ಹೊರಟಿದ್ದೀಗ ಎಲ್ಲಿಗೆ?

ಮಂಗಳವಾರ, ಜೂನ್ 25, 2019
26 °C

ಹೊರಟಿದ್ದೀಗ ಎಲ್ಲಿಗೆ?

Published:
Updated:
ಹೊರಟಿದ್ದೀಗ ಎಲ್ಲಿಗೆ?

ಮನೆಯ ಅಂಗಳದ ತುಂಬೆಲ್ಲ ಮೊಗ್ಗು ಹರಡಿಕೊಂಡು ನಿಂತ ಮಲ್ಲಿಗೆಯ ಬಳ್ಳಿ. ಕಂಬ, ಗೋಡೆ ಬಳಸಿ ಮುಗಿಲಿನತ್ತ ಮುಖವೆತ್ತಿ ನಿಂತ ಹಸಿರ ಉಸಿರು. ಭೂಮಿಯಲ್ಲಿ ಬೇರು, ಆಕಾಶದ ಗುರಿ - ಮಣ್ಣಿನ ಸಾರ ಹೀರಿ ನೀರ ಕುಡಿದು ಹಸಿರು ಹೊತ್ತು ಹೂವ ಬಿಟ್ಟು ಕಂಪ ಬೀರಿ ಹೊರಟ ಮಲ್ಲಿಗೆಯ ಬಳ್ಳಿಯನ್ನು ಕೇಳಬೇಕು ಎನಿಸಿತು, ‘ಹೊರಟಿರುವೆ ಎಲ್ಲಿಗೆ?’ ಎಂದು. ಅದು ನಕ್ಕು ನನ್ನನ್ನೇ ಕೇಳಿಬಿಟ್ಟರೆ, ‘ನೀನೆಲ್ಲಿಗೆ?’ ಎಂದು! ಗಾಬರಿಯಿಂದ ಕತ್ತೆತ್ತಿ ಮುಗಿಲ ಚಂದ್ರ, ನಕ್ಷತ್ರಗಳನ್ನು ದಿಟ್ಟಿಸಿ ಒಳಬಂದು ಮುಸುಕೆಳೆದುಕೊಂಡೆ. ಆದರೆ ಮನಸ್ಸಿಗೆ ಎಳೆಯಲಾಗಲಿಲ್ಲ ಮುಸುಕು.

‘ನೀನೆಲ್ಲಿಗೆ?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಪ್ರತಿಧ್ವನಿಸುತ್ತಲೇ ಇತ್ತು. ಈ ಪ್ರಶ್ನೆ ಹೊಸತೂ ಅಲ್ಲ. ಕವಿವರ ಬೇಂದ್ರೆ ಹಿಂದೆಯೇ ಕೇಳಿದ್ದರು ಮಲ್ಲಿಗೆಯನ್ನು, ‘ನೀವು ಹೊರಟಿದ್ದೀಗ ಎಲ್ಲಿಗೆ?’ ಎಂದು. ಬದುಕಿನ ಭ್ರಮೆಗಳಲ್ಲಿ ಚಂದ್ರನೂ ಕನ್ನಡಿಯ ಹರಳಾಗಿ ಕಾಣುವ ಸಂದರ್ಭದಲ್ಲಿ ಮನಸ್ಸು ಸೋತು ಮರುಳಾಗುತ್ತದೆ ಎನ್ನುವ ಕವಿ ಮಲ್ಲಿಗೆಯನ್ನು ದಿಟ್ಟಿಸುತ್ತ ಮನವು ಬೆಳದಿಂಗಳಾಗುವುದನ್ನು ಸಂಭ್ರಮಿಸುತ್ತದೆ ಎನ್ನುತ್ತಾನೆ. ಮನಸ್ಸಿನಲ್ಲಿ ಬೆಳದಿಂಗಳನ್ನು ಮೂಡಿಸಿಕೊಳ್ಳುವುದು ಹೇಗೆ ಎಂಬುದೂ ಒಂದು ಪ್ರಶ್ನೆಯೇ. ಆದರೂ ಯಾವುದೋ ನಿರೀಕ್ಷೆಯ ಪ್ರತೀಕವಾಗಿ ‘ಎಲ್ಲಿಗೆ?’ ಎಂಬ ಪ್ರಶ್ನೆ ಮನಸ್ಸಿನಲ್ಲಿ ಉಳಿದುಬಿಡುತ್ತದೆ.

ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಈ ಪ್ರಶ್ನೆಯನ್ನು ಎದುರಿಸಲೇಬೇಕು. ಪ್ರಕೃತಿಯಲ್ಲಿ ಪ್ರತಿಯೊಂದೂ ಚಲನಶೀಲ ಗುಣ ಹೊಂದಿದೆ. ಈ ಎಲ್ಲ ಚಟುವಟಿಕೆಗಳ ಗುರಿ ಯಾವುದು, ಇದರಲ್ಲಿ ನನ್ನ ಪಾತ್ರ ಏನು? ಎಂಬುದು ಪ್ರತಿಯೊಬ್ಬ ಚಿಂತನಶೀಲ ವ್ಯಕ್ತಿಯನ್ನು ಕಾಡುವ ಪ್ರಶ್ನೆ. ಬದುಕು ಹೊರನೋಟಕ್ಕೆ ಅರ್ಥಹೀನ ಕ್ರಿಯೆಗಳ ಸರಮಾಲೆ. ಆದರೆ ‘ಜೀವಗತಿಗೊಂದು ರೇಖಲೇಖವಿರಬೇಕು’ ಎಂಬ ಕಗ್ಗವಾಣಿಯ ಹಿನ್ನೆಲೆಯಲ್ಲಿ ನಡೆವ ಪಯಣ, ಶೋಧ ಬದುಕೆ? ದೇವರೆಂಬ ನಂಬಿಕೆ, ಪರಮಾರ್ಥದ ಚಿಂತನೆ ಬದುಕಿನ ಸೂತ್ರ ಎನ್ನುತ್ತಾನೆ ಆಸ್ತಿಕ. ರಸಾಸ್ವಾದನೆಯೇ, ರಸಾನುಭವವೇ ಬಾಳಿನ ರಸಾಯನ ಎನ್ನುತ್ತಾನೆ ರಸಿಕ.

ಇಂದ್ರಿಯಗ್ರಾಹ್ಯ ಸಾಮಾನ್ಯ ಅನುಭವಗಳಿಗೆ ಸೀಮಿತವಾದ ಸಿದ್ಧಾಂತ ಚಾರ್ವಾಕವಾದ. ಮಿತಿಯಿದೆ ಎಂದ ಮಾತ್ರಕ್ಕೆ ಇದನ್ನು ನಿಷೇಧಿಸಬೇಕು ಎಂದೇನು ಇಲ್ಲ. ಜೀವನದ ಪ್ರಯೋಗಶಾಲೆಯಲ್ಲಿ ಎಲ್ಲದಕ್ಕೂ ಅವಕಾಶವಿದೆ. ಮತ್ತೊಬ್ಬರ ಅಥವಾ ವ್ಯಷ್ಟಿಯ ಹಿತಕ್ಕೆ ಧಕ್ಕೆಯಾಗದಂತಹ ಯಾವುದೇ ಪ್ರಯೋಗಕ್ಕೂ ಇಲ್ಲಿ ಸ್ವಾಗತವಿದೆ. ಆದರೆ ಇಂದ್ರಿಯಗಳಾಚೆಗೂ ಅನುಭವವಿದೆಯಾದ್ದರಿಂದ ಈ ವಾದ ಹೆಚ್ಚು ಕಾಲ, ಹೆಚ್ಚು ಜನರನ್ನು ಆಕರ್ಷಿಸಲಾರದು, ಅನುಭವಗಳಾಚೆಗೂ ಈ ಪ್ರಶ್ನೆ ಉಳಿಯುತ್ತದೆ, ‘ಮುಂದೇನು, ಮತ್ತೇನು?’, ಇದು ‘ಎಲ್ಲಿಗೆ?’ ಎಂಬುದರ ಮತ್ತೊಂದು ರೂಪ ಅಷ್ಟೆ.

ಹೊರಟಾಗ ಕೇಳಬಾರದಂತೆ ‘ಎಲ್ಲಿಗೆ?’ ಎಂದು. ಅಪಶಕುನ ಎನ್ನುತ್ತಾರೆ ಹಿರಿಯರು. ಬಹುಶಃ ಮನಸ್ಸಿನಲ್ಲೊಂದು ಗುರಿಯಿರಿಸಿ ಅಡಿ ಹೊರಗಿಡುವಾಗ ‘ಎಲ್ಲಿಗೆ?’ ಎಂಬ ಪ್ರಶ್ನೆ ಎದುರಿಸಿದರೆ, ಕೇಳಿಕೆಯ ಬೆನ್ನಲ್ಲೇ ಮತ್ತೊಂದು ಪ್ರಶ್ನೆ ಉದಿಸುತ್ತದೆ, ‘ಏಕೆ?’, ಗುರಿಯನ್ನೇ ಗದರಿಸುವ ಈ ಎರಡನೆಯ ಪ್ರಶ್ನೆಯ ಭಯದಿಂದ ಮೊದಲ ಪ್ರಶ್ನೆಯೇ ಬಾರದಂತೆ ಎಚ್ಚರಿಕೆ ವಹಿಸುತ್ತಾರೆ. ಎಲ್ಲ ಮನುಷ್ಯರೂ ಒಂದೇ ಮಟ್ಟದ ಸಂಕಲ್ಪಶಕ್ತಿ ಹೊಂದಿರುವುದಿಲ್ಲ. ಅಷ್ಟು ದೃಢವಲ್ಲದ ಮನಸ್ಸುಳ್ಳವರಿಗೆ ಈ ಬಗೆಯ ಪ್ರಶ್ನೆಗಳು ಅಧೀರತೆಯನ್ನುಂಟುಮಾಡುವುದರಿಂದ ಅವರು ಕಾರ್ಯಪ್ರವೃತ್ತರಾಗುವಾಗ ‘ಎಲ್ಲಿಗೆ’ ಪ್ರಶ್ನೆ ಅಡಚಣೆಯಾಗಿಬಿಡುತ್ತದೆ.

ಆದರೆ ಧೀರಮನಸ್ಕರಿಗೆ (ನಚಿಕೇತನಂತಹವರಿಗೆ) ಯಾವ ಪ್ರಶ್ನೆಯೂ ತಡೆಯಾಗಲಾರದು, ಸಾಮಾನ್ಯ ಉತ್ತರಗಳೂ ತೃಪ್ತಿ ನೀಡವು. ಅಂತಿಮ ಪರಿಹಾರವೇ ಬೇಕೆಂದು ಕುಳಿತ ಬುದ್ಧನಿಗೂ ಅಷ್ಟೆ. ಆದರೆ ಸಾಮಾನ್ಯರು ಮತ್ತು ಅಸಾಮಾನ್ಯರೂ ಅನಿವಾರ್ಯವಾಗಿ ಎದುರಿಸಬೇಕಾದ, ದಾಟಬೇಕಾದ ಪ್ರಶ್ನೆಯಿದು. ಇದನ್ನು ದಾಟದ ಹೊರತು ಬದುಕಿನ ಪಯಣವೇ ಆರಂಭವಾಗಿಲ್ಲವೆನ್ನಬಹುದು. ಬದುಕಿನ ಅನ್ವೇಷಣೆಯ ಮೂಲಪ್ರಶ್ನೆಯೇ ಇದು. ಒಂದು ಅವಸ್ಥೆಯಿಂದ ಮತ್ತೊಂದು ಅವಸ್ಥೆಗೆ ಜಾರಿಕೊಳ್ಳುವ ಜೀವನಕ್ಕೆ ಹಲವಾರು ಆಯಾಮಗಳು. ಎಲ್ಲ ಪ್ರಶ್ನೆಗಳ, ಪಯಣಗಳ ಗುರಿ - ನೆಮ್ಮದಿ, ಶಾಂತಿ, ಸಮಾಧಾನ.

ಇದನ್ನು ಪಡೆಯುವುದೇ ಜೀವನದ ಹೋರಾಟ. ಎಲ್ಲರ ಮಾರ್ಗವೂ ಒಂದೇ ಆಗಿರದಿದ್ದರೂ ಗುರಿ ಮಾತ್ರ ಒಂದೇ. ಅವ್ಯಕ್ತದ ವ್ಯಕ್ತರೂಪದ ಚೌಕಟ್ಟಿನೊಳಗೆ ಬಂಧಿತನಾದ ಮನುಷ್ಯ ಸದಾ ಅದನ್ನು ಮುರಿದು ಹೊರಬರುವ ಹಂಬಲ ತೋರುತ್ತಾನೆ. ಎತ್ತರಕ್ಕೆ ಹಾರಿ ಮಂಗಳನ ಅಂಗಳಕ್ಕೆ ಲಗ್ಗೆ ಹಾಕಿದರೂ, ಆಳಕ್ಕೆ ಧುಮುಕಿ ಸಾಗರದ ಮುತ್ತುಗಳನ್ನು, ಮುಳುಗಿಹೋದ ಹಡಗುಗಳ ಬಂಗಾರವನ್ನೆಲ್ಲ ಶೋಧಿಸಿ ತಂದರೂ ಮನುಷ್ಯನಿಗೆ ತೃಪ್ತಿ ಮಾತ್ರ ಕ್ಷಣಿಕ. ಮಂಗಳನ ಆಚೆಗೂ ಸಮುದ್ರದ ಕೆಸರಿನೊಳಗೂ ಕೆದಕುವ ಮಂಗಮನಸ್ಸಿನ ಮಾನವ ತನ್ನ ಬಂಧನದ ಕಾರಣ, ಅದರ ಪರಿಧಿ ಬಹಳ ಸೂಕ್ಷ್ಮ ಎಂದು ತಿಳಿಯದಿದ್ದರೆ ತನ್ನ ಅಸ್ತಿತ್ವದ ಆಳ-ಅಗಲಗಳನ್ನು ಅನ್ವೇಷಿಸಿ ಮುಗಿಸಲಾರ. ಎಲ್ಲ ಅನ್ವೇಷಣೆಗಳು ಆರಂಭವಾಗುವುದೇ ಪ್ರಶ್ನೆಗಳಿಂದ.

ಇನ್ನೊಂದು ವಿಚಾರವಿದೆ. ಹುಟ್ಟು-ಸಾವಿನ ನಡುವಿನದೇ ಬಾಳಲ್ಲ. ಕೆಲವರು ಸತ್ತು ಬದುಕುತ್ತಾರೆ. ಬಂದಾಗ ಇವರ ವಿಳಾಸ ಯಾರಿಗೂ ತಿಳಿಯದು, ಹೊರಟಾಗ ಎಲ್ಲರಿಗೂ ಇವರು ಗೊತ್ತು, ಎಲ್ಲರಿಗೂ ಇವರು ಬೇಕು! ಇಂಥವರ ಯಶಸ್ಸಿನ ಗುಟ್ಟೇನು? ‘ಎಲ್ಲರೊಳಗೊಂದಾಗು’ ಎನ್ನುವುದೇ ಇವರ ಸೂತ್ರ. ತಮ್ಮ ವಿಳಾಸವನ್ನು ಇವರು ಇತರರ ಸಂತೋಷದಲ್ಲಿ, ಸೇವೆಯಲ್ಲಿ ಕಂಡುಕೊಂಡರು. ಇಂತಹವರ ಪಯಣದಲ್ಲಿ ಪ್ರಶ್ನೆ ಮತ್ತು ಉತ್ತರಗಳು ಮಿಳಿತವಾಗಿಬಿಟ್ಟಿರುತ್ತವೆ. ಎಲ್ಲಿಗೆ? ಏಕೆ? ಹೇಗೆ? ಎಂಬುದೆಲ್ಲದಕ್ಕಿಂತ ಪರರ ನೋವ ಮರೆಸುವುದೇ ತಮ್ಮ ಕಾಯಕ ಎಂದು ನಂಬಿ ಅದರಂತೆ ಬಾಳುವವರು ಇವರು. ಇದ್ದಾರೆ, ಇಂತಹವರು ಅನೇಕರು ಇದ್ದಾರೆ.

ಆಂಧ್ರಪ್ರದೇಶದ ನಲ್ಲೂರಿನ ‘ಚೈಲ್ಡ್ ಆಶ್ರಮ’ದ ರಾಮಚಂದ್ರ ಶರತ್ ಬಾಬುವಿಗೆ ನೂರ ಇಪ್ಪತ್ತು ಮಕ್ಕಳು. ಈ ಮಕ್ಕಳು ಇವರ ಜೈವಿಕ ಸಂತಾನವಲ್ಲ. ರೈಲ್ವೆ ಇಲಾಖೆಯಲ್ಲಿ ಕಾರಕೂನರಾಗಿದ್ದ ಶರತ್ ಪ್ಲಾಟ್‌ಫಾರಂಗಳಲ್ಲಿ ಭಿಕ್ಷೆ ಬೇಡುತ್ತಿದ್ದ, ನಾನಾ ಬಗೆಯ ಆಪತ್ತಿಗೊಳಗಾಗುತ್ತಿದ್ದ ಮಕ್ಕಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಸಾಕುತ್ತಿದ್ದಾರೆ. 1994ರಲ್ಲಿ ಕೇವಲ 30*15 ಅಡಿಯ ಕುಟೀರದಲ್ಲಿ ಆರಂಭವಾದ ಸೇವಾ ಸಂಸ್ಥೆ ಈಗ 4.5 ಎಕರೆ ವಿಸ್ತೀರ್ಣದಲ್ಲಿ ಬಹು ಸುಸಜ್ಜಿತವಾಗಿ ಕಾರ್ಯನಿರ್ವಹಿಸುತ್ತಿದೆ. ಗಂಡು-ಹೆಣ್ಣುಮಕ್ಕಳಿಗೆ ಪ್ರತ್ಯೇಕವಾದ ವಸತಿ ಸಮುಚ್ಚಯಗಳಿದ್ದು ಶರತ್ ಶಾಲೆಯನ್ನೂ ಆರಂಭಿಸಿದ್ದಾರೆ.

ಈ ಶಾಲೆಯ ಮಕ್ಕಳು ಬೆಳೆದು ಪೊಲೀಸ್ ಅಧಿಕಾರಿಗಳಾಗಿ, ವಿಜ್ಞಾನಿಗಳಾಗಿ, ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲೋ ಪ್ಲಾಟ್‌ಫಾರ್‌ಂನಲ್ಲಿ ಕಳೆದುಹೋಗಬೇಕಾದ ಬದುಕಿಗೆ ನೆಲೆ ಕಲ್ಪಿಸಿದ ಕೃತಾರ್ಥತೆಯನ್ನು ನಾವಿಲ್ಲಿ ಕಾಣಬಹುದು. ಈ ಮಕ್ಕಳ ಶಾಲಾ ದಾಖಲಾತಿಯ ಸಂದರ್ಭದಲ್ಲಿ ‘ತಂದೆಯ ಹೆಸರು’ ಕಾಲಂನಲ್ಲಿ ತಮ್ಮ ಹೆಸರನ್ನು ಬಹಳ ಹೆಮ್ಮೆಯಿಂದ ಬರೆಸುತ್ತಾರೆ ಶರತ್. ಎಲ್ಲ ನೂರಿಪ್ಪತ್ತು ಮಕ್ಕಳಿಗೂ ಮುದ್ದಿನ ‘ಡ್ಯಾಡಿ’ ಶರತ್. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಅನಾಥ, ಹಿಂದುಳಿದ, ಬಡ ವಿದ್ಯಾರ್ಥಿಗಳಿಗೆ ನೆಲೆಯಾದ ಜಿ.ಎಸ್. ಜಯದೇವ ಅವರ ‘ದೀನಬಂಧು’ ಟ್ರಸ್ಟ್ ಚಾಮರಾಜನಗರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ಒಮ್ಮೆ ಇಲ್ಲಿ ಸೇರಿದ ಮಗು ಪ್ರೌಢಶಾಲೆ ಮುಗಿಸುವವರೆಗೂ ಓದಬಹುದು.

ಮುಂದೂ ಓದ ಬಯಸುವ ವಿದ್ಯಾರ್ಥಿಗೆ ಸಂಸ್ಥೆ ನೆರವು ನೀಡುತ್ತದೆ, ಅವನು ಆರ್ಥಿಕ ನೆಲೆ ಕಂಡುಕೊಳ್ಳುವವರೆಗೂ ಟ್ರಸ್ಟ್ ನೆರವು ನೀಡುತ್ತದೆ. ‘ದೀನರಿಗೆ ಬಂಧುವಾಗಿ ಜೀವರ ಸೇವೆಯಲ್ಲಿ ದೇವನು ಜಯಗಳಿಸುತ್ತಿರುವನೇ ಜಯದೇವರ ಮೂಲಕ?’ ಎಂಬ ಪ್ರಶ್ನೆ ಈ ಟ್ರಸ್ಟ್‌ಗೆ ಭೇಟಿ ನೀಡಿದವರನ್ನು ಕಾಡುತ್ತದೆ. ಇವರಿಬ್ಬರು ಸೇವಾಕರ್ತರು ತಮ್ಮ ‘ಎಲ್ಲಿಗೆ’ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದು ಅಸಹಾಯಕ ಮಕ್ಕಳ ಬದುಕನ್ನು ಅರಳಿಸುವ ಗುರಿಯಲ್ಲಿ.

‘ಎಲ್ಲಿಗೆ?’ ಎಂಬ ಪ್ರಶ್ನೆಗೆ ಮತ್ತೊಂದು ಸ್ವಾರಸ್ಯವಾದ ಉತ್ತರವಿದೆ. ಎಲ್ಲಿಂದ ಬಂದೆವೆಂದು ತಿಳಿದರೆ ಮತ್ತೆ ಅಲ್ಲಿಗೆ ಹಿಂದಿರುಗಿ ಹೋಗುತ್ತೇವೆಂದು ಹೇಳಬಹುದು. ಸಂಜೆಯಾದರೆ ಹಕ್ಕಿ ಗೂಡು ಸೇರುತ್ತದೆ, ಸಿಂಹ ಗವಿಯನ್ನು ಹೊಗುತ್ತದೆ. ರಾತ್ರಿ ತಡವಾಗುತ್ತಿದ್ದಂತೆ ಮನುಷ್ಯನೂ ಉದ್ಗರಿಸುತ್ತಾನೆ, ‘ವೇಳೆ ಮೀರುತ್ತಿದೆ, ಮನೆ ಸೇರಬೇಕು. ’ಮನೆ ಎಂಬುದೊಂದು ನೆಲೆ, ಮನೆಯಿಂದ ಮನೆಗೆ ಚಲಿಸುವುದೇ ಬದುಕೊ? ಅಥವಾ ದಾಸರು ಹೇಳಿದಂತೆ, ‘ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ’ಯೊ? ಮತ್ತೂ ಆಳಕ್ಕೆ ಇಳಿದರೆ, ‘ನೀನು ಬಂದೇ ಇಲ್ಲ, ಆದ್ದರಿಂದ ಎಲ್ಲಿಗೂ ಹೋಗಬೇಕಾಗಿಯೂ ಇಲ್ಲ’ ಎಂಬ ವೇದಾಂತದ ಉತ್ತರ ಉಂಟು. ಇದ್ದವರಿಗೊಂದು ವಿಳಾಸ, ಇಲ್ಲದವರಿಗೆ - ಒಂದಲ್ಲ ನೂರೊಂದು! ಹಾಲುಗಡಲಿನಲ್ಲಿ ತೇಲುವ ಹರಿ ಕಂಬದಲ್ಲಿ ನರಸಿಂಹನಾಗಿ ಕಾಣಿಸಿಕೊಳ್ಳುವುದು ಹೀಗೆ. ಕುಟೀಚಕನಾದವನು ಬಳಿಕ ಬಹೂದಕನಾಗಿ ಕೊನೆಗೆ ಪರಮಹಂಸನಾಗುವುದೂ ಹೀಗೇ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry