ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರಪ್ರದೇಶದಿಂದ ನೀರು ಕೊಂಡು ಕುಡಿಯುವ ಸ್ಥಿತಿ

Last Updated 24 ಅಕ್ಟೋಬರ್ 2017, 9:23 IST
ಅಕ್ಷರ ಗಾತ್ರ

ವೈ.ಎನ್.ಹೊಸಕೋಟೆ: ಫ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರು ಒದಗಿಸಲು ಸರ್ಕಾರ ಹೋಬಳಿಯಲ್ಲಿ ಸ್ಥಾಪಿಸಿರುವ ಬಹುಪಾಲು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡು ಗ್ರಾಮೀಣ ಜನರಿಗೆ ಶುದ್ಧ ನೀರಿನ ಭಾಗ್ಯ ಇಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಎಲ್ಲ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆಗೊಂಡಿವೆ. ಪ್ರತಿ ಹಳ್ಳಿಯ ಸ್ಥಳೀಯ ಸರ್ಕಾರ ಘಟಕದ ಸ್ಥಾಪನೆಗೆ ಸ್ಥಳಾವಕಾಶ ಮತ್ತು ನೀರನ್ನು ಒದಗಿಸಿದೆ. ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆಗಾಗಿ ಬಹುಪಾಲು ಹೊರರಾಜ್ಯದ ಖಾಸಗಿ ಕಂಪೆನಿಗಳು ಗುತ್ತಿಗೆಯನ್ನು ಪಡೆದು ನೀರಿನ ಘಟಕಗಳನ್ನು ಸ್ಥಾಪಿಸಿ ನಿರ್ವಹಿಸಿತ್ತಿವೆ. ಆದರೆ ಘಟಕಗಳ ನಿರ್ವಹಣೆ ಉತ್ತಮವಾಗಿಲ್ಲದೆ ಜನರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿಲ್ಲ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಸಾರ್ವಜನಿಕ ಹಣ ಹಾಗೂ ಸರ್ಕಾರದ ಉದ್ದೇಶ ಎರಡು ವ್ಯರ್ಥವಾಗುತ್ತಿವೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ನಾಗಲಾಪುರ, ಭೀಮನಕುಂಟೆ, ಕುಣಿಹಳ್ಳಿ, ದಳವಾಯಿಹಳ್ಳಿ ಮತ್ತು ಆರ್.ಡಿ.ರೊಪ್ಪ ಗ್ರಾಮದ ಜನರು ವಿಧಿ ಇಲ್ಲದೆ ಕಂಬದೂರಿನಿಂದ ಬರುವ ಖಾಸಗಿ ಕಂಪೆನಿಯವರಿಂದ ನೀರು ಖರೀದಿಸಿ ಕುಡಿಯುತ್ತಿದ್ದೇವೆ ಎಂದು ದಳವಾಯಿಹಳ್ಳಿಯ ಮನುಪಾಳೇಗಾರ್ ತಮ್ಮ ಅಳಲು ತೋಡಿಕೊಂಡರು.

ಬಿ.ಹೊಸಹಳ್ಳಿ, ಚಿಕ್ಕಹಳ್ಳಿ, ದೊಡ್ಡೇನಹಳ್ಳಿ, ಕೊಮಾರ್ಲಹಳ್ಳಿ, ಮರಿದಾಸನಹಳ್ಳಿ, ವೈ.ಎನ್.ಹೊಸಕೋಟೆಗಳಲ್ಲಿ ಗುತ್ತಿಗೆ ಕಂಪೆನಿಯ ಅಸಮರ್ಪಕ ನಿರ್ವಹಣೆಯಿಂದ ಘಟಕಗಳು ಸಂಪೂರ್ಣ ಸ್ಥಗಿತಗೊಂಡಿವೆ ಎಂದು ಜಿ.ಲೋಕೇಶ್ ಆರೋಪಿಸಿದ್ದಾರೆ.

ದೊಡ್ಡ ಜಾಲೋಡು ಮತ್ತು ಯಲ್ಲಪ್ಪನಾಯಕನಹಳ್ಳಿ ಘಟಕದ ನೀರು ಶುದ್ಧೀಕರಣ ಸಾಮಗ್ರಿಗಳನ್ನು ಗುತ್ತಿಗೆ ಕಂಪೆನಿಯವರು ಕಿತ್ತುಕೊಂಡು ಹೋಗಿದ್ದು, ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಇಲ್ಲದಂತಾಗಿದೆ ಎಂದು ವೈ.ಎನ್.ಹಳ್ಳಿ ಮಾರಪ್ಪ ತಿಳಿಸಿದ್ದಾರೆ.

ಘಟಕಗಳಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಾಗ ಸಕಾಲದಲ್ಲಿ ಸ್ಪಂದಿಸದ ಗುತ್ತಿಗೆ ಕಂಪೆನಿಗಳ ವರ್ತನೆಯಿಂದ ಯರ್ರಮ್ಮನಹಳ್ಳಿ, ಸಾರವಾಟಪುರ, ಸಾಸಲಕುಂಟೆ ಗ್ರಾಮಗಳ ಘಟಕಗಳಲ್ಲಿ ನೀರು ಸಿಗದೆ ತಿಂಗಳುಗಳು ಕಳೆದಿವೆ ಎಂದು ಯರ್ರಮ್ಮನಹಳ್ಳಿ ರಾಮಾಂಜಿ ದೂರಿದ್ದಾರೆ.

ಘಟಕಕ್ಕೆ ನೀರು ಪೂರೈಕೆ ಸಮಸ್ಯೆಯಿಂದ ಚಿಕ್ಕಜಾಲೋಡು ಮತ್ತು ರುದ್ರಯ್ಯನರೊಪ್ಪ ಗ್ರಾಮಗಳಲ್ಲಿ ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ನಾಗಲಾಪುರ ಮತ್ತು ಜೋಡಿ ಅಚ್ಚಮ್ಮನಹಳ್ಳಿ ಘಟಕಗಳಲ್ಲಿ ನೀರಿನ ಶುದ್ಧೀಕರಣ ಸಮಸ್ಯೆಯಿಂದ ಜನರ ಬಳಕೆ ಕಡಿಮೆ ಇದೆ ಎಂದು ತಿಳಿಸಿದರು

ವಿದ್ಯುತ್ ಸಮಸ್ಯೆ, ನಿರ್ವಹಣೆದಾರರ ವೇತನ ಮತ್ತು ಸ್ಥಳೀಯ ಸಮಸ್ಯೆಗಳಿಂದಾಗಿ ಹತ್ತಾರು ಹಳ್ಳಿಗಳಲ್ಲಿ ಅಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಕೆಲವು ತಿಂಗಳು ಘಟಕಗಳು ಕಾರ್ಯನಿರ್ವಹಿಸಿದರೆ ಮತ್ತೆ ಹಲವು ತಿಂಗಳು ಸಾರ್ವಜನಿಕರಿಗೆ ನೀರು ದೊರೆಯುತ್ತಿಲ್ಲ. ಗ್ರಾಮೀಣ ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಸಿಗುವಂತೆ ಸಂಬಂಧಿಸಿದ ಇಲಾಖೆಯವರು ಕ್ರಮ ಕೈಗೊಳ್ಳಬೇಕು ಎಂದು ನೀಲಮ್ಮನಹಳ್ಳಿಯ ಅಶ್ವತ್ಥ ಒತ್ತಾಯಿಸಿದ್ದಾರೆ.

ಅಂಕಿ–ಅಂಶ
57 ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ
14 ಹಳ್ಳಿಗಳಲ್ಲಿ ಸ್ಥಗಿತ
5 ಹಳ್ಳಿಗಳಿಗೆ ಪಕ್ಕದ ರಾಜ್ಯದಿಂದ ಕುಡಿಯುವ ನೀರು ಪೂರೈಕೆ
2 ಹಳ್ಳಿಗಳಲ್ಲಿ ಘಟಕಗಳ ಸಾಮಗ್ರಿ ತೆರೆವುಗೊಳಿಸಿದ ಕಂಪೆನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT