ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗಿಸುವುದೇ ಕಾಯಕ

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ತಿಳಿಗೆಂಪು ಬಣ್ಣದ ಸೌಂದರ್ಯ, ನಗುವ ಕಣ್ಣುಗಳು, ಮುತ್ತಿನಮಣಿಗಳನ್ನು ಮುಚ್ಚಿಟ್ಟಂಥ ತುಟಿ, ನೀಳಕಾಯ, ಸೌಮ್ಯ ಸ್ವಭಾವದ ಈ ಸುಂದರಿಯ ಹೆಸರು ಶ್ವೇತಾ ಚೆಂಗಪ್ಪ. ಈ ಕೊಡಗಿನ ಬೆಡಗಿ ಉದಯೋನ್ಮುಖ ನಟಿ. ‘ಮಜಾ ಟಾಕೀಸ್‌’ನ ರಾಣಿ. ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಈ ಕಾರ್ಯಕ್ರಮ ಶ್ವೇತಾ ಅವರಿಗೆ ಗಟ್ಟಿ ನೆಲೆ ಕಲ್ಪಿಸಿಕೊಟ್ಟಿತ್ತು.

ಚಲನಚಿತ್ರದ ನಾಯಕ ನಟಿ, ಧಾರಾವಾಹಿಗಳ ಪ್ರಮುಖ ಪಾತ್ರಧಾರಿ, ಟಿವಿ ಕಾರ್ಯಕ್ರಮಗಳ ನಿರೂಪಕಿ, ಬಿಗ್‌ಬಾಸ್‌–2 ಮನೆಯ ಸದಸ್ಯೆ, ಡಾನ್ಸರ್‌, ಉದ್ಯಮಿ... ಹೀಗೆ ಸಿಕ್ಕ ಎಲ್ಲ ಕ್ಷೇತ್ರಗಳಲ್ಲೂ ಶ್ವೇತಾ ಸೈ ಎನಿಸಿಕೊಂಡಿದ್ದಾರೆ. ಬಣ್ಣದ ಬೆಡಗಿನ ಲೋಕಕ್ಕೆ ಕಾಲಿಟ್ಟು ಇಲ್ಲಿಗೆ 12 ವರ್ಷವಾಗಿದೆ. ಅಳುಮುಂಜಿ ಪಾತ್ರದಿಂದ ಹಿಡಿದು ಬಜಾರಿ ಹೆಂಡತಿಯ ಪಾತ್ರದವರೆಗೂ ಎಲ್ಲದರಲ್ಲೂ ಅವರದು ವಿಶಿಷ್ಟ ಅಭಿನಯ, ಕಣ್ಣಲ್ಲಿ ಉಳಿಯುವಂಥ ನೋಟ. ಕಿರುತೆರೆಯಲ್ಲಿ ಮಿಂಚಿದ ಈ ನಟಿಯ ಜೀವನ ಪಯಣದ ಯಾನದ ಇಣುಕುನೋಟವನ್ನು ಹಂಚಿಕೊಂಡರು.

* ನಗುವುದೋ, ಅಳುವುದೋ ನೀವೇ ಹೇಳಿ...

ಹಹಹಹ... ಹಿಂದೆ ಧಾರಾವಾಹಿಯಲ್ಲಿ ಅಳುವ ಪಾತ್ರ ಸಾಕಷ್ಟು ಮಾಡಿದ್ದೇನೆ. ಸದ್ಯ ಅಂಥ ಪಾತ್ರಗಳಿಲ್ಲ. ಈಗೇನಿದ್ದರೂ ನಗುವುದು, ನಗಿಸುವುದು ಮತ್ತು ನಗಿಸುತ್ತಲೇ ಇರುವುದು...

* ಕಲಾವಿದೆಯಾಗುವ ಹಠ ಹುಟ್ಟಿದ್ದು ಯಾವಾಗ?‌

ಡಾನ್ಸ್‌ ಕಲಿಯುತ್ತೇನೆ ಎಂದಾಗ ಅಮ್ಮ ಬೈದಿದ್ದರು. ಒಂದಲ್ಲ ಒಂದು ದಿನ ಟಿ.ವಿ.ಯಲ್ಲಿ ಡಾನ್ಸ್‌ ಮಾಡಬೇಕು ಎಂಬ ಹಠ ಆಗಲೇ ಹುಟ್ಟಿತು. ಹೆಜ್ಜೆಗಳು ಅಭಿನಯದ ಕಡೆಗೆ ವಾಲಿದ್ದು ಗೊತ್ತಾಗಲೇ ಇಲ್ಲ. ನೇರವಾಗಿ ಬೆಳ್ಳಿತೆರೆಗೆ ಬಂದವಳು ನಾನು. ಈಗಲೂ ಮಂಡ್ಯ ರಮೇಶ್‌ ಅವರಂಥ ಕಲಾವಿದರನ್ನು ಕಂಡರೆ ನಾನೇಕೆ ರಂಗಭೂಮಿಯ ಅನುಭವ ಪಡೆಯಬಾರದು ಎನಿಸುತ್ತೆ.

* ಸಿನಿಮಾ ನಟನೆಗೂ, ಧಾರಾವಾಹಿ ನಟನೆಗೂ ಏನು ವ್ಯತ್ಯಾಸ?

ಹೆಚ್ಚೇನೂ ವ್ಯತ್ಯಾಸ ಅನಿಸಿಲ್ಲ. ಧಾರಾವಾಹಿಯಲ್ಲಿ ತಾಳ್ಮೆ ಹೆಚ್ಚಿರುತ್ತದೆ. ಆದರೆ, ಸಿನಿಮಾ ಮಾಡುವಾಗ ತಾಳ್ಮೆ ಅಗತ್ಯವಿರುತ್ತದೆ. ಎಸ್‌.ಎಸ್.ಎಲ್‌.ಸಿ. ಮುಗಿದಾಕ್ಷಣ ಬೆಳ್ಳಿತೆರೆಗೆ ಬಂದೆ. ಯಾವುದು ಸರಿ, ಯಾವುದು ತಪ್ಪು ಎಂದು ಗುರುತಿಸಲಾಗದ ವಯಸ್ಸದು. ಬಂದ ಪಾತ್ರಗಳನ್ನು ನಿರ್ವಹಿಸಬೇಕು. ಒಳ್ಳೆ ನಟಿ ಆಗಬೇಕೆಂಬುದಷ್ಟೇ ತಲೆಯಲ್ಲಿತ್ತು.

* ಗೃಹಿಣಿಯರಲ್ಲೂ ರೌಡಿಗಳನ್ನು ಹುಡುಕಿದ್ದು ಧಾರಾವಾಹಿಗಳು ಎಂಬ ಸಿಟ್ಟು ಅನೇಕರಲ್ಲಿದೆ...

ಬಹಳಷ್ಟು ಜನರಿಂದ ಈ ಅಭಿಪ್ರಾಯ ಬರುತ್ತಲೇ ಇರುತ್ತೆ. ಆದರೆ, ನಾನು ಮಾಡಿದ ಯಾವ ಧಾರಾವಾಹಿ ಕೂಡ ಇಂಥ ಪಾತ್ರಗಳಿಗೆ ಅವಕಾಶ ಮಾಡಿಕೊಟ್ಟಿಲ್ಲ. ಆಯ್ಕೆ ಮಾಡಿಕೊಳ್ಳುವಾಗಲೇ ನಾನು ಎಚ್ಚರಿಕೆ ವಹಿಸುತ್ತೇನೆ. ನೀವು ಹೇಳುವುದೂ ನಿಜ. ಬಹಳಷ್ಟು ಧಾರಾವಾಹಿಗಳಲ್ಲಿ ಒಬ್ಬ ಗಂಡನಿಗೆ ಒಬ್ಬಳೇ ಹೆಂಡತಿ ಅಥವಾ ಒಬ್ಬ ಹೆಂಡತಿಗೆ ಒಂದೇ ಮದುವೆ ಆದ ಉದಾಹರಣೆ ಇಲ್ಲ. ಇರುವ ಸಂಬಂಧಗಳನ್ನು ಕ್ಲಿಷ್ಟಗೊಳಿಸುವುದೇ ಧಾರಾವಾಹಿಯ ಉದ್ದೇಶ ಆಗಬಾರದು. ದೈನಂದಿನ ಬದುಕಿಗೆ ಹತ್ತಿರವಾದ ಪಾತ್ರಗಳು ಮಾತ್ರ ಜನರ ಮನಸಲ್ಲಿ ಉಳಿಯುತ್ತವೆ.

* ಮಜಾ ಟಾಕೀಸ್‌ ಬಗ್ಗೆ...

ಅದೊಂದು ಅದ್ಭುತ ಅನುಭವ. ಕನ್ನಡ ಕಿರುತೆರೆಯಲ್ಲಿ ಇಂಥ ಕಾರ್ಯಕ್ರಮ ಅಪರೂಪ. ಮಂಡ್ಯ ರಮೇಶ್‌, ಸೃಜನ್‌ ಲೋಕೇಶ್‌, ಅಪರ್ಣಾ ಅವರಂಥ ಪ್ರಬುದ್ಧ ಕಲಾವಿದರೊಂದಿಗೆ ಕೆಲಸ ಮಾಡುವುದೇ ಖುಷಿ. ತೆರೆಯ ಮೇಲೆ ಮಾತ್ರವಲ್ಲ; ಅದರ ರಿಹರ್ಸಲ್‌ನಲ್ಲೂ ಒಂದೇ ಕುಟುಂಬದವರಂತೆ ಇರುತ್ತೇವೆ. ಒಬ್ಬರಿಗೊಬ್ಬರು ಹೇಳಿಕೊಡುವುದು, ಕಲಿಯುವುದು, ಖುಷಿ ಪಡುವುದು ದಿನವೂ ಇರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ಮಜಾ ಟಾಕೀಸ್‌ನಲ್ಲಿ ನಾನು ಮಗುವೇ ಆಗಿಬಿಡುತ್ತಿದ್ದೆ.

* ಚಿತ್ರರಂಗದ ಬಗ್ಗೆ ತುಡಿತ ಕಡಿಮೆಯಾಗಿದೆಯೇ?

ಖಂಡಿತಾ ಇಲ್ಲ. ಸಿನಿಮಾ ತುಂಬಾ ಪವರ್‌ಫುಲ್‌ ಮಾಧ್ಯಮ. ಯಾರನ್ನಾದರೂ ಬರಸೆಳೆಯುತ್ತದೆ. ಆಗಾಗ ಅವಕಾಶಗಳು ಬರುತ್ತಲೇ ಇವೆ, ಪರಭಾಷೆಯಲ್ಲೂ ಅವಕಾಶಗಳಿವೆ. ಆದರೆ, ಗಟ್ಟಿಯಾದ ಪಾತ್ರವನ್ನು ಮಾತ್ರ ಆಯ್ದುಕೊಳ್ಳಬೇಕು ಎಂಬ ನಿಲುವು ನನ್ನದು. ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಿಡುವೇ ಇಲ್ಲ.

* ಯುವ ಕಲಾವಿದರಿಗೆ ನಿಮ್ಮ ಸಂದೇಶ?

ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೋತ್ಸಾಹಿಸಿ. ಒಳ್ಳೆಯದನ್ನು ಮಾಡದಿದ್ದರೂ ಪರವಾಗಿಲ್ಲ; ಯಾರಿಗೂ ಕೆಟ್ಟದ್ದು ಮಾಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT