ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಜೀವಂತವಿದ್ದರೆ ಉತ್ತರಿಸಲಿ: ಕೋಡಿಹಳ್ಳಿ

Last Updated 24 ಅಕ್ಟೋಬರ್ 2017, 9:04 IST
ಅಕ್ಷರ ಗಾತ್ರ

ರಾಯಚೂರು: ಸತತ ಬರಗಾಲ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತಕ್ಕೆ ಗುರಿಯಾದ ರೈತರನ್ನು ಸಾಲ ಮರುಪಾವತಿ ಮಾಡುವಂತೆ ಕೇಳಲು ಸರ್ಕಾರಕ್ಕೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರು ಸರ್ಕಾರ ಜೀವಂತವಿದ್ದರೆ ರೈತರ ಸಮಸ್ಯೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.

ನಗರದ ಕೃಷಿ ವಿಶ್ವವಿದ್ಯಾಲಯದ ಮೈದಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದಿಂದ ಸೋಮವಾರ ಆಯೋಜಿಸಿದ್ದ ರೈತರ ಸಾಲಮನ್ನಾಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಕೇಂದ್ರ ರಾಜ್ಯ ಸರ್ಕಾರಕ್ಕೆ ಅರ್ಜಿ ಸಲ್ಲಿಕೆ ಆಂದೋಲನದಲ್ಲಿ ಮಾತನಾಡಿದರು.

ರೈತರು ದೇಶದ ಕಾನೂನಿಗೆ ಗೌರವ ಕೊಡುತ್ತಾರೆ. ಎಂದಿಗೂ ಕಾನೂನು ಉಲ್ಲಂಘಿಸಿಲ್ಲ. ದೇಶದ ಕಾನೂನು ಸ್ವಂತಕ್ಕೆ ಬಳಕೆ ಮಾಡಿಕೊಂಡು ಸಂಪತ್ತು ಕೊಳ್ಳೆ ಹೊಡೆದವರು ತೆರಿಗೆದಾರರಾಗಿದ್ದಾರೆ. ಅದಾನಿ, ಅಂಬಾನಿ ಸೇರಿದಂತೆ ಉದ್ದಿಮೆದಾರರು ಪಾವತಿಸಿರುವ ತೆರಿಗೆಯನ್ನು ಹಾಗೂ ಅವರಿಗೆ ನೀಡಿರುವ ರಿಯಾಯಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಬೇಕು ಎಂದು ಆಗ್ರಹಿಸಿದರು.

ದೇಶದಲ್ಲಿ ಇದುವರೆಗೆ 7.50 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುದ್ಧ ಮಾಡಿದ ಸಂದರ್ಭದಲ್ಲಿ ಕೂಡ ಇಷ್ಟೊಂದು ಜನ ಸತ್ತಿರಲಿಲ್ಲ. ಬರಗಾಲದ ಸಂದರ್ಭದಲ್ಲಿ ಈ ಭಾಗದಲ್ಲಿ ನಿಜಾಮರು ಸಾಲ ಕೈಬಿಟ್ಟಿದ್ದರು. ಆದರೆ, ಈಗಿರುವ ನಿಜಾಮಗಿರಿಯರಿಗೆ ಅರ್ಥವಾಗುತ್ತಿಲ್ಲ ಎಂದು ದೂರಿದರು.

ಸಾಲವನ್ನು ರೈತರ ಮದುವೆಗೆ ಅಥವಾ ತಿಥಿಗೆ ನೀಡಿಲ್ಲ. ಸಾಲ ನೀಡಿರುವುದು ಆಹಾರ ಉತ್ಪಾದನೆ ಮಾಡುವ ಸಲುವಾಗಿ ಆದ್ದರಿಂದ ರೈತರು ಸಾಲಗಾರರಲ್ಲ. ರೈತರ ಶ್ರಮಕ್ಕೆ ಲೆಕ್ಕ ಕಟ್ಟಿ ಸರ್ಕಾರವೇ ಬಾಕಿ ಪಾವತಿ ಮಾಡಬೇಕು. ರೈತರ ಆಸ್ತಿ ಜಪ್ತಿಗೆ ನೊಟೀಸ್‌ ನೀಡುವುದು ನಿಲ್ಲಿಸಬೇಕು.

ಇಲ್ಲದಿದ್ದರೆ ಆಸ್ತಿ ಹಾಗೂ ಉಪಕರಣ ಜಪ್ತಿ ಮಾಡಲು ಬಂದವರನ್ನು ಹಳ್ಳಿಗಳಲ್ಲಿ ಕಟ್ಟಿಹಾಕಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಂದು ಬಿಡಿಸಿಕೊಂಡು ಹೋಗುವವರಿಗೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.

ರೈತರ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೆ ವೇತನ ಅಧಿಕಗೊಂಡಿದೆ. ಅವರಿಗೆ ವೇತನ ಹೆಚ್ಚಿಸುವುದಕ್ಕೆ ಅಭ್ಯಂತರವಿಲ್ಲ. ಆದರೆ, ಸರ್ಕಾರಿ ನೌಕರರ ವೇತನ ನಿಗದಿ ಪಡಿಸುವ ಮಾನದಂಡವನ್ನು ಕೃಷಿಯಲ್ಲಿ ತೊಡಗಿಸಿಕೊಂಡಿರುವ ರೈತರಿಗೂ ಅಳವಡಿಸಬೇಕು ಎಂದರು.

ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಕೋಲಾರ, ಉಪಾಧ್ಯಕ್ಷ ಜಡಿಯಪ್ಪ ದೇಸಾಯಿ, ಅಮೀನಪಾಷ ದಿದ್ದಿಗಿ ಹಾಗೂ ವಾಸುದೇವ ಮೇಟಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ಬಂಡವಾಳ ಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವ ಸರ್ಕಾರದ ಧೋರಣೆಗಳನ್ನು ಖಂಡಿಸಿದರು.

ಜಿಲ್ಲಾ ಘಟಕ ಅಧ್ಯಕ್ಷ ಸೂಗೂರಯ್ಯ ಆರ್.ಎಸ್.ಮಠ ಪ್ರಾಸ್ತಾವಿಕ ಮಾತನಾಡಿ, ರೈತರ ಸಾಲಮನ್ನಾ ಮಾಡಲು ದೇಶದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ. ಆದರೆ, ಉದ್ದಿಮೆದಾರರ ಸಾಲಮನ್ನಾ ಮಾಡಲು ಆರ್ಥಿಕ ಪರಿಸ್ಥಿತಿ ದಿವಾಳಿ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು. ಬಸವರಾಜ, ನಾಗರಾಜ, ಅಮರಯ್ಯ ಸ್ವಾಮಿ, ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT