ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮಗಳತ್ತ ವಲಸೆ ಹೋಗುವುದು ಅನಿವಾರ್ಯ’

Last Updated 24 ಅಕ್ಟೋಬರ್ 2017, 9:02 IST
ಅಕ್ಷರ ಗಾತ್ರ

ರಾಯಚೂರು: ಮುಂಬರುವ ದಿನಗಳಲ್ಲಿ ಶುದ್ಧ ಆಮ್ಲಜನಕಕ್ಕಾಗಿ ನಗರಗಳನ್ನು ತೊರೆದು ಗ್ರಾಮಗಳತ್ತ ಜನರು ವಲಸೆ ಹೋಗುವುದು ಅನಿವಾರ್ಯ ಸ್ಥಿತಿ ನಿರ್ಮಾಣವಾಗಲಿದೆ ಎಂದು ಶ್ರೀ ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ ಹೇಳಿದರು.

ನಗರದ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಡಾ.ಮಲ್ಲಿಕಾರ್ಜುನ ಮನ್ಸೂರ್ ಪ್ರತಿಷ್ಠಾನ ಹಾಗೂ, ಎಸ್.ಜಿ.ಸ್ವಾಮಿ ಗೆಳೆಯರ ಬಳಗವು ಭಾನುವಾರ ಸಂಜೆ ಆಯೋಜಿಸಿದ್ದ ದಿ.ಎಸ್.ಜಿ.ಸ್ವಾಮಿ ಸ್ಮರಣ ದಿವಸ ಹಾಗೂ ಡಾ.ಮಲ್ಲಿಕಾರ್ಜುನ ಮನ್ಸೂರ್ ಪ್ರತಿಷ್ಠಾನ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅತಿಯಾದ ಪರಿಸರ ಮಾಲಿನ್ಯದಿಂದ ಹೃದ್ರೋಗ ಸೇರಿದಂತೆ ಇನ್ನಿತರ ರೋಗಗಳು ಹೆಚ್ಚುತ್ತಿವೆ. ಪರೋಕ್ಷವಾಗಿ ಮನುಷ್ಯನ ಆಯುಷ್ಯವು ಕ್ಷೀಣಿಸುತ್ತಿದೆ. ಆಧುನಿಕ ಜಗತ್ತಿನ ವ್ಯಾಮೋಹದಿಂದ ವಾಯು ಮಾಲಿನ್ಯ ತೀವ್ರವಾಗಿದೆ. ದೇಶದಲ್ಲಿ 26 ಲಕ್ಷ ಜನ ವಾಯು ಮಾಲಿನ್ಯಕ್ಕೆ ಬಲಿಯಾಗಿದ್ದಾರೆ. ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂದು ಹೇಳಿದರು.

ಧೂಮಪಾನ, ಮದ್ಯಪಾನ ಹಾಗೂ ಒತ್ತಡದಲ್ಲಿ ಜೀವನ ನಡೆಸುವುದರಿಂದ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತಕ್ಕೀಡಾಗುವ ಸಾಧ್ಯತೆ ಇದೆ. ಜಯದೇವ ಆಸ್ಪತ್ರೆಗೆ ಈಚೆಗೆ ದಾಖಲಾಗುವ ರೋಗಿಗಳನ್ನು ಗಮನಿಸಿದಾಗ ಕಳವಳ ಉಂಟಾಗುತ್ತದೆ. 40 ವರ್ಷದೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ.

ಯುವ ಜನಾಂಗದ ಮೇಲೆ ಆಧುನಿಕ ಜೀವನ ಪದ್ಧತಿಯು ಪರಿಣಾಮ ಬೀರುತ್ತಿದೆ. ಜಯದೇವ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಾಧ್ಯವಾಗಲು ಆಸ್ಪತ್ರೆಯ ಸಿಬ್ಬಂದಿಯ ಬದ್ಧತೆಯೆ ಕಾರಣ. ರೋಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಬಿಲ್ ಕೇಳುವ ಮೊದಲು ವೈದ್ಯರು ಚಿಕಿತ್ಸೆ ಆರಂಭಿಸುತ್ತಾರೆ ಎಂದರು.

ಯಾವುದೇ ಚಿಕಿತ್ಸೆ ನೀಡಿದರೂ ರೋಗಿ ಉಳಿಯುವುದಿಲ್ಲ ಎನ್ನುವ ಪರಿಸ್ಥಿತಿ ಎದುರಾದಾಗ ವೈದ್ಯರು ಕಠಿಣ ನಿರ್ಧಾರ ಕೈಗೊಳ್ಳಬೇಕು. ಕುಟುಂಬ ವರ್ಗದವರಿಗೆ ಸರಿಯಾದ ತಿಳಿವಳಿಕೆ ಒದಗಿಸಬೇಕು. ಅನಗತ್ಯ ವೆಚ್ಚದಿಂದ ಬಡ ಕುಟುಂಬಗಳನ್ನು ಪಾರು ಮಾಡಿ ವೈದ್ಯರು ಮಾನವೀಯತೆ ಮೆರೆಯಬೇಕು. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ವೈದ್ಯರು ಮಾನವೀಯ ನೆಲೆಯಲ್ಲಿ ಸೂಕ್ತ ಸಲಹೆಗಳನ್ನು ನೀಡಬೇಕು ಎಂದು ತಿಳಿಸಿದರು.

ಸಮಾರಂಭ ಉದ್ಘಾಟಿಸಿದ ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ಮಾತನಾಡಿ, ಎಸ್‌.ಜಿ. ಸ್ವಾಮಿ ಅವರು ಸಂಗೀತ ಹಾಗೂ ಇತರೆ ಕಲೆಗಳನ್ನು ಉಳಿಸುವುದಕ್ಕೆ ಸಾಕಷ್ಟು ಪರಿಶ್ರಮಿಸಿದರು. ಸರಳ ಹಾಗೂ ಸ್ನೇಹಜೀವಿಯಾಗಿದ್ದರು. ಸಾಹಿತ್ಯ, ಕಲೆಗಳನ್ನು ಪ್ರೋತ್ಸಾಹಿಸುವ ಗುಣ ಅವರಲ್ಲಿತ್ತು ಎಂದರು.
ಪತ್ರಕರ್ತ ಎಂ.ಕೆ.ಭಾಸ್ಕರ್‌ರಾವ್ ಅವರು ಅಭಿನಂದನಾ ಭಾಷಣ ಮಾಡಿದರು. ರಾಜೀವ್‌ ಗಾಂಧಿ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್.ರವೀಂದ್ರನಾಥ ಮಾತನಾಡಿದರು.

ಜಿಲ್ಲಾ ಹೆಚ್ಚುವರಿ ನ್ಯಾಯಧೀಶಮಹಾದೇವಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು ಮಾತನಾಡಿದರು. ಎಸ್‌.ಜಿ.ಸ್ವಾಮಿ ಗೆಳೆಯರ ಬಳಗದ ಅಧ್ಯಕ್ಷ ಬಂಡೂರಾವ್ ಚ್ಯಾಗಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಪಾಟೀಲ್, ಪ್ರತಿಷ್ಠಾನದ ಅಧ್ಯಕ್ಷ ಸಿದ್ದರಾಮ ಶಾಸ್ತ್ರೀ ಶಿಖರಮಠ ಇದ್ದರು. ಪ್ರತಿಷ್ಠಾನದ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ ಶಿಖರಮಠ ನಿರೂಪಿಸಿದರು. ಮಹಾಂತೇಶ ನವಲಕಲ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT