ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಯನೈಡ್‌ ಮೋಹನ್‌ ಗಲ್ಲು ಶಿಕ್ಷೆ ರದ್ದು

Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಅತ್ಯಾಚಾರ ಮತ್ತು ಕೊಲೆ ಆರೋಪ ಸಂಬಂಧ ಸಯನೈಡ್‌ ಮೋಹನ್‌ ಅಲಿಯಾಸ್‌ ಮೋಹನ್‌ ಕುಮಾರ್‌ಗೆ ಮಂಗಳೂರು ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್‌ ರದ್ದುಗೊಳಿಸಿದೆ.

ಈ ಕುರಿತಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕಾಯಂಗೊಳಿಸುವಂತೆ ಕೋರಿ ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್‌ ಕುನ್ಹ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ತಿರಸ್ಕರಿಸಿದೆ.

‘ಅಪರಾಧಿಯ ವಿರುದ್ಧದ ಅತ್ಯಾಚಾರ, ಅಪಹರಣ, ವಂಚನೆ ಮತ್ತು ಕೊಲೆ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ. ಮೃತ ಮಹಿಳೆಯ ಮೈಮೇಲಿದ್ದ ಚಿನ್ನಾಭರಣ ದರೋಡೆ ಮಾಡಿರುವುದು ಮಾತ್ರವೇ ದೃಢಪಟ್ಟಿದೆ. ಈ ಆರೋಪಕ್ಕೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಲಾಗುವುದು’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಪ್ರಕರಣವೇನು?: ‘ವೇಣೂರಿನ ಲೀಲಾ ಅಲಿಯಾಸ್ ಲೀಲಾವತಿಯನ್ನು (30) ಪರಿಚಯ ಮಾಡಿಕೊಂಡಿದ್ದ ಮೋಹನ್‌ ಕುಮಾರ್‌ 2005ರ ಸೆಪ್ಟೆಂಬರ್ 9ರಂದು ಆಕೆಯನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಅಲ್ಲಿನ ಎಂಟಿಆರ್ ಡೀಲಕ್ಸ್‌ ಲಾಡ್ಜ್‌ನಲ್ಲಿ ತಂಗಿದ್ದ. ಮರುದಿನ ಬೆಳಗ್ಗೆ (ಸೆ.10) ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ಪುಸಲಾಯಿಸಿ  ಮೈಮೇಲಿದ್ದ ಚಿನ್ನಾಭರಣ ತನ್ನ ವಶಕ್ಕೆ ಪಡೆದಿದ್ದ’ ಎಂದು ಪೊಲೀಸರು ಮೋಹನಕುಮಾರ್ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯ 4ನೇ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

‘ಸಂಭೋಗ ಮಾಡಿರುವುದರಿಂದ ನೀನು ಗರ್ಭವತಿಯಾಗುತ್ತೀಯ. ಆದ್ದರಿಂದ ಈ ಔಷಧಿ ಕುಡಿ. ತಕ್ಷಣವೇ ಮೂತ್ರ ವಿಸರ್ಜಿಸು, ಗರ್ಭ ಧರಿಸುವುದಿಲ್ಲ ಎಂದು ಅಕೆಗೆ ಭೀತಿ ಹುಟ್ಟಿಸಿದ್ದಾಗಿಯೂ’ ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.

‘ಮೈಸೂರು ಬಸ್‌ ನಿಲ್ದಾಣದ ಮೂತ್ರಾಲಯಕ್ಕೆ ಹೋಗಿ ಔಷಧಿ ಕುಡಿಯಲು ಲೀಲಾಳಿಗೆ ಸೂಚಿಸಿದ್ದ. ಆಕೆ ಕುಡಿದಿದ್ದ ದ್ರವರೂಪದ ಔಷಧಿಯು ಸಯನೈಡ್ ಯುಕ್ತವಾಗಿತ್ತು ಮತ್ತು ಆಕೆ ಅಲ್ಲಿಯೇ ಮೃತಪಟ್ಟಿದ್ದಳು’ ಎಂದು ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ವಿವಿಧ ಸ್ಥಳಗಳಲ್ಲಿ ಮೋಹನಕುಮಾರ್ 20 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ನಂತರ ಅವರಿಗೆ ಸಯನೈಡ್ ನೀಡಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ. ಮೋಹನ ಕುಮಾರ್ ವಿರುದ್ಧ ಇನ್ನೂ ಒಂದು ಪ್ರಕರಣದಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ. ಈ ಕುರಿತ ಅರ್ಜಿ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT