ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗೇಟು ನೀಡುವತ್ತ ವಿರಾಟ್ ಬಳಗದ ಚಿತ್ತ

ಭಾರತ–ನ್ಯೂಜಿಲೆಂಡ್ ನಡುವಣ ಎರಡನೇ ಪಂದ್ಯ ಇಂದು: ಸರಣಿ ಸೋಲಿನ ಭೀತಿಯಲ್ಲಿ ಆತಿಥೇಯರು
Last Updated 24 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪುಣೆ: ವಿರಾಟ್ ಕೊಹ್ಲಿ ಬಳಗವು ಈಗ ಒತ್ತಡದಲ್ಲಿದೆ. ತವರಿನ ನೆಲದಲ್ಲಿಯೇ ಸರಣಿ ಸೋಲಿನ ಭೀತಿ ಎದುರಿಸುತ್ತಿದೆ.

ನ್ಯೂಜಿಲೆಂಡ್ ಎದುರಿನ ಸರಣಿ ಗೆಲುವಿನ ಕನಸು ಜೀವಂತವಾಗುಳಿಯಬೇಕಾದರೆ ಬುಧವಾರ ಇಲ್ಲಿಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಯಿಸಬೇಕಾದ ಅನಿವಾರ್ಯತೆಯಲ್ಲಿದೆ. ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯವು ಇದಾಗಿದೆ. ಅ. 29ರಂದು ಕಾನ್ಪುರದಲ್ಲಿ ಕೊನೆಯ ಪಂದ್ಯ ನಡೆಯಲಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ವಿರಾಟ್‌ ಕೊಹ್ಲಿಯ ಅಮೋಘ ಶತಕ ಬಾರಿಸಿದ್ದರು.  ತಂಡವು 280 ರನ್‌ಗಳ ಹೋರಾಟದ ಮೊತ್ತ ಪೇರಿಸಲೂ ಕಾರಣರಾಗಿದ್ದು. ಆದರೆ ಕಿವೀಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ರಾಸ್ ಟೇಲರ್ ಮತ್ತು ಟಾಮ್ ಲಥಾಮ್ ಅಮೋಘ ಜೊತೆಯಾಟವೇ ಮೇಲುಗೈ ಸಾಧಿಸಿತ್ತು. ಪ್ರವಾಸಿ ಬಳಗವು 6 ವಿಕೆಟ್‌ಗಳಿಂದ ಜಯಿಸಿತ್ತು. ಭಾರತದ ಬೌಲರ್‌ಗಳು ವೈಫಲ್ಯ ಅನುಭವಿಸಿದ್ದರು.

ಆರಂಭಿಕ ಜೋಡಿಯ ವೈಫಲ್ಯ

ಕಳೆದ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ಉತ್ತಮ ಆರಂಭ ನೀಡುವಲ್ಲಿ ವಿಫಲರಾಗಿದ್ದರು. ಆದರೆ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ತಂಡದ ಹೋರಾಟಕ್ಕೆ ಬಲ ತುಂಬಿದ್ದರು. ಕೊನೆಯ ಕ್ರಮಾಂಕದಲ್ಲಿ ಭುವನೇಶ್ವರ್ ಕುಮಾರ್ ಕೂಡ ಚೆನ್ನಾಗಿ ಆಡಿದ್ದರು. ಆದರೆ ಮಹೇಂದ್ರ ಸಿಂಗ್ ದೋನಿ ಮತ್ತು ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸಿರಲಿಲ್ಲ.

ನ್ಯೂಜಿಲೆಂಡ್‌ ತಂಡದ ಆರಂಭಿಕ ಬ್ಯಾಟಿಂಗ್ ಜೋಡಿ ಮಾರ್ಟಿನ್ ಗಪ್ಟಿಲ್ ಮತ್ತು ಕಾಲಿನ್ ಮನ್ರೊ ಉತ್ತಮ ಆರಂಭ ನೀಡಿದ್ದರು. ಮೊದಲ ವಿಕೆಟ್‌ಗೆ 48 ರನ್‌ ಗಳಿಸಿದ್ದರು. ಆದರೆ ತಂಡದ ಮೊತ್ತವು 80 ರನ್ ತಲುಪುವಷ್ಟರಲ್ಲಿ  ಮನ್ರೊ, ಕೇನ್ ಮತ್ತು ಗಪ್ಟಿಲ್ ಪೆವಿಲಿಯನ್ ಸೇರಿದ್ದರು. ಮಧ್ಯಮವೇಗಿಗಳಾದ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬೂಮ್ರಾ ಪೆಟ್ಟು ನೀಡಿದ್ದರು. ಆದರೆ ಅದೇ ಲಯವನ್ನು ಇನಿಂಗ್ಸ್‌ ಕೊನೆಯವರೆಗೂ ಕಾಪಾಡಿಕೊಳ್ಳಲಿಲ್ಲ.

ಆ ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಾಡಿದ ಲೋಪಗಳನ್ನು ತಿದ್ದಿಕೊಂಡು ಕಣಕ್ಕಿಳಿಯಲು ಭಾರತ ತಂಡವು ಸಜ್ಜಾಗಿದೆ. ಹೋದ ಜನವರಿಯಲ್ಲಿ ಇಲ್ಲಿ ಇಂಗ್ಲೆಂಡ್ ಎದುರು ನಡೆದಿದ್ದ ಪಂದ್ಯದಲ್ಲಿ ಭಾರತ ತಂಡವು 3 ವಿಕೆಟ್‌ಗಳಿಂದ ಗೆದ್ದಿತ್ತು. ಬ್ಯಾಟ್ಸ್‌ಮನ್‌ಗ ಸ್ವರ್ಗದಂತಿರುವ ಪಿಚ್‌ನಲ್ಲಿ ರನ್ ಹೊಳೆ ಹರಿಯುವ ಸಾಧ್ಯತೆ ಇದೆ. ಎರಡು ತಂಡಗಳ ನಡುವೆ ಸಮಬಲದ ಹಣಾಹಣಿ ರಂಗೇರುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ತಂಡಗಳು ಇಂತಿವೆ

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಜಿಂಕ್ಯ ರಹಾನೆ, ಮನೀಷ್ ಪಾಂಡೆ, ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ಮಹೇಂದ್ರಸಿಂಗ್ ದೋನಿ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಮುಖ್ಯ ಕೋಚ್: ರವಿಶಾಸ್ತ್ರಿ, ಬ್ಯಾಟಿಂಗ್ ಕೋಚ್; ಸಂಜಯ್ ಬಂಗಾರ್, ಬೌಲಿಂಗ್ ಕೋಚ್: ಭರತ್ ಅರುಣ್.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್, ಹೆನ್ರಿ ನಿಕೊಲ್, ಆ್ಯಡಮ್ ಮಿಲ್ನೆ, ಕಾಲಿನ್ ಮನ್ರೊ, ಗ್ಲೆನ್ ಫಿಲಿಪ್ಸ್‌, ಮಿಷೆಲ್ ಸ್ಯಾಂಟನರ್, ಟಿಮ್ ಸೌಥಿ, ರಾಸ್ ಟೇಲರ್, ಜಾರ್ಜ್ ವರ್ಕರ್, ಈಶ್ ಸೋಧಿ, ಮುಖ್ಯ ಕೋಚ್: ಮೈಕ್ ಹೇಸನ್.

ನೂರನೇ ಪಂದ್ಯ

* ಭಾರತ ಮತ್ತು ನ್ಯೂಜಿಲೆಂಡ್ ನಡುವಣ ನಡೆಯುತ್ತಿರುವ ನೂರನೇ ಪಂದ್ಯ ಇದು. ಅದರಲ್ಲಿ ಭಾರತವು 49 ಪಂದ್ಯಗಳಲ್ಲಿ ಜಯಿಸಿತ್ತು. ನ್ಯೂಜಿಲೆಂಡ್ ತಂಡವು 44ರಲ್ಲಿ ಗೆದ್ದಿದೆ. ಏಳು ಪಂದ್ಯಗಳಲ್ಲಿ ಫಲಿತಾಂಶ ಹೊರಹೊಮ್ಮಿಲ್ಲ.

* ಪುಣೆಯ ಅಂಗಳದಲ್ಲಿ ನ್ಯೂಜಿಲೆಂಡ್ ಮೊದಲ ಬಾರಿಗೆ ಆಡುತ್ತಿದೆ. ಭಾರತಕ್ಕೆ ಇದು ಮೂರನೇ ಪಂದ್ಯ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ ಪಂದ್ಯದಲ್ಲಿ ಭಾರತ ತಂಡವು ಸೋತಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT