ನಗರದಲ್ಲಿ ವಿಜೃಂಭಿಸಿದ ಪ್ಲಾಸ್ಟಿಕ್‌ ಫ್ಲೆಕ್ಸ್!

ಭಾನುವಾರ, ಜೂನ್ 16, 2019
32 °C

ನಗರದಲ್ಲಿ ವಿಜೃಂಭಿಸಿದ ಪ್ಲಾಸ್ಟಿಕ್‌ ಫ್ಲೆಕ್ಸ್!

Published:
Updated:

ಯಾದಗಿರಿ: ನಗರಕ್ಕೆ ಆಗಮಿಸುವ ರಾಜಕೀಯ ಮುಖಂಡರನ್ನು ಸ್ವಾಗತಿಸುವ ನೆಪದಲ್ಲಿ ನಗರದಲ್ಲಿ ಪ್ಲಾಸ್ಟಿಕ್‌ ಜಾಹೀರಾತು ಫಲಕಗಳು ವಿಜೃಂಭಿಸುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಿಲ್ಲಾಡಳಿತ ಹಾಗೂ ನಗರಸಭೆಯ ವೈಫಲ್ಯ ಮತ್ತೆ ಸಾಬೀತಾಗಿದೆ.

ಅ.22ರಂದು ನಗರದಲ್ಲಿ ನಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೂತನ ಕಟ್ಟಡ ಉದ್ಘಾಟನೆಯಂದು ನಗರದಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಪ್ಲಾಸ್ಟಿಕ್ ಫ್ಲೆಕ್ಸ್‌ ಜಾಹೀರಾತುಗಳು ಪ್ರಮುಖ ರಸ್ತೆಗಳಲ್ಲಿನ ಬೀದಿಕಂಬಗಳನ್ನು ಅಲಂಕರಿಸುವ ಮೂಲಕ ಅಚ್ಚರಿ ಮೂಡಿಸಿವೆ. ಭಾನುವಾರ ಸಮಾರಂಭ ಮುಗಿದರೂ, ಸೋಮವಾರವೂ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ನಗರಸಭೆ ತೆರವುಗೊಳಿಸಿರಲಿಲ್ಲ.

2015ರಲ್ಲಿ ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್‌ ಬಳಕೆ ಸಂಬಂಧಿಸಿದಂತೆ ಮಹತ್ವದ ಆದೇಶ ಜಾರಿಗೊಳಿಸಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಿದೆ. ಆದರೆ, ಜಿಲ್ಲೆಯಲ್ಲಿ ಇದುವರೆಗೂ ಸರ್ಕಾರದ ಆದೇಶ ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಪರಿಣಾಮವಾಗಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಬಿದ್ದಿಲ್ಲ.

ರಾಜಕೀಯ ಮುಖಂಡರ ಹುಟ್ಟುಹಬ್ಬ, ಜಯಂತಿ ಆಚರಣೆ, ಉತ್ಸವ, ನಗರಕ್ಕೆ ಗಣ್ಯರ ಭೇಟಿ... ಹೀಗೆ ವಿವಿಧ ಕಾರಣಗಳ ನೆಪದಲ್ಲಿ ನಗರದಲ್ಲಿ ನಿರಂತರವಾಗಿ ಪ್ಲಾಸ್ಟಿಕ್ ಫ್ಲೆಕ್ಸ್‌ ಬಳಕೆ ಹೆಚ್ಚಿದೆ. ಕೆಲವರು ನಗರಸಭೆಯ ಜಾಹೀರಾತು ಫಲಕಗಳಲ್ಲಿ ಟೆಂಡರ್‌ ಪಡೆದವರಿಂದ ಪ್ಲಾಸ್ಟಿಕ್ ಫ್ಲೆಕ್ಸ್ ಹಾಕಿಸುತ್ತಿದ್ದಾರೆ. ಇಷ್ಟಾದರೂ ನಗರಸಭೆ ಜಾಣ ಕುರುಡು ಪ್ರದರ್ಶಿಸುತ್ತಾ ಬಂದಿದೆ ಎಂಬುದಾಗಿ ವಕೀಲರಾದ ಶಾಂತಪ್ಪ ಡಿ. ಜಾಧವ ದೂರಿದ್ದಾರೆ.

