ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತಾಗಿ ಸಾಲ ನೀಡುವ ಸಂಸ್ಥೆಗಳು

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಅನೇಕರಿಗೆ ಹಲವಾರು ಸಂದರ್ಭಗಳಲ್ಲಿ ತುರ್ತಾಗಿ ಸಾಲ ಬೇಕಾಗುತ್ತದೆ. ಸ್ನೇಹಿತರಲ್ಲಿ ಕೈಸಾಲ ಪಡೆದರೂ ಸಾಕಾಗದೇ ಹೋದಾಗ ದುಬಾರಿ ಬಡ್ಡಿಗೆ ಸಾಲ ಪಡೆಯಬೇಕಾಗುತ್ತದೆ. ಕ್ರೆಡಿಟ್‌ ಕಾರ್ಡ್‌ಗಳು ಎಲ್ಲರಿಗೂ ದೊರೆತಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಸಾಲದ ಅಗತ್ಯ ಪೂರೈಸಲೆಂದೇ ಆನ್‌ಲೈನ್‌ ಮತ್ತು ಕಿರುತಂತ್ರಾಂಶ ಆಧಾರಿತ ಸಂಸ್ಥೆಗಳು ಈಗ ಸಾಲ ನೀಡಲು ಹೊರಟಿವೆ.

ಇಲ್ಲಿ ಸಾಲ ಪಡೆಯಲು ಆಧಾರ್‌, ಪ್ಯಾನ್‌ ಕಾರ್ಡ್‌, ಬ್ಯಾಂಕ್‌ ಖಾತೆ – ಇಂತಹ ದೃಢೀಕೃತ ವಿಳಾಸಗಳು ಅಗತ್ಯ. ಇಂತಹ ದಾಖಲೆಗಳನ್ನು ಒದಗಿಸಿದರೆ ಸಾಲವು ಬ್ಯಾಂಕ್‌ ಖಾತೆಗೆ ಬಂದು ಬೀಳುತ್ತದೆ, ಇಂತಹ ಸಂಸ್ಥೆಗಳು ವಿಧಿಸುವ ಬಡ್ಡಿ ದರಗಳನ್ನು ಪರಿಶೀಲಿಸಿಯೇ ಸಾಲ ಪಡೆಯಲು ಮುಂದಾಗಬೇಕು. ಈ ಸಂಸ್ಥೆಗಳೂ ಸಿಕ್ಕ ಸಿಕ್ಕವರಿಗೆ ಸಾಲವನ್ನೂ ನೀಡುವುದಿಲ್ಲ. ಸಾಲ ಪಡೆಯುವವರ ಸಾಲ ಮರು ಪಾವತಿ ಸಾಮರ್ಥ್ಯ ಆಧರಿಸಿಯೇ ಸಾಲ ಮಂಜೂರು ಮಾಡುತ್ತವೆ, ಆಪತ್ಕಾಲಕ್ಕೆ ನೆರವಾಗುವ ಇಂತಹ ಹೊಸ ಸಾಲ ಸಂಸ್ಥೆಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.

ಅರ್ಲಿ ಸ್ಯಾಲರಿ
ಸಂಬಳ ಖಾತೆಗೆ ಜಮೆಯಾಗುವುದಕ್ಕೆ ಇನ್ನೂ ಹತ್ತು ದಿನ ಕಾಯಬೇಕು. ಆದರೆ ಸದ್ಯಕ್ಕೆ ಖರ್ಚಿಗೆ ಹಣ ಇರುವುದಿಲ್ಲ. ತುರ್ತು ಪರಿಸ್ಥಿತಿ ಎದುರಾದರೆ ಇನ್ನೂ ಕಷ್ಟ. ಈ ಸಮಸ್ಯೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆರಂಭವಾದದ್ದೇ ‘ಅರ್ಲಿ ಸ್ಯಾಲರಿ’ ಸಂಸ್ಥೆ.

2015ರಲ್ಲಿ ಅಕ್ಷಯ್‌ ಮೊಹೊತ್ರಾ ಮತ್ತು ಆಶಿಷ್‌ ಗೋಯಲ್‌ ಅವರು ಇದನ್ನು ಆರಂಭಿಸಿದರು. ಪ್ರಸ್ತುತ ಬೆಂಗಳೂರು ಸೇರಿದಂತೆ ದೇಶದ ಏಳು ಪ್ರಮುಖ ನಗರಗಳಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದು ಆ್ಯಪ್‌ ಆಧಾರಿತ ಸಂಸ್ಥೆ.

ತುರ್ತು  ಸಂದರ್ಭಗಳಲ್ಲಿ ನಮ್ಮ ಸಂಬಳದ ಶೇ 50ರಷ್ಟು ಹಣವನ್ನು ಪಡೆಯಬಹುದು. ₹8,000 ದಿಂದ ₹ 1,00,000ವರೆಗೆ ನಮ್ಮ ಸಂಬಳಕ್ಕೆ ತಕ್ಕಂತೆ ಸಂಸ್ಥೆ ಸಾಲ ನೀಡುತ್ತದೆ.

ಲೋನ್‌ ಟ್ಯಾಪ್‌
ಇದು ಉದ್ಯೋಗಿಗಳಿಗೆ ಮಾತ್ರ ಸಾಲ ಒದಗಿಸುವ ನವೋದ್ಯಮ. ಅಲ್ಲದೇ ‘ಇಎಮ್‌ಐ ಫ್ರೀ ಲೋನ್‌’ ಸೌಲಭ್ಯ ನೀಡುತ್ತದೆ. ಅಂದರೆ ಪ್ರತಿ ತಿಂಗಳು ಕಡ್ಡಾಯವಾಗಿ ಕಂತಿನ ರೂಪದಲ್ಲಿ ಸಾಲ ಮರುಪಾವತಿಸುವ ಅಗತ್ಯ ಇಲ್ಲ.

ಹಣ ಹೊಂದಿಸಿಕೊಂಡು ಬೇಕೆಂದಾಗ ಸಾಲ ಮರುಪಾವತಿಸಬಹುದು. ಆದರೆ ಸಾಲ ಪಡೆದ ಐದು ವರ್ಷಗಳಲ್ಲಿ ಪಾವತಿಸುವುದು ಕಡ್ಡಾಯ.ಬಾಡಿಗೆ ಮನೆಗೆ ಅಡ್ವಾನ್ಸ್‌ ಬೇಕಿದ್ದರೆ ಈ ಸಂಸ್ಥೆ ಲೋನ್‌ ಕೊಡುತ್ತದೆ. ಪ್ರಸ್ತುತ ಈ ಸಂಸ್ಥೆ ಬೆಂಗಳೂರು, ದೆಹಲಿ, ಮುಂಬೈ, ಪುಣೆ ನಗರಗಳಲ್ಲಿ ಕೆಲಸ ಮಾಡುತ್ತಿದೆ.

ಎಜ್‌ ಕ್ರೆಡ್‌

ಈ ಸಂಸ್ಥೆಯನ್ನು ಸಚಿನ್‌ ಪಾಠಕ್‌ ಮತ್ತು ಅಮಿಯಾ ಮಹೇಶ್ವರಿ ಜತೆಗೂಡಿ ಆರಂಭಿಸಿದರು. ಸಾಲ ಬೇಕಿದ್ದರೆ, ಈ ಸಂಸ್ಥೆಯ ವೆಬ್‌ಸೈಟ್‌ಗೆ ಹೋಗಿ ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ಕಾರ್ಡ್ ಕಡ್ಡಾಯ.

ನಿಮ್ಮ ಆಧಾರ್‌ ಸಂಖ್ಯೆಯನ್ನು ನೀಡಿದರೆ ಸಾಕು ನಿಮ್ಮ ವಿವರಗಳನ್ನೆಲ್ಲಾ ಸಂಸ್ಥೆಯೇ ತುಂಬಿಸಿಕೊಳ್ಳುತ್ತದೆ.
ಈ ನವೋದ್ಯಮವೂ ಸಹ ಕಂಪ್ಯೂಟರ್, ಲ್ಯಾಪ್‌ಟಾಪ್‌, ಮೊಬೈಲ್‌ ಇತ್ಯಾದಿ ವಸ್ತುಗಳನ್ನು ಕೊಳ್ಳುವುದಕ್ಕೆ ಸಾಲ ಕೊಡುತ್ತದೆ. ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ತೆಗೆದುಕೊಳ್ಳಲು ಈ ಸಂಸ್ಥೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಬಡ್ಡಿದರವೂ ಕಡಿಮೆ ಇರುವುದರಿಂದ ಈ ಸಂಸ್ಥೆ ಜನಪ್ರಿಯವಾಗುತ್ತಿದೆ.

ಪೇ ಸೆನ್ಸ್‌
ಕೈಯಲ್ಲಿ ಬಿಡಿಗಾಸು ಇಲ್ಲದಿದ್ದರೂ ತಕ್ಷಣ ಮೊಬೈಲ್‌ ಕೊಳ್ಳಬೇಕು ಎಂಬ ಆಸೆ. ಆದರೆ ತಕ್ಷಣಕ್ಕೆ ದುಡ್ಡು ಕೊಡುವವರು ಯಾರು? ಈ ರೀತಿಯ  ಉಪಕರಣಗಳನ್ನು ಖರೀದಿಸುವುದಕ್ಕಾಗಿಯೇ ಪೇ ಸೆನ್ಸ್‌ ಸಂಸ್ಥೆ ಸಾಲ ನೀಡುತ್ತಿದೆ.

ಮೊಬೈಲ್‌ ಕೊಳ್ಳುವುದಕ್ಕೆ ಸಾಲ ಬೇಕು ಎಂದು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು ಈ ಸಂಸ್ಥೆ ಸಾಲ ಮಂಜೂರು ಮಾಡುತ್ತದೆ.‌ ಆದರೆ ಸಾಲ ನಿಮ್ಮ ಕೈ ಸೇರಲು ಒಂದು ವಾರ ಬೇಕಾಗಬಹುದು. ಪ್ರತಿ ತಿಂಗಳು ಕಂತಿನ ರೂಪದಲ್ಲಿ ಅಸಲು ಸಮೇತ ಬಡ್ಡಿ ಪಾವತಿಸಬೇಕು. ಇಲ್ಲಿ ₹5,000ದಿಂದ ₹1 ಲಕ್ಷದ ವರೆಗೆ ಸಾಲ ಸಿಗುತ್ತದೆ. ಬೆಂಗಳೂರು, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಸಂಸ್ಥೆ ಕೆಲಸ ಮಾಡುತ್ತಿದೆ.

ಕಿಸ್ತ್‌ (Kissht)
ಹಣದ ಅವಶ್ಯಕತೆ ಇದ್ದಾಗ ಹಲವರು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಆದರೆ ಬ್ಯಾಂಕ್‌ಗಳಿಂದ ಸಾಲ ಪಡೆಯವುದು ಅಷ್ಟೊಂದು ಸುಲಭವಲ್ಲ. ಕೆಲವೊಮ್ಮೆ ದಾಖಲೆಗಳಲ್ಲಿ ಸಣ್ಣ ಪುಟ್ಟ ದೋಷಗಳಿದ್ದರೂ ಬ್ಯಾಂಕ್‌ನವರು ಸಾಲ ಕೊಡಲು ನಿರಾಕರಿಸಬಹುದು. ಈ ಸಮಸ್ಯೆಗಳಿಂದಾಗಿಯೇ ಕೃಷ್ಣನ್‌ ವಿಶ್ವನಾಥನ್ ಅವರು ‘ಕಿಸ್ತ್‌’ ಎಂಬ ಸಾಲ ನೀಡುವ ಆನ್‌ಲೈನ್ ಸಂಸ್ಥೆ ಆರಂಭಿಸಿದ್ದಾರೆ.

ಈ ವರೆಗೆ 9 ಕೋಟಿ ಜನರಿಗೆ ಸುಮಾರು ₹ 17 ಕೋಟಿ ವರೆಗೆ ಈ ಸಂಸ್ಥೆ ಸಾಲ ನೀಡಿದೆ. ಮೂರು ಬ್ಯಾಂಕ್‌ಗಳೊಂದಿಗೆ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ. ಲ್ಯಾಪ್‌ಟಾಪ್‌, ಮೊಬೈಲ್‌ಫೋನ್‌ ಕೊಳ್ಳುವುದಕ್ಕೂ ಸಾಲ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT