ಮೌಲ್ಯಯುತ ಶಿಕ್ಷಣ ಅವಶ್ಯ: ಮಧುಸೂದನ್‌

ಬುಧವಾರ, ಜೂನ್ 26, 2019
28 °C

ಮೌಲ್ಯಯುತ ಶಿಕ್ಷಣ ಅವಶ್ಯ: ಮಧುಸೂದನ್‌

Published:
Updated:
ಮೌಲ್ಯಯುತ ಶಿಕ್ಷಣ ಅವಶ್ಯ: ಮಧುಸೂದನ್‌

ಕಾರವಾರ: ‘ಇಂದು ಕೇವಲ ಹೊಟ್ಟೆಪಾಡಿನ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಆದರೆ ಜೀವನ ನಿರ್ವಹಣೆಯ ಜತೆಗೆ ಮೌಲ್ಯಯುತ ಶಿಕ್ಷಣ ಅವಶ್ಯವಾಗಿದೆ’ ಎಂದು ಸಾಯಿ ಸಂವಹನಕಾರ ಮಧುಸೂದನ್ ನಾಯ್ಡು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ ನಿರ್ಮಿಸುತ್ತಿರುವ ಶ್ರೀಸತ್ಯಸಾಯಿ ಸತ್ವನಿಕೇತನಮ್‌ ಬಾಲಕರ ಸನಿವಾಸ ವಿದ್ಯಾನಿಕೇತನಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಗ್ರಾಮೀಣ ಭಾಗದ ಬಡವರು, ದೀನ ದಲಿತರಿಗೆ ಶೈಕ್ಷಣಿಕ, ವೈದ್ಯಕೀಯ ಸೇವೆ ಒದಗಿಸಲು ಭಗವಾನ್ ಶ್ರೀಸತ್ಯಸಾಯಿ ಬಾಬಾ ಅವರು ಹೆಚ್ಚಿನ ಒತ್ತು ನೀಡಿದ್ದರು. ಅವರ ಸಂದೇಶಗಳ ಪ್ರೇರಣೆ ಪಡೆದು ಸತ್ಯಸಾಯಿ ಸೇವಾ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಾಲೆ, ಕಾಲೇಜು, ಆಸ್ಪತ್ರೆಗಳನ್ನು ತೆರೆಯಲು ಮುಂದಾಗಿದೆ’ ಎಂದು ಹೇಳಿದರು.

ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷ ಎಂ.ಎಲ್. ಸತ್ಯನಾರಾಯಣ ಮಾತನಾಡಿ, ‘ಸತ್ಯಸಾಯಿ ಸತ್ವನಿಕೇತನಮ್‌ ಉಚಿತ ವಸತಿಶಾಲೆಯು ಬರುವ ಜೂನ್ ತಿಂಗಳಿನಿಂದ ಆರಂಭಿಸಲಾಗುತ್ತದೆ. ರಾಜ್ಯದ 20ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ 23 ಶಾಲೆಗಳನ್ನು ಟ್ರಸ್ಟ್‌ ವತಿಯಿಂದ ನಡೆಸಲಾಗುತ್ತಿದೆ. 2018–19 ಶೈಕ್ಷಣಿಕ ಸಾಲಿನಿಂದ ಬಳ್ಳಾರಿ, ಕೊಪ್ಪಳ, ತುಮಕೂರು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ವಸತಿಶಾಲೆಗಳನ್ನು ಪ್ರಾರಂಭಿಸಲು ಎಲ್ಲ ತಯಾರಿ ನಡೆದಿದೆ.

ಪ್ರತಿ ವಸತಿಶಾಲೆಯಲ್ಲಿ 10 ಮಂದಿ ಬಾಲಕಿಯರು, 20 ಮಂದಿ ಬಾಲಕರಿಗೆ ಕಲಿಯಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಡೊನೇಷನ್‌ ಅಥವಾ ಶಿಕ್ಷಣ ಶುಲ್ಕ ಇರುವುದಿಲ್ಲ’ ಎಂದು ಹೇಳಿದರು.

ವಸತಿ ಶಾಲೆಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎಲ್.ಗಿರೀಶ್‌ ಮಾತನಾಡಿ, ಹಿಂದೆ ಗುರುಕುಲ ಪದ್ಧತಿ ಇತ್ತು. ಆದರೆ ಅದು ತೆರೆಮರೆಗೆ ಸರಿದ ಮೇಲೆ ಭಾರತೀಯ ಸನಾತನ ಸಂಸ್ಕೃತಿ ಮೇಲೆ ಹೊಡೆತ ಬಿದ್ದಿದೆ. ಈಗಿನ ಶಿಕ್ಷಣದಲ್ಲಿ ಯಾವುದೇ ಮೌಲ್ಯ ಇಲ್ಲದೇ ಇರುವ ಕಾರಣ ಜನರು ಹಾದಿ ತಪ್ಪುತ್ತಿದ್ದಾರೆ. ಉತ್ತಮ ಸಮಾಜ ನಿರ್ಮಿಸಲು ಸತ್ಯಸಾಯಿ ಸಂಸ್ಥೆ ಗುರುಕುಲ ಮಾದರಿ ಶಾಲೆಗಳನ್ನು ತೆರೆಯುತ್ತಿದೆ’ ಎಂದು ಹೇಳಿದರು.

ಶಾಸಕ ಸತೀಶ್ ಸೈಲ್ ಮಾತನಾಡಿ, ‘ಶಿಕ್ಷಣ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಟ್ರಸ್ಟ್‌ ಕಾರ್ಯಗಳಿಗೆ ಹಾಗೂ ವಸತಿಶಾಲೆ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವೆನು’ ಎಂದು ಹೇಳಿದರು.

ಜಮೀನು ಹಸ್ತಾಂತರ: ವಸತಿ ಶಾಲೆ ನಿರ್ಮಾಣಕ್ಕೆ 12 ಎಕರೆಯನ್ನು ದಾನವಾಗಿ ನೀಡಿದ ಸಾಯಿ ಭಕ್ತ ಅನಂತ ರಾಯ್ಕರ್‌ ಅವರು ಭೂಮಿಗೆ ಸಂಬಂಧಪಟ್ಟ ಕಾಗದ ಪತ್ರವನ್ನು ಇದೇ ಸಂದರ್ಭದಲ್ಲಿ ಮಧುಸೂದನ್‌ ನಾಯ್ದುಗೆ ಹಸ್ತಾಂತರಿಸಿದರು. ಬಳಿಕ ಟ್ರಸ್ಟ್‌ ವತಿಯಿಂದ ಅನಂತ ರಾಯ್ಕರ್‌ ಹಾಗೂ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ಓಮನ್ ಸರ್ಕಾರದ ಹಣಕಾಸು ಸಲಹೆಗಾರ ಸುನೀಲ್ ರಾಯ್ಕರ್ ಮಾತನಾಡಿ, ‘ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ದಾನವಾಗಿ ನೀಡಲು ತುಂಬ ಖುಷಿಯಾಗುತ್ತಿದೆ’ ಎಂದರು. ಧಾರವಾಡ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಗ್ರಾಮ ಪಂಚಾಯ್ತಿ ಅಧ್ಯಕ್ಷ ದೇವಿದಾಸ್ ಬೇಳೂರಕರ, ರಾಮರಾವ್‌ ರಾಯ್ಕರ್‌, ಸಂಜೀವ, ರಮಾನಂದ, ಮಹೇಂದ್ರ, ನರಸಿಂಹಮೂರ್ತಿ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry