ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಗರ ನಡುವಿನ ಮೌನ ಮುರಿದ ರಾಯರಿಗೆ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪ್ರೀತಿಯ ರಾಯರೇ,

ಇಬ್ಬರು ಹಿರಿಯರ ನಡುವೆ ಗೋಡೆ ಕಟ್ಟಿದ್ದ ಹಲವು ವರ್ಷಗಳ ಮುನಿಸಿನ ಮೌನಕ್ಕೆ ಈ ದೀಪಾವಳಿಯು ಹೀಗೆಲ್ಲಾ ಮಾತಿನ ಸುತ್ತಿಗೆಯ ಏಟನ್ನು ಕೊಟ್ಟು ಪುಡಿಪುಡಿ ಮಾಡಿ, ಸೇತುವೆ ಕಟ್ಟುವುದೆಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ ರಾಯರೇ.

ಆಡಿದ್ದು ಕೆಲವೇ ಕ್ಷಣಗಳ ಮಾತಾದರೂ, ಆ ಮಾತು ಎದೆಯಲ್ಲಿ ಮೂಡಿಸಿದ ಸೌಹಾರ್ದ, ಸಮಾಧಾನವನ್ನು ಎಲ್ಲಿಯೂ ಅವರಿಬ್ಬರು ಎದೆತಟ್ಟಿ ಹೇಳಿಕೊಳ್ಳದಿದ್ದರೂ, ಅದು ಹಾಗೆ ಆಗಲೇಬೇಕಿತ್ತು. ಆ ಕ್ಷಣ ಅದಕ್ಕಾಗಿಯೇ ಕಾದಿತ್ತೇನೋ.

ರಾಯರೇ, ಅವರು ಎಲ್ಲಿಯವರೋ ಅಲ್ಲ. ಸ್ವತಃ ಬೀಗರು, ಮದುವೆ ಮನೆಯಲ್ಲಿ ಒಡಕು ತರುವವರ ಮಾತಿಗೇನು ಬರ. ಅಂಥದ್ದೊಂದು ವಿಷಗಳಿಗೆಯಲ್ಲಿ ಇಂಥದ್ದೇ ಮಾತು ಗೋಡೆ ಕಟ್ಟಿತ್ತು. ಅದು ಇಬ್ಬರ ನಡುವೆ ಆಕಾಶ ಮತ್ತು ಭೂಮಿಯನ್ನು ಒಂದು ಮಾಡಿ ನಿಂತ ಗೋಡೆ. ಆ ಕಡೆಯವರು ಈ ಕಡೆಯವರಿಗೆ ಕಾಣುತ್ತಿರಲಿಲ್ಲ. ಅವರ ಮಾತು ಇವರಿಗೆ ಕೇಳುತ್ತಿರಲಿಲ್ಲ.

ಎಲ್ಲ ಗಾಯಗಳೂ ಮಾಯುತ್ತವೆ ಎಂದು ಬುದ್ಧ ಹೇಳಿದ್ದ. ಈ ಮಾತಿನ ಗಾಯಕ್ಕೂ ಮತ್ತೆ ಮಾತಿನ ಮುಲಾಮೇ ಬೇಕಾಯಿತು ನೋಡಿ.
ಹತ್ತು ವರ್ಷದ ಹಿಂದೆ ಲಕ್ವ ಹೊಡೆದು ಎಡಗೈ, ಎಡಗಾಲು ಸ್ವಾಧೀನ ಕಳೆದುಕೊಂಡು, ಇತ್ತೀಚೆಗಷ್ಟೇ ಮನೆಯಂಗಳದಲ್ಲಿ ನಡೆಯುವಾಗ ಬಿದ್ದು ಸೊಂಟದ ಮೂಳೆ ಮುರಿದುಕೊಂಡಿದ್ದ ಅಪ್ಪನಿಗೆ ಮತ್ತೆ ಎಣ್ಣೆ ಮಸಾಜಿನ ಚಿಕಿತ್ಸೆ ಬೇಕಿತ್ತಲ್ಲ.

***

ನಿಮ್ಮನ್ನು ಅಳಿಯನಿಗೆ ತೋರಿಸಿದ್ದು ಅದೇ ಬೀಗರು ರಾಯರೇ. ಆರು ವರ್ಷದ ಹಿಂದೆ ಗ್ಯಾಗ್ರಿನ್‌ನಿಂದ ಒಂದು ಕಾಲು ಕಳೆದುಕೊಂಡಿದ್ದ ಅವರೂ ಕಿಡ್ನಿ ಸ್ಟೋನ್‌ನಿಂದ ಆಸ್ಪತ್ರೆ ಸೇರಿ, ಅಲ್ಲಿ ನಡುರಾತ್ರಿಯಲ್ಲಿ ಏಳಲು ಹೋಗಿ ಬಿದ್ದು ಗಾಯಗೊಂಡಿದ್ದರಲ್ಲ. ಬಿದ್ದವರ ಕಷ್ಟ ಬಿದ್ದವರಿಗಷ್ಟೇ ಗೊತ್ತು.

ಅವರಿಗೆ ಮಸಾಜು ಮಾಡಲು ಬಂದವರು ನೀವು ನಮ್ಮ ಮನೆಗೂ ಬಂದಿರಿ. ಅದೂ ದೀಪಾವಳಿ ಹೊಸ್ತಿಲಲ್ಲಿ ಇರುವಾಗ. ಗುರುವಾರ ಬರುವಿರೆಂದು ಕಾದಿದ್ದೇ ಕಾದಿದ್ದು. ನೀವು ಫೋನು ತೆಗೆಯಲಿಲ್ಲ. ನಿಮ್ಮ ಮೇಲೆ ಸಖತ್ ಕೋಪ ಬಂದಿತ್ತು.

ಶುಕ್ರವಾರ ಬಿಸಿಲೇರುವ ಮುನ್ನವೇ ಈ ಬೀಗರ ಮನೆಯಲ್ಲಿ ಪ್ರತ್ಯಕ್ಷವಾದ ನೀವು, ಕ್ಷಮೆ ಕೇಳಿ, ಆ ಬೀಗರಿಗೆ ಫೋನು ಮಾಡಿ ‘ಬಂದಿದ್ದೇನೆ ಸ್ವಾಮಿ. ಮಸಾಜು ಶುರು ಮಾಡಿದ್ದೇನೆ. ಬೇಕಾದರೆ ಮಾತಾಡಿ’ ಎಂದು ಈ ಬೀಗರಿಗೆ ಫೋನು ಕೊಟ್ಟುಬಿಟ್ಟಿರಿ!

ಆಗಲೇ ಮಾತು ಸುತ್ತಿಗೆಯಾಗಿಯೂ, ಸೇತುವೆಯಾಗಿಯೂ ತನ್ನ ಕೆಲಸವನ್ನು ಚಾಚೂ ತಪ್ಪದೆ ಮಾಡಿತ್ತು. ಇವರು ತಮ್ಮ ಮಗನಿಗೆ, ಅವರು ತಮ್ಮ ಮಗಳಿಗೆ ಹೇಳಿದ್ದೇ ಹೇಳಿದ್ದು. ‘ಅವರೊಂದಿಗೆ ಮಾತನಾಡಿದೆ’ ಎಂದು.

ಒಂದು ದಿನ ತಡ ಮಾಡಿ ಬಂದ ನೀವು ಬಾಂಧವ್ಯದ ಗಾಯಕ್ಕೆ ಅಸಲಿ ಎಣ್ಣೆ ಮಸಾಜು ಮಾಡಿದಿರಿ. ‘ತಡವಾದರೇನಂತೆ ನಷ್ಟವಿಲ್ಲ’ ಎಂಬ ಕವಿಸಾಲಿನ ಕುರಿತ ನನ್ನ ನಂಬಿಕೆಯನ್ನು ಇನ್ನಷ್ಟು ಗಟ್ಟಿ ಮಾಡಿದಿರಿ. ನೀವು ಓದುವುದಿಲ್ಲ ಎಂದು ಗೊತ್ತಿದ್ದರೂ ಈ ಪತ್ರ ಬರೆದಿರುವೆ.

ಇಂತಿ,

ಇಬ್ಬರು ಬೀಗರ ನಡುವಿನ ಎಳೆಜೀವ

ಕೆ.ನರಸಿಂಹಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT