ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭದ್ರಾವತಿಯಲ್ಲಿ ಹೆಚ್ಚಿದ ಫ್ಲೆಕ್ಸ್, ಪ್ಲಾಸ್ಟಿಕ್ ಹಾವಳಿ

Last Updated 24 ಅಕ್ಟೋಬರ್ 2017, 9:15 IST
ಅಕ್ಷರ ಗಾತ್ರ

ಭದ್ರಾವತಿ: ಇಲ್ಲಿನ ನಗರಸಭೆ ಸಾಮಾನ್ಯ ಸಭೆಯಲ್ಲಿ ಫ್ಲೆಕ್ಸ್ ಹಾಗೂ ಪ್ಲಾಸ್ಟಿಕ್ ನಿಷೇಧಕ್ಕೆ ಸರ್ವ ಸದಸ್ಯರ ಒಪ್ಪಿಗೆ ಸಿಕ್ಕಿದ್ದರೂ ಮೂರು ತಿಂಗಳಿಂದ ಅವುಗಳ ಹಾವಳಿ ಹೆಚ್ಚಾಗಿದೆ. 2010–11ನೇ ಸಾಲಿನ ಸಾಮಾನ್ಯ ಸಭೆಯಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಬಿ.ಕೆ. ಮೋಹನ್ ಪ್ರಮುಖ ವೃತ್ತ, ರಸ್ತೆಯಲ್ಲಿ ಹಾಕುವ ಫ್ಲೆಕ್ಸ್ ಮೇಲೆ ಕಡಿವಾಣ ಹಾಕಬೇಕು ಎಂಬ ನಿರ್ಣಯ ಅಂಗೀಕರಿಸಿ ಶಹಬ್ಬಾಸ್‌ಗಿರಿ ಪಡೆದಿದ್ದರು.

ಈ ನಿರ್ಧಾರ ರಾಜ್ಯದಲ್ಲಿಯೇ ಪ್ರಥಮವಾಗಿತ್ತು ಎಂಬ ಹಿರಿಮೆಯ ಮಾತು ಕೇಳಿಬಂದಿತ್ತು. ಆದರೆ, ಕೆಲವೇ ತಿಂಗಳಲ್ಲಿ ವ್ಯಕ್ತಿಗಳ ಭಾವಚಿತ್ರ ಹೊರತಾಗಿ ಜಾತ್ರೆ, ಮೆರವಣಿಗೆ, ದೇವರ ಉತ್ಸವದ ಫ್ಲೆಕ್ಸ್ ಹಾಕಲು ಅಡ್ಡಿಯಿಲ್ಲ ಎಂಬ ನಿರ್ಧಾರವನ್ನು ನಗರಸಭೆ ತೆಗೆದುಕೊಂಡಿತು.

ಅಮೃತ್ ಹಿರಿಮೆ: ಒಂದು ಕಡೆ ಕೇಂದ್ರ ಸರ್ಕಾರದ ಅಮೃತ್ ಯೋಜನೆಯ ಲಾಭವು ನಗರಕ್ಕೆ ಲಭಿಸಿದೆ. ಮತ್ತೊಂದೆಡೆ ರಾಷ್ಟ್ರೀಯ ಸ್ವಚ್ಛತಾ ಪಟ್ಟಿಯಲ್ಲಿ 111ನೇ ಸ್ಥಾನದಲ್ಲಿದೆ. ರಾಜ್ಯ ಮಟ್ಟದಲ್ಲಿ ಸ್ವಚ್ಛತೆಯಲ್ಲಿ 11ನೇ ಸ್ಥಾನ.

2016ರ ಅಂತ್ಯದಲ್ಲಿ ಆಗಿನ ಆಯುಕ್ತರಾಗಿದ್ದ ಮನೋಹರ ಅವರು ನಗರವನ್ನು ಪ್ಲಾಸ್ಟಿಕ್‌ಮುಕ್ತ ಮಾಡುವ ದೃಢ ನಿರ್ಧಾರ ತೆಗೆದುಕೊಂಡು, ಸಭೆಯ ಒಪ್ಪಿಗೆ ಪಡೆದರು. ಜೊತೆಗೆ ನಗರಸಭಾ ಕಚೇರಿ ವ್ಯವಹಾರವನ್ನು ಸಂಪೂರ್ಣ ಕಾಗದರಹಿತ ಮಾಡುವ ನಿರ್ಧಾರವನ್ನೂ ತೆಗೆದುಕೊಂಡರು. ಅದಕ್ಕಾಗಿ ₹ 44 ಲಕ್ಷ ವೆಚ್ಚದಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಿದ್ದರು.

‘ಆಯುಕ್ತ ಮನೋಹರ ಅವರ ವರ್ಗಾವಣೆಯಾದ ಬಳಿಕ ಕೇಳುವರಿಲ್ಲದಂತಾಗಿ ಈಗ ಎಲ್ಲೆಂದರಲ್ಲಿ ಫ್ಲೆಕ್ಸ್, ಪ್ಲಾಸ್ಟಿಕ್ ಚೀಲಗಳ ಹಾವಳಿ ಹೆಚ್ಚಾಗಿದೆ’ ಎಂದು ನಾಗರಿಗರು ದೂರುತ್ತಿದ್ದಾರೆ.

‘ಪ್ರತಿದಿನ ಬೆಳಿಗ್ಗೆ ನಮ್ಮೊಂದಿಗೆ ಹೆಜ್ಜೆ ಹಾಕುತ್ತಿದ್ದ ಮನೋಹರ ಸರ್, ಅಂಗಡಿ, ಹೋಟೆಲ್ ಬಳಿ ಪ್ಲಾಸ್ಟಿಕ್ ಕಂಡರೆ ವಶಕ್ಕೆ ಪಡೆದು, ನಮಗೂ ತರುವಂತೆ ಸೂಚಿಸುತ್ತಿದ್ದರು ಈಗ ಅದೆಲ್ಲಾ ಹೋಯ್ತು’ ಎಂದು ಹೆಸರು ಹೇಳಲು ಇಚ್ಛಿಸದ ಪೌರಕಾರ್ಮಿಕರು ವಿಷಾದದಿಂದ ಹೇಳುತ್ತಾರೆ.

ಮೂರ್ನಾಲ್ಕು ತಿಂಗಳಿಂದ, ಅದರಲ್ಲೂ ಗಣಪತಿ ಹಬ್ಬದ ಆರಂಭದಿಂದ ನಗರದ ಆಯಕಟ್ಟಿನ ಜಾಗಗಳಲ್ಲಿ, ಪ್ರಮುಖ ರಸ್ತೆ, ವೃತ್ತದಲ್ಲಿ ವೈಯಕ್ತಿಕ ಚಿತ್ರಗಳಿರುವ ಫ್ಲೆಕ್ಸ್‌ಗಳ ಹಾವಳಿ ಹೆಚ್ಚಾಗಿದೆ.

ಈ ಕುರಿತು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ಅದಕ್ಕೆ ಶುಲ್ಕ ಪಡೆದು ಅನುಮತಿ ನೀಡಿದ್ದೇವೆ’ ಎಂಬ ಉತ್ತರ ನೀಡುತ್ತಾರೆ. ನಿಷೇಧದ ಬಗ್ಗೆ ಪ್ರಶ್ನಿಸಿದರೆ, ‘ಅದರ ಬಗ್ಗೆ ಮಾಹಿತಿ ಇಲ್ಲ’ ಎಂಬ ಉತ್ತರ ನೀಡುವ ಮೂಲಕ ಜಾರಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT