ಕುಮಟಾ ನಿಲ್ದಾಣಕ್ಕೆ ಬಂದ ಲೈಫ್ ಲೈನ್ ಎಕ್ಸ್‌ಪ್ರೆಸ್ ರೈಲು

ಶನಿವಾರ, ಮೇ 25, 2019
33 °C

ಕುಮಟಾ ನಿಲ್ದಾಣಕ್ಕೆ ಬಂದ ಲೈಫ್ ಲೈನ್ ಎಕ್ಸ್‌ಪ್ರೆಸ್ ರೈಲು

Published:
Updated:
ಕುಮಟಾ ನಿಲ್ದಾಣಕ್ಕೆ ಬಂದ ಲೈಫ್ ಲೈನ್ ಎಕ್ಸ್‌ಪ್ರೆಸ್ ರೈಲು

ಕುಮಟಾ: ಕೇಂದ್ರ ಸರ್ಕಾರದ ಇಂಪ್ಯಾಕ್ಟ್ ಇಂಡಿಯಾ ಫೌಂಡೇಷನ್ ಆಶ್ರಯದಲ್ಲಿ 20 ದಿನ ಸಾರ್ವಜನಿಕರಿಗೆ ಉಚಿತ ಚಿಕಿತ್ಸೆ ನೀಡಲಿರುವ ಲೈಫ್ ಲೈನ್ ಎಕ್ಸ್‌ಪ್ರೆಸ್ ರೈಲು ಇದೀಗ ಕುಮಟಾ ರೈಲು ನಿಲ್ದಾಣಕ್ಕೆ ಬಂದಿದೆ. ಅ. 31ರಂದು ಈ ರೈಲಿನಲ್ಲಿ ಉಚಿತ ಆರೋಗ್ಯ ಚಿಕಿತ್ಸೆ ಸೇವೆಯ ಉದ್ಘಾಟನೆ ನಡೆಯಲಿದ್ದು, ನವೆಂಬರ್ 19ರವರೆಗೆ ಸೇವೆ ಲಭ್ಯವಿದೆ.

ನಿಲ್ದಾಣದ ಮುಖ್ಯ ಹಳಿಯ ಪಕ್ಕದಲ್ಲಿ ನಿಂತಿರುವ ಲೈಫ್ ಲೈನ್ ಎಕ್ಸ್‌ಪ್ರೆಸ್ ರೈಲನ್ನು ಶಸ್ತ್ರ ಚಿಕಿತ್ಸಾ ಕೊಠಡಿಯಾಗಿ ಬಳಕೆ ಮಾಡಿಕೊಳ್ಳಲಿದ್ದು, ಅದರ ಪಕ್ಕದ ಕಟ್ಟಡದಲ್ಲಿ ಹೊರ ರೋಗಿಗಳ ಪರೀಕ್ಷೆ ನಡೆಯಲಿದೆ. ಅದಕ್ಕಾಗಿ ಕಟ್ಟಡಕ್ಕೆ ಸುಣ್ಣ–ಬಣ್ಣ ಬಳಿದು, ದುರಸ್ತಿ ಮಾಡಲಾಗುತ್ತಿದೆ.

ಶಸ್ತ್ರಚಿಕಿತ್ಸೆ ಸೌಲಭ್ಯ: ಆರೋಗ್ಯ ಸೇವೆಯ ಬಗ್ಗೆ ಮಾಹಿತಿ ನೀಡಿದ ಲೈಫ್ ಲೈನ್ ಎಕ್ಸ್‌ಪ್ರೆಸ್ ಆರೋಗ್ಯ ಸೇವೆಯ ಉಪ ನಿರ್ದೇಶಕ ಅನಿಲ ಪ್ರೇಮಸಾಗರ್, ‘ರೈಲಿನಲ್ಲಿ ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡಲಾಗುವುದು. ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ಅಗತ್ಯವಿರುವವರನ್ನು ಮೊದಲೇ ಗುರುತಿಸಿ, ನಿಗದಿತ ದಿನಾಂಕದಂದು ರೈಲಿನಲ್ಲಿ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು’ ಎಂದರು.

‘ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳನ್ನು ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುವುದು. ಅದಕ್ಕಾಗಿ ದೇಶದ ವಿವಿಧ ಭಾಗಗಳಿಂದ ತಜ್ಞ ವೈದ್ಯರು ಬಂದಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಪರೂಪದ ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕ್ಯಾನ್ಸರ್ ತಜ್ಞೆ ಡಾ. ಮೆಹಕಾ ಸಿಕ್ಕಾ, ‘ಹದಿನೈದು ವರ್ಷದ ಹಿಂದೆ ಆರಂಭವಾದ ಈ ಸೇವೆಯಡಿ, ಇದುವರೆಗೂ 1.30 ಲಕ್ಷ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಅತ್ಯಂತ ಸೂಕ್ಷ್ಮ ಸ್ಥಿತಿಯಲ್ಲಿರುವ ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಹಚ್ಚುವ ಅತ್ಯಾಧುನಿಕ ಮೆಮೊಗ್ರಫಿ ಸೌಲಭ್ಯವನ್ನು ಇಲ್ಲಿ ಲಭ್ಯವಿದೆ’ ಎಂದು ಹೇಳಿದರು.

‘ಇಷ್ಟೇ ಅಲ್ಲದೆ ಪೊಲೀಯೋ, ಕಿವಿ, ಗಂಟಲು, ಕಣ್ಣು ತೊಂದರೆ, ಮೂರ್ಚೆ ರೋಗ, ಹೃದಯಾಘಾತ, ಸುಟ್ಟ ಗಾಯ, ಮೂಳೆ ಹಾಗೂ ತುಟಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗವುದು. ಸೇವೆ ಆರಂಭ ಕುರಿತು ಸ್ಥಳೀಯ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಕನ್ನಡ ಗೊತ್ತಿಲ್ಲದ ನಮ್ಮ ತಜ್ಞ ವೈದ್ಯರಿಗೆ ಸ್ಥಳೀಯ ವೈದ್ಯರು ನೆರವಾಗಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry