ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬದ ನಂಗಲಿ ಕೆರೆ: ರೈತರಿಗೆ ನಿರಾಸೆ

Last Updated 24 ಅಕ್ಟೋಬರ್ 2017, 7:30 IST
ಅಕ್ಷರ ಗಾತ್ರ

ನಂಗಲಿ: ಮುಳಬಾಗಿಲು ತಾಲ್ಲೂಕಿನಾದ್ಯಂತ ಒಂದೂವರೆ ತಿಂಗಳಿನಿಂದ ಉತ್ತಮ ಮಳೆಯಾಗಿ ಬಹುಪಾಲು ಕೆರೆಗಳು ಕೋಡಿ ಹರಿದಿದ್ದರೂ ನಂಗಲಿ ಮತ್ತು ಮುಷ್ಟೂರು ಕೆರೆಗಳಿಗೆ ಆ ಭಾಗ್ಯ ಕೂಡಿ ಬಂದಿಲ್ಲ.

ಸತತ ಬರದಿಂದ ಬಸವಳಿದಿದ್ದ ರೈತಾಪಿ ವರ್ಗದ ಮೇಲೆ ವರುಣ ದೇವ ಕೃಪೆ ತೋರಿದ್ದಾನೆ. ಹೆಚ್ಚಿನ ಕೆರೆಗಳು ಕೋಡಿ ಹರಿದಿರುವುದರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಆದರೆ, ನಂಗಲಿ ಹಾಗೂ ಮುಷ್ಟೂರು ಕೆರೆಗಳಿಗೆ ಹೆಚ್ಚಿನ ನೀರು ಬಾರದಿರುವುದರಿಂದ ಸುತ್ತಮುತ್ತಲ ರೈತರಿಗೆ ನಿರಾಸೆಯಾಗಿದೆ.

ಈ ಕೆರೆಗಳಲ್ಲಿ ನಾಲ್ಕೈದು ವರ್ಷಗಳಿಂದ ಮರಳು ಹಾಗೂ ಮಣ್ಣು ದಂಧೆ ನಡೆದಿದೆ. ಸರ್ಕಾರವೇ ನಂಗಲಿ ಕೆರೆಯಲ್ಲಿ ಮರಳು ತೆಗೆಯಲು ಅನುಮತಿ ನೀಡಿತ್ತು. ದಂಧೆಕೋರರು ಹಣ ಸಂಪಾದನೆಗಾಗಿ ಕೆರೆಗಳ ಒಡಲನ್ನು ಬರಿದು ಮಾಡಿದ್ದಾರೆ. ಇದರಿಂದ ಕೆರೆಗಳ ಚಿತ್ರಣವೇ ಬದಲಾಗಿದೆ. ಕೆರೆ ಅಂಗಳದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಗುಂಡಿಗಳು ಕಾಣಿಸುತ್ತಿವೆ.

ನಂಗಲಿ ಕೆರೆಯು ತಾಲ್ಲೂಕಿನ ಅತಿ ದೊಡ್ಡ ಕೆರೆಯಾಗಿದೆ. ಅದರ ಸುತ್ತಮುತ್ತಲಿನ ಹಳೆಕುಪ್ಪ, ತೊಂಡಹಳ್ಳಿ, ಸಿದ್ದನಹಳ್ಳಿ, ಪದ್ಮಘಟ್ಟ, ತಾತಿಕಲ್ಲು, ಎನ್.ವಡ್ಡಹಳ್ಳಿ, ಬೈಯಪ್ಪನಹಳ್ಳಿ, ಕಾಡೇನಹಳ್ಳಿ, ಬೈರಕೂರು, ಪೆದ್ದೂರು, ಪುಣ್ಯಹಳ್ಳಿ ಕೆರೆಗಳು ಕೋಡಿ ಹರಿದಿವೆ. ಈ ಕೆರೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದರೂ ಗುಂಡಿಗಳೆ ತುಂಬಿಲ್ಲ.

‘ನಂಗಲಿ ಮತ್ತು ಮುಷ್ಟೂರು ಕೆರೆಗಳು ಕಾಲು ಭಾಗದಷ್ಟು ಸಹ ತುಂಬಿಲ್ಲ. ಇದಕ್ಕೆ ಮರಳು ದಂಧೆಯೇ ಪ್ರಮುಖ ಕಾರಣ. ಕೆರೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವ ರಾಜಕಾಲುವೆಗಳು ಒತ್ತುವರಿಯಾಗಿದ್ದು, ನೀರು ಹರಿವಿಗೆ ಅಡ್ಡಿಯಾಗಿದೆ’ ಎಂದು ನಂಗಲಿ ಗ್ರಾಮದ ವೆಂಕಟೇಶಪ್ಪ ದೂರಿದರು.

‘ಕೆರೆಗಳಲ್ಲಿ ಜಾಲಿ ಗಿಡಗಳು ಬೆಳೆದಿದ್ದು, ಅವುಗಳನ್ನು ತೆರವುಗೊಳಿಸಿಲ್ಲ. ಹಲವೆಡೆ ಅಕ್ಕಪಕ್ಕದ ಜಮೀನುಗಳ ರೈತರು ಕೆರೆ ಅಂಗಳವನ್ನು ಒತ್ತುವರಿ ಮಾಡಿದ್ದಾರೆ. ಒಂದೂವರೆ ದಶಕದ ನಂತರ ಉತ್ತಮ ಮಳೆಯಾಗಿದ್ದು, ಈ ವರ್ಷವಾದರೂ ಕೆರೆಗಳು ತುಂಬುತ್ತವೆ ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಮರವೇಮನೆ ಗ್ರಾಮದ ಸುಬ್ರಮಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಕೆರೆಗಳ ಹೂಳು ತೆಗೆದು, ಮುಂದಿನ ಮಳೆಗಾದರೂ ಕೆರೆಗಳು ತುಂಬುವ ಹಾಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT