ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಮಾರ್ಗ ವಿಳಂಬ: ಖರ್ಗೆ ಅಸಮಾಧಾನ

Last Updated 24 ಅಕ್ಟೋಬರ್ 2017, 7:06 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿಯಿಂದ ಹುಟಗಿ (ಸೊಲ್ಲಾಪುರ) ವರೆಗಿನ ಜೋಡಿ ರೈಲು ಮಾರ್ಗಕ್ಕೆ ಹಣ ಇದ್ದರೂ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಅಸಮಧಾನ ವ್ಯಕ್ತಪಡಿಸಿದರು. ಸೋಮವಾರ ಇಲ್ಲಿ ಕೇಂದ್ರ ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಗುತ್ತಿಗೆದಾರರ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿದೆ. ಹೊಟಗಿಯಿಂದ ಅಕ್ಕಲಕೋಟ ವರೆಗೆ ಜೋಡಿ ರೈಲು ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಅಕ್ಕಲಕೋಟದಿಂದ ಕಲಬುರ್ಗಿ ಮಾರ್ಗ ಮಧ್ಯದ ಸೇತುವೆಗಳ ನಿರ್ಮಾಣ ಮತ್ತಿತರ ಕಾಮಗಾರಿ ನಡೆದಿದೆ. ಜಮೀನು ಸ್ವಾಧೀನ ಸಮಸ್ಯೆ ಇಲ್ಲ. 2018ರ ಡಿಸೆಂಬರ್‌ ಅಂತ್ಯಕ್ಕೆ ಈ ಮಾರ್ಗದ ಕಾಮಗಾರಿ ಪೂರ್ಣಗೊಳಿಸುತ್ತೇವೆ’ ಎಂದು ರೈಲ್ವೆ ಅಧಿಕಾರಿಗಳು ಹೇಳಿದರು.

‘ವಾಡಿಯಿಂದ–ಕಲಬುರ್ಗಿ ವರೆಗಿನ ಜೋಡಿ ರೈಲು ಮಾರ್ಗ ಕಾಮಗಾರಿ ಈ ವರ್ಷದ ಡಿಸೆಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ. ವಾಡಿಯಿಂದ–ಸಿಕಂದರಾಬಾದ್‌ ವರೆಗೆ ಈಗಾಗಲೇ ಜೋಡಿ ಮಾರ್ಗ ಇದೆ’ ಎಂದು ಅಧಿಕಾರಿ ತಿಳಿಸಿದರು.

ಮೇಲ್ಸೇತುವೆ: ‘ಕಲಬುರ್ಗಿಯ ಹೊಸ ಜೇವರ್ಗಿ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆಯ ನಮ್ಮ ಕಾಮಗಾರಿ ಯನ್ನು ನಾವು ಪೂರ್ಣಗೊಳಿಸಿದ್ದೇವೆ. ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ’ ಎಂದು ರೈಲ್ವೆ ಅಧಿಕಾರಿ ಹೇಳಿದರು.

‘ಎರಡೂ ಬದಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ₹23.5 ಕೋಟಿಗೆ ಸಂಪುಟ ಅನುಮೋದನೆ ನೀಡಿದ್ದು, ಇನ್ನೂ ಕಾಮಗಾರಿ ಆರಂಭಿಸಿಲ್ಲ. ಅಫಜಲಪುರ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯೂ ವಿಳಂಬವಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಚಿತ್ತಾಪುರ ಬಳಿಯ ರೈಲ್ವೆ ಮೇಲ್ಸೇತುವೆ ಸಂಪರ್ಕ ರಸ್ತೆಗೆ ಅಗತ್ಯ ವಿರುವ ಭೂಮಿಯನ್ನು ಸಂಧಾನದ ಮೂಲಕ ಸ್ವಾಧೀನ ಪಡಿಸಿಕೊಂಡು 10 ದಿನದಲ್ಲಿ ಕಾಮಗಾರಿ ಆರಂಭಿಸಬೇಕು’ ಎಂದು ಅವರು ಸೂಚಿಸಸಿದರು.

‘ಯಾದಗಿರಿ ಜಿಲ್ಲೆ ಕಡೇಚೂರಲ್ಲಿರುವ ರೈಲ್ವೆ ಬೋಗಿ ನಿರ್ಮಾಣ ಕಾರ್ಖಾನೆಯ ಸಾಮರ್ಥ್ಯ ವೃದ್ಧಿ ಹಾಗೂ ಕಲಬುರ್ಗಿ–ವಾಡಿ ಮಾರ್ಗದಲ್ಲಿ ರೈಲಿನ ವೇಗ ಹೆಚ್ಚಿಸಲು ಅಗತ್ಯವಿರುವ ಕಾಮಗಾರಿಯ ಮಾಹಿತಿ ಕೊಡಿ. ನಾನು ರೈಲ್ವೆ ಸಚಿವರೊಂದಿಗೆ ಚರ್ಚಿಸಿ, ಅನುಮೋದನೆ ಕೊಡಿಸುತ್ತೇನೆ’ ಎಂದು ಖರ್ಗೆ ಹೇಳಿದರು.

‘ಕಲಬುರ್ಗಿ ಇಎಸ್‌ಐಸಿ ಆಸ್ಪತ್ರೆಗೆ ನೀರು ಹಾಗೂ ಶಾಶ್ವತ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಅಲ್ಲಿ 110 ಕೆ.ವಿ. ವಿದ್ಯುತ್‌ ಸ್ಟೇಷನ್‌ ನಿರ್ಮಾಣಕ್ಕೆ ಅವರು ಹಣ ಕೊಡಲು ಸಿದ್ಧರಿದ್ದರೂ ಕೆಪಿಟಿಸಿಎಲ್‌ನವರು ಹಿಂದೇಟು ಹಾಕುತ್ತಿರುವುದು ಏಕೆ’ ಎಂದು ಖರ್ಗೆ ಅವರು ಪ್ರಶ್ನಿಸಿದರು. ಕೂಡಲೇ ಕಾಮಗಾರಿ ಕೈಗೊಳ್ಳುವಂತೆ ನಿರ್ದೇಶನ ನೀಡಿದರು

ಮೇಯರ್‌ ಶರಣಕುಮಾರ ಮೋದಿ, ಸಂಸದೀಯ ಕಾರ್ಯದರ್ಶಿ ಡಾ.ಉಮೇಶ ಜಾಧವ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಜಿಲ್ಲಾ ಪಂಚಾಯಿತಿ ಸಿಇಒ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ಪಿ.ಸುನಿಲಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT