಬಾಡಿಗೆ, ಕೂಲಿ ಹಾಗೂ ಇತರೆ ವೆಚ್ಚ ಸೇರಿ ₹ 30,000 ಸಿಕ್ಕಿದೆ. ಆದರೆ ತಿಂಗಳ ಹಿಂದೆ ಕೆ.ಜಿ. ಗೆ ₹ 80 ರಿಂದ ₹120ರ ವರೆಗೆ ದರ ಇತ್ತು’ ಎಂದು ರೈತ ಬಸವರಾಜ್‌ ಹೇಳಿದರು.

‘ರೈತರ ಹಿತದೃಷ್ಟಿಯಿಂದ ಟೊಮೆಟೊಗೆ ಬೆಂಬಲ ಬೆಲೆ ಘೋಷಿಸಬೇಕು. ಅರಸೀಕೆರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೈತ್ಯಗಾರ ಕೇಂದ್ರ ತೆರೆದು ಮಾಲು ಸಂಗ್ರಹಿಸಬೇಕು. ಉತ್ತಮ ದರ ಬಂದಾಗ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು’ ಎಂದು ರೈತ ಸಂಘ ದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನ ಕುಮಾರ್‌ ಸರ್ಕಾರವನ್ನು ಒತ್ತಾಯಿಸಿದ್ದಾರೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT