ಸೋಮವಾರ, ಸೆಪ್ಟೆಂಬರ್ 16, 2019
26 °C

ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಆಚರಿಸಿದರೆ ವಿರೋಧವಿಲ್ಲ: ಜಗದೀಶ ಶೆಟ್ಟರ್‌

Published:
Updated:
ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಆಚರಿಸಿದರೆ ವಿರೋಧವಿಲ್ಲ: ಜಗದೀಶ ಶೆಟ್ಟರ್‌

ಹುಬ್ಬಳ್ಳಿ: ‘ಟಿಪ್ಪು ಜಯಂತಿಯನ್ನು ಖಾಸಗಿಯಾಗಿ ಯಾರೋ ಆಚರಣೆ ಮಾಡಿದಾಗ ನಾವು ವಿರೋಧ ಮಾಡಿಲ್ಲ. ಪ್ರತಿಭಟನೆಯನ್ನೂ ಮಾಡಿಲ್ಲ. ಆದರೆ, ಸರ್ಕಾರದ ವತಿಯಿಂದ ಅಧಿಕೃತವಾಗಿ ಟಿಪ್ಪು ಜಯಂತಿ ಆಚರಿಸುವುದು ಸರಿಯಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಅಭಿಪ್ರಾಯಪಟ್ಟರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಟಿಪ್ಪು ಸುಲ್ತಾನ್‌ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಾನು ಟೋಪಿ ಹಾಗೂ ಖಡ್ಗ ಹಿಡಿದುಕೊಂಡ ವೇಷದಲ್ಲಿ ಕಾಣಿಸಿಕೊಂಡಿದ್ದೆ. ಕಾರ್ಯಕ್ರಮಗಳಲ್ಲಿ ಹಲವರು ಸನ್ಮಾನ ಮಾಡುತ್ತಾರೆ, ಶಾಲು ತೊಡಿಸುತ್ತಾರೆ. ಅದು ಯಾವ ಶಾಲು, ಯಾವ ಟೋಪಿ ಎಂದು ನೋಡುತ್ತಾ ಕುಳಿತುಕೊಳ್ಳಲಾಗುತ್ತದೆಯೇ’ ಎಂದು ಅವರು ಪ್ರಶ್ನಿಸಿದರು.‘ಟಿಪ್ಪು ಸುಲ್ತಾನ್‌ ಹಿಂದೂಗಳನ್ನು ಹತ್ಯೆ ಮಾಡಿದ ವ್ಯಕ್ತಿ. ನಾಯಕ ಸಮುದಾಯದ ಒನಕೆ ಓಬವ್ವಳನ್ನು ಕೊಂದವರೂ ಅದೇ ಹೈದರಾಲಿ, ಟಿಪ್ಪು. ಕ್ರಿಶ್ಚಿಯನ್ನರಿಗೂ  ಹಿಂಸೆ ನೀಡಿದ್ದ ಎಂಬ ಉಲ್ಲೇಖವಿರುವ ಲೇಖನ ‘‘ಪ್ರಜಾವಾಣಿ’’ಯಲ್ಲಿ ಪ್ರಕಟವಾಗಿದೆ. ಅಂತಹ ಕ್ರೂರ ವ್ಯಕ್ತಿಯ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸುವ ಅಗತ್ಯವಿಲ್ಲ’ ಎಂದು ಹೇಳಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಟಿಪ್ಪು ವಂಶಸ್ಥರು ಕಾನೂನು ಸಮರಕ್ಕೆ ಮುಂದಾಗಿರುವ ಕುರಿತು ಪ್ರಶ್ನಿಸಿದಾಗ, ‘ಕಾನೂನು ಹೋರಾಟ ನಡೆಸುವುದು ಎಲ್ಲರ ಹಕ್ಕು. ಸರಿಯೋ, ತಪ್ಪೋ ನ್ಯಾಯಾಲಯದಲ್ಲಿ ತೀರ್ಮಾನವಾಗುತ್ತದೆ’ ಎಂದರು.

ಮಾತಿನ ಬದಲು, ಕೆಲಸವಾಗಲಿ

‘ಧಾರವಾಡದಲ್ಲಿ ನಡೆದ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ವಿರುದ್ಧ ಜೋರಾಗಿ ಮಾತನಾಡಿದ್ದಾರೆ. ಅಷ್ಟು ಏರುಧ್ವನಿಯಲ್ಲಿ ಮಾತನಾಡಿದಷ್ಟೇ ಜೋರಾಗಿ ಕೆಲಸ ಮಾಡಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು’ ಎಂದು ಶೆಟ್ಟರ್‌ ಹೇಳಿದರು. ‘ಸಮಾವೇಶಕ್ಕೆ ಜನರನ್ನು ಹಲವು ಆಮಿಷಗಳನ್ನು ಒಡ್ಡಿ ಕರೆತರಲಾಗಿದೆ. ನಾಲ್ಕು ವರ್ಷಗಳಾದರೂ ಎಷ್ಟೋ ಜನರಿಗೆ ಮನೆ ವಿತರಿಸಿಲ್ಲ. ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಾದ ₹137 ಕೋಟಿ ಪಿಂಚಣಿ ಹಣ ಇನ್ನೂ ನೀಡಿಲ್ಲ’ ಎಂದು ದೂರಿದರು. ‘ಆಮಂತ್ರಣ ಪತ್ರಿಕೆಯಲ್ಲಿ ಔಪಚಾರಿಕವಾಗಿ ಹೆಸರು ಹಾಕಿದ್ದಾರೆ. ಯಾರೊಬ್ಬ ಮಂತ್ರಿಯಾಗಲಿ, ಅಧಿಕಾರಿಯಾಗಲಿ ವೈಯಕ್ತಿಕವಾಗಿ ಬಂದು ಆಹ್ವಾನ ನೀಡುವುದು ಗೊತ್ತಿಲ್ಲ. ಅದರಲ್ಲಿಯೂ ಅದು ಸಾಧನಾ ಸಮಾವೇಶವಲ್ಲ, ಕಾಂಗ್ರೆಸ್‌ ಸಮಾವೇಶ. ಕಾಂಗ್ರೆಸ್‌ ಸಮಾವೇಶಕ್ಕೆ ವಿರೋಧಪಕ್ಷದ ನಾಯಕನಾಗಿ ನಾನೇಕೆ ಹೋಗಲಿ’ ಎಂದು ಪ್ರಶ್ನಿಸಿದರು.

ಸಾಲ ಮನ್ನಾ ಮಾಡಲಿ: ‘ ಉತ್ತರಪ್ರದೇಶದಲ್ಲಿ ಹೊಸದಾಗಿ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ, ರೈತರು ಸಹಕಾರಿ ಬ್ಯಾಂಕುಗಳಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿದ್ದ ₹1ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಿದ್ದಾರೆ. ಅವರಿಗೆ ಕೇಂದ್ರಸರ್ಕಾರ ಯಾವುದೇ ನೆರವು ನೀಡಿಲ್ಲ. ಅದೇ ರೀತಿ, ಸಿದ್ದರಾಮಯ್ಯ ಕೂಡ, ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾಡಿರುವ ಸಾಲವನ್ನೂ ಮನ್ನಾ ಮಾಡಲಿ’ ಎಂದರು.

Post Comments (+)