ಜಾಹೀರಾತು ಪ್ರದರ್ಶನಕ್ಕೆ ಸ್ಥಳೀಯ ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ನಗರಸಭೆ ಅನುಮತಿ ಇಲ್ಲದೇ ನಗರದಲ್ಲಿ ಪ್ಲಾಸ್ಟಿಕ್ ಜಾಹೀರಾತು ಫಲಕಗಳು ಕಾಣಿಸಿಕೊಳ್ಳುತ್ತಿವೆ. ಪ್ಲಾಸ್ಟಿಕ್‌ ಅಲ್ಲದ ಜಾಹೀರಾತು ಫಲಕಗಳಿಗೆ ಮಾತ್ರ ನಗರಸಭೆ ಅನುಮತಿ ನೀಡಬೇಕು ಎಂಬುದಾಗಿ ಸರ್ಕಾರ ತನ್ನ ಸುತ್ತೋಲೆಯಲ್ಲಿ ಸೂಚಿಸಿದೆ. ಆದರೆ, ಸರ್ಕಾರದ ಸೂಚನೆ ಕಾರ್ಯರೂಪಕ್ಕೆ ಬಂದಿಲ್ಲ. ಜಿಲ್ಲಾಡಳಿತ ನಗರದಲ್ಲಿ ಹೆಚ್ಚುತ್ತಿರುವ ಪ್ಲಾಸ್ಟಿಕ್‌ ಬಳಕೆ ಕುರಿತಂತೆ ಕನಿಷ್ಠ ಕಾಳಜಿ ತೋರಿಸಿಲ್ಲ ಎಂಬುದಾಗಿ ನಗರದ ಹಿರಿಯ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕ್ರಮಕೈಗೊಂಡಿದ್ದ ಅಧಿಕಾರಿಗಳು: ಈ ಹಿಂದಿನ ಜಿಲ್ಲಾಧಿಕಾರಿ ಖುಷ್ಪು ಗೋಯೆಲ್ ಚೌಧರಿ ಅವರ ಆಡಳಿತಾವಧಿಯಲ್ಲಿ ನಗರದಲ್ಲಿ ಕನಿಷ್ಠ 72 ಅಂಗಡಿಗಳ ಮೇಲೆ ದಾಳಿ ನಡೆಸಿ ₹53 ಸಾವಿರ ದಂಡ ವಸೂಲಿ ಮಾಡಿದ್ದರು. ಅಲ್ಲದೇ ನಗರಸಭೆ ವ್ಯಾಪ್ತಿಯ ಜಾಹೀರಾತು ಫಲಕಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕಠಿಣ ಎಚ್ಚರಿಕೆ ನೀಡಿದ್ದರು.

ಆಗಿನ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ನೇತೃತ್ವದಲ್ಲಿ, ಪ್ರಭಾರ ಪೌರಾಯುಕ್ತ ಡಾ.ಜಗದೀಶ ನಾಯಕ ಅಧಿಕಾರಿಗಳ ತಂಡ ರಚಿಸಿ ಪ್ಲಾಸ್ಟಿಕ್ ಜಾಹೀರಾತು ಬಳಕೆಗೆ ಕಡಿವಾಣ ಹಾಕಿದ್ದರು. ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಕೂಡ ಅಧಿಕಾರಿಗಳಿಗೆ ಬೆಂಬಲ ನೀಡಿದ್ದರು.

ಇದರಿಂದ ರಾಜಕೀಯ ಮುಖಂಡರು ಇರಿಸುಮುರುಸು ಅನುಭವಿಸಿದ್ದರು. ಚಿಲ್ಲರೆ ವ್ಯಾಪಾರಿಗಳಿಗೂ ಪ್ಲಾಸ್ಟಿಕ್ ಬಳಕೆ ಕುರಿತು ಅರಿವು ಮೂಡಿಸಲಾಗಿತ್ತು. ಆದರೆ, ಈಗ ಮತ್ತೆ ಪ್ಲಾಸ್ಟಿಕ್ ಬಳಕೆ ನಿಧಾನವಾಗಿ ವಿಜೃಂಭಿಸಿದೆ ಎಂಬುದು ನಗರದ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry